More

    ಒಂದು ರೂಪಾಯಿಗೆ ಊಟ ನೀಡುವ 2ನೇ ಕ್ಯಾಂಟೀನ್ ಆರಂಭಿಸಿದ ಗೌತಮ್ ಗಂಭೀರ್

    ನವದೆಹಲಿ: ಅಮ್ಮ, ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಒಂದು ರೂಪಾಯಿಗೆ ಊಟ ನೀಡುವ ಮೊದಲ ‘ಜನ್ ರಸೋಯಿ’ ಕ್ಯಾಂಟೀನ್ ಆರಂಭಿಸಿ ಜನಮೆಚ್ಚುಗೆಗೆ ಪಾತ್ರರಾಗಿರುವ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಇದೀಗ, 2ನೇ ಕ್ಯಾಂಟೀನ್‌ಗೆ ಚಾಲನೆ ನೀಡಿದ್ದಾರೆ.

    ಪೂರ್ವ ದೆಹಲಿಯ ಸಂಸದೀಯ ಕ್ಷೇತ್ರದಲ್ಲಿ ಬಡವರಿಗೆ ನೆರವಾಗುವ ಸಲುವಾಗಿ ಗಂಭೀರ್ ಈ ಕ್ಯಾಂಟೀನ್ ಆರಂಭಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಗಾಂಧಿ ನಗರ ಮಾರ್ಕೆಟ್‌ನಲ್ಲಿ ಮೊದಲ ಕ್ಯಾಂಟೀನ್ ಆರಂಭಿಸಿದ್ದರು. ಅಲ್ಲಿ ಇದುವರೆಗೆ 50 ಸಾವಿರ ಜನರಿಗೆ ಊಟ ನೀಡಲಾಗಿದೆ. ನ್ಯೂ ಅಶೋಕ್ ನಗರದಲ್ಲಿ ಮಂಗಳವಾರ 2ನೇ ‘ಜನ್ ರಸೋಯಿ’ ಕ್ಯಾಂಟೀನ್ ಆರಂಭಿಸಲಾಗಿದ್ದು, ಏಕಕಾಲದಲ್ಲಿ 50 ಜನರಿಗೆ ಊಟ ನೀಡುವ ವ್ಯವಸ್ಥೆಯನ್ನು ಹೊಂದಿದೆ. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡ ಈ ಕ್ಯಾಂಟೀನ್‌ಗೆ ಚಾಲನೆ ನೀಡಿದರು.

    ಇದನ್ನೂ ಓದಿ: ಮದುವೆ ಸಮಾರಂಭದಲ್ಲಿ ಚೆನ್ನೈ ಟೆಸ್ಟ್ ಪಂದ್ಯ ನೇರಪ್ರಸಾರ, ಫೋಟೋ ವೈರಲ್

    ‘ದೆಹಲಿಯಲ್ಲಿ ಈ ರೀತಿಯ ಕ್ಯಾಂಟೀನ್ ಆರಂಭಗೊಂಡಿರುವುದು ಇದೇ ಮೊದಲಾಗಿದೆ. ಈಗಾಗಲೆ ಕೆಲವು ರಾಜ್ಯಗಳಲ್ಲಿ ಸರ್ಕಾರದ ಸಬ್ಸಿಡಿಯಿಂದ ಕ್ಯಾಂಟೀನ್ ನಡೆಸಲಾಗುತ್ತಿದೆ. ಇದೀಗ ದೆಹಲಿಯಲ್ಲೂ ಹಸಿದವರಿಗೆ ಕಡಿಮೆ ಹಣದಲ್ಲಿ ಊಟ ಸಿಗುವಂತಾಗಿದೆ. ಇದಕ್ಕಾಗಿ ಸಂಸದ ಗಂಭೀರ್‌ಗೆ ಅಭಿನಂದನೆ ಹೇಳುತ್ತೇನೆ’ ಎಂದು ರಾಜಧಾನಿಯಲ್ಲಿ ಬಿಜೆಪಿ ಉಸ್ತುವಾರಿಯೂ ಆಗಿರುವ ಪಾಂಡ ಹೇಳಿದ್ದಾರೆ. ಉದ್ಘಾಟನೆಯ ಬಳಿಕ ಅವರು ಗಂಭೀರ್ ಜತೆಗೆ ಕ್ಯಾಂಟೀನ್‌ನಲ್ಲಿ ಊಟವನ್ನೂ ಮಾಡಿದರು.

    ‘ಇದು ಬರೀ ಕ್ಯಾಂಟೀನ್ ಅಲ್ಲ. ಒಂದು ಚಳವಳಿ. ಜನರ ಹಸಿವನ್ನು ನೀಗಿಸುವ ಹೋರಾಟ. ನಾನು ಡ್ರಾಮಾ ಮಾಡಲು ರಾಜಕೀಯಕ್ಕೆ ಬಂದಿಲ್ಲ. ಬದಲಾವಣೆ ತರುವುದು ನನ್ನ ಉದ್ದೇಶ. ಅದನ್ನೇ ನಾನು ಮಾಡುತ್ತಿದ್ದೇನೆ. ನನ್ನ ಬಳಿ ಇರುವ ಹಣದಿಂದ ಅಗತ್ಯವಿರುವವರಿಗೆ ನೆರವಾಗುತ್ತಿದ್ದೇನೆ’ ಎಂದು ಗಂಭೀರ್ ಹೇಳಿದ್ದಾರೆ. ಅವರು ಕ್ಯಾಂಟೀನ್‌ಗೆ ಸಂಸದೀಯ ಅನುದಾನವನ್ನು ಬಳಸುತ್ತಿಲ್ಲ. ತಮ್ಮದೇ ಸ್ವಂತ ಹಣವನ್ನು ಮಾತ್ರ ಕ್ಯಾಂಟೀನ್‌ಗೆ ವ್ಯಯಿಸುತ್ತಿದ್ದಾರೆ. ಗಂಭೀರ್ ಕ್ಯಾಂಟೀನ್ ಈಗಾಗಲೆ ನೈರ್ಮಲ್ಯ ಮತ್ತು ಪೌಷ್ಠಿಕ ಆಹಾರ ಪೂರೈಕೆಯಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

    ಆಗ ‘ಕ್ಯಾಪ್ಟನ್ ರಹಾನೆ’ಗೆ ಮೆಚ್ಚುಗೆ, ಈಗ ‘ಬ್ಯಾಟ್ಸ್‌ಮನ್ ರಹಾನೆ’ಗೆ ಟೀಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts