More

    ಹೊಸ ಐಡಿಯಾ ಕೊಡಿ, ಒಂದು ಲಕ್ಷ ರೂ. ಗೆಲ್ಲಿ!

    ಕರೊನಾದಿಂದಾಗಿ ಪುಟ್ಟ ಮಕ್ಕಳಿಗೂ ಆನ್​ಲೈನ್ ಕ್ಲಾಸ್ ಬಂದು ಮನೆಯಲ್ಲೇ ಇರುವಂತಾಗಿದೆ. ಓದು, ಆಟ, ಟಿವಿ ಅಂತಲೇ ಕಾಲ ಕಳೆದದ್ದು ಹೆಚ್ಚು. ಅಷ್ಟಾಗಿಯೂ ಉಳಿದ ಸಮಯ ಹೇಗಪ್ಪಾ ಕಳೆಯೋದು ಅಂತ ಹಲವು ಬಾರಿ ಯೋಚಿಸಿದ್ದುಂಟು ಅಲ್ಲವೇ? ಚಿಂತಿಸದಿರಿ. ನಿಮಗೊಂದು ಸುವರ್ಣಾವಕಾಶ ಬಂದಿದೆ. ನಿಮ್ಮಲ್ಲಿನ ವಿಭಿನ್ನ ಯೋಚನೆಗೆ ಸಿಗಲಿದೆ ಲಕ್ಷ ರೂಪಾಯಿ ಬಹುಮಾನ! ಅದರ ಮಾಹಿತಿ ಇಲ್ಲಿದೆ.

    | ರಮೇಶ್ ಮೈಸೂರು

    ಮಕ್ಕಳೇ ನಿಮ್ಮ ಚಿಂತನಾ ಲಹರಿ ಅಗಾಧ. ಹೊಸತೇನಾದರೂ ಮಾಡಬೇಕು ಎಂಬ ತುಡಿತ ಇದ್ದೇ ಇರುತ್ತೆ. ಅಮ್ಮನ ಮನೆಯ ಕೆಲಸಕ್ಕೆ ನೆರವಾಗಲು ಏನು ಮಾಡಬೇಕು? ಪಾಠದಲ್ಲಿ ಪ್ರಾಯೋಗಿಕ ಚಟುವಟಿಕೆಯನ್ನು ಹೇಗೆಲ್ಲ ಸಾಬೀತು ಮಾಡಬಹುದು? ಮಳೆಗಾಲದಲ್ಲಿ ಮಳೆನೀರು ಸಂಗ್ರಹಿಸಲು ಏನು ಮಾಡಬೇಕು?… ಇಂಥ ಹತ್ತು ಹಲವು ಯೋಚನೆಗಳು ಬಂದೇ ಇರುತ್ತೆ. ಅಂತಹ ಯೋಜನೆಯನ್ನು ಕೂಡಲೇ ಕಾರ್ಯರೂಪಕ್ಕಿಳಿಸಿ ಅಕ್ಷರ ರೂಪ ನೀಡಿ.

    ಅವೆಲ್ಲವೂ ನಿಮ್ಮದೇ ಯೋಚನೆ, ಯೋಜನೆ ಆಗಿರಬೇಕು. ಇತರರನ್ನು ಅನುಸರಿಸದೆ ನೀವೇ ತಯಾರಿಸಿದ ವಿನೂತನ ಪ್ರಾಜೆಕ್ಟ್ ಆಗಿರಬೇಕು. ಹೊಸತನದಿಂದ ಕೂಡಿರಬೇಕು. ಹಾಗಿದ್ದಲ್ಲಿ ಮಾತ್ರವೇ ಒಂದು ಲಕ್ಷ ರೂ. ಮೌಲ್ಯದ ‘ಸಿಎಸ್​ಐಆರ್- ಇನ್ನೋವೇಷನ್ ಅವಾರ್ಡ್ ಫಾರ್ ಸ್ಕೂಲ್ ಚಿಲ್ಡ›ನ್’ ನಿಮ್ಮ ಪಾಲಾಗಲಿದೆ. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್​ಐಆರ್) ಕೈಗಾರಿಕಾ ಕ್ಷೇತ್ರದಲ್ಲಿ ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳುವ ಪ್ರತಿಷ್ಠಿತ ಸಂಸ್ಥೆ. ವಿದ್ಯಾರ್ಥಿಗಳಲ್ಲಿ ವಿಜ್ಞಾನದತ್ತ ಒಲವು, ವೈಜ್ಞಾನಿಕ ಮನೋಧರ್ಮ, ಹೊಸ ಹೊಸ ವಿಚಾರಗಳ ಬಗ್ಗೆ ಕುತೂಹಲ, ಸೃಜನಶೀಲತೆ ಬೆಳೆಸಲು, ಬೌದ್ಧಿಕ ಆಸ್ತಿಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಈ ನಿಟ್ಟಿನಲ್ಲಿಯೇ 2002ರಲ್ಲಿ ಸೆಪ್ಟಂಬರ್ 26ರಂದು ಅಂತಾರಾಷ್ಟ್ರೀಯ ಬೌದ್ಧಿಕ ಆಸ್ತಿ ದಿನದಂದು ಶಾಲಾ ಮಕ್ಕಳಿಗಾಗಿ ನಾವೀನ್ಯತೆ ಪ್ರಶಸ್ತಿ (ಇನ್ನೋವೇಷನ್ ಅವಾರ್ಡ್ ಫಾರ್ ಸ್ಕೂಲ್ ಚಿಲ್ಡ›ನ್) ಸ್ಥಾಪಿಸಿದೆ. ಇದೊಂದು ರಾಷ್ಟಮಟ್ಟದ ಸ್ಪರ್ಧೆ. ಪ್ರತಿವರ್ಷ ವಿದ್ಯಾರ್ಥಿಗಳಿಂದ ಹೊಸ ಹೊಸ ಸೃಜನಶೀಲ, ತಾಂತ್ರಿಕ ಯೋಜನೆ, ವಿನ್ಯಾಸಗಳನ್ನು ಆಹ್ವಾನಿಸುತ್ತಿದೆ.

    ಲಿಖಿತ ರೂಪದಲ್ಲಿ ಪ್ರಾಜೆಕ್ಟ್ ಕಳುಹಿಸಿ

    ಮಾದರಿ, ಪ್ರಾತ್ಯಕ್ಷಿಕೆ, ಹೊಸ ಯೋಚನೆ ಬಗ್ಗೆ 5,000 ಪದಗಳಿಗೆ ಮೀರದಂತೆ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಬರೆದು ಕಳಿಸಬೇಕು. ಮುಖ್ಯವಾಗಿ ನಿಮ್ಮ ಯೋಜನೆಯಲ್ಲಿರುವ ಹೊಸತನದ ಬಗ್ಗೆ ವಿವರಿಸಿ. ಉಳಿದವುಗಳಿಂತ ಇದು ಹೇಗೆ ಭಿನ್ನ ಎನ್ನುವುದನ್ನು ವಿಶ್ಲೇಷಿಸಿ. ಸಮಸ್ಯೆ- ಪರಿಹಾರ ರೂಪದಲ್ಲಿ ಇದ್ದರೆ ಒಳಿತು. ನಿಮ್ಮ ಶಾಲಾ ಮುಖ್ಯಶಿಕ್ಷಕರು ಅಥವಾ ಮುಖ್ಯಸ್ಥರ ಸಹಿ-ಸೀಲು ಸಮೇತ ದೃಢೀಕೃತ ಪ್ರಮಾಣಪತ್ರವೂ ಇರಬೇಕು. ಅದಕ್ಕೆ ಚೆಂದದೊಂದು ಹೆಸರು ನೀಡಿ. ವಿದ್ಯಾರ್ಥಿಯ ಹೆಸರು, ಜನ್ಮದಿನಾಂಕ, ಮನೆ ವಿಳಾಸ, ತರಗತಿ, ಮನೆ ಅಥವಾ ಶಾಲೆಯ ದೂರವಾಣಿ ಸಂಖ್ಯೆ, ಇಮೇಲ್ ವಿಳಾಸ ನಮೂದಿಸಿ.

    ನಿಮಗಿದೆಯಾ ಈ ಅರ್ಹತೆ?

    • ಇದು 12ನೇ ತರಗತಿವರೆಗಿನ ಮಕ್ಕಳಿಗೆ ಮಾತ್ರ
    • 2021ರ ಜ.1ಕ್ಕೆ 18 ವರ್ಷ ಮೀರಿದವರಿಗೆ ಅವಕಾಶ ಇಲ್ಲ.
    • ಭಾರತದ ಯಾವುದೇ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಬಹುದು.
    • ಗುಂಪಾಗಿಯೂ ಸ್ಪರ್ಧಿಸಬಹುದು. ಆದರೆ, ಒಂದೇ ಪ್ರಶಸ್ತಿ ನೀಡಲಾಗುತ್ತದೆ.
    • ಈಗಾಗಲೇ ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಬಹುಮಾನ ಪಡೆದವುಗಳಿಗೆ ಅವಕಾಶ ಇಲ್ಲ.

    ಯಾವುದಕ್ಕೆ ಅವಕಾಶವಿಲ್ಲ?: ಪ್ರಬಂಧ, ಅಂಕಿ-ಅಂಶಗಳ ನಿರೂಪಣೆ ಅಥವಾ ಇಂಟರ್​ನೆಟ್​ನಲ್ಲಿ ದೊರೆತ ಮಾಹಿತಿಗಳ ಕ್ರೋಡೀಕರಣ ಅಥವಾ ಯೋಜನೆಗಳ ಪ್ರಾತ್ಯಕ್ಷಿಕೆ ಮೊದಲಾದವುಗಳಿಗೆ ಅವಕಾಶ ಇರುವುದಿಲ್ಲ.

    ನಿಮ್ಮ ಪ್ರಾಜೆಕ್ಟ್ ಹೇಗಿರಬೇಕು?

    • ಹೊಸ ಯೋಚನೆ, ವಿನ್ಯಾಸ ಅಥವಾ ಹಳೆಯ ಸಮಸ್ಯೆಯಾಗಿದ್ದರೂ ಅದಕ್ಕೊಂದು ವಿನೂತನ ಹೊಸ ಪರಿಹಾರ ನೀಡುವಂತಿರಬೇಕು.
    • ಹೊಸ ಪದ್ಧತಿ, ವಿಧಾನ, ಸಾಧನ, ಬಳಕೆ ಇರಬೇಕು. ನೀವೇ ರೂಪಿಸಿದ ಪ್ರಾಜೆಕ್ಟ್ ಅಥವಾ ಮಾದರಿ ಮೂಲಕ ಪ್ರಾತ್ಯಕ್ಷಿಕೆ ನೀಡಬೇಕು. 
    • ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಯಾವುದೇ ಕ್ಷೇತ್ರದ ಬಗ್ಗೆಯೂ ನಿಮ್ಮ ನವೀನ ಕಲ್ಪನೆಗಳನ್ನು ಸಾದರ ಪಡಿಸಬಹುದು.
    • ಶಾಲಾ ಶಿಕ್ಷಕರು, ಪಾಲಕರು ಅಥವಾ ಬೇರೆ ಯಾರಿಂದಲಾದರೂ ಸಲಹೆ ಮಾರ್ಗದರ್ಶನ ಪಡೆದಿದ್ದರೆ ಅದನ್ನೂ ಉಲ್ಲೇಖಿಸಬೇಕು.

    ಬಹುಮಾನ

    ಒಟ್ಟು 4.2 ಲಕ್ಷ ರೂ.ಗಳ 15 ಬಹುಮಾನ. ಪ್ರಥಮ ಬಹುಮಾನ- 1 ಲಕ್ಷ ರೂ. (ಒಬ್ಬರಿಗೆ); ದ್ವಿತೀಯ- 50 ಸಾವಿರ ರೂ. (ಇಬ್ಬರಿಗೆ); ತೃತೀಯ- 30 ಸಾವಿರ ರೂ. (ಮೂವರಿಗೆ); ನಾಲ್ಕನೇ ಬಹುಮಾನ- 20 ಸಾವಿರ ರೂ. (ನಾಲ್ವರಿಗೆ); ಐದನೇ ಬಹುಮಾನ- 10 ಸಾವಿರ ರೂ. (ಐವರಿಗೆ). ಆದರೆ, ಎಲ್ಲ ಬಹುಮಾನಗಳನ್ನೂ ನೀಡಬೇಕೆಂದೇನಿಲ್ಲ. ಪ್ರಥಮ ಸ್ಥಾನಕ್ಕೆ ಅರ್ಹವಾದ ಪ್ರಾಜೆಕ್ಟ್ ಯಾವುದೂ ಇಲ್ಲ ಎಂದು ನಿರ್ಧರಿಸಿದರೆ ನಂತರದ ಸ್ಥಾನಗಳಿಗಷ್ಟೇ ಬಹುಮಾನ ಪ್ರಕಟಿಸಲಾಗುತ್ತದೆ.

    ಆಯ್ಕೆ ಹೇಗೆ?

    ತಜ್ಞರ ಸಮಿತಿ ಎಲ್ಲ ಪ್ರಸ್ತಾವನೆಗಳನ್ನು ಪರಿಶೀಲಿಸಿ ಬಹುಮಾನಕ್ಕೆ ಆಯ್ಕೆ ಮಾಡುತ್ತದೆ. ಪ್ರತಿ ವರ್ಷ ಸೆ. 26ರಂದು ಫಲಿತಾಂಶ ಪ್ರಕಟವಾಗುತ್ತದೆ.

    • ಅರ್ಜಿ ಸಲ್ಲಿಸಲು ಕೊನೇ ದಿನ ಏ. 31
    • ವಿವರಕ್ಕೆ: www.csir.res.in/
    • ಅಧಿಸೂಚನೆ: bit.ly/3e0njWH

    ವಿಳಾಸ: ಮುಖ್ಯಸ್ಥರು, ಸಿಎಸ್​ಐಆರ್- ಇನ್ನೋವೇಷನ್ ಪ್ರೊಟೆಕ್ಷನ್ ಯುನಿಟ್, ವಿಜ್ಞಾನ ಸೂಚನಾ ಭವನ, 14- ಸತ್ಸಂಗ ವಿಹಾರ ಮಾರ್ಗ, ಸ್ಪೆಷಲ್ ಇನ್​ಸ್ಟಿಟ್ಯೂಷನಲ್ ಏರಿಯಾ, ನವದೆಹಲಿ-110067

    ದೇಶದಲ್ಲಿ ಸೋಂಕಿನ ಪ್ರಮಾಣ ಈಗಿರುವುದೇ ನಿಖರವಲ್ಲ; ಅಸಲಿ ಸಂಖ್ಯೆ ಅದಕ್ಕಿಂತಲೂ 5-10 ಪಟ್ಟು ಅಧಿಕ ಎನ್ನುತ್ತಿದ್ದಾರೆ ಇವರು…

    ದಂಪತಿಗೆ ಸೋಂಕು; ಕ್ವಾರಂಟೈನ್ ಕೇಂದ್ರದಲ್ಲೇ ವಿವಾಹ‌ ವಾರ್ಷಿಕೋತ್ಸವ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts