More

    ಕೈಗಾರಿಕಾ ಕ್ರಾಂತಿಗೆ ಕಹಳೆ!; ಹೂಡಿಕೆ ಆಕರ್ಷಿಸಿ ಉದ್ಯೋಗಸೃಷ್ಟಿ ಹೆಚ್ಚಿಸಲು ಸರ್ಕಾರ ಪಣ

    | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶಗಳನ್ನು ತೆರೆದಿಟ್ಟು ಹೊಸ ಉದ್ಯಮ ಹಾಗೂ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕೈಗಾರಿಕಾಸ್ನೇಹಿ ನೀತಿಗಳ ಜಾರಿಗೆ ಮುಂದಾಗಿದೆ. ಅಫಿಡವಿಟ್ ಆಧಾರಿತ ಅನುಮತಿಯಂಥ (ಎಬಿಸಿ) ಹಲವು ಹೊಸ ಉಪಕ್ರಮಗಳ ಮೂಲಕ ವ್ಯವಹಾರಗಳನ್ನು ಸರಳಗೊಳಿಸುವ, ತನ್ಮೂಲಕ ಸುಧಾರಣೆ ತರುವ ಸಂಕಲ್ಪ ತೊಟ್ಟಿದೆ. ರಾಜ್ಯದಲ್ಲಿ ಕರೊನಾದಂತಹ ಸಂಕಷ್ಟದ ಸಂದರ್ಭದಲ್ಲೂ ಸುಮಾರು 1.5 ಲಕ್ಷ ಕೋಟಿ ರೂ. ಹೂಡಿಕೆ ಹರಿದು ಬಂದಿದೆ. ಅದನ್ನು ಇನ್ನಷ್ಟು ಹೆಚ್ಚಿಸುವುದು ಸರ್ಕಾರದ ಉದ್ದೇಶ. ಆದ್ದರಿಂದಲೇ ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದೆ ಬರುವ ಹೂಡಿಕೆದಾರರಿಗೆ ಯಾವುದೇ ಅಡ್ಡಿ ಆತಂಕಗಳು ಎದುರಾಗದಂತೆ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಅಕ್ಕಪಕ್ಕದ ರಾಜ್ಯಗಳಿಂದ ಹೂಡಿಕೆ ಆಕರ್ಷಣೆಗೆ ಪೈಪೋಟಿ ಆರಂಭವಾಗಿದ್ದು, ಕಳೆದ ಹಲವು ವರ್ಷಗಳಿಂದ ಹೂಡಿಕೆಯಲ್ಲಿ ಮೊದಲ ಸ್ಥಾನದಲ್ಲಿರುವ ರಾಜ್ಯ, ಇನ್ನಷ್ಟು ಹೂಡಿಕೆ ಸ್ನೇಹಿ ಕ್ರಮಗಳಿಗೆ ಸರ್ಕಾರ ಚಾಲನೆ ನೀಡುತ್ತಿದೆ.

    ಹೂಡಿಕೆ ಅವಕಾಶಗಳು: ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್, ಆಟೋಮೊಬೈಲ್ ಮತ್ತು ವಿದ್ಯುತ್​ಚಾಲಿತ ವಾಹನ, ಏರೋಸ್ಪೇಸ್ ಮತ್ತು ಡಿಫೆನ್ಸ್, ಸ್ಟೀಲ್ ಮತ್ತು ಸಿಮೆಂಟ್, ಎಫ್​ಎಂಸಿಜಿ ಮತ್ತು ಆಹಾರ ಸಂಸ್ಕರಣೆ, ಜವಳಿ ಹಾಗೂ ಆಟಿಕೆ ವಲಯದಲ್ಲಿ ಹೂಡಿಕೆ ಅವಕಾಶಗಳನ್ನು ತೆರೆದಿಡುತ್ತಿದ್ದು, ಹೂಡಿಕೆದಾರರಿಗೂ ಮನವರಿಕೆ ಮಾಡಿಕೊಡಲಾಗುತ್ತಿದೆ. ಕ್ಲಸ್ಟರ್​ಗಳ ಅಭಿವೃದ್ಧಿಗೆ ಮೂಲಸೌಕರ್ಯವನ್ನು ಒದಗಿಸಲಾಗುತ್ತಿದೆ.

    ಅದಿರಿಗೆ ಅವಕಾಶ: ಈ ಬಾರಿಯ ಹೂಡಿಕೆ ನಿರೀಕ್ಷೆಯಲ್ಲಿ ಕಬ್ಬಿಣ ಮತ್ತು ಉಕ್ಕು ಸೇರಿಲ್ಲ. ಆದರೆ ರಾಜ್ಯದ 33 ಕಡೆಗಳಲ್ಲಿ ಕಬ್ಬಿಣ ಅದಿರು ಗಣಿಗಾರಿಕೆಗೆ ಅವಕಾಶ ಇರುವ ಬಗ್ಗೆ ಪತ್ರ ಬರೆಯಲು ಸರ್ಕಾರ ನಿರ್ಧರಿಸಿದೆ ಎಂದು ಕೈಗಾರಿಕಾ ಇಲಾಖೆಯ ಮೂಲಗಳು ಖಚಿತಪಡಿಸಿವೆ.

    ಕೈಗಾರಿಕಾ ಕ್ರಾಂತಿಗೆ ಕಹಳೆ!; ಹೂಡಿಕೆ ಆಕರ್ಷಿಸಿ ಉದ್ಯೋಗಸೃಷ್ಟಿ ಹೆಚ್ಚಿಸಲು ಸರ್ಕಾರ ಪಣಒಂದು ಜಿಲ್ಲೆ ಒಂದು ಉತ್ಪನ್ನ: ಕೇಂದ್ರ ಜಾರಿಗೆ ತಂದಿರುವ ಒಂದು ಜಿಲ್ಲೆ ಒಂದು ಉತ್ಪನ್ನ ಮಾದರಿಯನ್ನು ಕೈಗಾರಿಕೆಯಲ್ಲೂ ಅಳವಡಿಸುವುದು ಸರ್ಕಾರದ ಉದ್ದೇಶ. ತಾಲೂಕು ಮಟ್ಟಕ್ಕೆ ಕೈಗಾರಿಕೆಗಳನ್ನು ತೆಗೆದುಕೊಂಡು ಹೋಗಲಾಗುತ್ತದೆ. ಗುರುತಿಸಿರುವ ಏಳು ವಲಯಗಳಲ್ಲಿ ನಾಲ್ಕರಿಂದ ಐದು ಜಿಲ್ಲೆಗೆ ಒಂದರಂತೆ ಹಂಚಿಕೆ ಮಾಡಿ ಅಭಿವೃದ್ಧಿ ಪಡಿಸಲಾಗುತ್ತದೆ.

    ಜಮೀನು ಬಳಕೆ: ರಾಜ್ಯದಲ್ಲಿ ಈವರೆಗೆ ಕೈಗಾರಿಕೆಗಳ ಭೂ ಬ್ಯಾಂಕ್​ಗೆ ಸುಮಾರು 90 ಸಾವಿರ ಎಕರೆ ಸ್ವಾಧೀನ ಮಾಡಲಾಗಿದೆ. ಅದರಲ್ಲಿ ಶೇ.10 ಮಾತ್ರ ಈವರೆಗೆ ಬಳಕೆಯಾಗಿಲ್ಲ. ಅದನ್ನು ವಾಪಸ್ ಪಡೆದು ಹೊಸದಾಗಿ ಮಂಜೂರಾಗುವ ಕೈಗಾರಿಕೆಗಳಿಗೆ ಹಂಚಿಕೆ ಮಾಡಲಾಗುತ್ತದೆ. ಮುಂದಿನ ಜಿಮ್ೆ 25 ಸಾವಿರ ಎಕರೆ ಗುರುತಿಸಿಡಲಾಗುತ್ತದೆ. ತಾಲೂಕು ಮಟ್ಟದಲ್ಲಿ 50 ರಿಂದ 200 ಎಕರೆ, ಜಿಲ್ಲಾ ಮಟ್ಟದಲ್ಲಿ 1000 ಎಕರೆ ಗುರುತಿಸಲು ನಿರ್ಧರಿಸಲಾಗಿದೆ.

    4 ಕ್ಲಸ್ಟರ್ ಗುರುತು: ಧಾರವಾಡ ಎಫ್​ಎಂಸಿಜಿ, ಕೊಪ್ಪಳ ಗೊಂಬೆ, ಯಾದಗಿರಿ ಔಷಧ, ಜವಳಿ ಬಳ್ಳಾರಿ ಹಾಗೂ ರಾಮನಗರ ವಿದ್ಯುತ್ ವಾಹನ. ಇನ್ನೂ ಆರು ಕ್ಲಸ್ಟರ್​ಗಳನ್ನು ಬೇರೆ ಬೇರೆ ಜಿಲ್ಲೆಗಳಲ್ಲಿ ಆರಂಭಿಸಬೇಕಾಗಿದೆ.

    ವಿದ್ಯಾರ್ಥಿಗಳ ಗುರಿ: ಮುಂದಿನ ಹೂಡಿಕೆದಾರರ ಸಮಾವೇಶಕ್ಕೆ ವಿದ್ಯಾರ್ಥಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಹ್ವಾನಿಸಲು ನಿರ್ಧರಿಸಲಾಗಿದೆ. ಏಕೆಂದರೆ ಉದ್ಯಮಿಯಾಗು ಉದ್ಯೋಗ ನೀಡು ಎಂಬುದು ಇದರ ಉದ್ದೇಶ. ವಿದ್ಯಾರ್ಥಿಗಳು ಬಂದು ಹೋದರೆ ಉದ್ಯಮ ಸ್ಥಾಪನೆಯ ಛಲ ಅವರಲ್ಲಿ ಮೂಡಬಹುದೆಂಬುದು ಸರ್ಕಾರದ ನಿರೀಕ್ಷೆ.

    ರಾಜ್ಯದಲ್ಲಿ ಹೆಚ್ಚಿನ ಹೂಡಿಕೆ ಬಂದರೆ ಹೆಚ್ಚು ಉದ್ಯೋಗ ಸೃಷ್ಟಿಯಾಗಲು ಸಾಧ್ಯವಾಗುತ್ತದೆ. ಅದಕ್ಕಾಗಿಯೇ ಹೊಸ ಹೊಸ ನೀತಿ ರೂಪಿಸಲಾಗುತ್ತದೆ. ಏಳು ಹೊಸ ಕ್ಲಸ್ಟರ್​ಗಳನ್ನು ಮಾಡಲಾಗುತ್ತದೆ. ಉದ್ಯಮಿಯಾಗು, ಉದ್ಯೋಗ ನೀಡು ಎಂಬುದು ಸರ್ಕಾರದ ನೀತಿಯಾಗಿದೆ. ಅದಕ್ಕಾಗಿಯೇ ಕೆಲವೊಂದು ಸುಧಾರಣೆ ತರಲಾಗುತ್ತದೆ.

    | ಮುರುಗೇಶ ನಿರಾಣಿ ಬೃಹತ್ ಕೈಗಾರಿಕೆ ಸಚಿವ

    5 ಲಕ್ಷ ಉದ್ಯೋಗ ಸೃಷ್ಟಿ: ರಾಜ್ಯ ಸರ್ಕಾರ 2022ರ ನ.2 ರಿಂದ 3 ದಿನ ಬೆಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶ ನಡೆಸಲಿದೆ. 7.5 ಲಕ್ಷ ಕೋಟಿ ರೂ. ಹೂಡಿಕೆ ಆಕರ್ಷಣೆ ಗುರಿ ಹಾಕಿಕೊಂಡಿದೆ. ಅದರಲ್ಲಿ ಕನಿಷ್ಠ 5 ಲಕ್ಷ ಉದ್ಯೋಗ ಸೃಷ್ಟಿಸುವಂತಾಗಬೇಕೆಂಬುದು ಸರ್ಕಾರದ ಉದ್ದೇಶ. ಹೂಡಿಕೆಗೆ ಹೆಚ್ಚಿನ ಅವಕಾಶಗಳಿರುವ ಏಳು ಹೊಸ ವಲಯಗಳನ್ನು ಗುರುತಿಸಿದೆ. ಮುಂದಿನ ಒಂಬತ್ತು ವರ್ಷಗಳಲ್ಲಿ 11 ಕೈಗಾರಿಕಾ ಕ್ಲಸ್ಟರ್​ಗಳಿಂದ 9 ಲಕ್ಷ ಉದ್ಯೋಗ ಸೃಷ್ಟಿಸುವ ಬಗ್ಗೆಯೂ ಚರ್ಚೆ ನಡೆದಿದೆ.

    ಸುಧಾರಣೆಗಳೇನು?

    • ಕೈಗಾರಿಕೆಗಳ ಸರಳ ವ್ಯವಹಾರಕ್ಕಾಗಿ ಅಫಿಡವಿಟ್ ಆಧಾರಿತ ಒಪ್ಪಿಗೆ (ಎಬಿಸಿ) ವ್ಯವಸ್ಥೆ ತರಲಾಗುತ್ತಿದೆ. ಸರ್ಕಾರ ಏಕಗವಾಕ್ಷಿ ಅಥವಾ ಉನ್ನತ ಮಟ್ಟದ ಸಮಿತಿಯಲ್ಲಿ ಒಪ್ಪಿಗೆ ಸಿಕ್ಕ ಕೂಡಲೇ ಕೈಗಾರಿಕೆ ಆರಂಭಿಸಲು ಅಡ್ಡಿ ಇಲ್ಲ. ಸುಮಾರು 15 ಇಲಾಖೆಗಳಿಂದ ಪಡೆಯಬೇಕಾದ ಒಪ್ಪಿಗೆಗಳಿಗೆ ಕಾಯುವ ಅಗತ್ಯವಿಲ್ಲ. 3 ವರ್ಷದಲ್ಲಿ ಒಪ್ಪಿಗೆ ಪಡೆಯಬಹುದು.
    • ಐದು ಎಕರೆ ಒಳಗಿನ ಜಮೀನು ಮಂಜೂರಾತಿ ಏಕಗವಾಕ್ಷಿ ಮತ್ತು ಉನ್ನತ ಮಟ್ಟದ ಸಮಿತಿಯಲ್ಲಿ ಒಪ್ಪಿಗೆ ಸಿಕ್ಕನಂತರ ಮತ್ತೆ ಲ್ಯಾಂಡ್ ಆಡಿಟ್ ಕಮಿಟಿ ಮುಂದೆ ಹೋಗಬೇಕಾಗಿತ್ತು. ಆದರೆ ಈಗ ಅದರ ಅಗತ್ಯವಿಲ್ಲವೆಂಬ ನಿರ್ಧಾರಕ್ಕೆ ಬರಲಾಗಿದೆ. ಈ ಬಗ್ಗೆ ಶೀಘ್ರದಲ್ಲಿಯೇ ಆದೇಶ ಹೊರಬರಲಿದೆ.
    • ಹೊಸದಾಗಿ ಕೈಗಾರಿಕೆಗಳನ್ನು ಆರಂಭಿಸುವವರಿಗೆ ಬೇಕಾಗುವ ಹೊಸ ರಿಯಾಯಿತಿಗಳನ್ನು ಕೈಗಾರಿಕಾ ನೀತಿಯಲ್ಲಿ ತಿಳಿಸಲಾಗಿದೆ. ಆದರೂ ಹೆಚ್ಚುವರಿ ರಿಯಾಯಿತಿಗಳ ಬಗ್ಗೆ ಪ್ರತಿಯೊಂದು ಪ್ರಕರಣ ಅಧ್ಯಯನ ಮಾಡಿ ನಿರ್ಧಾರಕ್ಕೆ ಬರಲಾಗುತ್ತದೆ.

    ಹೊಸ ನೀತಿಗಳಲ್ಲೇನಿದೆ?

    ಹೊಸ ಹೊಸ ಕ್ಷೇತ್ರದಲ್ಲಿ ಹೂಡಿಕೆ ಹರಿದು ಬರಲು ಸಹಕಾರಿಯಾಗುವಂತೆ ಹೊಸ ಹೊಸ ನೀತಿಗಳನ್ನು ಜಿಮ್ೆ ಮುನ್ನ ತರಲು ಸರ್ಕಾರ ಉದ್ದೇಶಿಸಿದೆ. ರಾಜ್ಯದ ನೂತನ ಕೈಗಾರಿಕಾ ನೀತಿ 2020-25 ಜಾರಿಯಲ್ಲಿದೆ. ಅದಕ್ಕೆ ಪೂರಕವಾಗಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಇರುವ ಎಲ್ಲ ನೀತಿಗಳನ್ನು ರಾಜ್ಯಕ್ಕೆ ತರುವುದಕ್ಕೂ ನಿರ್ಧರಿಸಲಾಗಿದೆ. ಅದರಲ್ಲಿ ಮುಖ್ಯವಾಗಿ ಬಯೋ ಎನರ್ಜಿ, ಏರೋಸ್ಪೇಸ್, ಡಿಫೆನ್ಸ್, ಸೆಮಿ ಕಂಡಕ್ಟರ್, ಎಲೆಕ್ಟ್ರಾನಿಕ್ಸ್, ಡೇಟಾ ಸೆಂಟರ್, ಸಂಶೋಧನೆ ಮತ್ತು ಅಭಿವೃದ್ಧಿ ಹೀಗೆ ವಿವಿಧ ನೀತಿಗಳನ್ನು ತರಲಾಗುತ್ತದೆ. ಬಯೋಎನರ್ಜಿಗೆ ಉತ್ತಮ ಅವಕಾಶ ಇದೆ. 1000 ಮೆ.ವ್ಯಾ ಉತ್ಪಾದನೆಗೆ ಅವಕಾಶ ಇದೆ. ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಹೊಸನೀತಿಯಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ. ಅದೇ ರೀತಿಯಲ್ಲಿ ಇನ್ನುಳಿದ ನೀತಿಗಳೂ ಇರುತ್ತವೆ.

    ಸಮನ್ಸ್ ನೀಡಲು ಬಂದಿದ್ದ ಪೊಲೀಸ್​, ಅತ್ಯಾಚಾರ ಮಾಡಿದ, ಗರ್ಭಪಾತವನ್ನೂ ಮಾಡಿಸಿದ; ವಿಡಿಯೋ ವೈರಲ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts