More

    ಉಳುವವನೇ ಒಡೆಯ: ರೈತರಿಗೆ ಕುಮ್ಕಿ, ಬಾಣೆ, ಬೆಟ್ಟ, ಸೊಪ್ಪಿನ ಬೆಟ್ಟ ಭೂಮಿ

    | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ಮಲೆನಾಡು, ಕರಾವಳಿ ಸೇರಿ ರಾಜ್ಯದ ವಿವಿಧ ಭಾಗದ ರೈತರಿಗೆ ಭರ್ಜರಿ ಕೊಡುಗೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಕಳೆದ ಹಲವು ವರ್ಷಗಳಿಂದ ಕುಮ್ಕಿ, ಬಾಣೆ, ಬೆಟ್ಟ, ಹಾಡಿ, ಕಾನ್, ಸೊಪ್ಪಿನಬೆಟ್ಟ, ಜಮ್ಮಮಲೈ, ಮೇಟಸ್ಥಳ, ವರ್ಗ ಭೂಮಿ ಹೀಗೆ ವಿವಿಧ ಹೆಸರಿನಲ್ಲಿ ಕರೆಯಲ್ಪಡುವ ಹಾಗೂ ರೈತರ ಸ್ವಾಧೀನದಲ್ಲಿರುವ ಭೂಮಿಯನ್ನು ಅವರಿಗೇ ನೀಡುವ ಬಗ್ಗೆ ಸರ್ಕಾರ ಶೀಘ್ರದಲ್ಲಿಯೇ ಸ್ಪಷ್ಟ ತೀರ್ವನಕ್ಕೆ ಬರಲಿದೆ.

    ರಾಜ್ಯದಲ್ಲಿರುವ ಡೀಮ್ಡ್​ ಅರಣ್ಯ ಹಾಗೂ ಕಂದಾಯ ಇಲಾಖೆಗಳ ಭೂಮಿಗೆ ಸಂಬಂಧಿಸಿದಂತೆ ಇರುವ ಗೊಂದಲಗಳಿಂದಾಗಿ ಈ ಎಲ್ಲ ಭೂಮಿಗಳ ಸಮಸ್ಯೆ ಹಲವು ವರ್ಷಗಳಿಂದ ಬಗೆಹರಿಯುತ್ತಿಲ್ಲ. ಅಂತಹ ಸಮಸ್ಯೆಗಳನ್ನು ಅಂತ್ಯಗೊಳಿಸಲು ಸರ್ಕಾರ ಮುಂದಾಗಿದೆ. ಕೊಡಗಿನ ವರ್ಗ ಭೂಮಿಯನ್ನು ಹಂಚಿಕೆ ಮಾಡುವಂತೆ ಸುಪ್ರೀಂಕೋರ್ಟ್ 2019ರಲ್ಲಿ ಆದೇಶ ಮಾಡಿದ ಸಂದರ್ಭದಲ್ಲಿ, ಉಳಿದೆಡೆಗಳಲ್ಲಿ ಉಳುಮೆ ಮಾಡುತ್ತಿರುವ ರೈತರಿಗೂ ಭೂಮಿಯ ಹಕ್ಕು ಸಿಗಬಹುದೆಂಬ ಆಸೆ ಚಿಗುರಿತ್ತು. ಆದರೆ ಸರ್ಕಾರಕ್ಕೆ ಆಸಕ್ತಿ ಇದ್ದರೂ ಅಧಿಕಾರಿಗಳ ಮಟ್ಟದಲ್ಲಿ ಸಮಸ್ಯೆ ಇತ್ಯರ್ಥಪಡಿಸುವ ಇಚ್ಛಾಶಕ್ತಿಯ ಕೊರತೆಯ ಕಾರಣದಿಂದ ಸಮಸ್ಯೆ ಉಳಿದಿದೆ. ಅಧಿವೇಶನ ಮುಗಿಯುತ್ತಿದ್ದಂತೆ ಸಚಿವ ಸಂಪುಟದಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಸಿ ಸ್ಪಷ್ಟ ತೀರ್ಮಾನ ಕೈಗೊಂಡು ಆದೇಶ ಹೊರಡಿಸಲಾಗುತ್ತದೆ.

    ವಿರೋಧವೂ ಇದೆ: ಈ ರೀತಿಯಲ್ಲಿ ಭೂಮಿ ಬಿಟ್ಟು ಕೊಡುವ ಬಗ್ಗೆ ವಿರೋಧವೂ ಇದೆ. ಇದೆಲ್ಲವೂ ಕಾಡಿನಲ್ಲಿರುವ ಭೂಮಿ ಯಾಗಿದೆ. ಅರಣ್ಯದ ಪ್ರಮಾಣ ಕಡಿಮೆಯಾಗಬಹುದೆಂದು ಪರಿಸರ ತಜ್ಞರು ಹೇಳುತ್ತಿದ್ದಾರೆ. ಕಾಡಿನ ಅಂಚಿನಲ್ಲಿ ಇಂತಹ ಭೂಮಿಯ ಪ್ರಮಾಣ ಸುಮಾರು 10 ಲಕ್ಷ ಹೆಕ್ಟೇರ್ ಇತ್ತು. ಈಗ 7 ರಿಂದ 8 ಲಕ್ಷ ಹೆಕ್ಟೇರ್​ನಷ್ಟು ಬಿಟ್ಟರೆ ಉಳಿಯುವುದು 2 ರಿಂದ 3 ಲಕ್ಷ ಹೆಕ್ಟೇರ್ ಮಾತ್ರ. ಇದು ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತದೆ ಎಂಬ ವಾದವೂ ಇದೆ.

    ಏನಿದು ಸಮಸ್ಯೆ?: ಸರ್ಕಾರದ ವಶದಲ್ಲಿರುವ ಜಮೀನನ್ನು ಕೃಷಿಗೆ ಪೂರಕವಾದ ಚಟುವಟಿಕೆಗಳಿಗೆ ಬಳಸಬಹುದೇ ಹೊರತು, ಕೃಷಿ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಆದರೆ ಬಹುತೇಕ ಕಡೆಗಳಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದೆ. ಆ ಭೂಮಿಯನ್ನು ತಮ್ಮ ಸ್ವಾಧೀನಕ್ಕೆ ನೀಡಬೇಕು ಎಂಬುದು ಸಾಗುವಳಿದಾರರ ಒತ್ತಾಯ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿಯೇ ಸುಮಾರು 4 ಲಕ್ಷ ಹೆಕ್ಟೇರ್ ಈ ರೀತಿಯ ಭೂಮಿ ಇದೆ. ಇಡೀ ರಾಜ್ಯದ ವಿವಿಧ ಭಾಗಗಳಲ್ಲಿ ಸುಮಾರು 7 ರಿಂದ 8 ಲಕ್ಷ ಹೆಕ್ಟೇರ್ ಭೂಮಿ ರೈತರಿಗೆ ಸಿಗಲಿದೆ ಸಿಗುವ ಅಂದಾಜಿದೆ.

    ಯಾವಾಗಿನಿಂದ ಸಮಸ್ಯೆ?: ಈ ಭೂಮಿಯ ಸಮಸ್ಯೆ ಇಂದು ನಿನ್ನೆಯದಲ್ಲ. 1973ರಲ್ಲಿ ಕದೀಂದಾರರಿಗೆ ದರ್ಖಾಸು ನೆಲೆಯಲ್ಲಿ ಭೂಮಿ ನೀಡಲಾಗಿತ್ತು. ಆದರೆ 2010ರಿಂದ ಸಾರ್ವಜನಿಕ ಉದ್ದೇಶಕ್ಕೆ ಹೊರತು ಬೇರೆ ಉದ್ದೇಶಕ್ಕೆ ಬಳಕೆಗೆ ನಿರ್ಬಂಧಿಸಲಾಯಿತು. 2013ರಲ್ಲಿ ಸರ್ಕಾರ ಕೃಷಿ ಚಟುವಟಿಕೆಗೆ ಸ್ವಾಧೀನ ನೀಡುವ ಬಗ್ಗೆ ಆದೇಶ ಹೊರಡಿಸಲು ಮುಂದಾಗಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ಇಂತಹ ತೀರ್ವನಕ್ಕೆ ಬಂದಿದೆ.

    ಕಾಫಿ ತೋಟ ಬಾಡಿಗೆಗೆ: ರಾಜ್ಯದಲ್ಲಿ ಅರಣ್ಯ ಒತ್ತುವರಿ ಮಾಡಿ ಕಾಫಿ ತೋಟ ಮಾಡಿಕೊಂಡಿರುವ ಸಾಕಷ್ಟು ಪ್ರಕರಣಗಳಿವೆ. ಅವುಗಳನ್ನು ಸಕ್ರಮ ಮಾಡಲು ಸಾಧ್ಯವಿಲ್ಲ. ಅದರ ಬದಲು ಸ್ವಾಧೀನ ಮಾಡಿಕೊಂಡು ಒತ್ತುವರಿ ಮಾಡಿರುವವರಿಗೆ ಬಾಡಿಗೆ ಆಧಾರದಲ್ಲಿ ನೀಡಲು ಸರ್ಕಾರ ಚಿಂತನೆ ನಡೆಸಿದೆ. ನೆರೆಯ ಕೇರಳದಲ್ಲಿ ಇಂತಹ ಪ್ರಯತ್ನ ಯಶಸ್ವಿಯಾಗಿದೆ ಎಂಬ ಮಾಹಿತಿ ಇದೆ. ಆದ್ದರಿಂದ ಅಧಿಕಾರಿಗಳ ತಂಡವನ್ನು ಅಧ್ಯಯನಕ್ಕಾಗಿ ಅಲ್ಲಿಗೆ ಕಳುಹಿಸಲು ಸಚಿವ ಅಶೋಕ್ ನಿರ್ಧರಿಸಿದ್ದಾರೆ. ಬಾಡಿಗೆ ಒಂದು ಎಕರೆಗೆ ವರ್ಷಕ್ಕೆ 5000 ರೂ. ನಿಗದಿ ಮಾಡಿದರೂ ವಾರ್ಷಿಕ 300 ಕೋಟಿ ರೂ.ಗಳಿಗೂ ಹೆಚ್ಚಿನ ಆದಾಯ ಸರ್ಕಾರಕ್ಕೆ ಬರುತ್ತದೆ ಎಂಬುದು ಸರ್ಕಾರದಲ್ಲಿ ಮಾಡಿರುವ ಅಂದಾಜು.

    ಗ್ರಾಮ ವಾಸ್ತವ್ಯ: ಇದೀಗ ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳು ನಡೆಸಿರುವ ಹಳ್ಳಿಗೆ ನಡೆಯಿರಿ ಗ್ರಾಮ ವಾಸ್ತವ್ಯ ಮುಂದಿನ ದಿನಗಳಲ್ಲಿ ಈ ಜಮೀನು ಇರುವ ಪ್ರದೇಶದಲ್ಲಿಯೂ ನಡೆಯಲಿದೆ. ಅಲ್ಲಿನ ಸಮಸ್ಯೆ ಅರಿತು ಸ್ಥಳದಲ್ಲಿಯೆ ಪರಿಹಾರ ನೀಡಲಾಗುತ್ತದೆ. ಕಂದಾಯ ಸಚಿವ ಆರ್. ಅಶೋಕ್ ಸಹ ಒಂದು ಹಳ್ಳಿಗೆ ಹೋಗಿ ವಾಸ್ತವ್ಯ ಮಾಡಲಿದ್ದಾರೆ.

    • ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ರೈತರಿಗೆ ಹೆಚ್ಚು ಅನುಕೂಲ
    • ಆದಷ್ಟು ಬೇಗ ಕಾನೂನು ರೂಪಿಸಲು ಸರ್ಕಾರ ನಿರ್ಧಾರ
    • ಸುಮಾರು 7 ರಿಂದ 8 ಲಕ್ಷ ಹೆಕ್ಟೇರ್ ಭೂಮಿ ಹಕ್ಕು ಉಳುಮೆ ಮಾಡುವವರಿಗೆ ಸಿಗಲಿದೆ
    • ಒತ್ತುವರಿಯಾಗಿರುವ ಕಾಫಿ ತೋಟ ಬಾಡಿಗೆಗೆ ನೀಡಲು ನಿರ್ಧಾರ
    • ಎಕರೆಗೆ ವಾರ್ಷಿಕ 5 ಸಾವಿರ ರೂ.
    • ವಾರ್ಷಿಕ 300 ಕೋಟ ರೂ. ಆದಾಯ ನಿರೀಕ್ಷೆ

    ಭೂಮಿಗೆ ಎಲ್ಲಿ ಏನು ಕರೆಯುತ್ತಾರೆ?

    • ದಕ್ಷಿಣ ಕನ್ನಡ, ಉಡುಪಿ – ಕುಮ್ಕಿ, ಬಾಣೆ, ಕಾನ್
    • ಉತ್ತರ ಕನ್ನಡ – ಬೆಟ್ಟ, ಹಾದಿ
    • ಮೈಸೂರು – ಸೊಪ್ಪಿನ ಬೆಟ್ಟ, ಕಾನ್ ಜಮೀನು
    • ಕೊಡಗು – ಜಮ್ಮ, ಬಾಣೆ
    • ಕಲಬುರಗಿ – ಮೇಟಸ್ಥಳ

    ಬಹಳ ವರ್ಷಗಳಿಂದ ಇರುವ ರೈತರ ಪರವಾದ ಸಮಸ್ಯೆಯನ್ನು ನಿವಾರಣೆ ಮಾಡಲು ಸರ್ಕಾರ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ, ಆದಷ್ಟು ಬೇಗ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿ.

    | ಜೆ.ಸಿ. ಬಯ್ಯಾರೆಡ್ಡಿ ಅಧ್ಯಕ್ಷ, ಪ್ರಾಂತ ರೈತ ಸಂಘ

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    10 ಲಕ್ಷ ಜನರಿಗೆ ಒಟ್ಟು 1,500 ಕೋಟಿ ರೂ. ಮೋಸ; ಬೆಂಗಳೂರಿನ ಕಂಪನಿಯ 24 ಜನರನ್ನು ಬಂಧಿಸಿದ ಸೈಬರಾಬಾದ್ ಪೊಲೀಸರು

    ‘ಕಾಲೂರಲು’ ಸಿಗದ ‘ಬೆಂ’ಬಲ; ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ರಾಜಕೀಯ ನಿವೃತ್ತಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts