More

    ಸಂಕಷ್ಟದಲ್ಲಿ ಸರ್ಕಾರಿ ಶಾಲೆ, ಮಕ್ಕಳ ಸಂಖ್ಯೆ ಕ್ಷೀಣ, 9 ಶಾಲೆಗೆ ಬೀಗ, ಶಿಕ್ಷಕರ ಕೊರತೆ

    ವಿಜಯವಾಣಿ ಸುದ್ದಿಜಾಲ ಬೈಂದೂರು

    ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರ ಹತ್ತಾರು ಯೋಜನೆ ಜಾರಿಗೊಳಿಸಿದ್ದರೂ, ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಬೈಂದೂರು ವಲಯದ 178 ಪ್ರಾಥಮಿಕ ಶಾಲೆಗಳಲ್ಲಿ 21 ಶಾಲೆ ಏಕೋಪಾಧ್ಯಾಯ ಶಾಲೆಯಾಗಿದೆ.
    ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ 178 ಪ್ರಾಥಮಿಕ ಹಾಗೂ 15 ಪ್ರೌಢಶಾಲೆಗಳು ಸೇರಿದಂತೆ 193 ಸರ್ಕಾರಿ ಶಾಲೆಗಳಿದ್ದು, ಬೈಂದೂರು ಹಿಂದುಸ್ತಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊರತುಪಡಿಸಿ ಉಳಿದೆಲ್ಲ ಶಾಲೆಗಳು ಸ್ವಂತ ಕಟ್ಟಡ ಹೊಂದಿದೆ. ಅವುಗಳಲ್ಲಿ 17 ಶಾಲೆಗಳು ಶತಮಾನ ಕಂಡಿದೆ.

    9 ಶಾಲೆ ಬಂದ್

    ವಿದ್ಯಾರ್ಥಿಗಳ ಕೊರತೆಯಿಂದ ಬೈಂದೂರು ವಲಯದಲ್ಲಿ 2022-23ನೇ ಸಾಲಿನಲ್ಲಿ 8 ಶಾಲೆ ಮುಚ್ಚಿದ್ದು, 2023-24ನೇ ಸಾಲಿನಲ್ಲಿ ಹೇನ್‌ಬೇರು ಕಿರಿಯ ಪ್ರಾಥಮಿಕ ಶಾಲೆ ಮುಚ್ಚಿದೆ. 2 ವರ್ಷದಲ್ಲಿ 9 ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ.

    ಮಕ್ಕಳ ಸಂಖ್ಯೆ ಕೊರತೆ

    ವಲಯ ವ್ಯಾಪ್ತಿಯ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದು ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ಶಿಕ್ಷಣ ಇಲಾಖೆ ಅಗತ್ಯ ಕ್ರಮ ಕೈಗೊಂಡಿದ್ದರೂ, ಗ್ರಾಮೀಣ ಭಾಗದ ಬಹುತೇಕ ಶಾಲೆಗಳಲ್ಲಿ ಮೂಲಸೌಕರ್ಯಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಅಲ್ಲದೆ ಕೆಲವೊಂದು ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ತೆರೆದಿದ್ದು, ಅಂತಹ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕೇಂದ್ರೀಕೃತಗೊಂಡು ಆಂಗ್ಲ ಮಾಧ್ಯಮ ಇಲ್ಲದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ.

    ಶಿಕ್ಷಕರ ಕೊರತೆ

    ವಲಯದ 178 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 121 ಹಾಗೂ 15 ಪ್ರೌಢಶಾಲೆಗಳಿಗೆ 16 ಕಾಯಂ ಶಿಕ್ಷಕರ ಕೊರತೆಯಿದೆ. ಕೇವಲ 18 ಶಾಲೆಗಳಲ್ಲಿ ಮಾತ್ರ ಸ್ಮಾರ್ಟ್‌ಕ್ಲಾಸ್ ಸೌಕರ್ಯ ಹೊಂದಿದ್ದು, ಬಹುತೇಕ ಎಲ್ಲ ಶಾಲೆಗಳು ವಿದ್ಯುತ್ ಸೌಲಭ್ಯ, ಕುಡಿಯುವ ನೀರಿನ ವ್ಯವಸ್ಥೆ ಹೊಂದಿದೆ. ಮೇಲ್ಛಾವಣಿ ಕೂಡಾ ಸುಸ್ಥಿತಿಯಲ್ಲಿದೆ.

    ಶಿಥಿಲ ಶಾಲಾ ಕೊಠಡಿ

    ಹೇರೂರು, ಸಂತೋಷನಗರ ಹೆಮ್ಮಾಡಿ, ತಗ್ಗರ್ಸೆ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕೂಡ್ಲು ಕನ್ಯಾನ ಕಿರಿಯ ಪ್ರಾಥಮಿಕ ಶಾಲೆ ಕೊಠಡಿ ಶಿಥಿಲಾವಸ್ಥೆಯಲ್ಲಿದೆ. 193 ಸರ್ಕಾರಿ ಶಾಲೆಗಳಲ್ಲಿ ಕೇವಲ 27 ಶಾಲೆಗಳು ಮಾತ್ರ ಸಂಪೂರ್ಣ ಆವರಣ ಗೋಡೆ ಹೊಂದಿದ್ದು, 120 ಶಾಲೆಗಳಲ್ಲಿ ಭಾಗಶಃ ಹಾಗೂ ಇನ್ನುಳಿದ ಶಾಲೆಗಳಲ್ಲಿ ಆವರಣ ಗೋಡೆಯೇ ಇಲ್ಲ. ಅಲ್ಲದೇ 12 ಶಾಲೆಗಳಲ್ಲಿ ಆಟದ ಮೈದಾನ ಇಲ್ಲದಿರುವುದರಿಂದ ಕ್ರೀಡಾ ಚಟುವಟಿಕೆ ನಡೆಸಲು ತೊಡಕ್ಕಾಗುತ್ತಿದೆ.

    21 ಏಕೋಪಾಧ್ಯಾಯ ಶಾಲೆ

    ಯಡ್ನಳ್ಳಿ ಆಜ್ರಿ, ಹೊಸ್ಕೋಟೆ, ಆಜ್ರಗದ್ದೆ, ಹಯ್ಯಂಗಾರ್ ಕೆರಾಡಿ, ಕುಳ್ಳಂಬಳ್ಳು, ಕಾರಿಬೈಲು, ಹೊಸಬೈಲು ಹಳ್ಳಿಹೊಳೆ, ವಟೆಬಚ್ಚಲು, ಯಳಬೇರು, ಹಾಲ್ಕಲ್, ಮುದೂರು, ಗುಡೇದೇವಸ್ಥಾನ, ಹಳ್ಳಿಬೇರು, ಹಡವು, ಅತ್ರಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಹಾಗೂ ಮಂಕಿ ಗುಜ್ಜಾಡಿ, ಚಪ್ಪರಿಕೆ, ಕೆರಾಡಿ, ಉಪ್ಪುಂದ ಉರ್ದು, ಮೇಲ್‌ಹೊಸೂರು, ಬೈಂದೂರು ಹಿಂದುಸ್ತಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ತಲಾ ಒಬ್ಬರು ಮಾತ್ರ ಕಾಯಂ ಶಿಕ್ಷಕರಿದ್ದಾರೆ.

    ಈ ಬಾರಿ ವಲಯ ವ್ಯಾಪ್ತಿಯಲ್ಲಿ ಸುಮಾರು 20ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಸ್ಥಳೀಯ ದಾನಿಗಳು ದತ್ತು ಸ್ವೀಕರಿಸಿ ಅಭಿವೃದ್ಧಿಪಡಿಸುತ್ತಿದ್ದಾರೆ. ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಶೂನ್ಯ ಶಿಕ್ಷಕರಿರುವ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗುವುದು.
    ನಾಗೇಶ ಕೆ.ನಾಯಕ್, ಕ್ಷೇತ್ರ ಶಿಕ್ಷಣಾಕಾರಿ ಬೈಂದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts