More

    ತಾಯ್ನಾಡು ಕರೆಸಿಕೊಳ್ಳುತ್ತಿಲ್ಲ, ಭಾರತ ವೀಸಾ ನೀಡುತ್ತಿಲ್ಲ; 55 ದಿನಗಳಿಂದ ವಿಮಾನ ನಿಲ್ದಾಣವೇ ಆತನಿಗೆ ಜಗತ್ತು

    ನವದೆಹಲಿ: ವಿದೇಶಗಳಿಗೆ ಹೋಗುವಾಗ ಕೆಲವೊಮ್ಮೆ ವಿಮಾನ ಬದಲಾವಣೆ ಅಥವಾ ಇನ್ನಿತರ ಕಾರಣಗಳಿಗಾಗಿ ಬೇರೊಂದು ದೇಶದಲ್ಲಿ ಇಳಿಯಬೇಕಾದ ಸಂದರ್ಭ ಎದುರಾಗಬಹುದು. ಆಗ, ಆ ದೇಶವನ್ನು ಪ್ರವೇಶಿಸಲು ಅವಕಾಶವಿರುವುದಿಲ್ಲ. ಆದರೆ, ವಿಮಾನ ನಿಲ್ದಾಣದ ಟ್ರಾನ್ಸಿಟ್​ ಎರಿಯಾದಲ್ಲಿ ಸಂಚರಿಸಬಹುದು. ತಾಸುಗಟ್ಟಲೇ ಒಮ್ಮೊಮ್ಮೆ ದಿನಗಟ್ಟಲೇ ಕಳೆದರೂ ವಿಮಾನ ಹೊರಡದ್ದರೆ, ಟ್ರಾನ್ಸಿಟ್​ ಎರಿಯಾ ಬಿಟ್ಟು ಕದಲುವಂತಿಲ್ಲ.

    ಈಗ ಅಂಥದ್ದೇ ಪರಿಸ್ಥಿತಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನಿಗೆ ಎದುರಾಗಿದೆ. ವಿಶೇಷವೆಂದರೆ ಕಳೆದ 55 ದಿನಗಳಿಂದ ಆತ ಟ್ರಾನ್ಸಿಟ್​ ಎರಿಯಾದಲ್ಲಿ ಕಾಲ ಕಳೆಯುತ್ತಿದ್ದಾನೆ.

    ಇದನ್ನೂ ಓದಿ; ಕೋವಿಡ್​ ಪರಿಹಾರ ನಿಧಿಗೆ ಒಂದು ಕೋಟಿ ರೂ. ನೀಡಿದ ಆದಿಚುಂಚನಗಿರಿ ಶ್ರೀಗಳು

    ಸ್ಟಿವನ್​ ಸ್ಪಿಲ್​ ಬರ್ಗ್​ನ ‘ದಿ ಟರ್ಮಿನಲ್​’ ಸಿನಿಮಾದಂತೆಯೇ ಈತ ಇಲ್ಲಿ ದಿನಗಳನ್ನು ಕಳೆಯುತ್ತಿದ್ದಾನೆ. ವಿಮಾನ ನಿಲ್ದಾಣದ ವಾಷ್​ರೂಂ, ಟಾಯ್ಲೆಟ್​ಗಳನ್ನು ಬಳಸುತ್ತಿದ್ದಾನೆ. ಅಲ್ಲಿನ ಫಾಸ್ಟ್​ಫುಡ್​ ಮಳಿಗೆಯಲ್ಲಿ ದೊರೆಯುವ ಆಹಾರವನ್ನೇ ಸೇವಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾನೆ. ಅಲ್ಲಿನ ಸೋಫಾ, ಕುರ್ಚಿಗಳ ಮೇಲೆ ಮಲಗುತ್ತಿದ್ದಾನೆ. ಅಧಿಕಾರಿಗಳು, ಈತನಿಗೆ ಸೊಳ್ಳೆಪರದೆ, ಟೂತ್​ಪೇಸ್ಟ್​, ಆರಾಮ ಕುರ್ಚಿ ಒದಗಿಸಿದ್ದಾರೆ. ಆಹಾರವನ್ನೂ ನೀಡುತ್ತಿದ್ದಾರೆ.

    ದಿನಪತ್ರಿಕೆ, ಮ್ಯಾಗಜೀನ್​ಗಳನ್ನು ಓದುತ್ತ, ಮನೆಯವರೊಂದಿಗೆ ಫೋನ್​ನಲ್ಲಿ ಮಾತನಾಡುತ್ತ ಕಾಲ ಕಳೆಯುತ್ತಿದ್ದಾನೆ. ಹೌಸ್​ ಕೀಪಿಂಗ್​ ಸಿಬ್ಬಂದಿಯೊಂದಿಗೆ ಹರಟುತ್ತಾನೆ. ಸದ್ಯ ಅಂತಾರಾಷ್ಟ್ರೀಯ ಟ್ರಾನ್ಸಿಟ್​ ಏರಿಯಾದಲ್ಲಿ ಈತನೊಬ್ಬನೇ ಇರುವ ಕಾರಣ ಆ ಚಕ್ರಾಧಿಪತ್ಯಕ್ಕೆ ಈತನೇ ರಾಜ ಎನಿಸಿದ್ದಾನೆ.

    ಇದನ್ನೂ ಓದಿ; ಹೊರ ರಾಜ್ಯ, ವಿದೇಶದಿಂದ ರಾಜ್ಯಕ್ಕೆ ಬರುವವರಿಗೆ ಕಡ್ಡಾಯ ಕ್ವಾರಂಟೈನ್​

    ಅಷ್ಟಕ್ಕೂ ಈತ ಜರ್ಮನಿಯವನು. ಈತನ ಹೆಸರು ಎಡ್ಗರ್​ ಝೀಬಾತ್​. ವಿಯೆಟ್ನಾಂನ ಹನೋಯಿಗೆ ಹೋಗಿದ್ದ. ಅಲ್ಲಿಂದ ಟರ್ಕಿಯ ಇಸ್ತಾನ್​ಬುಲ್​ಗೆ ಪ್ರಯಾಣಿಸಲು ಮಾರ್ಚ್​ 18ರಂದು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಅಷ್ಟರಲ್ಲಾಗಲೇ ಕರೊನಾ ಸೋಮಕು ವ್ಯಾಪಿಸುವುದನ್ನು ತಡೆಗಟ್ಟಲು ಟರ್ಕಿಯಿಂದ ಆಗಮಿಸುವ ಹಾಗೂ ಹೊರಡುವ ವಿಮಾನಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಇದಾದ ನಾಲ್ಕು ದಿನಗಳ ಬಳಿಕ ಎಲ್ಲ ರೀತಿಯ ಅಂತಾರಾಷ್ಟ್ರೀಯ ವಿಮಾನ ಸೇವೆ ಬಂದ್​ ಮಾಡಲಾಯಿತು. ಈ ವೇಳೆ ಈತನೊಂದಿಗೆ ಶ್ರೀಲಂಕಾದ ಇಬ್ಬರು, ಮಾಲ್ಡೀವ್ಸ್​ ಹಾಗೂ ಫಿಲಿಫೈನ್ಸ್​ ತಲಾ ಒಬ್ಬರು ಟ್ರಾನ್ಸಿಟ್​ ಏರಿಯಾದಲ್ಲಿದ್ದರು. ಅವರ ದೇಶಗಳಿಂದ ಬಂದ ವಿಮಾನದಲ್ಲಿ ತಮ್ಮ ದೇಶ ತಲುಪಿಕೊಂಡಿದ್ದಾರೆ. ಆದರೆ, ಜರ್ಮನಿ ಮಾತ್ರ ಈತನನ್ನು ತನ್ನ ದೇಶಕ್ಕೆ ಕರೆಯಿಸಿಕೊಳ್ಳುತ್ತಿಲ್ಲ.

    ಇದಕ್ಕೂ ಒಂದು ವಿಚಿತ್ರ ಹಿನ್ನೆಲೆಯಿದೆ. ಎಡ್ಗರ್​ ವಿರುದ್ಧ ಜರ್ಮನಿಯಲ್ಲಿ ಹಲವು ಕ್ರಿಮಿನಲ್​ ಪ್ರಕರಣಗಳಿವೆ. ವಿದೇಶಿ ನೆಲದಲ್ಲಿ ಇರುವುದರಿಂದ ಆತನನ್ನು ವಶಕ್ಕೆ ಪಡೆಯುವಂತಿಲ್ಲ. ಜರ್ಮನಿಗೆ ಬಂದರಷ್ಟೇ ಆತನನ್ನು ಬಂಧಿಸಬಹುದು. ಈ ಕ್ರಿಮಿನಲ್​ ಪ್ರಕರಣಗಳಿಂದಾಗಿ ಭಾರತವೂ ಆತನಿಗೆ ವೀಸಾ ನೀಡುತ್ತಿಲ್ಲ. ಹೀಗಾಗಿ ಭಾರತವನ್ನು ಪ್ರವೇಶಿಸುವಂತೆಯೂ ಇಲ್ಲ.

    ಇದನ್ನೂ ಓದಿ; ಮೌಂಟ್​ ಎವರೆಸ್ಟ್​ ಬುಡಕ್ಕೂ ಬಂತು ಚೀನಾ ಗಡಿ ತಂಟೆ ವಿವಾದ

    ನಾನು ಪ್ರಯಾಣ ವೆಚ್ಚ ಭರಿಸಬಲ್ಲೆ, ನನ್ನನ್ನು ನನ್ನ ದೇಶಕ್ಕೆ ಕಳುಹಿಸಿಕೊಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾನೆ. ವಿಮಾನ ನಿಲ್ದಾಣದ ಅಧಿಕಾರಿಗಳು ಕೂಡ ಭಾರತ ಪ್ರವೇಶಿಸುವುದನ್ನು ಬಿಟ್ಟು ಆತ ಎಲ್ಲಿಗೆ ಬೇಕಾದರೂ ಹೋಗಬಹುದು. ಇದಕ್ಕೆ ಎಡ್ಗರ್​ಗೆ ಅವಕಾಶವಿದೆ. ಆದರೆ, ಅದಕ್ಕೆ ಅಂತಾರಾಷ್ಟ್ರೀಯ ವಿಮಾನ ಸೇವೆಗಳು ಆರಂಭವಾಗುವವರೆಗೂ ಆತ ಕಾಯಲೇಬೇಕು. ಅಲ್ಲಿಯವರೆಗೆ ವಿಮಾನ ನಿಲ್ದಾಣದ ಟ್ರಾನ್ಸಿಟ್​ ಏರಿಯಾವೇ ಆತನಿಗೆ ಮನೆ, ದೇಶ ಎಲ್ಲವೂ ಆಗಿದೆ.

    ಕಾರ್ಮಿಕರನ್ನು ಬೆಂಗಳೂರಿಗೆ ಕರೆತರಲು ಜಿಲ್ಲೆಗಳಿಂದ ಹೊರಡುತ್ತಿವೆ ವಿಶೇಷ ಬಸ್​ಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts