More

    ಕಾರವಾರ-ಬಿಣಗಾ ಸುರಂಗ ಮಾರ್ಗ ವೀಕ್ಷಿಸಿದ ಪುಣೆಯ ತಜ್ಞರು

    ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಗರದ ಬಿಣಗಾದಿಂದ ಕಾರವಾರ ಶಹರಕ್ಕೆ ತೆರಳುವ 4 ಸುರಂಗ ಮಾರ್ಗಗಳನ್ನು ಪುಣೆಯ ಭೂಗರ್ಭ ಶಾಸ್ತ್ರಜ್ಞರು ಭಾನುವಾರ ವೀಕ್ಷಿಸಿದರು.
    ಪುಣೆಯ ಸಿಒಇಪಿ ಟೆಕ್ನಿಕಲ್ ಯೂನಿವರ್ಸಿಟಿಯ ಭೂಗರ್ಭ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಸ್.ಎ.ಮೆಶ್ರಾಂ ಹಾಗೂ ಅವರ ತಂಡ ಭಾನುವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಎನ್‌ಎಚ್‌ಎಐ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಜತೆ ಸಭೆ ನಡೆಸಿತು. ನಂತರ ನಾಲ್ಕು ಸುರಂಗ ಮಾರ್ಗದ ಹತ್ತಾರು ಸ್ಥಳಗಳಲ್ಲಿ ನೀರು ಸೋರುವಿಕೆ, ಕಲ್ಲು ಸಡಿಲಗೊಂಡಿರುವ ಭಾಗಗಳನ್ನ ಪರಿಶೀಲನೆ ನಡೆಸಿತು. ಆದರೆ, ಈ ಕುರಿತು ಮಾಧ್ಯಮಗಳಿಗೆ ಮಾತನಾಡಲು ಡಾ.ಮೆಶ್ರಾಂ ನಿರಾಕರಿಸಿದರು.
    ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೊನ್ನಾವರ ಯೋಜನಾ ನಿರ್ದೇಶಕ ಎಚ್.ಹರಿಕೃಷ್ಣ, ಶಾಸಕ ಸತೀಶ ಸೈಲ್ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ದುರ್ಗಾದಾಸ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಆಶಾ ಇದ್ದರು.
    ಇದನ್ನೂ ಓದಿ: ಭಟ್ಕಳದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಮಾಡಿ
    ಸ್ಥಳ ಪರಿಶೀಲನೆ ನಂತರ ಮಾತನಾಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಸುರಂಗದ ಒಳಗೆ ಮಳೆಗಾಲದಲ್ಲಿ ನೀರು ಸೋರುತ್ತಿತ್ತು. ಅಕ್ಕಪಕ್ಕದಲ್ಲಿ ಮಣ್ಣು, ಕಲ್ಲು ಕುಸಿದು ಬೀಳುತ್ತಿದ್ದವು. ಇದರಿಂದ ಸುರಂಗ ವಾಹನ ಸಂಚಾರಕ್ಕೆ ಅಸುರಕ್ಷಿತವಾಗಿರುವ ಆತಂಕದಿಂದ ಜು.8 ರಂದಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಸುರಕ್ಷತೆಯ ಬಗ್ಗೆ ಮೂರನೇ ವ್ಯಕ್ತಿ(ಥರ್ಡ್ ಪಾರ್ಟಿ) ಪರಿಶೀಲನೆಗೆ ಎನ್‌ಎಚ್‌ಎಐಗೆ ಪತ್ರ ಬರೆಯಲಾಗಿತ್ತು.
    ಜುಲೈ 15 ರಂದು ಪುಣೆಯ ತಜ್ಞ ಡಾ.ಮೆಶ್ರಾಂ ಬಂದು ಸ್ಥಳ ಪರಿಶೀಲನೆ ನಡೆಸಿ ಜು. 17 ರಂದು ವರದಿ ಸಲ್ಲಿಸಿದ್ದಾರೆ ಎಂದು ಎನ್‌ಎಚ್‌ಎಐ ನಮಗೆ ವರದಿ ನೀಡಿತ್ತು. ಆದರೆ, ಅವರ ಸ್ಥಳ ಭೇಟಿ ಹಾಗೂ ವರದಿಯ ಬಗ್ಗೆ ನಾವು ಅನುಮಾನ ವ್ಯಕ್ತಪಡಿಸಿದ್ದೆವು. ಮೆಶ್ರಾಂ ಅವರು ಬಂದ ಸಂದರ್ಭದಲ್ಲಿ ಎನ್‌ಎಚ್‌ಎಐ ಅಥವಾ ಜಿಲ್ಲಾಡಳಿತದ ಯಾವುದೇ ಅಧಿಕಾರಿಗಳು ಇರಲಿಲ್ಲ. ಇದರಿಂದ ಮತ್ತೊಮ್ಮೆ ಸ್ಥಳ ಭೇಟಿ ಮಾಡಿ ವರದಿ ನೀಡುವ ಷರತ್ತಿನೊಂದಿಗೆ ಕಳೆದ ವಾರ ಪ್ರಯಾಣಿಕರ ಹಿತ ದೃಷ್ಟಿಯಿಂದ ಟನಲ್‌ನಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.
    ಮೆಶ್ರಾಂ ಇಂದಿನ ಸ್ಥಳ ಭೇಟಿ ವೇಳೆ ತಾವು ಹಿಂದೆ ನೀಡಿದ ವರದಿ ಸರಿಯಾಗಿದೆ ಎಂದು ಹೇಳಿದ್ದಾರೆ. ಸೋರುವಿಕೆಯ ಹಾಗೂ ಇನ್ನೂ ಕೆಲವು ಸಮಸ್ಯೆಗಳನ್ನು ಅವರಿಗೆ ವಿವತಿಸಲಾಗಿದೆ. ಅವರು ಇ ಮೇಲ್ ಮೂಲಕ ಸ್ಥಳ ಪರಿಶೀಲನೆಯ ವರದಿ ಹಾಗೂ ಕೆಲವು ಸಲಹೆಗಳನ್ನು ನೀಡುವುದಾಗಿ ತಿಳಿಸಿದ್ದಾರೆ ಎಂದರು.
    ಕಾರವಾರದಿಂದ ಭಟ್ಕಳವರೆಗೆ ಎನ್‌ಎಚ್‌ಎಐ ಖಾಸಗಿ ಕಂಪನಿ ಮೂಲಕ ಕೈಗೊಂಡ ಕಾಮಗಾರಿಯ ಬಗ್ಗೆ ನಮಗೆ ಸಾಕಷ್ಟು ಆಕ್ಷೇಪಗಳಿವೆ ಅಽಕಾರಿಗಳ ಜತೆ ಸ್ಥಳ ಪರಿಶೀಲನೆ ನಡೆಸಿ, ಅವುಗಳನ್ನು ಸರಿಪಡಿಸುವಂತೆ ಸೂಚನೆ ನೀಡಲಾಗುವುದು ಎಂದರು.


    ಚತುಷ್ಪಥ ಸಂಪೂರ್ಣವಾಗಿ ನಿರ್ಮಾಣವಾಗದ ಕಾರಣ ಬಿಣಗಾದಲ್ಲಿ ನಿನ್ನೆ ನಡೆದ ಅಪಘಾತದಲ್ಲಿ ಒಬ್ಬ ಬೈಕ್ ಸವಾರ ಮೃತಪಟ್ಟಿದ್ದಾನೆ. ಜನರ ಸುರಕ್ಷತೆಯ ದೃಷ್ಟಿಯಿಂದ ನಾವು ಸುರಂಗ ಹಾಗೂ ಹೆದ್ದಾರಿಯನ್ನು ಸರಿಯಾಗಿ ನಿರ್ಮಿಸುವಂತೆ ಎನ್‌ಎಚ್‌ಎಐಗೆ ಒತ್ತಾಯಿಸಿದ್ದೇವೆ. ಅಲ್ಲದೆ ಸುರಂಗದ ಸುರಕ್ಷತೆಯ ಬಗ್ಗೆಯೂ ಅವರು ಎರಡನೇ ಬಾರಿ ಸ್ಥಳ ಭೇಟಿ ಮಾಡಿದ್ದಾರೆ. ನಮಗೆ ಕ್ಷೇತ್ರದ ಜನರ ಸುಕ್ಷತೆ ಮುಖ್ಯ.
    ಸತೀಶ ಸೈಲ್
    ಶಾಸಕ, ಕಾರವಾರ-ಅಂಕೋಲಾ ಕ್ಷೇತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts