More

    ಗದಗ ಕೆಡಿಪಿ ಸಭೆ: ಸರ್ಕಾರ ಹಣ ಕೊಡೋದಿಲ್ವಾ? ಮತ್ಯಾಕೆ ನೀರು ಪೂರೈಸೋದಿಲ್ಲ: ಎಚ್​.ಕೆ. ಪಾಟೀಲ ತರಾಟೆ……. ಇಂತಿಷ್ಟೇ ಕ್ಷೇತ್ರದಲ್ಲಿ ಬಿತ್ತನೆ ಮಾಡಿದ್ರೆ ಬೆಳೆ ವಿಮೆಗೆ ಅರ್ಹತೆಯೇ? ಸಿ.ಸಿ. ಪಾಟೀಲ ಪ್ರಶ್ನೆ……

    ವಿಜಯವಾಣಿ ಸುದ್ದಿಜಾಲ ಗದಗ
    ಸರ್ಕಾರ ಹಣ ಕೊಡೋದ್ರಲ್ಲಿ ಏನಾದ್ರು ಕಡಿಮೆ ಮಾಡಿದಿಯಾ? ಮತ್ಯಾಕ್ರಿ ನೀರು ಕೊಡ್ತಿಲ್ಲ? ಏನ್ರಿ ನಿಮ್ಮ ಉದ್ದೇಶ? ನೀರು ಪೂರೈಸದ ಗುತ್ತಿಗೆದಾರರಿಗೆ ಸಂರ್ಪೂಣ ಹಣ ಪಾವತಿ ಮಾಡಿದ್ದೇಕೆ?, ಬಾಕಿ ಪಾವತಿ ತಡೆಹಿಡಿಯಿರಿ! ಹೀಗೆಂದು ಅಧಿಕಾರಿಗಳಿಗೆ ಎಚ್​.ಕೆ. ಪಾಟೀಲ ತರಾಟೆ ತೆಗೆದುಕೊಂಡರು.

    ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ಕೆಡಿಪಿ ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು, ಮೇವು ಬ್ಯಾಂಕ್​, ಬೆಳೆ ವಿಮೆ ಮತ್ತು ಬೆಳೆ ಕಟಾವು ಹಾಗೂ ಬೆಳೆವಿಮೆ ಅರ್ಹತೆ ಪಡೆಯಲು ನಿಧಿರ್ಷ್ಟ ವ್ಯಾಪ್ತಿಯ ಜಮೀನಿನಲ್ಲಿ ನಿಗದಿತ ಬೆಳೆ ಬೆಳೆದಿರಬೇಕು ಎಂಬ ನಿಯಮ ಕುರಿತು ಗಂಭೀರ ಚರ್ಚೆ ಜರುಗಿತು. ಈ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಭಾಗದಲ್ಲಿ ಸಮರ್ಪಕ ನೀರು ಪೂರೈಸದ ಗುತ್ತಿಗೆದಾರರ ಬಾಕಿ ಪಾವತಿ ತಡೆ ಹಿಡಿಯಬೇಕು ಎಂದು ಗ್ರಾಮೀಣ ಕುಡಿಯುವ ನೀರು ವಿಭಾಗದ ಅಧಿಕಾರಿಗಳಿಗೆ ಸಚಿವ ಎಚ್​.ಕೆ. ಪಾಟೀಲ ಎಚ್ಚರಿಕೆ ನೀಡಿದರು.

    ಪ್ರತಿನಿತ್ಯ ಗ್ರಾಮೀಣ ಭಾಗಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಗುತ್ತಿಗೆದಾರರಿಗೆ ಸಂರ್ಪೂಣ ಹಣ ಪಾವತಿ ಮಾಡಲಾಗುತ್ತಿದೆ ವಿನಹ ಅವರು ಗುತ್ತಿಗೆಯ ಅರ್ಧದಷ್ಟು ನೀರು ಪೂರೈಕೆ ಮಾಡುತ್ತಿಲ್ಲ. ಅಧಿಕಾರಿಗಳಿಗೆ ಏನಾಗಿದೆ? ನೀರು ಪೂರೈಸಲು ಸರ್ಕಾರ ಹಣ ಕೊಡೋದಿಲ್ವಾ? ಎಂದರು.
    ಗ್ರಾಮೀಣ ನೀರು ಪೂರೈಕೆ ವಿಭಾಗದ ಅಧಿಕಾರಿಗಳು ಈ ಸಮಸ್ಯೆ ಕುರಿತು ವಿವರಿಸಿ, ಗುತ್ತಿಗೆದಾರರು ಶೇ.100 ಹಣ ಪಡೆದು ಶೇ. 50 ರಷ್ಟು ನೀರು ಪೂರೈಸಿದ್ದಾರೆ ಎಂದು ತಪ್ಪೊಪ್ಪಿಕೊಂಡರು?. ಈ ವೇಳೆ ಸಚಿವರು ಮಧ್ಯಪ್ರವೇಶಿಸಿ ಬಾಕಿ ಪಾವತಿ ತಡೆಹಿಡಿಯಬೇಕು. ಜಿಎಸ್​ ಟಿ ಹೊಂದಾಣಿಕೆ ಹಣವನ್ನೂ ತಡೆ ಹಿಡಿಯಿರಿ ಎಂದು ಸೂಚಿಸಿದರು. ಈ ವೇಳೆ ಮಾತನಾಡಿದ ಶಾಸಕ ಸಿ.ಸಿ. ಪಾಟೀಲ, ಮಲಪ್ರಭಾದಲ್ಲಿ ನೀರಿನ ಕೊರತೆ ಎದುರಾಗಲಿದೆ. ಫೆಬ್ರುವರಿ ನಂತರ ನರಗುಂದ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಲಿದೆ. ಈ ಸಮಸ್ಯೆ ಬಗೆ ಹರಿಸುವುದು ಹೇಗೆ ಎಂದು ಪ್ರಶ್ನಿಸಿದರು.
    ಸಚಿವರ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು ಮಲಪ್ರಭಾ ಜಲಾಶಯದಲ್ಲಿ ಪ್ರಸ್ತುತ 12.78 ಟಿಎಂಸಿ ನೀರು ಸಂಗ್ರಹ ಇದೆ. ಜೂನ್​ ವರೆಗೂ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
    ರೋಣ ಶಾಸಕ ಜಿ.ಎಸ್​. ಪಾಟೀಲ ಮಾತನಾಡಿ ರೋಣ, ಗಜೇಂದ್ರಗಡ, ನರೇಗಲ್​ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಮನವರಿಕೆ ಮಾಡಿಕೊಟ್ಟರು. 100 ಕ್ಕೂ ಹೆಚ್ಚು ಕ್ಯೂಸೆಕ್ಸ್​ ನೀರು ಹರಿಬಿಟ್ಟರೆ ಮಾತ್ರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂದರು.

    ಅಮೃತ ಯೋಜನೆ-2 ರಲ್ಲಿ ಒಳಪಡಿಸಿ:
    ಇಪ್ಪತ್ತು ವರ್ಷಗಳ ಹಿಂದೆ ಮೇವುಂಡಿಯಿಂದ ಲಕ್ಷ್ಮೇಶ್ವರ ವರೆಗೂ ನೀರು ಪೂರೈಕೆಗಾಗಿ ಅಳವಡಿಸಿದ ಪೈಪ್​ಲೈನ್​ ಈಗ ಒಡೆದು ಲಿಕೇಜ್​ ಆಗುತ್ತಿದೆ. ಹೀಗಾಗಿ ಲಕ್ಷ್ಮೇಶ್ವರ ಪಟ್ಟಣದಕ್ಕೆ 20 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ ಎಂದು ಶಾಸಕ ಚಂದ್ರು ಲಮಾಣಿ ತಿಳಿಸಿದರು. ಈ ಕುರಿತು ಉತ್ತರಿಸಿದ ಅಧಿಕಾರಿಗಳು ಪೈಪ್​ಲೈನ್​ ದುರಸ್ತಿ ಮಾಡಲು ಆಗದಂತಹ ಪರಿಸ್ಥಿತಿಗೆ ತಲುಪಿದೆ. ಪೈಪ್​ಲೈನ್​ ಬದಲಾಯಿಸಬೇಕು ಎಂದು ಮಾಹಿತಿ ನೀಡಿದರು. ಎಚ್​. ಕೆ. ಪಾಟೀಲ ಪ್ರತಿಕ್ರಿಯಿಸಿ ಅಮೃತ ಯೋಜನೆ 2 ರಲ್ಲಿ ಈ ಯೋಜನೆ ಅಳವಡಿಸಿಕೊಂಡು ಪೈಪ್​ಲೈನ್​ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

    ಕೃಷಿ ಇಲಾಖೆ:
    ಜಿಲ್ಲೆಯಲ್ಲಿ 1.11 ಲಕ್ಷ ರೈತರು ಬೆಳೆವಿಮೆಗೆ ನೋಂದಣಿ ಮಾಡಿದ್ದರು. 1.03 ಲಕ್ಷ ರೈತರಿಗೆ 120 ಕೋಟಿ ಬೆಳೆವಿಮೆ ಬಂದಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ತಿಳಿಸಿದರು. ಈ ವೇಳೆ ಇನ್ನೂಳಿದ 8000 ರೈತರಿಗೆ ಬೆಳೆ ವಿಮೆ ಏಕೆ ಬಂದಿಲ್ಲ ಎಂದು ಎಚ್​.ಕೆ. ಪಾಟೀಲ ಪ್ರಶ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಜಿ.ಎಸ್​. ಪಾಟೀಲ ಬೆಳೆ ವಿಮೆಗೆ ಅರ್ಹತೆ ಪಡೆಯಬೇಕಾದರೆ ಕ್ಷೇತ್ರವೊಂದರಲ್ಲಿ ಬೆಳೆಯನ್ನು ಇಂತಿಷ್ಟು ಕೃಷಿ ಭೂಮಿಗಿಂತ ಹೆಚ್ಚು ಬಿತ್ತನೆ ಮಾಡಬೇಕು ಎಂಬ ನಿಯಮವಿದೆ. ಈ ನಿಯಮದಿಂದ ಹಲವು ರೈತರು ಬೆಳೆವಿಮೆಗೆ ಅನರ್ಹರಾಗಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಈ ವಿಷಯವಾಗಿ ಸಿ.ಸಿ. ಪಾಟೀಲ ಆಕ್ಷೇಪಿಸಿ ಕಡಿಮೆ ಹಿಡುವಳಿ ಇರುವ ರೈತರಿಗೆ ಈ ನಿಯಮ ಅನ್ಯಾಯವಾಗಲಿದೆ. ಬೆಳೆ ವಿಮೆ ಬರುವುದಿಲ್ಲ ಅಂದರೇ ಏನರ್ಥ? ಇಷ್ಟೇ ಜಮೀನಲ್ಲಿ ನಿಧಿರ್ಷ್ಟ ಬೆಳೆ ಬಿತ್ತನೆ ಆಗಬೇಕು ಎಂಬ ನಿಯಮ ತೆಗೆದು ಹಾಕಿ ಎಂದು ಅಧಿಕಾರಿಗಳಿಗೆ ತಿಳಿಸಿದರು. ಇದು ಸರ್ಕಾರದ ಮಟ್ಟದಲ್ಲಿ ನಡೆಯಬೇಕಾದ ಪ್ರಕ್ರಿಯೆ ಎಂದು ಎಚ್​.ಕೆ. ಪಾಟೀಲ ಸ್ಪಷ್ಟಪಡಿಸಿದರು.

    ಅವೈಜ್ಞಾನಿಕ ಬೆಳೆ ಕಟಾವು:
    ಸಭೆಯಲ್ಲಿ ಬೆಳೆ ಕಟಾವು ಪ್ರಯೋಗ ಅವೈಜ್ಞಾನಿಕ ಎಂದು ಸಭೆಯಲ್ಲಿ ಸಚಿವ, ಶಾಸಕರಾದಿಯಾಗಿ ಅಸಮಧಾನ ವ್ಯಕ್ತಪಡಿಸಿದರು. ವೈಜ್ಞಾನಿಕ ರೀತಿಯಲ್ಲಿ ಇಲಾಖೆಯಿಂದ ಬೆಳೆ ಕಟಾವು ಪ್ರಕ್ರಿಯೆ ನಡೆಯುತ್ತಿಲ್ಲ. ರೈತರಿಗೂ ಈ ಬಗ್ಗೆ ಮಾಹಿತಿ ಇರಲೇಬೇಕು. ವಿಮೆ ಪಾವತಿಗೆ ಸಮರ್ಪಕ ಕಟಾವು ಪ್ರಕ್ರಿಯೆ ಜರುಗಬೇಕು. ಕಟಾವು ಪ್ರಕ್ರಿಯೆ ಬಗ್ಗೆ ಕೃಷಿ ಇಲಾಖೆ ಆಗಲಿ, ವಿಮೆ ಕಂಪನಿಯಾಗಲಿ ಸರಿಯಾದ ಉತ್ತರ ನೀಡುವುದಿಲ್ಲ. ಜನಪ್ರತಿನಿಧಿಗಳು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಪ್ರಕ್ರಿಯೆ ಪಾರದರ್ಶಕ ನಡೆಯಬೇಕೆಂಬ ನಿಯಮ ಜಾರಿ ಬರಬೇಕು ಎಂದು ಜನಪ್ರತಿನಿಧಿಗಳು ಒಕ್ಕೋರಲಿನ ಅಭಿಪ್ರಾಯ ತಿಳಿಸಿದರು.

    ಜಿಲ್ಲಾಸ್ಪತ್ರೆ:
    ಕೋವಿಡ್​ ಪರೀಕ್ಷೆ ಮಾಡುವ ಸಿಬ್ಬಂದಿಗಳಿಗೆ ಕಳೆದ ಎರಡು ತಿಂಗಳು ವೇತನ ಪಾವತಿ ಆಗಿಲ್ಲ. ಈ ಹಿನ್ನೆಲೆ ಸಿಬ್ಬಂದಿ ಕೆಲಸ ಬಿಟ್ಟು ಇತರೆ ಜಿಲ್ಲೆಗೆ ತೆರಳುತ್ತಿದ್ದಾರೆ. ಅವರಿಗೆ ವೇತನ ನೀಡಬೇಕು ಎಂದು ಎಸ್​.ವಿ. ಸಂಕನೂರು ಜಿಮ್ಸ್​ ನಿರ್ದೇಶಕರಿಗೆ ಸೂಚಿಸಿದರು. ಕೋವಿಡ್​ ಸಂದರ್ಭದಲ್ಲಿ ಕೌಶಲ್ಯಭರಿತ ಸಿಬ್ಬಂದಿಗಳು ಜಿಲ್ಲೆ ತೊರೆಯದಂತೆ ಎಚ್ಚರವಹಿಸಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಅಧಿಕಾರಿಗಳಿಗೆ ತಿಳಿಸಿದರು.

    ಶಿಕ್ಷಣ ಇಲಾಖೆ:
    ಜಿಲ್ಲೆಯ ಗೋಜನೂರು ವಸತಿ ನಿಲಯ ಕಟ್ಟಡ ನಿರ್ಮಾಣ ಬಗ್ಗೆ ಚರ್ಚೆ ಜರುಗಿ, ಕೇವಲ ಎರಡೇ ಕೊಠಡಿಗಳಿರುವ ಕಾರಣ ವಸತಿ ಅವ್ಯವಸ್ಥೆ ಆಗಿದೆ. 2012 ರಲ್ಲೇ ವಸತಿ ನಿಲಯಕ್ಕೆ ಅನುಮೋದನೆ ದೊರೆತರೂ ಜಾಗೆ ಹಸ್ತಾಂತರ ಮಾಡಿಕೊಳ್ಳಲು ಶಿಕ್ಷಣ ಇಲಾಖೆ 12 ವರ್ಷ ತೆಗೆದುಕೊಂಡಿದೆ. ಆದಷ್ಟು ಬೇಗ ವಸತಿ ನಿಲಯ ಕಟ್ಟಡ ಕಟ್ಟುವ ಅಶ್ಯಕತೆ ಇದೆ ಎಂದು ಶಾಸಕರು ಮನವರಿಕೆ ಮಾಡಿಕೊಟ್ಟರು. ಕಟ್ಟಡ ನಿಮಿರ್ಸಲು ಶಿಕ್ಷಣ ಸಚಿವರಿಂದ ಅನುದಾನ ಒದಗಿಸುವ ಬಗ್ಗೆ ಎಚ್​.ಕೆ. ಪಾಟೀಲ ಭರವಸೆ ನೀಡಿದರು. ಇದೇ ವೇಳೆ, ಸರ್ಕಾರಿ ಶಾಲೆ, ಪಿಯು ಕಾಲೇಜ್​ ಗಳಲ್ಲಿ ಕಡಿಮೆ ವಿದ್ಯಾಥಿಗಳ ದಾಖಲಾತಿ ಬಗ್ಗೆ ಚರ್ಚೆ ಜರುಗಿತು. ಕಡಿಮೆ ದಾಖಲಾತಿ ಆಗಿದೆ ಎಮದ ಮಾತ್ರಕ್ಕೆ ಶಾಲೆಗಳನ್ನು ಮುಚ್ಚುವ, ವರ್ಗಾಯಿಸುವ ಪ್ರಕ್ರಿಯೆ ಸರಿಅಲ್ಲ. ದಾಖಲಾತಿ ಹೆಚ್ಚಾಗಲು ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.

    ಸಭೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​, ಎಸ್ಪಿ ಬಿ.ಎಸ್​. ನೇಮಗೌಡ, ಶಿಖಾ ಸೇರಿದಂತೆ ಹಲವರು ಇದ್ದರು.

    ಮುಖ್ಯಾಂಶಗಳು

    • ನಿಷ್ಕ್ರಿಯ ಖಾತೆ, ಬೆರಳಚ್ಚು ಹೊಂದಾಣಿಕೆ ಆಗದ ಹಿನ್ನೆಲೆ ಜಿಲ್ಲೆಯಲ್ಲಿ 16000 ರೇಷನ್​ ಕಾರ್ಡ್​ದಾರರ ಖಾತೆಗೆ ಆಧಾರ ಜೋಡಣೆ ಆಗಿಲ್ಲ. ಎನ್​ಐಸಿಯು ತಂತ್ರಾಂಶ ಅಭಿವೃದ್ಧಿ ಪಡಿಸುತ್ತಿದೆ. ತಂತ್ರಾಂಶ ಅಭಿವೃದ್ಧಿ ಹೊಂದಿದ ನಂತರ 15 ದಿನಗಳೊಳಗಾಗಿ ಜೋಡಣೆ ಕಾರ್ಯ ರ್ಪೂಣಗೊಳ್ಳುವುದು ಎಂದು ಆಹಾರ ಇಲಾಖೆ ಅಧಿಕಾರಿ ಗಂಗಪ್ಪ ಸಭೆಗೆ ಮಾಹಿತಿ ನೀಡಿದರು.
    • ಕೆಡಿಪಿ ಸಭೆಗೆ ಹಾಜರಾಗದ ಯುಜಿಡಿ ಇಲಾಖಾ ಅಧಿಕಾರಿಗಳಿಗೆ ನೋಟಿಸ್​ ನೀಡಲು ನಿರ್ಣಯಿಸಲಾಯಿತು
    • ನರೇಗಲ್​, ರೋಣ, ಗಜೇಂದ್ರಗಡ ನೀರಿನ ಪೈಪ್​ಲೈನ್​ ದುರಸ್ತಿಗೆ ಗುತ್ತಿಗೆದಾರ ಆಸಕ್ತಿ ತೋರದ ಬಗ್ಗೆ ಶಾಸಕ ಜಿ.ಎಸ್​. ಪಾಟೀಲ ಅಸಮಧಾನ ಹೊರ ಹಾಕಿದರು
    • ಬೆಳೆವಿಮೆ ಸಿಗದ 8 ಸಾವಿರ ರೈತರಿಗೆ ಹೆಸರು ಬೆಳೆ ವಿತರಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.
    • “ಒಂದು ಬೆಳೆ ವಿಮೆಗೆ ಒಳಪಡಲು ನಿಧಿರ್ಷ್ಟ ಹೆಕ್ಟೇರ್​ಗಳಲ್ಲಿ ಬೆಳದಿರಬೇಕು’ ಎಂಬ ಅವೈಜ್ಞಾನಿಕ ನಿಯಮದ ಬಗ್ಗೆ ಸಚಿವಾಲಯದ ಮಟ್ಟದಲ್ಲಿ ಚಚಿರ್ಸಿ ಪರಿಶೀಲಿಸಲು ನಿರ್ಣಯಿಸಲಾಯಿತು.
    • ಬೆಳೆ ಕಟಾವು ಮಾರ್ಗಸೂಚಿಗಳನ್ನು ಸರ್ಕಾರ ಮಟ್ಟದಲ್ಲಿ ಚಚಿರ್ಸಲು ತಿರ್ಮಾನಿಸಲಾಯಿತು. ತಲಾ ಗ್ರಾಪಂ ವ್ಯಾಪ್ತಿಯಲ್ಲಿ ಎರಡೇ ಬೆಳೆ ಪ್ರಯೋಗ ನಿಯಮ ಬಗ್ಗೆಯೂ ಚರ್ಚೆ ನಡೆಸಲು ತೀರ್ಮಾನಿಸಲಾಯಿತು.
    • 15 ದಿನಗಳ ಒಳಗಾಗಿ ರೋಣ ದಲ್ಲಿ ಬೀಜ ಸಂಸ್ಕರಣ ಘಟಕ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ.
    • ಮೇವು ಖರೀದಿಸಲು ಶೀಘ್ರದಲ್ಲೇ ಟೆಂಡರ್​ ಕರೆಯಲು ಸೂಚನೆ.
    • ಜಿಲ್ಲೆಯಲ್ಲಿ ಗೂಳೆ ಹೋಗುವ ತಾಂಡಾ ಜನರ ಮಕ್ಕಳ ಶಿಕ್ಷಣಕ್ಕಾಗಿ ವಸತಿ ನಿಲಯ ಸ್ಥಾಪಿಸಲು ಜಾಗೆ ಗುರುತಿಸಿ ಪ್ರಸ್ತಾವನೆ ಸಲ್ಲಿಸಲು ಸಮಾಜಕಲ್ಯಾಣ ಇಲಾಖೆ ಅಧಿಕಾರಿಗೆ ಸೂಚಿಸಲಾಯಿತು.
    • ಶಕ್ತಿ ಯೋಜನೆಯಿಂದ ನಗರಕ್ಕೆ ಶಾಲೆಗೆ ಬರುವ ಶಾಲಾ ಮಕ್ಕಳಿಗೆ ಅನಾನುಕೂಲ ಆಗಿದೆ. ಸಾರಿಗೆ ಇಲಾಖೆ ಈ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಶಾಲಾ ಸಮಯದಲ್ಲಿ ಹೆಚ್ಚುವರಿ ಬಸ್​ ಮಾರ್ಗ ಸೃಷ್ಟಿಸಿ ಎಂದು ಎಚ್​.ಕೆ. ಪಾಟೀಲ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts