More

    ಭವಿಷ್ಯವಿಲ್ಲದ ಮಂಗಳೂರಿನ ಜೀವಜಲ!, ಅತ್ತ ಶಂಭೂರೂ ಇಲ್ಲ; ಇತ್ತ ಲಕ್ಯಾ ಡ್ಯಾಂ ಕೂಡ ಇಲ್ಲ, ಸಧ್ಯಕ್ಕೆ ಹರೆಕಲ ಡ್ಯಾಂನ 60 ಎಂಎಲ್‌ಡಿ ನೀರೇ ಗತಿ

    ಶ್ರವಣ್‌ಕುಮಾರ್ ನಾಳ, ಮಂಗಳೂರು

    ಒಂದೆಡೆ ಬಿಸಿಲಿನ ಝಳ. ಅಸಮರ್ಪಕ ಬೇಸಗೆ ಮಳೆ, ಇದರ ಮಧ್ಯೆ ಕುಡಿಯುವ ನೀರಿಗಾಗಿ ಮಂಗಳೂರು ನೆಚ್ಚಿಕೊಂಡದ್ದು ತುಂಬೆ ಡ್ಯಾಂ!

    ತುಂಬೆ ಡ್ಯಾಂನಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಜಯವಾಣಿ ತಂಡ ತುಂಬೆ ಡ್ಯಾಂಗೆ ಮಂಗಳವಾರ ಭೇಟಿ ನೀಡಿದಾಗ ನೀರು ಕಡಿಮೆಯಾದ ಕಾರಣದಿಂದ ಹೊಸ ಡ್ಯಾಂ ಇರುವ ಪಕ್ಕದಲ್ಲಿದ್ದ ಹಳೆಯ ಡ್ಯಾಂ ಗೋಚರಿಸಿದೆ. ಹೊಸ ಡ್ಯಾಂ ನಿರ್ಮಾಣವಾದ ಬಳಿಕ ಇಲ್ಲಿನ ಹಳೆಯ ಡ್ಯಾಂ ನೀರು ತುಂಬಿರುವ ಕಾರಣದಿಂದ (2019ರ ಮೇ ಮಧ್ಯ ಭಾಗದಲ್ಲಿ ನೀರಿನ ಕೊರತೆಯಿಂದ ಕಾಣಿಸಿತ್ತು) ಉಳಿದ ಸಮಯ ಕಾಣುತ್ತಿರಲಿಲ್ಲ. ಅಂದರೆ, 4 ಮೀ.ಗೆ ನೀರು ಇಳಿದಿರಲಿಲ್ಲ. ಆದರೆ, ಈ ಬಾರಿ ಮೇ ಮೊದಲ ವಾರದಲ್ಲಿಯೇ ನೀರಿನ ಕೊರತೆಯಿಂದ ಹಳೆಯ ಡ್ಯಾಂ ಕಾಣಿಸುತ್ತಿರುವುದು ಮಂಗಳೂರಿನ ಭವಿಷ್ಯದ ದಿನಗಳಿಗೆ ಅಪಾಯದ ಮುನ್ಸೂಚನೆ ಬರೆದಂತಾಗಿದೆ.

    *ನೀರಿನ ಮೂಲಗಳೇ ಬರಿದು

    ತುಂಬೆ ಡ್ಯಾಂನಲ್ಲಿ ಮೇ 14ರಂದು ನೀರಿನ ಮಟ್ಟ 3.62 ಮೀ. ಇದೆ. ಕಳೆದ ವರ್ಷ 3.69 ಮೀ.ಹಾಗೂ 2021, 2022ರ ಇದೇ ದಿನದಂದು 6 ಮೀ. ಇತ್ತು. 2020ರಲ್ಲಿ 5.98 ಮೀ. ಇತ್ತು. 2019ರಲ್ಲಿ 385.66 ಮೀ. ಇತ್ತು. ಕಳೆದ ವರ್ಷ ಶಂಭೂರು ಎಎಂಆರ್ ಡ್ಯಾಂನಲ್ಲಿ ನೀರಿನ ಸಂಗ್ರಹ ಸಾಕಷ್ಟಿತ್ತು. ಕಳೆದ ವರ್ಷ ಹಾಗೂ ಅದಕ್ಕೂ ಮುನ್ನ ವರ್ಷದ ಇದೇ ದಿನದಂದು 18.90 ಮೀ. ನೀರು ಸಂಗ್ರಹವಿತ್ತು. ಆದರೆ, 2 ಬಾರಿ ಬಿಳಿಯೂರು ಡ್ಯಾಂನಿಂದ ನೀರು ಬಿಡುಗಡೆಗೊಳಿಸಿದ್ದರೂ ಈ ವರ್ಷ ಕೇವಲ 15.21 ಮೀ. ಮಾತ್ರ ನೀರಿದೆ. ಹೀಗಾಗಿ ಶಂಭೂರು ಡ್ಯಾಂ ಕೂಡ ಬರಿದಾಗುತ್ತಿರುವುದರಿಂದ ಹಾಗೂ ನದಿಯಲ್ಲಿ ನೀರು ಹರಿದು ಬರುವಷ್ಟು ಮಳೆಯಾಗದಿರುವ ಕಾರಣದಿಂದ ತುಂಬೆಯಲ್ಲಿ ಈಗ ಇರುವ ನೀರನ್ನು ಹೊರತುಪಡಿಸಿ ಬೇರೆ ಮೂಲಗಳನ್ನು ಆಶ್ರಯಿಸುವಂತಿಲ್ಲ.

    ——————————-

    ಅತ್ತ ಶಂಭೂರೂ ಇಲ್ಲ; ಇತ್ತ ಲಕ್ಯಾ ಡ್ಯಾಂ ಕೂಡ ಇಲ್ಲ!

    ತುಂಬೆಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಹತ್ತಿರದ ಶಂಭೂರು ಎಎಂಆರ್ ಡ್ಯಾಂನಿಂದ ನೀರು ಹರಿಸಲಾಗುತ್ತಿತ್ತು. ಪ್ರತೀ ವರ್ಷ ಈ ರೀತಿಯ ಕ್ರಮ ಜಾರಿಯಲ್ಲಿದೆ. ಈ ಬಾರಿ ಶಂಭೂರು ಡ್ಯಾಂನಲ್ಲಿ ಈಗಾಗಲೇ ನೀರು ಖಾಲಿಯಾಗಿದೆ. ಈ ಹಿಂದೆ ದಿಶಾ ಡ್ಯಾಂ ಕಡಬ ಹಾಗೂ ಸಾಗರ ಡ್ಯಾಂ ನೀರಕಟ್ಟೆಯಲ್ಲಿಯೂ ನೀರಿನ ಸಂಗ್ರಹವಿತ್ತು. ಆದರೆ ಈ ಬಾರಿ ಇವೆಲ್ಲವೂ ನೀರಿಲ್ಲದೆ ಭಣಗುಟ್ಟುತ್ತಿದೆ. ಈಬಾರಿ ಬಿಳಿಯೂರು ಡ್ಯಾಂನಿಂದ ಎಎಂಆರ್ ಡ್ಯಾಂಗೆ ಎರಡೆರಡು ಬಾರಿ ನೀರು ಬಿಡುಗಡೆಗೊಂಡರೂ ನೀರಿನ ಭವನೆ ನಿಂತಿಲ್ಲ. ಜತೆಗೆ ಮಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದಾಗ ಆಪತ್ಪಾಂಧವನಾಗಿ ಕಾಣಿಸಿಕೊಳ್ಳುತ್ತಿದ್ದುದು ಕುದುರೆಮುಖ ಪ್ರದೇಶದಲ್ಲಿರುವ ಲಕ್ಯಾ ಅಣೆಕಟ್ಟು. ಆದರೆ ಡ್ಯಾಂನಿಂದ ಗ್ರ್ಯಾವಿಟಿ (ಗುರುತ್ವಾಕರ್ಷಕ)ಯಲ್ಲಿ ನೀರು ಸರಬರಾಜು ಹೊರತುಪಡಿಸಿ, ಪಂಪಿಂಗ್ ಮಾಡಲು ಸುಪ್ರಿಂ ಕೋರ್ಟ್ ಅವಕಾಶ ನೀಡದ ಹಿನ್ನೆಲೆ ಹಾಗೂ ಡ್ಯಾಂನಿಂದ ಮಂಗಳೂರಿಗೆ ಇರುವ ಪೈಪ್‌ಲೈನ್‌ನಲ್ಲಿ ಹೂಳು ತುಂಬಿಕೊಂಡ ಕಾರಣದಿಂದ ಲಕ್ಯಾ ನೀರು ಮಂಗಳೂರಿಗೆ ತರುವ ಕನಸು ಈ ಬಾರಿಯೂ ಲ ನೀಡುವುದಿಲ್ಲ.

    ————————

    ಹರೆಕಲವನ್ನೇ ನೆಚ್ಚಿಕೊಂಡ ಮಂಗಳೂರು

    ತುಂಬೆಯಲ್ಲಿ ಹೊಸ ಡ್ಯಾಂ ನಿರ್ಮಾಣದ ಬಳಿಕ ನೀರು ಹರಿಯುವ ರಭಸಕ್ಕೆ ಡ್ಯಾಂನ ಕೆಳಭಾಗದಲ್ಲಿ ಬೃಹತ್ ಹೊಂಡಗಳಾಗಿದ್ದು, ಇದರಲ್ಲಿ ಸುಮಾರು 4 ಮೀ.ನಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಿದೆ. ಹರೇಕಳ ಡ್ಯಾಂ ನಿರ್ಮಾಣವಾದ ಕಾರಣದಿಂದ ಈ ವರ್ಷ ತುಂಬೆ ಡ್ಯಾಂನ ಕೆಳ ಭಾಗದಲ್ಲಿ ಉಪ್ಪು ನೀರಿನ ಸಮಸ್ಯೆ ಇಲ್ಲ. ಹೀಗಾಗಿ ಬೃಹತ್ ಪಂಪ್ ಸಹಾಯದಿಂದ ಕೆಳಭಾಗದಿಂದ ನೀರು ಮೇಲಕ್ಕೆತ್ತುವ ಕಾರ್ಯ ಇಲ್ಲಿ ನಿರಂತರವಾಗಿ ನಡೆಯುತ್ತಿದೆ. ಪ್ರತೀದಿನ 50ರಿಂದ 60 ಎಂಎಲ್‌ಡಿ ನೀರು ಈ ರೀತಿ ಡ್ಯಾಂಗೆ ಪಂಪ್ ಮಾಡಲಾಗುತ್ತಿದೆ. ಪ್ರಸ್ತುತ ಶೇ.40ರಷ್ಟು ನೀರು ಡ್ಯಾಂನ ಕೆಳಭಾಗದಿಂದ ಪಡೆಯಲಾಗುತ್ತಿದೆ.

    ————————–

    ತುಂಬೆ ಹಾಗೂ ಎಎಂಆರ್ ಡ್ಯಾಂನಲ್ಲಿ ನೀರಿನ ಮಟ್ಟ ಕುಸಿತವಾಗುತ್ತಿದ್ದರೂ ಮಂಗಳೂರು ನಗರದ ನೀರಿನ ಪೂರೈಕೆಯಲ್ಲಿ ತೊಂದರೆಯಾಗದಂತೆ ನಿಗಾ ವಹಿಸಲಾಗಿದೆ. ಭವಿಷ್ಯದಲ್ಲಿ ಮಂಗಳೂರಿಗೆ ಸುಭದ್ರವಾದ ನೀರಿನ ಮೂಲ ಅನಿವಾರ್ಯತೆ ಇದೆ. ತುಂಬೆ ಡ್ಯಾಂ ನೀರಿನ ಮಟ್ಟ ಯಥಾ ಸ್ಥಿತಿ ಕಾಯ್ದುಕೊಳ್ಳಲು ಶೇ.40ರಷ್ಟು ನೀರನ್ನು ತುಂಬೆ ಡ್ಯಾಂನ ಕೆಳಭಾಗದಿಂದ ನಿರಂತರ ಪಂಪಿಂಗ್ ಮಾಡಲಾಗುತ್ತಿದೆ.

    ಸುಧೀರ್ ಶೆಟ್ಟಿ ಕಣ್ಣೂರು, ಮಂಗಳೂರು ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts