More

    ಆಸ್ತಿ ಮಾರಾಟಕ್ಕೆ ಘೋಷಣಾಪತ್ರ; ಎನ್​ಆರ್​ಐಗಳ ತೆರಿಗೆ ವಂಚನೆ ತಪ್ಪಿಸಲು ಸರ್ಕಾರದ ಹೊಸ ಕ್ರಮ

    ಇನ್ನು ಮುಂದೆ ಆಸ್ತಿ ಮಾರಾಟ ಮಾಡುವವರು ಹಾಗೂ ಖರೀದಿದಾರರು ತಾವು ಭಾರತದ ನಿವಾಸಿ ಎಂದು ಘೋಷಣಾಪತ್ರ ಸಲ್ಲಿಸುವುದು ಕಡ್ಡಾಯ. ಕೆಲ ಅನಿವಾಸಿ ಭಾರತೀಯರು(ಎನ್​ಆರ್​ಐ) ದೊಡ್ಡ ಪ್ರಮಾಣದಲ್ಲಿ ತೆರಿಗೆ ವಂಚಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆದಾಯ ತೆರಿಗೆ ಇಲಾಖೆ ಈ ಸೂಚನೆ ನೀಡಿದೆ.

    ಆಸ್ತಿ ಮಾರಾಟ ಮಾಡುವ ಮಾಲೀಕ ಭಾರತೀಯನಾದರೆ, 50 ಲಕ್ಷ ರೂಪಾಯಿ ಮೀರುವ ಆಸ್ತಿ ಮಾರಾಟಕ್ಕೆ ಶೇ.1 ಟಿಡಿಎಸ್ ಪಾವತಿಸಬೇಕು. ಅದೇ ಎನ್​ಆರ್​ಐ ಆದರೆ ಶೇ.20 ಟಿಡಿಎಸ್ ಪಾವತಿಸ ಬೇಕು. ಆದರೆ ಕೆಲ ಎನ್​ಆರ್​ಐಗಳು ತಮ್ಮ ಹೆಸರಿನಲ್ಲಿರುವ ಆಸ್ತಿಗಳನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಹಳೆಯ ವಿಳಾಸಗಳನ್ನು ನೀಡಿ, ಭಾರತೀಯ ಎಂದು ಸುಳ್ಳು ಹೇಳಿ ಕೇವಲ ಶೇ.1 ಟಿಡಿಎಸ್ ಪಾವತಿಸುತ್ತಿದ್ದಾರೆ. ಈ ಕುರಿತು ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಆದಾಯ ತೆರಿಗೆ ಇಲಾಖೆಯ ಅಂತಾರಾಷ್ಟ್ರೀಯ ತೆರಿಗೆ ವಿಭಾಗ ಸುತ್ತೋಲೆ ಕಳಿಸಿದೆ. ಆಸ್ತಿ ಮಾರಾಟ ಮಾಡುವ ಹಾಗೂ ಖರೀದಿಸುವ ಎಲ್ಲರೂ ಘೋಷಣಾಪತ್ರ ನೀಡಬೇಕು. ಅಲ್ಲದೆ ನೋಂದಣಿ ಕಚೇರಿಯಲ್ಲಿ ಈ ಕುರಿತು ಮಾಹಿತಿ ಫಲಕ ಅಳವಡಿಸಬೇಕು ಎಂದು ಸೂಚಿಸಿದೆ.

    ಎಚ್ಚರಿಕೆ ಅಗತ್ಯ: ಎನ್​ಆರ್​ಐ ವ್ಯಕ್ತಿಯ ಹೆಸರಿನಲ್ಲಿರುವ ಆಸ್ತಿಗಳನ್ನು ಖರೀದಿಸುವ ಮುನ್ನ ಎಚ್ಚರ ವಹಿಸುವುದು ಸೂಕ್ತ. ಒಂದು ವೇಳೆ ತೆರಿಗೆ ವಂಚನೆ ಅಥವಾ ಸುಳ್ಳು ಮಾಹಿತಿ ನೀಡಿ ಎನ್​ಆರ್​ಐ ಆಸ್ತಿ ಮಾರಾಟ ಮಾಡಿದ್ದರೆ ಮುಂದೊಂದು ದಿನ ಖರೀದಿದಾರರೇ ಶೇ. 20 ಟಿಡಿಎಸ್ ಕಟ್ಟಬೇಕಾಗುತ್ತದೆ.

    ಆಸ್ತಿ ಮಾರಾಟಗಾರರು ಹಾಗೂ ಖರೀದಿಸುವವರಿಂದ ಕಡ್ಡಾಯವಾಗಿ ಘೋಷಣಾಪತ್ರದ ನಮೂನೆ ಮಾಹಿತಿ ಪಡೆಯುವಂತೆ ರಾಜ್ಯದ ಎಲ್ಲ ಉಪನೋಂದಣಾಧಿಕಾರಿಗಳಿಗೆ ಸೂಚಿಸಲಾಗಿದೆ. ತೆರಿಗೆ ವಂಚಿಸುವವರ ವಿರುದ್ಧ ಕ್ರಮಕೈಗೊಳ್ಳಲು ಆದಾಯ ತೆರಿಗೆ ಇಲಾಖೆಗೆ ಇದರಿಂದ ಸಹಕಾರಿಯಾಗುತ್ತದೆ.

    | ಡಾ.ಕೆ.ವಿ. ತ್ರಿಲೋಕ್ ಚಂದ್ರ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರು 

    ಘೋಷಣಾಪತ್ರದಲ್ಲೇನಿದೆ?

    ಹೆಸರು, ಶಾಶ್ವತ ವಿಳಾಸ, ಆಧಾರ್ ಸಂಖ್ಯೆ, ಇ-ಮೇಲ್, ದೂರವಾಣಿ ಮತ್ತು ಮೊಬೈಲ್ ಸಂಖ್ಯೆ, ಟ್ಯಾನ್ ನಂಬರ್, ಪಾವತಿಸಿದ ಆದಾಯದ ಮೊತ್ತ, ಆದಾಯ ಪಾವತಿ ಅಥವಾ ಜಮೆ ಮಾಡಿದ ದಿನಾಂಕ ಸೇರಿ ಇನ್ನಿತರ ಮಾಹಿತಿಗಳನ್ನು ಉಪನೋಂದಣಾಧಿಕಾರಿಗಳು ಕಡ್ಡಾಯವಾಗಿ ಆಸ್ತಿ ಮಾರಾಟಗಾರರು ಹಾಗೂ ಖರೀದಿದಾರರಿಂದ ಮಾಹಿತಿ ಪಡೆದು ನೋಂದಾಯಿಸಬೇಕು.

    ಜಾಮೀನು ರಹಿತ ವಾರಂಟ್

    ಘೋಷಣಾಪತ್ರದಲ್ಲಿ ತಪ್ಪು ಮಾಹಿತಿ ನೀಡಿದವರ ವಿರುದ್ಧ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 277ರ ಅಡಿ ಜಾಮೀನು ರಹಿತ ವಾರಂಟ್, 7 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ.

    | ಹರೀಶ್ ಬೇಲೂರು, ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts