More

    ಆ ರೀತಿಯ ಆರೋಪಗಳಿಲ್ಲ ಎಂದು ಎಸ್​ಐಟಿ ಹೇಳಿಕೆ: ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆದ ಎಚ್​.ಡಿ. ರೇವಣ್ಣ

    ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಮಾಜಿ ಸಚಿವ ಎಚ್​.ಡಿ.ರೇವಣ್ಣ, ಬಂಧನ ಭೀತಿಯಿಂದ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಇದೀಗ ಹಿಂಪಡೆದಿದ್ದಾರೆ ಎಂದು ತಿಳಿದುಬಂದಿದೆ.

    ನಿರೀಕ್ಷಣಾ ಜಾಮೀನು ಅರ್ಜಿ ಕುರಿತಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ವಿಚಾರಣೆಯನ್ನು ನಡೆಸಿತು. ಈ ವೇಳೆ ಎಸ್​ಐಟಿ ಪರ ವಕೀಲರು ವಾದ ಮಂಡಿಸಿ, ಎಚ್​.ಡಿ. ರೇವಣ್ಣ ಅವರ ವಿರುದ್ಧ ಯಾವುದೇ ಅತ್ಯಾಚಾರ ಪ್ರಕರಣವನ್ನು ದಾಖಲಿಸಿಲ್ಲ. ಹೀಗಾಗಿ ಅವರಿಗೆ ನಿರೀಕ್ಷಣಾ ಜಾಮೀನು ಅರ್ಜಿಯ ಅಗತ್ಯವಿಲ್ಲ ಎಂದು ಹೇಳಿದರು.

    ಜಾಮೀನು ನೀಡಬಹುದಾದಂತಹ ಪ್ರಕರಣವನ್ನು ಮಾತ್ರ ಎಚ್​.ಡಿ. ರೇವಣ್ಣ ವಿರುದ್ಧ ದಾಖಲಿಸಲಾಗಿದೆ. ಹೀಗಾಗಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಊರ್ಜಿತವಲ್ಲ ಎಂದು ಎಸ್​ಐಟಿ ಪರ ವಕೀಲರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಎಚ್​.ಡಿ. ರೇವಣ್ಣ ಅವರು ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಾಪಸ್​ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

    ನೋಟಿಸ್​ ಕೊಟ್ಟರು ಹಾಜರಾಗಿಲ್ಲ
    ಎಚ್​.ಡಿ. ರೇವಣ್ಣ ಮತ್ತು ಪ್ರಜ್ವಲ್​ ರೇವಣ್ಣ ಅವರಿಗೆ ಎರಡು ಬಾರಿ ನೋಟಿಸ್​ ನೀಡಿದ್ದರೂ ಈವರೆಗೂ ಎಸ್​ಐಟಿ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಮೂರನೇ ಬಾರಿ ನೋಟಿಸ್​ ನೀಡಲು ಎಸ್​ಐಟಿ ಮುಂದಾಗಿದೆ. ಪ್ರಜ್ವಲ್​ ರೇವಣ್ಣ ವಿದೇಶದಲ್ಲಿದ್ದು, ಈಗಾಗಲೇ ಅವರ ವಿರುದ್ಧ ಲುಕೌಟ್​ ನೋಟಿಸ್​ ಅನ್ನು ಜಾರಿ ಮಾಡಲಾಗಿದೆ. ಇದೆಲ್ಲದರ ನಡುವೆ ವಿಚಾರಣೆ ಹಾಜರಾಗಲು 7 ದಿನಗಳ ಕಾಲಾವಕಾಶ ನೀಡುವಂತೆ ತಮ್ಮ ವಕೀಲರ ಮೂಲಕ ಪ್ರಜ್ವಲ್​ ರೇವಣ್ಣ ಮನವಿ ಮಾಡಿದ್ದಾರೆ.

    ಅಂದಹಾಗೆ ಜೆಡಿಎಸ್​ ಪಕ್ಷದ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ಹಾಸನ ಕ್ಷೇತ್ರದ ಸಂಸದರಾಗಿದ್ದಾರೆ. ಸದ್ಯ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಹಾಸನ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಏಪ್ರಿಲ್​ 26ರಂದು ಮತದಾನವೂ ನಡೆದಿದೆ. ಇದರ ನಡುವೆ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸಹ ಹೊರಬಂದಿವೆ. ಈ ಪ್ರಕರಣ ಇದೀಗ ದೇಶಾದ್ಯಂತ ಭಾರಿ ಸಂಚಲನ ಉಂಟು ಮಾಡಿದೆ. ಮಹಿಳೆರಿಗೆ ಬೆದರಿಕೆ, ಲೈಂಗಿಕ ಕಿರುಕುಳ ಹಾಗೂ ಅಶ್ಲೀಲ ವಿಡಿಯೋ ಮಾಡಿರುವ ಆರೋಪದ ಮೇಲೆ ಪ್ರಜ್ವಲ್​ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಜ್ವಲ್​ ರೇವಣ್ಣ ತಂದೆ ಹಾಗೂ ಮಾಜಿ ಸಚಿವ ಎಚ್​.ಡಿ. ರೇವಣ್ಣ ವಿರುದ್ಧವೂ ಆರೋಪ ಕೇಳಿಬಂದಿದ್ದು, ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎಸ್​ಐಟಿಗೆ ವಹಿಸಿದೆ. ಇದರ ನಡುವೆ ಪ್ರಜ್ವಲ್ ಅವರು ಜರ್ಮನಿಗೆ ಪರಾರಿಯಾಗಿದ್ದು, ಇನ್ನೊಂದು ವಾರದಲ್ಲಿ ವಾಪಸ್​ ಬರಲಿದ್ದಾರೆ ಎಂದು ತಿಳಿದುಬಂದಿದೆ.

    ಹಾಸನ ಪೆನ್​ಡ್ರೈವ್​ ಪ್ರಕರಣ: ಸಂತ್ರಸ್ತೆ ನಾಪತ್ತೆ, ಮಾಜಿ ಸಚಿವ ಎಚ್.​ಡಿ. ರೇವಣ್ಣಗೆ ಮತ್ತೊಂದು ಸಂಕಷ್ಟ!

    ವಯನಾಡು ಜತೆ ರಾಯ್​ಬರೇಲಿಯಿಂದಲೂ ರಾಹುಲ್​ ಸ್ಪರ್ಧೆ: ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts