More

    ನಗರದ ಗೋಷಾ ಆಸ್ಪತ್ರೆಯಲ್ಲಿ 78 ದಿನಗಳಲ್ಲಿ 300 ಕೋವಿಡ್ ಸೋಂಕಿತ ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ

    ಬೆಂಗಳೂರು: ಕೋವಿಡ್ ಎರಡನೇ ಅಲೆಯ ತೀವ್ರತೆಯ ನಡುವೆಯೂ ನಗರದ ಸರ್ಕಾರಿ ಎಚ್.ಎಸ್.ಐ.ಎಸ್. ಗೋಷಾ ಆಸ್ಪತ್ರೆಯ ವೈದ್ಯರ ತಂಡ ಕೇವಲ 78 ದಿನಗಳಲ್ಲಿ ಕರೊನಾ ಸೋಂಕಿಗೆ ಒಳಗಾಗಿದ್ದ 300 ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.

    ಕೋವಿಡ್ ಹಿನ್ನೆಲೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಗೋಷಾ ಆಸ್ಪತ್ರೆಯನ್ನು ಸೋಂಕಿತ ಗರ್ಭಿಣಿಯರ ಚಿಕಿತ್ಸೆಗೆ ಮೀಸಲಿಡಲಾಗಿದ್ದು, ಆಸ್ಪತ್ರೆಯಲ್ಲಿ ಶನಿವಾರ 300ನೇ ಹೆರಿಗೆಯನ್ನು ಯಶಸ್ವಿಯಾಗಿ ಮಾಡಿಸಿದ್ದಾರೆ. ವೈದ್ಯರ ಈ ಕಾರ್ಯಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅಭಿನಂದನೆ ಸಲ್ಲಿಸಿದ್ದಾರೆ.

    ಆಸ್ಪತ್ರೆಯಲ್ಲಿ ಕಳೆದ ಮಾ.27ರಿಂದ ಕೋವಿಡ್ ಸೋಂಕಿತ ಗರ್ಭಿಣಿಯರಿಗೆ ಸೇವೆ ನೀಡಲಾಗುತ್ತಿದೆ. ಸುಮಾರು 70 ಹಾಸಿಗೆಗಳಿದ್ದು, ತಜ್ಞ ವೈದ್ಯರ ಜತೆಗೆ ವೈದ್ಯಕೀಯ ವಿದ್ಯಾರ್ಥಿಗಳು ಕೂಡ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನ ಆಸ್ಪತ್ರೆಗಳ ಜತೆಗೆ ಸುತ್ತಮುತ್ತಲಿನ ಜಿಲ್ಲೆಗಳ ಆಸ್ಪತ್ರೆಗಳಿಂದಲೂ ಕೋವಿಡ್ ಸೋಂಕಿತ ಗರ್ಭಿಣಿಯರನ್ನು ಇಲ್ಲಿಗೆ ಶಿಫಾರಸು ಮಾಡಲಾಗುತ್ತದೆ.

    554 ಗರ್ಭಿಣಿಯರು ದಾಖಲು
    ಆಸ್ಪತ್ರೆಯಲ್ಲಿ ಈವರೆಗೆ ಕೋವಿಡ್ ಸೋಂಕಿನಿಗೆ ಒಳಗಾದ 554 ಗರ್ಭಿಣಿಯರು ದಾಖಲಾಗಿದ್ದಾರೆ. ಇವರಲ್ಲಿ ಈವರೆಗೂ ಯಶಸ್ವಿ 300 ಹೆರಿಗೆಗಳನ್ನು ಮಾಡಿಸಲಾಗಿದ್ದು, 159 ಮಂದಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇವರಲ್ಲಿ ಈವರೆಗೂ 141 ಮಂದಿಗೆ ಸಹಜ ಹೆರಿಗೆ ಮಾಡಿಸಲಾಗಿದೆ. ಸದ್ಯ 15 ಸೋಂಕಿತ ಗರ್ಭಿಣಿಯರು ಚಿಕಿತ್ಸೆ ಪಡೆಯುತ್ತಿದ್ದಾರೆ.

    28 ಗರ್ಭಿಣಿಯರು ಸಾವು: ಈವರೆಗೆ ಆಸ್ಪತ್ರೆಗೆ ದಾಖಲಾದ ಕೋವಿಡ್ ಸೋಂಕಿತ ಗರ್ಭಿಣಿಯರಲ್ಲಿ 28 ಮಂದಿ ಚಿಕಿತ್ಸೆ ಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇವರಲ್ಲಿ ಬಹುತೇಕರು ಉಸಿರಾಟದ ಸಮಸ್ಯೆ ಸೇರಿದಂತೆ ವಿವಿಧ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆ ಹೊಂದಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

    ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಕೆಲವರು ಸ್ವಯಂ ಚಿಕಿತ್ಸೆ ಮಾಡಿಕೊಂಡು ಮನೆಯಲ್ಲಿಯೇ ಇರುತ್ತಾರೆ. ತಡವಾಗಿ ಆಸ್ಪತ್ರೆಗೆ ಬಂದ ಕಾರಣ ಕೆಲವರು ಮೃತಪಟ್ಟಿದ್ದಾರೆ. ಅವರಿಗೆ ನ್ಯುಮೋನಿಯಾ, ಶ್ವಾಸಕೋಶದ ಸೋಂಕು ಕೂಡ ಜೀವಕ್ಕೆ ಅಪಾಯವನ್ನು ತಂದೊಡ್ಡಿತು. ಉಸಿರಾಟದ ಸಮಸ್ಯೆ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೋವಿಡ್ ಪ್ರಕರಣಗಳು ಇಳಿಕೆಯಾದರೂ ಗರ್ಭಿಣಿಯರು ಬಹಳ ಎಚ್ಚರಿಕೆಯಿಂದ ಇರಬೇಕು. ಅನಗತ್ಯವಾಗಿ ಹೊರಗಡೆ ಓಡಾಡಬಾರದು. ಮನೆಯಲ್ಲೂ ಅಂತರ ಕಾಯ್ದುಕೊಳ್ಳಬೇಕು ಎಂದು ಗೋಷಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ತುಳಸಿದೇವಿ ಹೇಳಿದರು.

    ಸಂಚಾರಿ ವಿಜಯ್​ಗೆ ಬೆಡ್ ಇಲ್ಲ ಎಂದಿದ್ದ ಆಸ್ಪತ್ರೆ: ಸುದೀಪ್ ಮನವಿ ಬಳಿಕ ತಕ್ಷಣ ಚಿಕಿತ್ಸೆ ಆರಂಭ

    ಸಂಚಾರಿ ವಿಜಯ್​ ಅಪಘಾತ ಪ್ರಕರಣ: ಬೈಕ್ ಓಡಿಸುತ್ತಿದ್ದ ನವೀನ್ ವಿರುದ್ಧವೂ ದೂರು ದಾಖಲು

    ಸಂಚಾರ ನಿಯಮವನ್ನೇ ಮರೆತ ‘ಸಂಚಾರಿ ವಿಜಯ್’!; ಕಂಟಕವಾಯ್ತು ಹೆಲ್ಮೆಟ್ ಇಲ್ಲದ ಪ್ರಯಾಣ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts