More

    ಕಬ್ಬಿನ ಹೊಲದಲ್ಲಿ ಸೈನಿಕನಿಗೆ ಸಿಕ್ತು ನರಿ ಮರಿ..!

    ಬಾಗಲಕೋಟೆ: ಈಗಿನ ಕಾಲದಲ್ಲಿ ನರಿಗಳು ಕಣ್ಣಿಗೆ ಬೀಳುವುದೇ ಅಪರೂಪ. ಇನ್ನು ಕಣ್ಣಿಗೆ ಬಿದ್ದರೂ ‘ಅದೇ ನರಿ’ ಎಂದು ಗುರುತಿಸಲು ಅನೇಕರಿಗೆ ಗೊತ್ತಿಲ್ಲ. ಅದಲ್ಲದೇ ಸೈನಿಕರು ಮರಳಿ ಊರಿಗೆ ಬರುವುದೂ ಅಪರೂಪ. ಆದರೆ ಬಾಗಲಕೋಟೆಯ ಬೀಳಗಿ ತಾಲೂಕಿನಲ್ಲಿ ಎಲ್ಲಾ ಅಪರೂಪಗಳೂ ಸೇರಿ ಮತ್ತೊಂದು ಅಪರೂಪದ ಘಟನೆ ನಡೆದಿದೆ.ಕಬ್ಬಿನ ಹೊಲದಲ್ಲಿ ಸೈನಿಕನಿಗೆ ಸಿಕ್ತು ನರಿ ಮರಿ..!

    ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಹೆರಕಲ್ ಗ್ರಾಮದ ಹತ್ತಿರ ಈರಪ್ಪ ವಾರದ ಎಂಬುವವರ ತೋಟದಲ್ಲಿ ನರಿಯ ಮರಿಗಳು ಇರುವುದು ಪತ್ತೆಯಾಗಿದೆ. ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಈರಪ್ಪ ಎಂಬುವವರು ರಜೆ ಮೇಲೆ ಊರಿಗೆ ಬಂದಿದ್ರು. ಇಂದು ಜಮೀನಿಗೆ ಹೋದಾಗ ನರಿ ಮರಿಗಳನ್ನು ನೋಡಿದ್ದಾರೆ. ಕಬ್ಬು ಕಟಾವು ಮಾಡುವಾಗ ಸುಮಾರು ಐದು ನರಿಯ ಮರಿಗಳು ಪತ್ತೆ ಯಾಗಿವೆ.

    ಈರಪ್ಪ ನಾಲ್ಕೈದು ದಿನಗಳ ಹಿಂದಷ್ಟೆ ಜನಿಸಿರಬಹುದಾದ ಐದು ಮರಿಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಹಾಲು ಕುಡಿಸಲು ಪ್ರಯತ್ನಿಸಿದ್ದಾರೆ. ಆದರೆ ನಾಲ್ಕೈದು ದಿನಗಳ ಮರಿ ಇರುವುದರಿಂದ ತಾಯಿಯ ಹಾಲನ್ನು ಬಿಟ್ಟು ಬೇರೆ ಯಾವುದೇ ಹಾಲು ಸ್ವೀಕರಿಸುತ್ತಿಲ್ಲ. ಹೀಗಾಗಿ ಈರಪ್ಪ ವಾರದ ಅವರು ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಧಿಕಾರಿಗಳ ಸಲಹೆಯಂತೆ ಮರಿಗಳನ್ನು ಮತ್ತೆ ಜಮೀನಿನ ಅದೇ ಜಾಗದಲ್ಲಿ ಬಿಟ್ಟು ಬಂದಿದ್ದಾರೆ.

    ‘ಕಬ್ಬು ಕಟಾವು ಮಾಡುತ್ತಿರುವುದರಿಂದ ಜನಸಂಚಾರ ಇರುವುದರಿಂದ ಗದ್ದಲ ಇರುತ್ತೆ. ಅಲ್ಲದೇ ಅಲ್ಲಿ ಜಮೀನಿಗೆ ಒಂದೆರೆಡು ದಿನ ನೀರು ಬಿಡಬೇಡಿ. ರಾತ್ರಿಹೊತ್ತು ತಾಯಿ ನರಿ ಬಂದು ಅವುಗಳನ್ನು ಸುರಕ್ಷಿತ ಜಾಗಕ್ಕೆ ತೆಗೆದುಕೊಂಡು ಹೋಗುವ ಸಾಧ್ಯತೆ ಇರುತ್ತೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.

    ಇನ್ನು ಇಂದೇ ರಜೆ ಮುಗಿಸಿ ಕಾಶ್ಮೀರಕ್ಕೆ ಕರ್ತವ್ಯಕ್ಕೆ ತೆರಳಲಿದ್ದ ಸೈನಿಕ ಈರಪ್ಪ ಅವರು ಆ ಐದು ಮರಿಗಳನ್ನು ಮರಳಿ ಅವುಗಳು ಇದ್ದ ಜಾಗಕ್ಕೆ ಬಿಟ್ಟಿದ್ದಾರೆ. ಆ ಪ್ರದೇಶದಲ್ಲಿ ನೀರು ಹಾಯಿಸದಂತೆ ಕಾರ್ಮಿಕರಿಗೆ ಹೇಳಿ ಕರ್ತವ್ಯಕ್ಕೆ ತೆರಳಿದ್ದಾರೆ. ಇದೀಗ ಐದು ಮರಿಗಳು ಜಮೀನಿನಲ್ಲಿ ಇದ್ದು, ಆ ಕಡೆಗೆ ಜನರು ಯಾರೂ ಹೋಗದಂತೆ ಅರಣ್ಯ ಇಲಾಖೆ ಸಿಬ್ಬಂದಿ ಜನರಲ್ಲಿ ಮನವಿ ಮಾಡಿದ್ದಾರೆ.

    ‘ಸಾಮಾನ್ಯವಾಗಿ ಪ್ರತಿ ವರ್ಷ ಕಬ್ಬು ಕಟಾವು ವೇಳೆ ಅಲ್ಲಲ್ಲಿ ಈ ರೀತಿ ನರಿ ಮರಿಗಳು ಕಾಣಿಸುತ್ತವೆ. ಇದು ನರಿಗಳಿಗೆ ಸಂತಾನೋತ್ಪತ್ತಿ ಸಮಯ ಆಗಿದೆ. ಕಬ್ಬು ಕಟಾವು ಮಾಡಿದಾಗ ಜಮೀನು ಬಯಲಾಗುತ್ತದೆ. ಈ ವೇಳೆ ತಾಯಿ ನರಿಗಳು ತಮ್ಮ ಮರಿಗಳನ್ನು ಸುರಕ್ಷಿತ ಜಾಗಕ್ಕೆ ಕರೆದೊಯ್ಯುತ್ತವೆ. ಅವುಗಳನ್ನು ಹಿಡಿದು ತಂದು ಸಾಕಲು ಕಾನೂನಿನಲ್ಲಿ ಅವಕಾಶ ಇರಲ್ಲ. ಒಂದೆರೆಡು ದಿನಗಳಲ್ಲಿ ತಾಯಿ ನರಿ, ತನ್ನ ಮರಿಗಳನ್ನು ಬೇರೆಕಡೆಗೆ ಕರೆದೊಯ್ಯುತ್ತದೆ. ನಮ್ಮ ಸಿಬ್ಬಂದಿ ಸಹ ಮರಿಗಳ ಕಡೆಗೆ ನಿಗಾವಹಿಸಿದ್ದಾರೆ’ ಎಂದು ಬೀಳಗಿ ವಲಯ ಅರಣ್ಯಾಧಿಕಾರಿ ಎಚ್.ಬಿ ಡೋಣಿ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts