More

    ಉತ್ತರದಲ್ಲಿ ಬಿಸಿಲು, ದಕ್ಷಿಣದಲ್ಲಿ ಮಳೆ

    ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಪ್ರಖರತೆ ಮುಂದುವರಿದಿದ್ದು, ಇನ್ನೂ ನಾಲ್ಕು ದಿನ ಬಿಸಿ ಗಾಳಿಯದ್ದೇ ಆರ್ಭಟವಿರುತ್ತದ. ಈ ಮಧ್ಯೆ ಗುರುವಾರ ರಾಜಧಾನಿ ಬೆಂಗಳೂರಿನಲ್ಲಿ ಈ ವರ್ಷದ ಮೊದಲ ಮಳೆಯಾಗಿದ್ದು, ನಾಗರಿಕರ ಮೊಗದಲ್ಲಿ ಹರ್ಷ ಮೂಡಿಸಿತು.

    ಕಳೆದೊಂದು ವಾರದಿಂದ ಉತ್ತರ ಕರ್ನಾಟಕದ ಹೆಚ್ಚಿನ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ. ಸೆಲ್ಸಿಯಸ್ ದಾಟಿದೆ. ಶಾಖ ಅಲೆ ಇನ್ನಷ್ಟು ದಿನಗಳ ಮುಂದುವರಿಯುವ ಹಿನ್ನೆಲೆಯಲ್ಲಿ ಒಣ ಹವೆ ಕಾಣಲಾಗುತ್ತಿದೆ. ಇದರಿಂದ ಮಳೆಯಾಗುವ ಸಾಧ್ಯತೆ ಕ್ಷೀಣಿಸಿದೆ. ಬೀದರ್, ಕಲಬುರಗಿ, ಯಾದಗಿರಿ, ಗದಗ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಶಾಖ ಅಲೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಲೋಕಸಭಾ ಚುನಾವಣೆ ನಡೆಯುತ್ತಿರುವ 16 ಜಿಲ್ಲೆಗಳಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಿರುವ ಕಾರಣ ಮತದಾನದ ದಿನವಾದ ಮೇ 7ರಂದು ಮತಗಟ್ಟೆ ಕೇಂದ್ರಗಳಲ್ಲಿ ಮತದಾರರಿಗೆ ಬಿಸಿಲಿನಿಂದ ರಕ್ಷಣೆ ನೀಡುವಂತಹ ವ್ಯವಸ್ಥೆ ಮಾಡುವಂತೆ ಆಯೋಗವು ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿದೆ.

    ದಕ್ಷಿಣ ಜಿಲ್ಲೆಗಳಲ್ಲಿ ಮಳೆ:

    ದಕ್ಷಿಣ ಒಳನಾಡಿನ ಜಿಲ್ಲೆಗಳ ಹಲವೆಡೆ ಗುರುವಾರ ಸಾಧಾರಣ ಪ್ರಮಾಣದ ಮಳೆಯಾಗಿದೆ. ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಬಿಬಿಎಂಪಿ ವ್ಯಾಪ್ತಿಯ ಕೆಲವೆಡೆ ವರ್ಷಧಾರೆಯಾಗಿದೆ. ಈ ವಾರಾಂತ್ಯದವರೆಗೂ ದಕ್ಷಿಣಕನ್ನಡ, ಉಡುಪಿ, ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಕೆಲವೆಡೆ ಹಗುರದಿಂದ ಮಳೆಯಾಗುವ ನಿರೀಕ್ಷೆ ಇದೆ.

    ಬೆಂಗಳೂರು ಸಿಟಿಯಲ್ಲಿ ಗುಡುಗು-ಮಿಂಚು ಸಹಿತ ಅಲ್ಪ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಗುರುವಾರ ಗರಿಷ್ಠ ಉಷ್ಣಾಂಶ ಕಂಡ ಜಿಲ್ಲೆಗಳು:
    ಕಲಬುರಗಿ – 43.5 ಡಿ. ಸೆ.
    ರಾಯಚೂರು – 43.4 ಡಿ. ಸೆ.
    ಕೊಪ್ಪಳ – 42.4 ಡಿ. ಸೆ.
    ಬಾಗಲಕೋಟೆ – 41.6 ಡಿ. ಸೆ.
    ಹಾವೇರಿ – 40.4 ಡಿ. ಸೆ.
    ಬೀದರ್ – 40 ಡಿ. ಸೆ.
    ಮಂಡ್ಯ – 40 ಡಿ. ಸೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts