More

    ಸಕಲೇಶಪುರ-ಸುಬ್ರಹ್ಮಣ್ಯ ರೈಲ್ವೆ ಮಾರ್ಗಕ್ಕೆ ಹೊಸ ಟೆಕ್ ಸ್ಪರ್ಶ

    ಮಂಗಳೂರು: ಸಕಲೇಶಪುರ-ಸುಬ್ರಹ್ಮಣ್ಯ ರೈಲ್ವೆ ಮಾರ್ಗ ಹಾದು ಹೋಗುವ ಘಾಟ್ ಪ್ರದೇಶದಲ್ಲಿ ನೈಋತ್ಯ ರೈಲ್ವೆ ಮೈಸೂರು ವಿಭಾಗ ಸಿಗ್ನಲಿಂಗ್ ತಂತ್ರಜ್ಞಾನವನ್ನು ಸುಧಾರಣೆ ಮಾಡಿದೆ. ಇದರಿಂದಾಗಿ ಕರಾವಳಿಯಿಂದ ಬೆಂಗಳೂರು, ಮೈಸೂರಿಗೆ ಪ್ರಯಾಣಿಕರ ರೈಲುಗಳ ಸಂಖ್ಯೆ ಗಮನಾರ್ಹವಾಗಿ ಏರಿಕೆಯಾಗುವ ಸಾಧ್ಯತೆ ಇದೆ.

    ಸವಾಲಿನ ಮಧ್ಯೆ ಕಾಮಗಾರಿ

    55 ಕಿ.ಮೀ ಉದ್ದದ ಈ ಘಾಟ್ ಸೆಕ್ಷನ್‌ನಲ್ಲಿ ಹಿಂದೆ ಕ್ಯಾಚ್ ಸೈಡಿಂಗ್ಸ್ ಹಳಿಗಳಿಲ್ಲದ ಕಾರಣ ರೈಲ್ವೆ ಸುರಕ್ಷತಾ ಆಯುಕ್ತರಿಂದ ಹಲವಾರು ನಿರ್ಬಂಧಗಳನ್ನು ವಿಧಿಸಲಾಗುತ್ತಿತ್ತು. ಸವಾಲಿನ ನಡುವೆಯೂ ಸಿಗ್ನಲಿಂಗ್ ಸುಧಾರಣಾ ಕಾಮಗಾರಿ ಪೂರ್ಣಗೊಳಿಸಿರುವುದಕ್ಕೆ ನೈಋತ್ಯ ರೈಲ್ವೇ ವಿಭಾಗೀಯ ಪ್ರಬಂಧಕಿ ಅಪರ್ಣಾ ಗಾರ್ಗ್ ಅವರು ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.

    ಸಿಗ್ನಲಿಂಗ್ ವ್ಯವಸ್ಥೆಯನ್ನು ಇದೇ ಜೂನ್ ತಿಂಗಳಿಂದ ಪರಿವರ್ತನೆ ಹಾಗೂ ತಂತ್ರಜ್ಞಾನ ಉನ್ನತೀಕರಿಸುವ ಕೆಲಸ ಆರಂಭಿಸಲಾಗಿತ್ತು. ಅತ್ಯಾಧುನಿಕ ಮತ್ತು ವಿಶ್ವಾಸಾರ್ಹ ಸಿಗ್ನಲಿಂಗ್ ಹಾಗೂ ಸಂಪರ್ಕ ಉಪಕರಣಗಳನ್ನು ಕಡಗರವಳ್ಳಿ ಹಾಗೂ ಯಡಕುಮರಿ ಸ್ಟೇಷನ್‌ಗಳಲ್ಲಿ ಅಳವಡಿಸಲಾಗಿದೆ. ಮಲ್ಟಿಸೆಕ್ಷನ್ ಡಿಜಿಟಲ್ ಆಕ್ಸಲ್ ಕೌಂಟರ್ ಎನ್ನುವ ಸುಧಾರಿತ ತಂತ್ರಜ್ಞಾನವು ರೈಲಿನ ಚಲನವಲನ ಪತ್ತೆಯೊಂದಿಗೆ ಸುರಕ್ಷತಾ ವ್ಯವಸ್ಥೆಗಳನ್ನು ಹೊಂದಿರುವುದಲ್ಲದೆ ನಿರ್ವಹಣಾ ವೆಚ್ಚವೂ ಕಡಿಮೆ.

    ಕೋವಿಡ್ ಸವಾಲು ಹಾಗೂ ಭಾರಿ ಮಳೆಯ ಮಧ್ಯೆ ಕಾಮಗಾರಿ ಮುಗಿಸುವುದು ಕಠಿಣ ಕೆಲಸವಾಗಿತ್ತು. ಘಾಟ್ ಪ್ರದೇಶದಲ್ಲಿ ಕಾರ್ಮಿಕರನ್ನು ಸಾಗಿಸುವುದು, ಕೇಬಲ್, ಲೊಕೇಶನ್ ಬಾಕ್ಸ್, ಎಂಎಸ್‌ಡಿಎಸಿ ಉಪಕರಣ ಸಾಗಾಟ, ಭೂಕುಸಿತದ ಭಯ, ವಿದ್ಯುತ್‌ಗೆ ಡೀಸೆಲ್ ಜನರೇಟರ್ ಅವಲಂಬನೆ ಇವೆಲ್ಲದರ ನಡುವೆಯೂ 4.4 ಕೋಟಿ ರೂ. ವೆಚ್ಚದಲ್ಲಿ ಈ ಕೆಲಸ ಪೂರ್ಣಗೊಳಿಸಲಾಗಿದೆ. ಈ ವೆಚ್ಚವನ್ನು ಹಾಸನ-ಮಂಗಳೂರು ರೈಲು ಅಭಿವೃದ್ಧಿ ಕಂಪನಿಯವರು ಭರಿಸಿದ್ದಾರೆ. ಈ ಸೌಲಭ್ಯಗಳಿಂದಾಗಿ ಹೆಚ್ಚುವರಿಯಾಗಿ ಶೇ.35ರಷ್ಟು ರೈಲು ಓಡಿಸಬಹುದಾಗಿದೆ. ಸರಕು ಸಾಗಾಟ ರೈಲುಗಳ ವೆಚ್ಚ ಕಡಿಮೆಗೊಳಿಸಲೂ ನೆರವಾಗಲಿದೆ.

    ಹೊಸ ತಂತ್ರಜ್ಞಾನವು ಘಾಟ್‌ನ ದುರ್ಗಮ ಪ್ರದೇಶದಲ್ಲಿರುವ ಟ್ರಾೃಕ್ ಸರ್ಕ್ಯೂಟ್‌ಗಳ ನಿರ್ವಹಣೆಯನ್ನು ಸುಗಮಗೊಳಿಸುತ್ತದೆ ಎಂದು ನೈಋತ್ಯ ರೈಲ್ವೆ ಹಿರಿಯ ವಿಭಾಗೀಯ ಸಿಗ್ನಲ್ ಮತ್ತು ಟೆಲಿಕಮ್ಯುನಿಕೇಶನ್ ಇಂಜಿನಿಯರ್ ಡಿ.ಶ್ರೀನಿವಾಸುಲು ತಿಳಿಸಿದ್ದಾರೆ.

    ಮೇಯೋದಕ್ಕೆ ಬಿಟ್ಟಿದ್ದ ಆರು ಹಸುಗಳ ಪೈಕಿ ಐದರ ಸಾವು ನಿಗೂಢ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts