More

    ದ.ಕ, ಉಡುಪಿ 10 ಮತ್ಸೃಧಾಮ, ಅಪರೂಪದ ಮೀನುಗಳ ಸಂರಕ್ಷಣೆಗೆ ಸರ್ಕಾರ ಕ್ರಮ

    ಪ್ರಕಾಶ್ ಮಂಜೇಶ್ವರ, ಮಂಗಳೂರು

    ವೈವಿಧ್ಯಮಯ ಜೀವರಾಶಿ ಹೊಂದಿರುವ ಪಶ್ಚಿಮ ಘಟ್ಟದ ಸರಹದ್ದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10ಕ್ಕೂ ಅಧಿಕ ನದಿಗಳು, ಹಲವು ಹೊಳೆಗಳು ಹರಿಯುತ್ತಿವೆ. ಬಹುತೇಕ ಎಲ್ಲ ನದಿಗಳು ಪ್ರಸಿದ್ದ ದೇಗುಲ ಸಾನಿಧ್ಯದಿಂದ ಹಾದು ಪಶ್ಚಿಮಕ್ಕೆ ಹರಿದು ಸಮುದ್ರ ಸೇರುತ್ತಿವೆ. ಈ ಅಪರೂಪದ ನೈಸರ್ಗಿಕ ಸಂಪನ್ಮೂಲವನ್ನೇ ಬಳಸಿಕೊಂಡು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟು 10 ಪ್ರದೇಶಗಳನ್ನು ಮತ್ಸೃಧಾಮಗಳೆಂದು ಘೋಷಿಸಲಾಗಿದ್ದು, ಇವುಗಳಲ್ಲಿ ನಾಲ್ಕು ಪ್ರದೇಶಗಳಿಗೆ ಆದೇಶವೂ ದೊರೆತಿದೆ.

    ದಕ್ಷಿಣ ಕನ್ನಡದ ಶಿಶಿಲಾ (ಕಪಿಲಾ ನದಿ), ಅರಂತೋಡು ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಬಳಿ (ಚಂದ್ರಗಿರಿ ನದಿ), ಏನೇಕಲ್ಲು ಗ್ರಾಮದ ಬಚ್ಚನಾಯಕನ ಗುಂಡಿ (ಕಲ್ಲಾಜೆ ಹೊಳೆ) ಮತ್ತು ಉಡುಪಿಯ ತಿಂಗಳೆ (ಸೀತಾನದಿ) ಪ್ರದೇಶಗಳಿಗೆ ಸಂಬಂಧಿಸಿ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ.
    ಧರ್ಮಸ್ಥಳ ಸ್ನಾನಘಟ್ಟ (ನೇತ್ರಾವತಿ ನದಿ), ಕೆಲ್ಕಾರು (ಫಲ್ಗುಣಿ), ಮರಕತ (ಯೇನೆಕಲ್ ಹೊಳೆ), ನಾಕೂರು ಗಯ (ಕುಮಾರಧಾರ), ಉಪ್ಪುಕಳ (ಕಲ್ಲಾಜೆ ಹೊಳೆ) ಮತ್ತು ಹೆಬ್ರಿ ಸಮೀಪದ ಇನ್ನೊಂದು ಪ್ರದೇಶ (ಸೀತಾನದಿ)ವನ್ನು ಕೂಡ ಘೋಷಿಸಲಾಗಿದ್ದು ಆದೇಶವಾಗಿಲ್ಲ.

    ಮೂಲ ಸೌಕರ್ಯ ಕೊರತೆ: ಘೋಷಣೆಯಾದ ಪ್ರದೇಶಗಳಲ್ಲಿ ಮೀನುಗಳಿಗೆ ಆಹಾರ ಒದಗಿಸುವ ಫ್ಲಾೃಟ್‌ಫಾರ್ಮ್, ಗ್ರಿಲ್ ನಿರ್ಮಾಣ ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆಯಾಗಿಲ್ಲ.

    ತೋಡಿಕಾನದಲ್ಲಿ ಬಹಳ ಹಿಂದೆ ಫ್ಲಾೃಟ್‌ಫಾರ್ಮ್ ನಿರ್ಮಿಸಲಾಗಿದ್ದರೂ ಅವುಗಳು ಈಗ ಸುಸ್ಥಿತಿಯಲ್ಲಿ ಇಲ್ಲ. ಪ್ರಸ್ತಾವಿತ ಯೋಜನೆ ಸಂಬಂಧಿಸಿ ಸರ್ಕಾರದಿಂದ ಪ್ರತ್ಯೇಕ ಅನುದಾನ ಬಿಡುಗಡೆಯಾಗುತ್ತಿಲ್ಲ. ಇಲಾಖೆಯ ಇತರ ಅನುದಾನಗಳಲ್ಲಿಯೇ ಹೊಂದಿಸಿ ಕೇಂದ್ರದ ಕೆಲವು ಅಗತ್ಯಗಳನ್ನು ಪೂರೈಸಿಕೊಳ್ಳಬೇಕಾಗಿದೆ.

    ಮೀನುಗಾರಿಕೆ ನಿರ್ಬಂಧ: ಮತ್ಸೃಧಾಮಗಳೆಂದು ಆದೇಶವದ ಪ್ರದೇಶಗಳ ನಾಲ್ಕು ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಮೀನುಗಾರಿಕೆಯನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧಿಸಲಾಗಿದೆ. ಈ ಪ್ರದೇಶದಲ್ಲಿ ‘ಮೀನು ಸಂರಕ್ಷಿತಾ ಪ್ರದೇಶ’ ಎಂದು ಫಲಕ ತೂಗು ಹಾಕಲಾಗಿದೆ. ಮತ್ಸೃಧಾಮಗಳೆಂದು ಗುರುತಿಸಲಾದ ಹೆಚ್ಚಿನ ಪ್ರದೇಶಗಳು ದೇವಸ್ಥಾನ/ ಗರಡಿ ಮತ್ತಿತರ ಆರಾಧನಾ ಕೇಂದ್ರಗಳ ಪರಿಸರದಲ್ಲೇ ಇರುವುದರಿಂದ ಇಲ್ಲಿ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಮೀನುಗಳಿಗೆ ಹೆಚ್ಚಿನ ರಕ್ಷಣೆ ನಿರೀಕ್ಷಿಸಲಾಗಿದೆ.

    ಅಪರೂಪದ ಮೀನು ವೈವಿಧ್ಯತೆ ಇರುವ ಸ್ಥಳಗಳನ್ನು ಮೀನುಗಾರಿಕೆ ಕಾಯ್ದೆಯಡಿ ಮತ್ಸೃಧಾಮ ಎಂದು ಘೋಷಿಸಬೇಕು ಎಂದು ಕರ್ನಾಟಕ ಜೀವ ವೈವಿದ್ಯ ಮಂಡಳಿ ಈ ಹಿಂದೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ದೇಶದಲ್ಲಿ ಮತ್ಸೃಧಾಮ ಘೋಷಣೆ ಮಾಡಿರುವ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಯನ್ನು ಕರ್ನಾಟಕ ಹೊಂದಿದೆ.

    ಮತ್ಸ್ಯ ಪ್ರಭೇದಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಸಮೃದ್ಧ ನೀರಿನ ವ್ಯವಸ್ಥೆ ಇರುವ ದೇವಳಗಳ ಪರಿಸರದಲ್ಲಿ ಶ್ರೇಷ್ಠ ಮಟ್ಟದ ಮತ್ಸ್ಯಾಗಾರ ನಿರ್ಮಾಣ ಮಾಡುವ ಚಿಂತನೆ ಇದೆ. ದೇವಳಗಳಲ್ಲಿ ಮತ್ಸ್ಯಾಗಾರವನ್ನು ನಿರ್ಮಾಣ ಮಾಡುವುದರಿಂದ ಅಪರೂಪದ ಮತ್ಸೃ ಸಂರಕ್ಷಣೆಗೆ ಒತ್ತು ನೀಡಲಾಗುವುದು. ಭಕ್ತರಿಗೆ ಮತ್ಸ್ಯ ಪ್ರಭೇದಗಳ ಜ್ಞಾನ ಪಡೆದುಕೊಳ್ಳಲು ಇದರಿಂದ ಸಾಧ್ಯವಿದೆ.

    ಎಸ್.ಅಂಗಾರ, ಮೀನುಗಾರಿಕೆ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts