ಗಂಡಸರು ಈ ಪರಿ ಸೇಡು ತೀರಿಸಿಕೊಳ್ಳುವುದೇ?!

ಹಂಗ ಎಲ್ಲಾ ಬಿಟ್ಟ ಆ ಗ್ರಾಮ ಪಂಚಾಯತಿಯವರಿಗೆ ಹಿಂತಾ ನೊಬೆಲ್ ನೈಟಿ ಮ್ಯಾಲೆ ಯಾಕ ಕಣ್ಣ ಬಿದ್ದ ಹಿಂತಾ ಡಿಸಿಜನ್ ತೊಗಂಡರು ಅಂತ ಅಂದರ, ಅವರಿಗೆ ಈ ಹೆಣ್ಣಮಕ್ಕಳನ್ನ ಹಗಲಿಲ್ಲಾ ರಾತ್ರಿಲ್ಲ ನೈಟಿ ಮ್ಯಾಲೆ ನೋಡಿ ನೋಡಿ ಬೇಜಾರ ಆಗಿಬಿಟ್ಟಿತ್ತಂತ. ಅದಕ್ಕ ಒಂದ ನಾಲ್ಕ ಮಂದಿ ಗಂಡಸರ ಸೇರಿ ಮೀಟಿಂಗ ಮಾಡಿ ಡಿಸೈಡ ಮಾಡಿಬಿಟ್ಟಿದ್ದರು.

ಈಗ ಒಂದ ಎರಡ ತಿಂಗಳ ಹಿಂದ ಪೇಪರನಾಗ ಒಂದ ಸುದ್ದಿ ಬಂದಿತ್ತ. ಸುದ್ದಿ ಏನಪಾ ಅಂದರ ಆಂಧ್ರಪ್ರದೇಶದ ಒಂದ ಹಳ್ಯಾಗ ಹೆಣ್ಣಮಕ್ಕಳ ಹಗಲ ಹೊತ್ತಿನಾಗ ನೈಟಿ ಹಾಕೊಳಂಗಿಲ್ಲಾಂತ ಗ್ರಾಮ ಪಂಚಾಯತಿಯವರು ಕಾನೂನ ಮಾಡ್ಯಾರ ಅಂತ. ಬೆಳಗ್ಗೆ 6ರಿಂದ ಸಂಜೆ 7 ಗಂಟೆವರೆಗೆ ನೈಟಿ ಬ್ಯಾನ್. ಹಂಗ ಯಾರರ ಅಪ್ಪಿತಪ್ಪಿ ಹಾಕ್ಕೊಂಡ ಹೊರಗ ಅಡ್ಡಾಡಿದರ 2,000 ರೂ. ದಂಡ, ಆಮ್ಯಾಲೆ ‘ಹಿಂತಾಕಿ ಹಾಕ್ಕೊಂಡಿದ್ಲು’ ಅಂತ ಯಾರರ ಕಿಡ್ಡಿ ಮಾಡಿದರ ಅವರಿಗೆ 1,000 ರೂ. ಬಹುಮಾನ ಬ್ಯಾರೆ. ಅಲ್ಲಾ, ಎರಡನೂರಕ್ಕ ಜೋಡಿ ಹೊಸಾ ನೈಟಿನ ಸಿಗಬೇಕಾರ ಬರೇ ಒಂದ ಹಳೇ ನೈಟಿ ಹಾಕ್ಕೊಂಡರ ಎರಡ ಸಾವಿರ ದಂಡ ಅಂದರ ತಪ್ಪ ಬಿಡ್ರಿ. ಇನ್ನ ಮಂದಿ ಹಾಕ್ಕೊಂಡಿದ್ದನ್ನ ಹೇಳಿದವರಿಗೆ ಒಂದ ಸಾವಿರ ರೂಪಾಯಿ ಬಹುಮಾನ ಅಂದರ ರೊಕ್ಕದ ಆಶಾಕ್ಕ ಇವನ ಹೆಂಡ್ತಿ ಹಾಕ್ಕೊಂಡಿದ್ಲು ಅಂತ ಅಂವಾ, ಅವನ ಹೆಂಡ್ತಿ ಹಾಕ್ಕೊಂಡಿದ್ಲು ಅಂತ ಇಂವಾ ಹೇಳೆ ಹೇಳ್ತಾನ, ಆ ಮಾತ ಬ್ಯಾರೆ.

ಹಂಗ ನಂಗ ಇದನ್ನ ಓದಿ ಭಾರಿ ವಿಚಿತ್ರ ಅನಸ್ತ. ಅಲ್ಲಾ ಪಾಪ ನೈಟಿ ಏನ ಹಂತಾ ಪಾಪ ಮಾಡೇದ ಅಂತೇನಿ. ಹಂಗ ನಾ ಈ ನೈಟಿದ ಭಾರಿ ದೊಡ್ಡ ಫ್ಯಾನ. ಮನ್ಯಾಗಿನ ಹೆಣ್ಣಮಕ್ಕಳಿಗೆ ವರ್ಷಕ್ಕ ಎರಡ ನೈಟಿ ಕೊಡಸಿಬಿಟ್ಟರ ಮುಗದಹೋತ, ಅವರ ಖುಷ್ ಇರ್ತಾರ. ಅಲ್ಲಾ, ಅವರ ಅರ್ಧಾಸಂಸಾರ ಕಳೆಯೋದ ನೈಟಿ ಒಳಗ, ಇನ್ನ ಅದನ್ನ ಬ್ಯಾನ ಮಾಡಿದರ ಹೆಂಗ ಅಂತೇನಿ.

ನಾ ಅಂತೂ ಈ ನೈಟಿ ಕಂಡಹಿಡದಂವಂಗ ನೊಬೆಲ್ ಬಹುಮಾನ ಕೊಡಬೇಕು ಅಂತ ಒಂದ ದೊಡ್ಡ ಲೇಖನಾನ ಬರದಂವಾ. ಇಲ್ಲೆ ನೋಡಿದರ ದಂಡಾ ಹಾಕ್ತಾರ ಅಂದರ ಆಶ್ಚರ್ಯ ಆತ.

ಹಂಗ ಎಲ್ಲಾ ಬಿಟ್ಟ ಆ ಗ್ರಾಮ ಪಂಚಾಯತಿಯವರಿಗೆ ಹಿಂತಾ ನೊಬೆಲ್ ನೈಟಿ ಮ್ಯಾಲೆ ಯಾಕ ಕಣ್ಣ ಬಿದ್ದ ಹಿಂತಾ ಡಿಸಿಜನ್ ತೊಗಂಡರು ಅಂತ ಅಂದರ, ಅವರಿಗೆ ಈ ಹೆಣ್ಣಮಕ್ಕಳನ್ನ ಹಗಲಿಲ್ಲಾ ರಾತ್ರಿಲ್ಲ ನೈಟಿ ಮ್ಯಾಲೆ ನೋಡಿ ನೋಡಿ ಬೇಜಾರ ಆಗಿಬಿಟ್ಟಿತ್ತಂತ. ಅದಕ್ಕ ಒಂದ ನಾಲ್ಕ ಮಂದಿ ಗಂಡಸರ ಸೇರಿ ಮೀಟಿಂಗ ಮಾಡಿ ‘ನೈಟಿ ಬ್ಯಾನ್’ ಅಂತ ಡಿಸೈಡ ಮಾಡಿಬಿಟ್ಟಿದ್ದರು. ಮಜಾ ಅಂದರ ಗ್ರಾಮ ಪಂಚಾಯತಿ ಆರ್ಡರ ಹೆಣ್ಣಮಕ್ಕಳ ಪಾಪ ಹೂಂ ಅಂತ ಒಪಗೊಂಡ ಈಗ ಹಗಲ ಹೊತ್ತಿನಾಗ ನೈಟಿ ಒಗದ ಹಗ್ಗಕ್ಕ ಒಣಾಹಾಕಿರ್ತಾರಂತ. ಏನ್ಮಾಡ್ತೀರಿ?

ಅಲ್ಲಾ ಹಂಗ ಹಿಂಗ ಇಪ್ಪತ್ತನಾಲ್ಕ ತಾಸ ಅದನ್ನೇ ಹಾಕ್ಕೊಂಡರ ಯಾರಿಗೆ ತಲಿಕೆಡಂಗಿಲ್ಲ ಬಿಡ್ರಿ. ಹಂಗ ಈ ನೈಟಿ ಒಳಗ ಮನ್ಯಾಗ ಹಗಲ ಹೊತ್ತಿನಾಗ ಹಾಕ್ಕೊಳ್ಳಿಕ್ಕೆ ಒಂದ, ರಾತ್ರಿಗೆ ಒಂದ, ಓಣ್ಯಾಗ ಹಾಲ ತರಲಿಕ್ಕೆ ಬ್ಯಾರೆ, ಒಂದ ಚೂರ ದೂರ ಹೋಗಿ ಅಂಗಡ್ಯಾಗಿಂದ ಸಣ್ಣ-ಪುಟ್ಟ ಸಾಮಾನ ತರಲಿಕ್ಕೆ ಒಂದ, ಊರಿಗೆ-ಕೇರಿಗೆ ಹೋದರ ಬ್ಯಾರೆ ಅಂತ ಒಂದ ನಾಲ್ಕ ಐದ ಟೈಪ್ ಇರ್ತಾವ. ಅದಕ್ಕ ನಾ ಹೇಳಿದ್ದ ಅರ್ಧಾಸಂಸಾರ ಹೆಣ್ಣಮಕ್ಕಳದ ನೈಟಿ ಮ್ಯಾಲೆ ಹೋಗ್ತದ ಅಂತ. ಒಂದ ಮಾತನಾಗ ಹೇಳಬೇಕ ಅಂದರ ಇವರ ಇಡಿ ಜೀವನಾನ ಇದರ ಮ್ಯಾಲೆ ಕಳಿ ಅಂದರೂ ಕಳಿತಾರ ಬಿಡ್ರಿ…

ನಮ್ಮ ಜೋಳದ ಓಣಿ ಮನಿ ಕಡೆ ಒಬ್ಬರ ಪ್ಯಾಟಿ ಅಂತ ಇದ್ದರು. ಅವರದ ದೊಡ್ದ ಕುಟುಂಬ. ಅವರ ಮನ್ಯಾಗ ಒಂದ ಐದಾರ ಮಂದಿ ಹೆಣ್ಣಮಕ್ಕಳ ಇದ್ದರು. ಇನ್ನ ಒಬ್ಬಬ್ಬರಿಗೆ ನಾಲ್ಕೆ ೖದ ಥರದ ನೈಟಿ. ಹಿಂಗಾಗಿ ಯಾವಾಗಲೂ ಅವರ ಮನಿ ಮುಂದ ಹಗ್ಗಾ ಕಟ್ಟಿ ಹತ್ತ-ಹದಿನೈದ ನೈಟಿ ಒಣಾ ಹಾರ್ಕಿತಿದ್ದರು. ಯಾರರ ಓಣ್ಯಾಗ ಪ್ಯಾಟಿಯವರ ಮನಿ ಎಲ್ಲೇ ಅಂತ ಕೇಳಿದರ ಮಂದಿ ಈ ಲೈನನಾಗ ಯಾರ ಮನಿ ಮುಂದ ನೈಟಿ ಹಾಕ್ಯಾರ ಅದ ಪ್ಯಾಟಿಯವರ ಮನಿ ಅಂತ ಹೇಳಿ ಕಳಸ್ತಿದ್ದರು. ಅಲ್ಲಾ ಹಂಗ ಅವರ ಮನಿಗೆ ನಾವೇಲ್ಲಾ ನೈಟಿಯವರ ಮನಿ ಅಂತನ ಕರಿತಿದ್ವಿ, ಆ ಮಾತ ಬ್ಯಾರೆ.

ಆದರೂ ನಂಗ ಒಂದ ಕಡೆ ಈ ಸುದ್ದಿ ಓದಿ ಈ ನೈಟಿ ಕಾಟ ತಪ್ಪತು ಅಂತ ಖುಶಿ ಆತ, ಆದರ ಒಂದ ಕಡೆ ದುಃಖನೂ ಆತ ಅನ್ನರಿ. ಅಲ್ಲಾ ವರ್ಷಕ್ಕ ಎರಡ ಕೊಡಸಿದ್ದರ ಮುಗಿತಿತ್ತ. ಇನ್ನ ಅದನ್ನ ಬ್ಯಾನ ಮಾಡಿದರ ನಮ್ಮ ಖರ್ಚ ಜಾಸ್ತಿ ಆಗ್ತದಲಾ ಅಂತ ಸಂಕಟಾ ಆಗಲಿಕತ್ತ.

ಅಲ್ಲಾ ಹಂಗ ಇದ ಎಲ್ಲಾ ಕಡೆ ಏನ ಅಪ್ಲಿಕೇಬಲ್ ಅಲ್ಲಾ ಆದರೂ ಎಲ್ಲರ ಇದ ವೈರಲ್ ಆಗಿ ಇಡಿ ಇಂಡಿಯಾ ತುಂಬ ನೈಟಿ ಬ್ಯಾನ ಮಾಡಿದರ ಮುಂದ ಏನ ಗತಿ ಅಂತೇನಿ?

ಅದರಾಗ ನಮ್ಮ ದೋಸ್ತ ಒಬ್ಬಂವ ದುರ್ಗದಬೈಲ ಬ್ರಾಡವೇ ಒಳಗ ಹೋಲಸೇಲನಾಗ ನೈಟಿ ಮಾರತಾನ. ಪಾಪ ಅವನ ಉಪಜೀವನ ಮುಂದ ಹೆಂಗ ಅಂತ ಅನಿಸಿ ಅವಂಗ ಈ ಸುದ್ದಿ ಹೇಳಿದೆ. ಅವಂಗ ಇದನ್ನ ಕೇಳಿ ತಲಿ ಕೆಟ್ಟಹೋತ.

‘ಏ, ಬುದ್ಧಿ ಇಲ್ಲಲೇ ಅವರಿಗೆ… ಮೊದ್ಲ ನಮಗ ಜಿಎಸ್​ಟಿ ಬಂದಮ್ಯಾಲೆ ಸೀಸನ್ ಇಲ್ಲ. ಇನ್ನ ಹಿಂತಾದರಾಗ ನೈಟಿ ಬಂದ ಮಾಡಿದರ ನಾವೇನ ಇನ್ನ ನೈಟಿ ಬಿಟ್ಟ ಮತ್ತ ಪರಕಾರ ಮಾರಬೇಕೇನ?’ ಅಂತ ಅಂದಾ. ಅಲ್ಲಾ ಪಾಪ ಅಂವಾ ಮೊದ್ಲ ಪರಕಾರ ಮಾರತಿದ್ದಾ, ಯಾವಗ ಪರಕಾರದ ಸೇಲ ಕಡಮಿ ಆತ ಆವಾಗ ಈ ಬಿಜಿನೆಸ್ ಶುರುಮಾಡಿದ್ದಾ.

ಹಂಗ ಅಂವಾ ಆ ಸುದ್ದಿ ಓದಿ ಆ ಹಳ್ಳಿ ಮಂದಿ ಹಂಗ್ಯಾಕ ಮಾಡ್ಯಾರ ಅಂತ ತಂದ ಒಂದ ಲಾಜಿಕ ಹಚ್ಚಿ, ‘ದೋಸ್ತ, ಇದೇನ ಆಗೇದ ಗೊತ್ತೇನ…. ನನಗ ಅನಸಿದ ಮಟ್ಟಿಗೆ ಆ ಊರಾಗಿನ ಹೆಣ್ಣ ಮಕ್ಕಳೆಲ್ಲ ಸೇರಿ ಗಂಡಸರ ನೈಂಟಿ ತೊಗೊಳೊದನ್ನ ನಮ್ಮ ಹಳ್ಳಾ್ಯಗ ಬಂದ ಮಾಡಿಸಿದ್ದರಲಾ, ಹಂಗ ಬಂದ ಮಾಡಿಸಿರಬೇಕ… ಅದಕ್ಕ ಗಂಡಸರ ತಲಿಕೆಟ್ಟ ‘ನಮ್ಮ ನೈಂಟಿ ಬಂದ ಮಾಡ್ಯಾರ. ತಡಿ ನಾವ ಇವರ ನೈಟಿನರ ಬಂದ ಮಾಡ್ಸೋಣ’ ಅಂತ ಬ್ಯಾನ ಮಾಡಿಸ್ಯಾರ ತೊಗೊ’ ಅಂತ ಅಂದಾ. ಅಂದರ ಅವನ ಪ್ರಕಾರ ‘ನೀವು ನೈಂಟಿ ಬ್ಯಾನ ಮಾಡಿಸಿರಿ… ನಾವ ನೈಟಿ ಬ್ಯಾನ ಮಾಡ್ತೇವಿ’ ಅನ್ನೋ ಲಾಜಿಕ.

ಹಂಗ ನಂಗ ಅಂವಾ ಹೇಳೊ ಲಾಜಿಕ ಕರೆಕ್ಟ ಇದ್ದರೂ ಇರಬಹುದು ಬಿಡ್ರಿ. ಅಲ್ಲಾ ಹಿಂದಕ ನಮ್ಮ ಕರ್ನಾಟಕದಾಗ ಒಂದ ಹಳ್ಳಾ್ಯಗ ‘ಸಾರಾಯಿ ಅಂಗಡಿ’ ಇದ್ದಲ್ಲೆ ಆ ಹಳ್ಳಿ ಹೆಣ್ಣಮಕ್ಕಳೆಲ್ಲ ಸೇರಿ ‘ಸಾರಾಯಿಮುಕ್ತ ಗ್ರಾಮ’ ಮಾಡಬೇಕ ಅಂತ ಸ್ಟ್ರೈಕ್ ಮಾಡಿ ‘ಸಾರಾಯಿ ಅಂಗಡಿ’ ಮುಚ್ಚಸಿಸಿದ್ದ ಗೊತ್ತ ಇರಬೇಕಲಾ. ಪಾಪ, ಸಾರಾಯಿ ಮಾರಿ ಉಪಜೀವನ ಮಾಡೋರಿಗೆ ಮತ್ತ ಅದ ಇಲ್ಲದ ಬದಕಲಾರದೋರಿಗೆ ಸಿಕ್ಕಾಪಟ್ಟೆ ತ್ರಾಸ ಆಗಿತ್ತ ಅದ ಬಂದ ಆದಾಗ. ಆದರ ಹೆಣ್ಣಮಕ್ಕಳ ಸ್ಟ್ರೈಕ್ ಮಾಡಿ ಹನಮಂತ ದೇವರಗುಡಿ ಕಟ್ಟಿಮ್ಯಾಲೆ ಮೀಟಿಂಗ್ ಮಾಡಿ ‘ಇನ್ನ ಮುಂದ ನಮ್ಮ ಊರಾಗ ಯಾರೂ ಕುಡಿಯಂಗಿಲ್ಲಾ, ಯಾರೂ ಮಾರಂಗಿಲ್ಲಾ. ಹಂಗ ಅಪ್ಪಿತಪ್ಪಿ ಕುಡದರ ಐದ ನೂರ ರೂಪಾಯಿ ದಂಡ, ಮಾರಿದರ ಸಾವಿರ ರೂಪಾಯಿ ದಂಡ’ ಅಂತ ಫಿಕ್ಸ ಮಾಡಿ ‘ಸಾರಾಯಿಮುಕ್ತ ಗ್ರಾಮ’ ಮಾಡಸಿದ್ದರು. ಅಲ್ಲಾ ಹಂಗ ಅದ ಖರೇನ ಒಳ್ಳೆ ಕೆಲಸ ಬಿಡ್ರಿ. ಕುಡಿಯೋದರಿಂದ ಸಿಕ್ಕಾಪಟ್ಟೆ ದುಷ್ಪರಿಣಾಮ ಆಗ್ತಾವ, ಸಂಸಾರ ಹಳ್ಳಾ ಹಿಡಿತಾವ, ಹುಡುಗರ ಕೆಟ್ಟಹಾದಿ ಹಿಡಿತಾರ. ಈಗ ಹೆಂಗ ಹೆಣ್ಣಮಕ್ಕಳ ಇಪ್ಪತ್ತನಾಲ್ಕ ತಾಸು ‘ನೈಟಿ’ ಹಾಕೋತಾರ ಹಂಗ, ಇಪ್ಪತ್ತನಾಲ್ಕ ತಾಸ ‘ನೈಂಟಿ’ ಹಾಕೋರ ಇರ್ತಾರ. ಹಿಂಗಾಗಿ ‘ಸಾರಾಯಿಮುಕ್ತ ಗ್ರಾಮ’ ಅಗದಿ ಒಪಗೋಳೊ ಮಾತ ಅನ್ನರಿ.

ಅದಕ್ಕ ಅವನ ಲಾಜಿಕ ಪ್ರಕಾರ ಹೆಣ್ಣಮಕ್ಕಳ ‘ಸಾರಾಯಿಮುಕ್ತ ಗ್ರಾಮ’ ಮಾಡಿದ್ದರ ಸೇಡ ತೀರಿಸಿಗೊಳ್ಳಿಕ್ಕೆ ಹಿಂಗ ಗಂಡಸರು ‘ನೈಟಿ-ಮುಕ್ತ ಗ್ರಾಮ’ ಮಾಡ್ಯಾರ ಅಂತಾನ. ಅಲ್ಲಾ ಹಂಗ ಮಾಡೋದ ಗೈರಕಾನೂನ ಬಿಡ್ರಿ.. ಆದರೂ ಏನ ಅನ್ನರಿ, ‘ನೀವು ನೈಂಟಿ ಬ್ಯಾನ ಮಾಡಿಸಿರಿ… ನಾವ ನೈಟಿ ಬ್ಯಾನ ಮಾಡ್ತೇವಿ’ ಅನ್ನೊ ಲಾಜಿಕ ತಪ್ಪ.

ಅಲ್ಲಾ ನೀವೇನ ಅಂತೀರಿ… ನೈಟಿ ಬೇಕೋ ಇಲ್ಲಾ ನೈಂಟಿ ಬೇಕೊ? ಏನ ಎರಡು ಬೇಕೋ?

(ಲೇಖಕರು ಹಾಸ್ಯ ಬರಹಗಾರರು)

Leave a Reply

Your email address will not be published. Required fields are marked *