More

    ಭಾರತದಲ್ಲಿ ದಾಖಲೆ ಮಟ್ಟಕ್ಕೆ ತಲುಪಿದ ಚಿನ್ನದ ದರ! ಇಳಿಕೆಯಾಗುತ್ತಾ? ತಜ್ಞರು ಹೇಳೋದೇನು?

    ಮುಂಬೈ: ಚಿನ್ನದ ಬೆಲೆ ದಿನದಿಂದ ದಿನಕ್ಕೆ ರಾಕೆಟ್​ ವೇಗದಲ್ಲಿ ಏರಿಕೆಯಾಗುತ್ತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಆರು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಅದೇ ರೀತಿ ಭಾರತದಲ್ಲೂ ಚಿನ್ನದ ಬೆಲೆ ದಾಖಲೆ ಮಟ್ಟಕ್ಕೆ ತಲುಪಿದೆ.

    ಮಂಗಳವಾರ (ನ.29) ನ್ಯೂಯಾರ್ಕ್ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿನ ಚಿನ್ನವು ಸುಮಾರು 1% ರಷ್ಟು ಏರಿಕೆ ಕಂಡು ಪ್ರತಿ ಔನ್ಸ್​ ಚಿನ್ನಕ್ಕೆ 2,028 ಡಾಲರ್​ನಂತೆ ಮಾರಾಟವಾಯಿತು. ಅಮೆರಿಕ ಸರ್ಕಾರದ ಬಾಂಡ್ ಐಡಿ ಇಳಿಮುಖ ಪ್ರವೃತ್ತಿಯನ್ನು ತೋರಿಸುತ್ತಿದ್ದು, ಪ್ರಮುಖ ಕರೆನ್ಸಿಗಳ ಎದುರು ಡಾಲರ್ ದುರ್ಬಲಗೊಳ್ಳುತ್ತಿರುವ ಪರಿಣಾಮ ಯುಎಸ್​ನಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ. ಆದರೆ, ಭಾರತದ ದೇಶಿಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಕಳೆದ ವಾರ ಅಷ್ಟಾಗಿ ಏರಿಕೆ ಕಾಣಲಿಲ್ಲ. ಪ್ರತಿ 10 ಗ್ರಾಂಗೆ 61,100 ರಿಂದ 62,200 ರೂ.ವರೆಗೂ ಮಾರಾಟವಾಯಿತು. ಆದರೆ, ಇದೀಗ 2023ರ ಮಧ್ಯದಲ್ಲಿ ದಾಖಲಾದ ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ರೂ 61,500 ಅನ್ನು ದಾಟುತ್ತಿದ್ದು, ಚಿನ್ನ ಕಬ್ಬಿಣದ ಕಡಲೆಯಾಗುತ್ತಿದೆ. ಪ್ರಸ್ತುತ ಭಾರತದಲ್ಲಿ ಪ್ರತಿ 10 ಗ್ರಾಂ 24 ಕ್ಯಾರೆಟ್​ ಚಿನ್ನವು 63,380 ರೂಪಾಯಿ ಇದೆ.

    ಕೋವಿಡ್​ ನಂತರದ ಹಣದುಬ್ಬರದ ಒತ್ತಡ, ಕೇಂದ್ರ ಬ್ಯಾಂಕ್​ ಖರೀದಿಗಳ ಬೆಂಬಲ ಮತ್ತು ಭೌಗೋಳಿಕ ರಾಜಕೀಯ ವ್ಯತ್ಯಾಸಗಳಿಂದ ಪ್ರೀಮಿಯಂಗಳ ಹೆಚ್ಚಳ ಮತ್ತು ಜಾಗತಿಕ ಬಡ್ಡಿದರದ ಹೆಚ್ಚಳದ ನಡುವೆಯೂ ಚಿನ್ನವು ತನ್ನ ಸ್ಥಿತಿಸ್ಥಾಪಕತ್ವವನ್ನು ಕಾಯ್ದುಕೊಂಡಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್‌ನ ಸರಕುಗಳು ಮತ್ತು ಕರೆನ್ಸಿಗಳ ನಿರ್ದೇಶಕ ಕಿಶೋರ್ ನಾರ್ನೆ ತಿಳಿಸಿದ್ದಾರೆ. ಇನ್ನು ಯುಎಸ್ ಫೆಡರಲ್ ರಿಸರ್ವ್, ತನ್ನ ನೀತಿ ಬಿಗಿಗೊಳಿಸುವಿಕೆಯ ಅಂತ್ಯದ ಸಮೀಪದಲ್ಲಿದ್ದು, ಪರಿಣಾಮವಾಗಿ ಮುಂಬರುವ ವರ್ಷದಲ್ಲಿ ಮಾರುಕಟ್ಟೆಗಳು ಸಂಭಾವ್ಯ ದರ ಕಡಿತಕ್ಕೆ ಕಾರಣವಾಗಬಹುದು ಎನ್ನಲಾಗಿದೆ. ಆದರೆ, ಚಿನ್ನದ ಮತ್ತಷ್ಟು ದರ ಏರಿಕೆಯ ಸಾಧ್ಯತೆಯು ಇದೆ. ಹಿಂದಿನ ಸಾರ್ವಕಾಲಿಕ ಗರಿಷ್ಠವಾದ 2,075 ಡಾಲರ್​ ಅನ್ನು ಮೀರಿಸಿ, 2024ರ ಅಂತ್ಯದ ವೇಳೆಗೆ 2,200 ಡಾಲರ್​ ತಲುಪಲಿದೆ ಎಂದು ಅಂದಾಜಿಸಲಾಗಿದೆ.

    ಅಂತಾರಾಷ್ಟ್ರೀಯ ಅಂಶಗಳ ಹೊರತಾಗಿ, ರೂಪಾಯಿಯ ದುರ್ಬಲತೆ ಮತ್ತು ಮದುವೆಯ ಸೀಸನ್, ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆಯ ವಿಶ್ಲೇಷಕರು ತಿಳಿಸಿದ್ದಾರೆ. ಆದಾಗ್ಯೂ, ಭಾರತೀಯ ಆಭರಣ ಉದ್ಯಮದಲ್ಲಿ ಮತ್ತೊಂದು ದೃಷ್ಟಿಕೋನವಿದೆ, ಚಿನ್ನದ ಬೆಲೆಯನ್ನು ಬೆಂಬಲಿಸುವ ಪ್ರಮುಖ ಘಟನೆ ನಡೆಯದಿದ್ದರೆ, ಮುಂಬರುವ ತಿಂಗಳುಗಳಲ್ಲಿ ಅಂತಾರರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಬೆಲೆ ಕುಸಿತವಾಗಬಹುದು ಎಂದು ನಂಬಿದ್ದಾರೆ.

    ಪ್ರಸ್ತುತ ಇಸ್ರೇಲ್​ ಮತ್ತು ಹಮಾಸ್​ ನಡುವೆ ನಡೆಯುತ್ತಿರುವ ಎರಡು ಯುದ್ಧಗಳು ಕಚ್ಚಾ ತೈಲದ ಬೆಲೆಯ ಮೇಲೆ ಯಾವುದೇ ಪರಿಣಾಮ ಬೀರಲು ವಿಫಲವಾಗಿರುವುದರಿಂದ ಮತ್ತು ಹಣದುಬ್ಬರವು ನಿಯಂತ್ರಣಕ್ಕೆ ಬರುತ್ತಿರುವುದರಿಂದ ಮುಂಬರುವ ಕೆಲವು ತಿಂಗಳುಗಳಲ್ಲಿ ಚಿನ್ನದ ಬೆಲೆಯು ಮತ್ತಷ್ಟು ಏರಿಕೆ ಆಗುವುದಿಲ್ಲ. ಚಿನ್ನದ ಬೆಲೆಯನ್ನು ಬೆಂಬಲಿಸುವ ಯಾವುದಾದರೊಂದು ಪ್ರಮುಖ ಘಟನೆಗಳು ನಡೆದಾಗ ಮಾತ್ರ ಬೆಲೆಯಲ್ಲಿ ಏರಿಕೆಯಾಗಬಹುದು ಎಂದು ಕಮಾ ಜ್ಯುವೆಲರಿಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಕಾಲಿನ್ ಶಾ ಹೇಳಿದ್ದಾರೆ. (ಏಜೆನ್ಸೀಸ್​)

    ಹಿಂದೂ ಹಬ್ಬಗಳ ರಜೆಗೆ ಕೊಕ್​ ಮುಸ್ಲಿಂ ಹಬ್ಬಗಳಿಗೆ ಬಂಪರ್​: ಶಿಕ್ಷಕರ ಬೇಸಿಗೆ ರಜೆಗೂ ಕತ್ತರಿ

    ಈ ಪ್ರಮುಖ ಕಾರಣಗಳಿಗೆ ಭಾರತದಲ್ಲಿ ಕ್ಯಾನ್ಸರ್​​​​ನಿಂದ 2020 ರಲ್ಲಿ 2.25 ಲಕ್ಷ ಮಂದಿ ಸಾವು

    ಮುಸ್ಲಿಂ ಶಾಸಕಿ ಬಂದು ಹೋದ ಬೆನ್ನಲ್ಲೇ ಗಂಗಾಜಲದಿಂದ ಇಡೀ ದೇವಸ್ಥಾನ ಶುದ್ಧೀಕರಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts