More

    ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ನಯನಾ ಲೆಫ್ಟ್ ರೈಟ್

    ಮೂಡಿಗೆರೆ: ತಾಪಂ ಸಭಾಂಗಣದಲ್ಲಿ ಶುಕ್ರವಾರ ತ್ರೈಮಾಸಿಕ ಕೆಡಿಪಿ ಸಭೆಗೆ ಆಗಮಿಸಿದ ಶಾಸಕಿ ನಯನಾ ಮೋಟಮ್ಮ ಬಹುತೇಕ ಇಲಾಖೆಯ ಅಧಿಕಾರಿಗಳು ಗೈರಾಗಿದ್ದನ್ನು ಕಂಡು ಗರಂ ಆದರು. ಜತೆಗೆ ಬಂದಂತಹ ಬಹುತೇಕರು ಕಿರಿಯ ಅಧಿಕಾರಿಗಳಾಗಿದ್ದನ್ನು ಕಂಡು ಕೆಂಡಾಮಂಡಲರಾದರು. ಈ ವೇಳೆ ತಾಪಂ ಇಒ ದಯಾವತಿ ಕ್ಷಮೆಯಾಚಿಸಿದರೂ, ಸಮಾಧಾನಗೊಳ್ಳದ ಶಾಸಕಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲವೆಂದು ಅಸಮಾಧಾನದಿಂದ ಸಭೆಯಿಂದ ಹೊರ ನಡೆದರು.
    ಕಾರಿನ ಬಳಿ ನಯನಾ ಮೋಟಮ್ಮ ತೆರಳುತ್ತಿದ್ದಂತೆ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರಿದ್ದ ಕಾರು ಶಾಸಕರಿದ್ದ ಸ್ಥಳಕ್ಕೆ ಆಗಮಿಸಿತು. ಬಳಿಕ ಪ್ರಾಣೇಶ್ ಅವರೊಂದಿಗೆ ಮತ್ತೆ ಸಭೆಗೆ ಆಗಮಿಸಿದ ಶಾಸಕಿ ಸಿಟ್ಟಿನಿಂದಲೇ ಮೈಕ್ ಹಿಡಿದು, ಯಾವ ಅಧಿಕಾರಿಗಳೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಜಾತಿ, ಆದಾಯ, ಜನನ, ಮರಣ ಸೇರಿದಂತೆ ವಿವಿಧ ಪ್ರಮಾಣಪತ್ರ ನೀಡಲು ಕೂಡ ಜನರನ್ನು ಸತಾಯಿಸುತ್ತ ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿದ್ದೀರಾ. ಜನ ನನ್ನ ಬಳಿ ಬಂದು ಕಣ್ಣೀರು ಹಾಕುತ್ತಾರೆ. ನಿಮಗೆ ಕೆಲಸ ಮಾಡಲು ಆಗದಿದ್ದರೆ ಏಪ್ರಿಲ್‌ನಲ್ಲಿ ಸಾಮೂಹಿಕ ವರ್ಗಾವಣೆಯಿದೆ. ದಯವಿಟ್ಟು ಇಲ್ಲಿಂದ ವರ್ಗ ಮಾಡಿಸಿಕೊಂಡು ಹೋಗಿ. ಜನರ ಕೆಲಸ ಮಾಡಿಕೊಡಲು ನಿರ್ಲಕ್ಷೃ ತೋರುವವರು ಇಲ್ಲಿ ಇರೋದು ಬೇಡ. 3 ತಿಂಗಳಿಗೊಂದು ಸಭೆ ನಡೆಯಬೇಕಿತ್ತು. ಈಗ 4 ತಿಂಗಳು ಕಳೆದಿದೆ. ಈಗಲೂ ಸಭೆಗೆ ಅಧಿಕಾರಿಗಳು ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
    ತಾಲೂಕಿನಲ್ಲಿ ಬರ ಪರಿಸ್ಥಿತಿಯಿದೆ. ಕುಡಿಯುವ ನೀರಿಗೆ ತೊಂದರೆ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಇನ್ನು ಮೂರು ತಿಂಗಳು ಬೇಸಿಗೆಯಿದೆ. ಬರ ಪರಿಸ್ಥಿತಿ ನಿಭಾಯಿಸಲು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಎಲ್ಲ ಗ್ರಾಪಂ ಸಿದ್ಧವಾಗಿರಬೇಕು. ಕಳಸದ ಕುಂಬಳಡಿಕೆ ಎಂಬಲ್ಲಿ ಕುಡಿಯುವ ನೀರಿಗೆ ತೊಂದರೆಯಿದೆ ಎಂಬ ದೂರು ಬಂದಿದೆ ಎಂದು ಶಾಸಕಿ ನಯನಾ ಮೋಟಮ್ಮ ತಿಳಿಸಿದರು.
    ಎಲ್ಲಿಯೂ ನೀರಿನ ಕೊರತೆ ಎದುರಾಗಿಲ್ಲ. ತೊಂದರೆ ಇರುವ ಕಡೆ ಕೊಳವೆಬಾವಿ ಕೊರೆಸುತ್ತಿದ್ದೇವೆ. ಪ್ರತಿ ಗ್ರಾಪಂನಲ್ಲಿ ಟ್ಯಾಂಕರ್‌ಗಳಿವೆ. ಅವರು ಕೂಡ ನೀರು ಒಗದಿಸುತ್ತಿದ್ದಾರೆ. ಕಳಸದ ಕುಂಬಳಡಿಕೆ ಎಂಬಲ್ಲಿ ಅನಧಿಕೃತವಾಗಿ ಗುಡಿಸಲು ನಿರ್ಮಿಸಿ ವಾಸವಾಗಿದ್ದಾರೆ. ಗ್ರಾಪಂನಿಂದ ನಿವೇಶನ ಒದಗಿಸುವವರೆಗೆ ಅಲ್ಲಿಗೆ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಒದಗಿಸಲು ಅವಕಾಶವಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ನಾಗರಾಜ್ ಮಾಹಿತಿ ನೀಡಿದರು.
    ಇದಕ್ಕೆ ಪ್ರತಿಕ್ರಿಯಿಸಿದ ಎಂ.ಕೆ.ಪ್ರಾಣೇಶ್, ಕೊಳವೆಬಾವಿ ಕೊರೆಸುವುದರಿಂದ ಅಂತರ್ಜಲ ಕ್ಷೀಣಿಸುತ್ತದೆ. ಕೊಳವೆಬಾವಿ ಕೊರೆಸುವ ಮುನ್ನ ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಬೇಕು. ಕೆರೆಗಳ ಹೂಳೆತ್ತಿ ಮಳೆ ನೀರು ಸಂಗ್ರಹಿಸಿದರೆ ಬೇಸಿಗೆಯಲ್ಲಿ ಅಂತರ್ಜಲ ಕಾಯ್ದುಕೊಳ್ಳಬಹುದಾಗಿದೆ ಎಂದರು.

    ಮಂಗನ ಕಾಯಿಲೆ ಮುಂಜಾಗ್ರತೆ ವಹಿಸಿ: ಮಂಗನ ಕಾಯಿಲೆ ಜಿಲ್ಲೆಗೂ ಕಾಲಿಟ್ಟಿದೆ. ಅದರ ತಡೆಗೆ ಏನು ಕ್ರಮಕೈಗೊಂಡಿದ್ದೀರಿ ಎಂದು ಶಾಸಕಿ ನಯನಾ ಮೋಟಮ್ಮ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಇದುವರೆಗೂ ಮಂಗನ ಕಾಯಿಲೆ ರೋಗದ ಲಕ್ಷಣ ಕಂಡುಬಂದಿಲ್ಲ. ಮುಂಜಾಗ್ರತಾ ಕ್ರಮವಾಗಿ ರಕ್ತದ ಮಾದರಿ ಸಂಗ್ರಹಿಸಿ ಶಿವಮೊಗ್ಗ ಲ್ಯಾಬ್‌ಗೆ ಕೊಡುತ್ತಿದ್ದೇವೆ. ಎಲ್ಲ ರೀತಿಯ ಎಚ್ಚರಿಕೆ ವಹಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸುಂದರೇಶ್ ಮಾಹಿತಿ ನೀಡಿದರು. ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ಸಂಖ್ಯೆ ಕಡಿಮೆ ಇರುವುದರಿಂದ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಅಡ್ಡಿಯಾಗಿದೆ. ಪ್ರತಿ ತಿಂಗಳು 70 ಹೆರಿಗೆ ಆಗುವಂತೆ ನೋಡಿಕೊಳ್ಳಬೇಕು ಎಂದು ಶಾಸಕಿ ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಪ್ರಿಯಾಂಕಾಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts