More

    ಕಂಬಳಕ್ಕೆ ನೆರವಿನ ಹಸ್ತ ಚಾಚಿದ ಸರ್ಕಾರ, ದ.ಕ, ಉಡುಪಿಯ 20 ಕೂಟಗಳಿಗೆ 1 ಕೋಟಿ ರೂ. ಮಂಜೂರು

    ಮಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳದ ಪ್ರೋತ್ಸಾಹಕ್ಕಾಗಿ ಪ್ರತೀ ಕಂಬಳಕ್ಕೆ 5 ಲಕ್ಷ ರೂ.ನಂತೆ ಒಟ್ಟು 1 ಕೋಟಿ ರೂ. ಸಹಾಯಧನ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಇದರಲ್ಲಿ ದ.ಕ ಹಾಗೂ ಉಡುಪಿ ಜಿಲ್ಲೆಯ ತಲಾ 10 ಕಂಬಳಗಳಿಗೆ ಸಮಾನ ನೆರವು ಸಿಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಕಂಬಳಗಳನ್ನು ನಡೆಸಲು 5 ಲಕ್ಷ ರೂ.ಗಳಂತೆ ಒಟ್ಟು 50 ಲಕ್ಷ ರೂ. ಮತ್ತು ಉಡುಪಿ ಜಿಲ್ಲೆಯಲ್ಲಿ 10 ಕಂಬಳಗಳನ್ನು ನಡೆಸಲು 5 ಲಕ್ಷ ರೂ.ನಂತೆ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಕಂಬಳಗಳಿಗೆ ಸಹಾಯಧನ ನೀಡಲಾಗುತ್ತದೆ.

    ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ್ ಕೆಲವು ದಿನಗಳ ಹಿಂದೆ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನೆಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಎರಡು ದಿನಗಳ ಭೇಟಿ ನೀಡಿದ್ದರು. ಈ ಸಂದರ್ಭ ಕಂಬಳ ವೀಕ್ಷಿಸಿ ಸ್ಥಳದಲ್ಲಿಯೇ ಪ್ರತೀ ಕಂಬಳಕ್ಕೆ 5ಲಕ್ಷ ರೂ. ಸಹಾಯಧನ ಘೋಷಣೆ ಮಾಡಿದ್ದರು. ಅದರಂತೆ ಈಗ ಅಧಿಕೃತವಾಗಿ ನೆರವು ಮಂಜೂರಾಗಿದೆ.

    ಈ ಹಿಂದೆ ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ 1 ಕೋಟಿ ರೂ. ಘೋಷಿಸಿದ್ದರು. ಆದರೆ ಅದರಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಪೂರ್ಣ ಮೊತ್ತ ಸಿಕ್ಕಿರಲಿಲ್ಲ. ಉಳಿದಂತೆ ಒಂದೊಂದು ಕಂಬಳಗಳಿಗೆ, ಮೂಲಸೌಕರ್ಯ ಅಭಿವೃದ್ಧಿಗೆ ಡಾ.ವೀರಪ್ಪ ಮೊಯ್ಲಿ, ಕೋಟ ಶ್ರೀನಿವಾಸ ಪೂಜಾರಿ, ಶ್ರೀರಾಮುಲು ಅವರಿಂದ ನೆರವು ಸಿಕ್ಕಿದೆ. ಆದರೆ ಎಲ್ಲ ಕಂಬಳಗಳಿಗೆ ಸಮಾನವಾಗಿ ಈ ರೀತಿ ಸಹಾಯಧನ ದೊರಕುತ್ತಿರುವುದು ಇದೇ ಮೊದಲು.

    ಸರ್ಕಾರಕ್ಕೆ ಪಟ್ಟಿ ರವಾನೆ: ಈಗಾಗಲೇ ಉಭಯ ಜಿಲ್ಲೆಗಳಲ್ಲಿ ನಡೆದಿರುವ ಮತ್ತು ನಡೆಯಲಿರುವ ಕಂಬಳಗಳಿಗೆ ಈ ನೆರವು ಸಿಗಲಿದೆ. ಮಿಯ್ಯರು ಕಂಬಳ ವೀಕ್ಷಣೆಗೆಂದು ಬಂದಿದ್ದ ಸಚಿವ ಯೋಗೇಶ್ವರ್ ಎರಡೂ ಜಿಲ್ಲೆಗಳ ಕಂಬಳಗಳಿಗೆ ನೆರವು ನೀಡುವುದಾಗಿ ಹೇಳಿದ್ದರು, ಶಾಸಕ ಸುನೀಲ್ ಕುಮಾರ್ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಸಚಿವರ ಭರವಸೆಗೆ ಪೂರಕವಾಗಿ ಎರಡೂ ಜಿಲ್ಲೆಗಳ ಕಂಬಳದ ಪಟ್ಟಿಯನ್ನು ಕಳುಹಿಸಲಾಗಿದೆ ಎಂದು ಕಂಬಳ ತಜ್ಞ ಗುಣಪಾಲ ಕಡಂಬ ಹೇಳುತ್ತಾರೆ.

    ಶಾಸಕ ಸುನೀಲ್ ಕುಮಾರ್ ಅವರ ಪ್ರಯತ್ನದಿಂದ ಹಾಗೂ ಸಚಿವ ಸಿ.ಪಿ.ಯೋಗೇಶ್ವರ್ ಅವರ ಇಚ್ಛೆಯಿಂದಾಗಿ ಕಂಬಳಕ್ಕೆ ಸಹಾಯಧನ ಪಡೆಯುವುದು ಸಾಧ್ಯವಾಗಿದೆ. ಪ್ರವಾಸೋದ್ಯಮಕ್ಕೆ ಇದರಿಂದ ಪ್ರೋತ್ಸಾಹ ಸಿಗಲಿದೆ.

    ಪಿ.ಆರ್.ಶೆಟ್ಟಿ, ಅಧ್ಯಕ್ಷ, ಅವಿಭಜಿತ ದ.ಕ ಜಿಲ್ಲಾ ಕಂಬಳ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts