More

    ಗೋ ಅಲಂಕಾರದಲ್ಲೂ ಮೋದಿ!

    ಶಿವಮೊಗ್ಗ: ಲೋಕಸಭೆ ಚುನಾವಣೆಗೆ ಇನ್ನು ಆರು ತಿಂಗಳು ಬಾಕಿ ಇರುವಂತೆಯೇ ಬಿಜೆಪಿ ಕಾರ್ಯಕರ್ತರಲ್ಲಿ ಮೋದಿ ಮೇನಿಯಾ ಹೆಚ್ಚುತ್ತಿದೆ. ಇದಕ್ಕೆ ದೀಪಾವಳಿಯೂ ಹೊರತಾಗಲಿಲ್ಲ. ಬಿಜೆಪಿ ಹಿರಿಯ ಕಾರ್ಯಕರ್ತ, ಶಾಸಕ ಆರಗ ಜ್ಞಾನೇಂದ್ರ ಅವರ ಆಪ್ತ ಸಹಾಯಕ ಹೊದಲ ಬಸವರಾಜ್ ಅವರ ಮನೆಯಲ್ಲಿ ದೀಪಾವಳಿ ಗೋಪೂಜೆ ಸಂದರ್ಭದಲ್ಲಿ ಗೋವುಗಳನ್ನು ಅಲಂಕರಿಸುವ ವೇಳೆ ಅವುಗಳ ಮೈಮೇಲೆ ಮೋದಿ ಮತ್ತೊಮ್ಮೆ ಎಂದು ಬರೆದಿದ್ದು ಗಮನ ಸೆಳೆಯಿತು

    ಇನ್ನೊಂದೆಡೆ ಕೆಮ್ಮಣ್ಣು, ಜೇಡಿಮಣ್ಣಿನಿಂದ ವಿಶೇಷವಾಗಿ ಅಲಂಕೃತಗೊಂಡ, ನವವಧುಗಳಂತೆ ಸಿಂಗಾರಗೊಂಡ ಎತ್ತು ಹಾಗೂ ಹಸು. ಚೆಂಡು ಹೂವಿನಿಂದ ಸಿಂಗಾರಗೊಂಡ ಆಕಳುಗಳು. ಒಂದರ ಹಾರವನ್ನು ಹರಿಯಲು ಮತ್ತೊಂದು ಹಸುವಿನ ಪೈಪೋಟಿ. ಇದು ಸೋಮವಾರ ಹಾಗೂ ಮಂಗಳವಾರ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಂಡು ಬಂದ ದೃಶ್ಯಾವಳಿಗಳು.
    ಕೆಲವರು ಸೋಮವಾರವೇ ಗೋಪೂಜೆ ನೆರವೇರಿಸಿದರೆ, ಹಲವರು ಮಂಗಳವಾರ ಗೋಪೂಜೆ ಮಾಡಿದರು. ದೀಪಾವಳಿ ಸಂದರ್ಭದಲ್ಲಿ ಎತ್ತು ಹಾಗೂ ಹಸುಗಳಿಗೆ ವಿಶೇಷ ಪೂಜೆ ನಿಮಿತ್ತ ಗ್ರಾಮೀಣ ಭಾಗದಲ್ಲಿ ಸಡಗರದ ವಾತಾವರಣ ನಿರ್ಮಾಣವಾಗಿತ್ತು. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕೆಲ ಗೋಶಾಲೆಗಳಲ್ಲಿ ಸಾಮೂಹಿಕ ಗೋಪೂಜೆಗೂ ವ್ಯವಸ್ಥೆ ಮಾಡಲಾಗಿತ್ತು.
    ಕೃಷಿಯೇ ಮುಖ್ಯ ಜೀವನಾಧಾರವಾದ ಜಿಲ್ಲೆಯಲ್ಲಿ ವರ್ಷವಿಡೀ ತನ್ನನ್ನು ಹಾಗೂ ತನ್ನ ಕುಟುಂಬವನ್ನು ಪೊರೆಯುವ ಆಕಳು ಹಾಗೂ ಎತ್ತುಗಳಿಗೆ ಕೃಷಿಕ ಹಾಗೂ ಆತನ ಕುಟುಂಬ ವಿಶೇಷವಾಗಿ ಕೃತಜ್ಞತೆ ಸಲ್ಲಿಸುವ ದಿನವೇ ಬಲಿಪಾಡ್ಯಮಿ. ಚೆಂಡು ಹೂವಿನೊಂದಿಗೆ ಪಚ್ಚೆತೆನೆ, ಸಿಂಗಾರ (ಹಿಂಗಾರ), ವೀಳ್ಯದೆಲೆ, ಹಣ್ಣು ಅಡಕೆ ಮುಂತಾದವುಗಳನ್ನು ಸೇರಿಸಿದ ಮಾಲೆಗಳನ್ನು ಸಿದ್ಧಪಡಿಸಿ ಆಕಳನ್ನು ಸಿಂಗರಿಸಲಾಗಿತ್ತು.
    ಕೆಲವರು ಮನೆಯ ಒಳಗಡೆ ಗೋವುಗಳನ್ನು ಕರೆತಂದು ಅವುಗಳ ಕಾಲಿಗೆ ಪೂಜೆ ಸಲ್ಲಿಸಿದರೆ, ಇನ್ನು ಕೆಲವರು ಕೊಟ್ಟಿಗೆಯಲ್ಲಿಯೇ ಪೂಜೆ ಸಲ್ಲಿಸಿದರು. ಹಲವೆಡೆ ಎತ್ತುಗಳಿಗೆ ಚೆಂಡುಹೂವು ಮಾತ್ರವಲ್ಲದೆ ಇತರ ಜಾತಿಯ ಹೂವುಗಳಿಂದ ಸಿಂಗರಿಸಿ, ನಂತರ ಅವುಗಳ ಕೊಂಬಿಗೆ ಬಣ್ಣ ಹಚ್ಚಿ ಅವುಗಳನ್ನು ಇನ್ನಷ್ಟು ಸುಂದರಗೊಳಿಸಲಾಗಿತ್ತು. ಸಿಂಗಾರಗೊಂಡ ಎತ್ತುಗಳಿಗೆ ಪೂಜೆ ಸಲ್ಲಿಸಿ ನಂತರ ಊರಿನ ಸುತ್ತಲೂ ಎತ್ತುಗಳ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯ ನಂತರ ಎತ್ತುಗಳೊಂದಿಗೆ ಗ್ರಾಮ ದೇವತೆಗೆ ಪೂಜೆ ಸಲ್ಲಿಸಲಾಯಿತು.
    ಸಗಣಿಯಿಂದ ಕೊಟ್ಟಿಗೆ ಬಳಿದು, ಬಾಗಿಲಿಗೆ ರಂಗೋಲಿ ಹಾಕಿ ನಂತರ ಇಡೀ ಕೊಟ್ಟಿಗೆಯಲ್ಲಿ ಕೆಮ್ಮಣ್ಣು ಹಾಗೂ ಜೇಡಿ ಮಣ್ಣಿನಿಂದ ಚಿತ್ರ ಬರೆಯಲಾಗಿತ್ತು. ಜಾನುವಾರುಗಳನ್ನು ಕಟ್ಟುವ ಕಂಬಗಳನ್ನೂ ಕೆಮ್ಮಣ್ಣು ಹಾಗೂ ಜೇಡಿ ಮಣ್ಣಿನಿಂದ ಸಿಂಗರಿಸಲಾಗಿತ್ತು.
    ಬಲಿಪಾಢ್ಯಮಿಯಿಂದ ಐದು ದಿನಗಳವರೆಗೂ ಗೋವುಗಳಿಗೆ ಪ್ರತಿದಿನ ಒಂದೊಂದು ಬಣ್ಣದ ಓಕುಳಿ ಚೆಲ್ಲಿ ಕೊಟ್ಟಿಗೆಗೆ ಪ್ರವೇಶಿಸಲು ಬಿಡಲಾಗುತ್ತದೆ. ಬೆಳಗ್ಗೆ ಮೇಯಲು ಕಾಡಿಗೆ ಹೋಗುವ ಜಾನುವಾರುಗಳು ಸಂಜೆ ವೇಳೆಗೆ ಕೊಟ್ಟಿಗೆಗೆ ಬರುವ ಸಂದರ್ಭದಲ್ಲಿ ಇದನ್ನೇ ಕಾಯುತ್ತಿರುವ ಮನೆಯ ಸದಸ್ಯರೊಬ್ಬರು ಕೊಟ್ಟಿಗೆ ಪ್ರವೇಶಕ್ಕೆ ಮುನ್ನವೇ ಎಲ್ಲಾ ಗೋವುಗಳಿಗೂ ಓಕುಳಿ ಚಿಮುಕಿಸುತ್ತಾರೆ. ನಂತರವೇ ಗೋವುಗಳಿಗೆ ಕೊಟ್ಟಿಗೆ ಪ್ರವೇಶ. ಐದು ದಿನಗಳು ಒಂದೊಂದು ಬಣ್ಣದ ಓಕುಳಿ ಬಳಸುವುದು ಇನ್ನೊಂದು ವಿಶೇಷ.
    ಜಿಲ್ಲೆಯ ವಿವಿಧೆಡೆ ರೈತ ಸಮುದಾಯ ಕೃಷಿ ಪರಿಕರಗಳನ್ನು ಜೋಡಿಸಿ, ಅವುಗಳನ್ನು ಹೂವು, ಜೇಡಿ ಮಣ್ಣು, ಸುಣ್ಣದಿಂದ ಸಿಂಗರಿಸಿ ಅವುಗಳಿಗೆ ಪೂಜೆ ಸಲ್ಲಿಸುವ ಮೂಲಕ ಬಲೀಂದ್ರನ ಪೂಜೆ ನೆರವೇರಿಸಿದರು. ನೇಗಿಲು, ಪಿಕಾಸಿ, ಗುದ್ದಲಿ, ಆಧುನಿಯಕ ಕೃಷಿ ಯಂತ್ರೋಪಕರಣಗಳಿಗೆ ಪೂಜೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts