More

    ಗಿರ್ ತಳಿ ಸಂರಕ್ಷಣೆಗಿಳಿದ ಇಂಜಿನಿಯರ್

    ಹೇಮನಾಥ ಪಡುಬಿದ್ರಿ

    ಭಾರತೀಯ ಗಿರ್ ಗೋವು ತಳಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ಸ್ಥಳೀಯವಾಗಿ ಶುದ್ಧ ಹಾಲು ಪೂರೈಸುವ ಇರಾದೆಯೊಂದಿಗೆ ಅಟೋಮೊಬೈಲ್ ಇಂಜಿನಿಯರ್ ಆಗಿದ್ದ ಪ್ರಕಾಶ್ ಭಟ್ ನಂದಿಕೂರಿನಲ್ಲಿ ಆರಂಭಿಸಿರುವ ಹೈನೋದ್ಯಮ ಫಾರ್ಮ್ ಜನಾಕರ್ಷಣೆಯ ಕೇಂದ್ರವಾಗುತ್ತಿದೆ.
    ನಂದಿಕೂರಿನ ಶ್ರೀಪತಿ ರಾವ್ ಹಾಗೂ ಕುಮುದಾ ದಂಪತಿ ಪುತ್ರ 38 ವರ್ಷದ ಪ್ರಕಾಶ್ ಭಟ್ ಚೆನ್ನೈನಲ್ಲಿಯೇ ಹುಟ್ಟಿ ಬೆಳೆದು ಅಲ್ಲಿಯೇ ಶಿಕ್ಷಣ ಪಡೆದು ಅಟೋಮೊಬೈಲ್ ಡಿಪ್ಲೊಮಾ ಪದವೀಧರನಾಗಿ, ಪುಣೆಯ ಮಹೀಂದ್ರ ಕಂಪನಿಯಲ್ಲಿ 7ವರ್ಷ ಉದ್ಯೋಗ ನಿರ್ವಹಿಸಿದ್ದರು. ಈ ವೇಳೆ ಗಿರ್ ತಳಿ ಹೈನೋದ್ಯಮ ಕ್ಷೇತ್ರದತ್ತ ಆಕರ್ಷಿತರಾದರು. ಅದರಂತೆ ಗಿರ್ ತಳಿ ಬಗ್ಗೆ ಆಳವಾಗಿ ಅಧ್ಯಯನ ನಡೆಸಿದ ಪ್ರಕಾಶ್, ಉದ್ಯೋಗ ತೊರೆದು 2018ರಲ್ಲಿ ಚೆನ್ನೈಗೆ ಹಿಂತಿರುಗಿದರು. ಅಲ್ಲಿನ ಚೆಬ್ರಂಮ್‌ಬಾಕಂ ಅಣೆಕಟ್ಟು ವ್ಯಾಪ್ತಿಯ ತಾಬ್ರಂ ನಗರದಲ್ಲಿ 10 ಎಕರೆ ಜಮೀನನ್ನು ಗುತ್ತಿಗೆ ಆಧಾರದಲ್ಲಿ ಪಡೆದು ಅಲ್ಲಿ ಗುಜರಾತ್‌ನಿಂದ 5 ಗಿರ್ ಗೋವುಗಳನ್ನು ತಂದು ಹೈನೋದ್ಯಮ ಆರಂಭಿಸಿದರು. 30 ಗೋವುಗಳವರೆಗೆ ಬೆಳೆದು ಗಿರ್ ಹಾಲು ಸಹಿತ ಹಾಲಿನ ಉತ್ಪನ್ನಗಳ ಬ್ರಾಂಡ್‌ನಿಂದ ಯಶಸ್ವಿಯನ್ನೂ ಪಡೆದರು. ಆದರೆ ಅವರ ಫಾರ್ಮ್ ಇದ್ದ ಪ್ರದೇಶ ಪ್ರತಿವರ್ಷ ನೆರೆಗೆ ತುತ್ತಾಗುವ ಮೂಲಕ ಸಂಕಷ್ಟ ಎದುರಿಸುವಂತಾಯಿತು. ಆದರೂ ತಳಿ ಉಳಿಸಿ ಬೆಳೆಸುವ ದೃಢ ನಿಲುವು ತಳೆದಿದ್ದ ಅವರು ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯಿರುವ ಸ್ವಂತ ಜಮೀನಿನಲ್ಲಿ ಕಳೆದ 2 ತಿಂಗಳ ಹಿಂದೆ ಫಾರ್ಮ್ ಆರಂಭಿಸಿದ್ದಾರೆ. ಚೆನೈನಲ್ಲಿದ್ದ 7ರ ಹರೆಯದ ಪದ್ದು, ರಾಣಿ, 9ವರ್ಷದ ಲಕ್ಷ್ಮಿ, ಕಾಮಧೇನು, 6 ವರ್ಷದ ರಾಧೆ, ವಲ್ಲಿ, 8ವರ್ಷದ ದುರ್ಗಾ ಗಿರ್ ಹಸು, ತಳಿ ವಂಶಾಭಿವೃದ್ಧಿಗಾಗಿ ಸಾಕಣಿಕೆ ಮಾಡಿರುವ 1 ಎತ್ತು ಹಾಗೂ 6 ಹೆಣ್ಣು ಮತ್ತು 4 ಗಂಡು ಕರುಗಳನ್ನು ತಂದು ಫಾರ್ಮ್‌ನಲ್ಲಿ ಸಾಕಾಣಿಕೆ ಮಾಡಲಾಗುತ್ತಿದೆ. ಹಾಲು ಕರೆಯುವುದರಿಂದ ಹಿಡಿದು ಪ್ರತಿಯೊಂದು ಕೆಲಸವನ್ನು ಸ್ವತಃ ಪ್ರಕಾಶ್ ಅವರೇ ನಿರ್ವಹಣೆ ಮಾಡುವ ಮೂಲಕ ಹೈನುಗಾರಿಕೆ ಪ್ರೀತಿಯನ್ನು ತೋರಿಸುತ್ತಿದೆ.

    ಇಸ್ರೇಲ್ ಮಾದರಿಯಲ್ಲಿ ಪೌಷ್ಟಿಕ ಆಹಾರ ಬೆಳೆ
    ಗೋವುಗಳಿಗೆ ಅಗತ್ಯವಿರುವ ಹಸಿರು ಮೇವನ್ನು ಜಮೀನಿನಲ್ಲಿಯೇ ಬೆಳೆಯಲಾಗುತ್ತಿದೆ. ಅಲ್ಲದೆ ಜೋಳದ ಬೀಜವನ್ನು ಮೊಳಕೆ ಬರಿಸಿ ಇಸ್ರೇಲ್ ಮಾದರಿಯಲ್ಲಿ ಬೆಳೆಸಿದ ಪೌಷ್ಟಿಕ ಆಹಾರವನ್ನು ಬಳಕೆ ಮಾಡಲಾಗುತ್ತಿದೆ. ಯಾವುದೇ ರಾಸಾಯನಿಕ ಬಳಸದೆ ಸಾವಯವಯುಕ್ತವಾಗಿಯೇ ಹೈನುಗಾರಿಕೆ ಮಾಡುತ್ತಿರುವ ಅವರ ಫಾರ್ಮ್‌ನಲ್ಲಿನ ದನಗಳಿಂದ ಪ್ರಸ್ತುತ ದಿನವಹಿ 40 ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಸ್ಥಳೀಯವಾಗಿ ಮನೆಗಳಿಗೆ ಮಾರಾಟ ಮಾಡಲಾಗುತ್ತಿದೆ. ಶುದ್ಧ ಹಾಲಿನ ಮಹತ್ವ ತಿಳಿದಿರುವ ಸಾಕಷ್ಟು ಮಂದಿ ಹಾಲು ಹಾಗೂ ಇತರ ಉತ್ಪನ್ನಗಳಿಗೂ ಬೇಡಿಕೆಯಿಡುತ್ತಿದ್ದಾರೆ. ಜನರ ಬೇಡಿಕೆಯನ್ನು ಪರಿಗಣಿಸಿ ಉದ್ಯಮವನ್ನು ವಿಸ್ತರಿಸುವ ಯೋಜನೆಯೂ ಅವರಲ್ಲಿದೆ. ತಳಿ ವಂಶಾಭಿವೃದ್ಧಿ ಮಾಡಿ ಮಾರಾಟ ಮಾಡುವ ಯೋಜನೆಯನ್ನೂ ಹೊಂದಿರುವ ಅವರಲ್ಲಿ ಗೋವಿಗಾಗಿ ಅನೇಕರು ಬೇಡಿಕೆಯನ್ನಿಟ್ಟಿದ್ದಾರೆ. ಮಿಶ್ರ ತಳಿ ಗಿರ್ ಸಹಿತ ಇತರ ತಳಿಗಳ ಗೋ ಸಾಕಾಣಿಕೆಯನ್ನಷ್ಟೇ ಹೊಂದಿರುವ ಕಾಪು ತಾಲೂಕಿನಲ್ಲಿ ಪ್ರಥಮವೆಂಬಂತೆ ನಂದಿಕೂರಿನಲ್ಲಿ ಆರಂಭವಾಗಿರುವ ದೇಸಿ ಗಿರ್ ತಳಿ ಹೈನುಗಾರಿಕೆ ಮಾಹಿತಿಗಾಗಿ ಮೊ. ಸಂಖ್ಯೆ:7030023388 ಸಂಪರ್ಕಿಸಬಹುದು.

    ದಿನದ 8 ಗಂಟೆ ಹೈನುಗಾರಿಕಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದೇನೆ, ಮನೆಯವರಿಂದಲೂ ಉತ್ತಮ ಪ್ರೋತ್ಸಾಹ ದೊರೆತಿದೆ. ತನ್ನದೇ ಆದ ವೈಶಿಷ್ಟ್ಯತೆ ಮೂಲಕ ಗುರುತಿಸಲ್ಪಡುವ ದೇಸಿ ಘಿರ್ ತಳಿ ಉಳಿಸುವ ಜತೆಗೆ ಗುಣಮಟ್ಟದ ಶುದ್ಧ ಹಾಲು ಜನರಿಗೆ ದೊರೆಯಬೇಕೆನ್ನುವ ಇರಾದೆ ಹೊಂದಿ ಹೈನುಗಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಯಿತು. ಇಲ್ಲಿ ಹಾಲಿನ ಇತರ ಉತ್ಪನಗಳನ್ನು ಬೇಡಿಕೆಗನುಗುಣವಾಗಿ ಪೂರೈಸಲು ಯೋಜನೆ ಹಾಕಿಕೊಳ್ಳಲಾಗಿದೆ.
    ಪ್ರಕಾಶ್ ಭಟ್ ನಂದಿಕೂರು, ಹೈನುಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts