More

    ತಿಳವಳ್ಳಿಯಲ್ಲಿ ಅಡಕೆ ಮರ ಕಡಿದು ಹಾಕಿದ ದುಷ್ಕರ್ವಿುಗಳು

    ಅಕ್ಕಿಆಲೂರ: ಎರಡು ವರ್ಷದ ಅಡಕೆ ಮರಗಳನ್ನು ದುಷ್ಕರ್ವಿುಗಳು ಕಡಿದು ಹಾಕಿದ ಅಮಾನವೀಯ ಘಟನೆ ಸಮೀಪದ ಕುಸನೂರ ಗ್ರಾಮದಲ್ಲಿ ಗುರುವಾರ ನಡೆದಿದೆ.

    ಗ್ರಾಮದ ಪ್ರಗತಿಪರ ರೈತ ಅಡಿವೆಪ್ಪ ದಾನಪ್ಪ ಆಲದಕಟ್ಟಿ ಅವರು, ತಿಳವಳ್ಳಿ ರಸ್ತೆಯ ತಮ್ಮ ತೋಟದಲ್ಲಿ ಬೆಳೆಸಿದ್ದ ಅಡಕೆ ಮರಗಳ ಪೈಕಿ 52 ಗಿಡಗಳನ್ನು ಅ. 27ರಂದು ದುಷ್ಕರ್ವಿುಗಳು ಕಡಿದು ಹಾಕಿದ್ದಾರೆ.

    ತಮ್ಮ 6 ಎಕರೆ ಜಮೀನಿನ ಪೈಕಿ ಎರಡು ಎಕರೆಯಲ್ಲಿ ಎರಡು ವರ್ಷದ ಹಿಂದೆ ಅಡಕೆ ಸಸಿ ನೆಟ್ಟಿದ್ದರು. ದೀಪಾವಳಿ ಪೂಜೆಗೆಂದು ಅ. 26ರಂದು ತೋಟಕ್ಕೆ ಅಡಿವೆಪ್ಪ ಹೋಗಿ ಬಂದಿದ್ದರು. ಅಂದು ಹಾಗೆ ಇದ್ದ ಮರಗಳು, ಮರುದಿನ ತೋಟಕ್ಕೆ ಹೋದಾಗ ತುಂಡು ತುಂಡಾಗಿ ಚೆಲ್ಲಾಪಿಲ್ಲಿಯಾಗಿದ್ದವು. ಸುಮಾರು 1200 ಅಡಕೆ ಮರಗಳನ್ನು ಕಳೆದ 2 ವರ್ಷಗಳಿಂದ ಕಷ್ಟಪಟ್ಟು ಪಾಲನೆ ಪೋಷಣೆ ಮಾಡಿದ್ದರು. ತೀವ್ರ ಮಳೆಗೆ 400ಕ್ಕೂ ಹೆಚ್ಚು ಅಡಕೆ ಮರಗಳು ನಾಶವಾಗಿದ್ದವು. ಇದೀಗ ದುಷ್ಕರ್ವಿುಗಳ ಕೃತ್ಯದಿಂದ ಅಡಕೆ ಮರ ನಾಶವಾಗಿದ್ದನ್ನು ಕಂಡು ರೈತ ಅಡಿವೆಪ್ಪ ಆಲದಕಟ್ಟಿ ತೋಟದಲ್ಲಿ ಬಿದ್ದು ಹೊರಳಾಡಿ ಕಣ್ಣೀರಿಟ್ಟಿದ್ದಾರೆ.

    ಘಟನೆ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್​ಐ ಗಡ್ಡಪ್ಪ ಗುಂಜಟಿಗಿ ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ.

    ವರ್ಷದ ಹಿಂದೆ ಬಾಳಂಬೀಡ ಗ್ರಾಮದಲ್ಲಿ ನೂರಾರು ಅಡಕೆ ಮರ ನಾಶಗೊಳಿಸಿದ ಘಟನೆ ರಾಜ್ಯವ್ಯಾಪಿ ಸುದ್ದಿಯಾಗಿತ್ತು. ಅಷ್ಟೇ ಅಲ್ಲದೆ, ಕಳೆದೊಂದು ತಿಂಗಳಿಂದ ಹಾನಗಲ್ಲ ತಾಲೂಕಿನಲ್ಲಿ ತೋಟದಲ್ಲಿ ಅಡಕೆ ಕಳವು ಪ್ರಕರಣಗಳು ಹೆಚ್ಚುತ್ತಿವೆ. ವ್ಯಕ್ತಿಗಳ ಮೇಲಿನ ದ್ವೇಷಕ್ಕೆ ಅಡಕೆ ನಾಶ ಮಾಡುತ್ತಿರುವವರು ಹಾಗೂ ಅಡಕೆ ಕಳ್ಳರನ್ನು ಪೊಲೀಸರು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಕ್ಕಿಆಲೂರ ರೈತ ಸಂಘದ ಅಧ್ಯಕ್ಷ ಮಹೇಶ ವಿರಪ್ಪಣ್ಣನವರ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts