More

    ಅನಾದಿ ಕಾಲದಿಂದಲೂ ಮಠಮಾನ್ಯಗಳಿಂದ ಸಮಾಜಸೇವೆ ನಿರಂತರ – ಮಾಜಿ ಸಚಿವ ಎಚ್.ಎಂ.ರೇವಣ್ಣ ಅಭಿಮತ

    ದೇವದುರ್ಗ ಗ್ರಾಮೀಣ: ಅನಾದಿ ಕಾಲದಿಂದಲೂ ಮಠ, ಮಾನ್ಯಗಳು ಸಮಾಜಸೇವೆ ಮಾಡುತ್ತ ಬಂದಿವೆ. ಆಧುನಿಕ ಯುಗದಲ್ಲೂ ಅನ್ನ, ಅಕ್ಷರ, ವಸತಿ ಜತೆಗೆ ಬಡವರಿಗಾಗಿ ಸಾಮೂಹಿಕ ವಿವಾಹದಂಥ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿದರು.

    ತಾಲೂಕಿನ ಮುಂಡರಗಿ ಗ್ರಾಮದ ಶ್ರೀಶಿವರಾಯ ದೇವಸ್ಥಾನದಲ್ಲಿ ಶುಕ್ರವಾರ ಆಯೋಜಿಸಿದ್ದ 98 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಡವರು ಹಾಗೂ ಮಧ್ಯಮ ವರ್ಗದ ಜನರು ಮದುವೆ ಮಾಡಿಕೊಳ್ಳಲು ಸಾಲವೇ ಮಾಡಬೇಕು. ಇದು ಕುಟುಂಬಕ್ಕೆ ಹೊರೆ ಆಗಲಿದ್ದು, ಇದನ್ನು ಅರಿತು ಪ್ರತಿಯೊಬ್ಬರೂ ಇಂಥ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕು. ಸಿದ್ದಣ್ಣ ತಾತನವರ ಕಾರ್ಯ ಮೆಚ್ಚುವಂಥದ್ದು. ತಮ್ಮ ಮಗನ ಮದುವೆ ಜತೆಗೆ 97 ಜೋಡಿಯ ಉಚಿತ ಮದುವೆ ಮಾಡುತ್ತಿದ್ದಾರೆ. ಇದು ಸಮಾಜಕ್ಕೆ ಮಾದರಿಯಾಗುವ ಕೆಲಸ ಎಂದು ಹೇಳಿದರು.

    ಮಾಜಿ ಸಂಸದ ಬಿ.ವಿ.ನಾಯಕ ಮಾತನಾಡಿ, ದೇವದುರ್ಗ ತಾಲೂಕು ಹಿಂದುಳಿದ ಕ್ಷೇತ್ರವಾಗಿದ್ದು, ಇಲ್ಲಿ ಬಡವರು, ಎಸ್ಸಿ, ಎಸ್ಟಿ ಜನಸಂಖ್ಯೆ ಅಧಿಕವಿದೆ. ಇಂಥ ಜನರಿಗೆ ಸಾಮೂಹಿಕ ವಿವಾಹದಂಥ ಕಾರ್ಯಕ್ರಮ ಉಪಯುಕ್ತವಾಗಿವೆ. ದಾಂಪತ್ಯ ಜೀವನಕ್ಕೆ ಕಾಲಿಡುವ ನವಜೋಡಿಗಳು ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ನಂಬಿಕೆ ಮೇಲೆ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

    ಮುಂಡರಗಿಯ ಶ್ರೀಸಿದ್ದಣ್ಣ ತಾತ, ಶ್ರೀಸದಾಶಿವ ತಾತ, ಶ್ರೀಶಿವಣ್ಣ ತಾತ, ಅಯ್ಯಪ್ಪ ತಾತ, ಶ್ರೀಶಂಭುಲಿಂಗ ತಾತ ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭ 98 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಪುಲ್ವಾಮಾ ದಾಳಿ ನಡೆದು ಒಂದು ವರ್ಷವಾದ ಹಿನ್ನೆಲೆಯಲ್ಲಿ ಹುತಾತ್ಮ ಯೋಧರಿಗೆ ನವದಂಪತಿಗಳು ಸೇರಿ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದರು. ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜಶೇಖರ ನಾಯಕ, ಎಂ.ಈರಣ್ಣ, ಚಂದಪ್ಪ ಬುದ್ದಿನ್ನಿ, ವೆಂಕಟೇಶ ಪೂಜಾರಿ, ಶರಣಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts