More

    ಗಗನಮುಖಿ ಆಯ್ತು ಹಣ್ಣಿನ ದರ

    ವಿಜಯಪುರ: ಶಿವರಾತ್ರಿ ಉಪವಾಸ ವ್ರತ ಆಚರಿಸುವವರ ಕೈಸುಡುತ್ತಿವೆ ಹಣ್ಣುಗಳು. ಹೌದು, ಶಿವರಾತ್ರಿ ವ್ರತಾಚರಿಸುವವರಿಗೆ ಹಣ್ಣುಗಳೇ ಮುಖ್ಯ ಆಹಾರ. ಆದರೆ, ಮಾರುಕಟ್ಟೆಯಲ್ಲಿನ ಹಣ್ಣುಗಳ ಬೆಲೆ ಕೇಳಿ ಜನ ದಂಗಾಗುತ್ತಿದ್ದಾರೆ. ಲಘು ಪದಾರ್ಥ ಸೇವಿಸಿ ಶಿವಧ್ಯಾನದಲ್ಲಿ ತೊಡಗಬೇಕೆನ್ನುವವರಿಗೆ ಹಣ್ಣುಗಳ ಬೆಲೆ ಧ್ಯಾನ ಭಗ್ನಗೊಳಿಸಿದೆ.
    ಹಣ್ಣುಗಳ ಬೆಲೆ ಹೆಚ್ಚಾದರೆ ರೈತನಿಗೆ ಲಾಭವಲ್ಲವೇ? ಎಂದು ನೀವಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ರೈತನು ಬೆಳೆದ ಹಣ್ಣುಗಳು ದಲ್ಲಾಳಿಗಳ ಪಾಲಾಗಿ ಅವರು ನಿಗದಿಪಡಿಸಿದ ದರಕ್ಕೆ ಮಾರಾಟವಾಗುತ್ತವೆ. ಹಾಗಾಗಿ ಈ ಹಣ್ಣುಗಳು ದಲ್ಲಾಳಿಗಳ ಜೇಬು ತುಂಬಿಸುತ್ತಿವೆ.

    ಹಣ್ಣುಗಳ ದರ ಹೆಚ್ಚಳ: ಹಿಂದಿನಂತೆ ಹಣ್ಣುಗಳ ಗಿಡಗಳು ಇಲ್ಲ. ಬೆಳೆಯುವವರೂ ಕಡಿಮೆ ಎಂಬುದು ವಾಸ್ತವ. ಕೆಲವೇ ಕೆಲ ಹಣ್ಣುಗಳು ಮಾರುಕಟ್ಟೆಗೆ ಬರುತ್ತಿವೆ. ಹಾಗಾಗಿ ದರದಲ್ಲಿ ಹೆಚ್ಚಳ ಕಾಣುತ್ತದೆ. ಆರೋಗ್ಯ ವೃದ್ಧಿಗೆ ಹಣ್ಣು ಅವಶ್ಯಕ. ಅದಕ್ಕಾಗಿ ಬೆಲೆ ದುಬಾರಿಯಾದರೂ ಹಣ್ಣುಗಳ ಬೇಡಿಕೆ ಮಾತ್ರ ಕಮ್ಮಿಯಾಗುತ್ತಿಲ್ಲ.

    ಯಾವ ಹಣ್ಣಿನ ಎಷ್ಟು ಬೆಲೆ?: ಒಂದು ಡಜನ್ ಬಾಳೆ ಹಣ್ಣು 40 ರಿಂದ 50 ರೂ. ಆಗಿದೆ. ಕೆಜಿ ದ್ರಾಕ್ಷಿಗೆ 50 ರಿಂದ 60 ರೂ. ಇನ್ನು ಒಂದು ಸೇಬುಹಣ್ಣಿಗೆ 15 ರಿಂದ 25 ರೂ., ಕಲ್ಲಂಗಡಿ ಗಾತ್ರಕನ್ನುಸಾರ ಬೆಲೆ ನಿಗದಿಯಾಗುತ್ತದೆ. ಪೇರು, ತರಬೂಜ, ಕಿತ್ತಳೆ ಹಣ್ಣುಗಳು ಒಂದಕ್ಕೆ 5 ರಿಂದ 10ರೂ. ಮಾರಾಟವಾಗುತ್ತಿವೆ.

    ಗೆಣಸು, ಖರ್ಜೂರಕ್ಕೆ ಭಾರಿ ಡಿಮಾಂಡ್: ಶಿವರಾತ್ರಿ ನಿಮಿತ್ತ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಕೆಂಪು ಹಾಗೂ ಬಿಳಿ ಗೆಣಸಿಗೆ ಭಾರಿ ಬೇಡಿಕೆ ಬಂದಿದೆ. ಕೆಜಿ ಸಿಹಿ ಗೆಣಸಿಗೆ 40 ರಿಂದ 50 ರೂ. ಹಾಗೂ ಬಿಳಿ ಗೆಣಸಿಗೆ ಕೆಜಿಗೆ 30 ರಿಂದ 40 ರೂ.ಗೆ ತೂಗಲಾಗುತ್ತಿದೆ. ಶಿವರಾತ್ರಿ ನಿಮಿತ್ತ ಖರ್ಜೂರಕ್ಕೂ ಬೇಡಿಕೆ ಹೆಚ್ಚಾಗಿದೆ. ಕೆಜಿ ಖರ್ಜೂರಕ್ಕೆ 80 ರೂ. ದಿಂದ 120 ರೂ.ಗೆ ಮಾರಾಟವಾಗುತ್ತಿದೆ.

    ಹೋಟೆಲ್‌ಗಳಲ್ಲಿ ಸಾಬುದಾನಿ ತಿಂಡಿ: ಪರಶಿವನನ್ನು ಪ್ರತಿಯೊಬ್ಬರೂ ಆರಾಧಿಸುತ್ತಾರೆ. ಹಾಗಾಗಿ ಪ್ರತಿಯೊಬ್ಬರೂ ಶಿವರಾತ್ರಿಯಂದು ಉಪವಾಸ ವ್ರತ ಆಚರಿಸುವುದರಿಂದ ನಗರದ ಬಹುತೇಕ ಹೋಟೆಲ್‌ಗಳು ಅಂದು ಬಿಕೋ ಎನ್ನುತ್ತಿರುತ್ತವೆ. ಅದಕ್ಕಾಗಿ ಕೆಲ ಹೋಟೆಲ್‌ಗಳಲ್ಲಿ ಉಪವಾಸ ವ್ರತ ಆಚರಿಸುವವರಿಗೆಂದೆ ಸಾಬುದಾನಿಯಿಂದ ತಯಾರಿಸಿದ ತಿಂಡಿಗಳನ್ನು ಮಾಡುವ ಮೂಲಕ ತಮ್ಮ ವ್ಯಾಪಾರ ಹೆಚ್ಚಿಸಿಕೊಳ್ಳುತ್ತಿದ್ದಾರೆ.

    ದುಬಾರಿಯಾದರೇನಂತೆ ವರ್ಷಕ್ಕೊಮ್ಮೆ ಬರುವ ಶಿವರಾತ್ರಿ ಆಚರಿಸದೆ ಇರಲಾಗುತ್ತದೆಯೇ? ದೊಡ್ಡವರು ವ್ರತ ಆಚರಿಸುತ್ತೇವೆ. ನಮ್ಮನ್ನು ನೋಡಿ ಮಕ್ಕಳು ವ್ರತಾಚರಣೆಗೆ ಮುಂದಾಗುತ್ತವೆ. ಮಧ್ಯಾಹ್ನದ ಹೊತ್ತಿಗೆ ಹೊಟ್ಟೆ ಚುರ್ ಎಂದಾಗ ನಮ್ಮ ಮನ ಮಮ್ಮಲ ಮರುಗುತ್ತದೆ. ಅವರಿಗಾದರೂ ಒಂದಿಷ್ಟು ಹಣ್ಣು ಖರೀದಿಸಬೇಕಲ್ಲವೇ?
    ಸುಭಾಷ್ ಲಮಾಣಿ, ಹಣ್ಣು ಖರೀದಿದಾರ

    ನಮ್ಮದು ವ್ಯಾಪಾರವೇ ಉದ್ಯೋಗ. ಹಾಗಾಗಿ ಆಯಾ ಸೀಜನ್‌ಗಳಲ್ಲಿ ಆಯಾ ಹಣ್ಣುಗಳನ್ನು ತಂದು ಮಾರಾಟ ಮಾಡುತ್ತೇವೆ. ತೋಟದ ಮಾಲೀಕರು ಹಾಗೂ ದಲ್ಲಾಳಿಗಳು ಯಾವ ರೇಟ್ ಕೊಡುತ್ತಾರೋ ಅದರ ಮೇಲೆ ಒಂದೆರಡು ರೂ. ಹೆಚ್ಚಿಗೆ ಹೇಳಿ ವ್ಯಾಪಾರ ಮಾಡುತ್ತೇವೆ.
    ರಸೀದ್ ಬಾಗವಾನ್, ವ್ಯಾಪಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts