More

    ಸರ್ಕಾರಿ ಜಮೀನಿನ ಸಾಗುವಳಿದಾರರಿಗೆ ಸಂಕಷ್ಟ

    ಹಟ್ಟಿಚಿನ್ನದಗಣಿ: ಸರ್ಕಾರಿ ಭೂಮಿ ಉಳುಮೆ ಮಾಡುವ ರೈತರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ. ಇದರಿಂದಾಗಿ ಜೀವನಕ್ಕೆ ಆಧಾರ ಇಲ್ಲದಂತಾಗಿದೆ ಎಂಬುದು ರೈತರ ಅಸಮಧಾನವಾಗಿದೆ.

    ಕೋಠಾ ಶಿವಾರದ ಯಲಗಟ್ಟಾ ಹೊರವಲಯದ ಸರ್ಕಾರಿ ಭೂಮಿಯನ್ನು ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆ ನಡೆಯಿಂದ ಸಂಕಷ್ಟ ಎದುರಾಗಿದೆ. ಅರಣ್ಯ ಇಲಾಖೆಯಿಂದ ಸಸಿ ನಾಟಿ ಮಾಡುವುದಾಗಿ ಹೇಳಿ ತಗ್ಗು ಅಗೆದು ಹಾಗೆಯೇ ಬಿಡಲಾಗಿದೆ. ಇದರಿಂದ ರೈತರಿಗೆ ಉಳುಮೆ ಮಾಡಲು ಆಗುತ್ತಿಲ್ಲ.

    ರೈತರು ಜಮೀನಿಗೆ ಸಂಬಂಧಿಸಿದಂತೆ ಹಕ್ಕುಪತ್ರ ಪಡೆದಿದ್ದಾರೆ. ತೆರಿಗೆ ಪಾವತಿಸಿ ಸಾಗುವಳಿ ಮಾಡುತ್ತಿದ್ದಾರೆ. ಆದರೆ, ಇದೀಗ ಅರಣ್ಯ ಇಲಾಖೆಯಿಂದ ಸಸಿ ನಾಟಿ ಮಾಡಿಲ್ಲ. ಬಿತ್ತಲು ಯೋಗ್ಯವಿಲ್ಲದ ರೀತಿಯಲ್ಲಿ ಭೂಮಿಯನ್ನು ಅಗೆಯಲಾಗಿದೆ. ಯಲಗಟ್ಟಾ ಗ್ರಾಮದ ಸರ್ವೇ ನಂ. 36ರಲ್ಲಿ 707.11ಎಕರೆಯನ್ನು 27 ಜನರಿಗೆ ಹಾಗೂ ಸರ್ವೇ ನಂ. 155ರಲ್ಲಿ 673.04 ಎಕರೆಯನ್ನು 19 ಜನರಿಗೆ ಮಂಜೂರು ಮಾಡಲಾಗಿದೆ.

    2000ರ ಜು.17ರಂದು ಲಿಂಗಸುಗೂರು ಉಪವಿಭಾಗಾಧಿಕಾರಿ ಭೂ ರಹಿತ ಕಾರ್ಮಿಕರಿಗೆ ಸಾಗುವಳಿ ಮಾಡಲು ಸಕ್ರಮಗೊಳಿಸಿ ಆದೇಶ ಹೊರಡಿಸಿದ್ದಾರೆ. ಉಳಿದ ಅರ್ಜಿಗಳು ಪರಿಶೀಲನೆಯಲ್ಲಿದ್ದು ಅಲ್ಲಿಯವರೆಗೂ ಯಥಾಸ್ಥಿತಿ ಕಾಪಾಡಿಕೊಳ್ಳಬೇಕೆಂದು ತಿಳಿಸಲಾಗಿದೆ. ಆದರೂ, ಅರಣ್ಯ ಇಲಾಖೆಯವರು ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ.

    ಉಪ ವಿಭಾಗಾಧಿಕಾರಿ ಆದೇಶಕ್ಕಿಲ್ಲ ಕಿಮ್ಮತ್ತು !

    ಬಗರ್ ಹುಕುಂ ಸಾಗುವಳಿದಾರರಿಗೆ ಪಟ್ಟಾ ಕಾಯಂ ಆಗಲಿದ್ದು, ಬಿತ್ತನೆಗೆ ಅಡ್ಡಿಪಡಿಸಬಾರದು ಎಂದು ಆದೇಶ ನೀಡಲಾಗಿದೆ. ಆದರೆ, ಪಹಣಿ ಇಲ್ಲದ ರೈತರಿಗೆ ಸಾಗುವಳಿ ಮಾಡಲು ಬಿಡುವುದಿಲ್ಲವೆಂದು ಕಂದಾಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಹಾಗಾದರೆ ಉಪವಿಭಾಗಾಧಿಕಾರಿ ನೀಡಿರುವ ಆದೇಶಕ್ಕೆ ಕಿಮ್ಮತ್ತಿಲ್ಲವೇ ಎಂಬುದು ರೈತರ ಪ್ರಶ್ನೆಯಾಗಿದೆ. 2019ರಲ್ಲಿ ಸಾಗುವಳಿ ಭೂಮಿಯಲ್ಲಿ ಸಸಿ ನೆಟ್ಟು, ನಿರ್ವಹಣೆ ಇಲ್ಲದೆ ಒಣಗಿ ಹೋಗಿವೆ. ಆದರೂ, ಸಾಗುವಳಿ ಮಾಡುತ್ತಿರುವವರನ್ನು ಬೀದಿಗೆ ತಂದು ನಿಲ್ಲಿಸಲಾಗಿದೆ ಎಂಬುದು ರೈತರ ಆರೋಪವಾಗಿದೆ.

    ಸಾಗುವಳಿ ಚೀಟಿ ಇದ್ದು, ತೆರಿಗೆ ಪಾವತಿಸಿ ಕಾನೂನುಬದ್ಧವಾಗಿ ಉಳುಮೆ ಮಾಡುತ್ತಿರುವ ರೈತರನ್ನು ಅರಣ್ಯ ಇಲಾಖೆ ಬೀದಿಗೆ ತಂದಿದೆ. ಸಾಗುವಳಿ ಮಾಡಲು ರೈತರಿಗೆ ಜಮೀನು ನೀಡಬೇಕು.
    | ಸಿದ್ಧೇಶ ಮಾಸರೆಡ್ಡಿ ಗೌಡೂರು, ತಾಲೂಕು ಗೌರವಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ

    ಪಹಣಿಯಲ್ಲಿ ಉಳುಮೆ ಮಾಡುತ್ತಿರುವ ರೈತರ ಹೆಸರಿಲ್ಲ. ರೈತರ ಹೆಸರು ನಮೂದಾಗಿದ್ದರೆ ಪರಿಶೀಲಿಸಲಾಗುವುದು. ಮೇಲಧಿಕಾರಿಗಳು ಹಾಗೂ ತಾಲೂಕು ಆಡಳಿತದ ನಿರ್ದೇಶನದಂತೆ ಕ್ರಮಕೈಗೊಳ್ಳಲಾಗುವುದು.
    | ಚನ್ನಬಸವ ಕಟ್ಟಿಮನಿ, ತಾಲೂಕು ಅರಣ್ಯಾಧಿಕಾರಿ, ಲಿಂಗಸುಗೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts