More

    ಕಾಂಗ್ರೆಸ್ ಫೈನಲ್ ಪಟ್ಟಿಗೆ ಶುಕ್ರವಾರ ಮುಹೂರ್ತ!

    ನವದೆಹಲಿ: ಲೋಕಸಭೆ ಚುನಾವಣೆಗೆ ಮೊದಲ ಪಟ್ಟಿಯಲ್ಲಿ 8 ಕ್ಷೇತ್ರಗಳ ಟಿಕೆಟ್ ಘೊಷಣೆ ಮಾಡಿ, ಬಳಿಕ 17 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿರುವ ಕಾಂಗ್ರೆಸ್, ಉಳಿದ 4 ಕ್ಷೇತ್ರಗಳಿಗೆ ಶುಕ್ರವಾರ ಬೆಂಗಳೂರಿನಲ್ಲೇ ಆಯ್ಕೆ ನಡೆಸಲಿದೆ. ಬುಧವಾರ ದೆಹಲಿಯಲ್ಲಿ ಸಂಸದ ಡಿಕೆ ಸುರೇಶ್ ನಿವಾಸದಲ್ಲಿ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್, ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ನಡೆಸಿದರೂ, ಆಕಾಂಕ್ಷಿ ಗಳ ತೀವ್ರ ಒತ್ತಡ

    ದಿಂದಾಗಿ ಕಗ್ಗಂಟಾಗಿದೆ. ಹೀಗಾಗಿ, ಶುಕ್ರವಾರ ರಾಜ್ಯದಲ್ಲೇ ಸಭೆ ನಡೆಸಿ ತೀರ್ವನವನ್ನು ವರಿಷ್ಠರ ಜತೆ ಹಂಚಿಕೊಳ್ಳಲಿದ್ದಾರೆ. ನಂತರ ಕೇಂದ್ರ ಚುನಾವಣಾ ಸಮಿತಿ ಜತೆ ಆನ್​ಲೈನ್ ಸಭೆ ನಡೆಸಿ ಪಟ್ಟಿ ಬಿಡುಗಡೆ ಮಾಡಲಿದ್ದಾರೆಂದು ತಿಳಿದು ಬಂದಿದೆ. ಬಾಕಿ ಇರುವ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬಳ್ಳಾರಿ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಳ್ಳಲಾಗಿಲ್ಲ ಎಂದು ತಿಳಿದು ಬಂದಿದೆ. ಚಾಮರಾಜನಗರದಿಂದ ಸಚಿವ ಎಚ್.ಸಿ ಮಹಾದೇವಪ್ಪ ಪುತ್ರನಿಗೆ ಟಿಕೆಟ್ ನೀಡುವ ಬಗ್ಗೆ ರಾಜ್ಯ ನಾಯಕರು ದಿಲ್ಲಿಯಲ್ಲಿ ಚರ್ಚೆ ಮಾಡಿದ್ದಾರೆ. ಆದರೆ ಈ ನಿರ್ಧಾರ ಪ್ರಬಲ ಆಕಾಂಕ್ಷಿ ಮಾಜಿ ಶಾಸಕ ನಂಜುಂಡಸ್ವಾಮಿಗೆ ತೀವ್ರ ಅಸಮಾಧಾನ ತಂದಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರಕ್ಕೆ ಸಭೆ ಮುಂದೂಡಲಾಗಿದೆ.

    ಕೋಲಾರದಿಂದ ತಮ್ಮ ಅಳಿಯನಿಗೆ ಟಿಕೆಟ್ ನೀಡಬೇಕು ಎಂದು ಸಚಿವ ಕೆ.ಎಚ್.ಮುನಿಯಪ್ಪ ಪಟ್ಟು ಹಿಡಿದಿದ್ದಾರೆ. ಆದರೆ, ಕೋಲಾರ ಟಿಕೆಟ್​ಗಾಗಿ ರಾಜ್ಯಸಭೆ ಮಾಜಿ ಸದಸ್ಯ ಎಲ್. ಹನುಮಂತಯ್ಯ ಭಾರಿ ಯತ್ನ ಮಾಡಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಭೇಟಿ ಮಾಡಿದ್ದಾರೆ. ಹನುಮಂತಯ್ಯ ಬೆಂಬಲಿಸುವ ಶಾಸಕರ ಬಣ ಮತ್ತು ಕೆ.ಎಚ್.ಮುನಿಯಪ್ಪ ಸೇರಿ ಎರಡೂ ಕಡೆಯವರು ಸಿಎಂ ಮತ್ತು ಡಿಸಿಎಂ ಭೇಟಿ ಮಾಡಿ ಒತ್ತಡ ಹೇರಿದ್ದಾರೆ.

    ಬಿಜೆಪಿಯಲ್ಲೂ ಸಸ್ಪೆನ್ಸ್: ಇಪ್ಪತ್ತು ಕ್ಷೇತ್ರಗಳಿಗೆ ರಾಜ್ಯದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಬಿಜೆಪಿ, ಬಾಕಿ 5 ಕ್ಷೇತ್ರಗಳಿಗೆ ಕಸರತ್ತು ಮುಂದುವರಿಸಿದೆ. ಈ ಸಂಬಂಧ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬುಧವಾರ ತಡರಾತ್ರಿ ಸಭೆ ನಡೆಸಿ ರ್ಚಚಿಸಿದೆ.

    ಉತ್ತರ ಕನ್ನಡ ಕ್ಷೇತ್ರಕ್ಕೆ ಮಾಜಿ ಸ್ಪೀಕರ್, ಬ್ರಾಹ್ಮಣ ಸಮುದಾಯದ ವಿಶ್ವೇಶ್ವರ ಹೆಗಡೆ ಕಾಗೇರಿ ಹೆಸರು ಕೇಳಿಬಂದಿದ್ದರೂ, ಕ್ಷೇತ್ರದ ಇತರೆ ಜಾತಿ ಮುಖಂಡರಿಂದ ಬಾರೀ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ವರಿಷ್ಠರು ಪುನರ್ ಅವಲೋಕನ ಮಾಡಿದರೂ ಅಚ್ಚರಿ ಇಲ್ಲ ಎನ್ನಲಾಗಿದೆ. ಉ.ಕ. ಕ್ಷೇತ್ರಕ್ಕೆ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಹೆಸರೂ ಚರ್ಚೆಗೆ ಬಂದಿತ್ತು. ಆದರೆ ಕಾಗೇರಿ ಹಿರಿಯ ನಾಯಕರು ಮತ್ತು ಪಕ್ಷಕ್ಕೆ ಹೆಚ್ಚು ಕೊಡುಗೆ ನೀಡಿದ್ದಾರೆ. ಅವರಿಗೆ ಕೊನೆಯದೊಂದು ಅವಕಾಶ ನೀಡಬೇಕೆಂದು ಕೆಲ ನಾಯಕರು ಸಭೆಯಲ್ಲಿ ಪ್ರತಿಪಾದಿಸಿದರು ಎನ್ನಲಾಗಿದೆ.

    ಎಚ್​ಡಿಕೆ ಪತ್ರದ ಅಡಚಣೆ!: ಬಿಜೆಪಿ ವರಿಷ್ಠರ ಭೇಟಿಗಾಗಿ ದೆಹಲಿಗೆ ಬರುವ ಮುನ್ನ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೈಗೆ ಪತ್ರವೊಂದು ಸೇರಿತ್ತು. ಅದನ್ನು ಯಥಾವತ್ ಅಮಿತ್ ಷಾ ಮುಂದಿಟ್ಟದ್ದೇ ರಾಯಚೂರು ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿ ಆಯ್ಕೆ ಕಗ್ಗಂಟಿಗೆ ಕಾರಣ ಎಂದು ಹೇಳಲಾಗುತ್ತಿದೆ. ಯಾವುದೇ ಕಾರಣಕ್ಕೂ ಮಾಜಿ ಸಂಸದ ಬಿ.ವಿ. ನಾಯಕರಿಗೆ ಬಿಜೆಪಿ ಟಿಕೆಟ್ ಕೊಡಬಾರದು ಎಂದು ಪತ್ರದಲ್ಲಿ ಉಲ್ಲೇಖವಾಗಿರುವುದಾಗಿ ಹೇಳಲಾಗ್ತಿದೆ. ಜೆಡಿಎಸ್​ನ ದೇವದುರ್ಗ ಶಾಸಕಿ ಕರೆಮ್ಮ ನಾಯಕ, ಮಾನ್ವಿ ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಜಂಟಿಯಾಗಿ ಪತ್ರ ಬರೆದು ಕುಮಾರಸ್ವಾಮಿಗೆ ನೀಡಿದ್ದರು.

    ಟಿಕೆಟ್​ಗಾಗಿ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಜತೆ ಪೈಪೋಟಿಗೆ ಇಳಿದಿರುವ ಬಿ.ವಿ.ನಾಯಕ ಅವರಿಗೆ ಈ ಪತ್ರ ಅಡ್ಡಗಾಲು ಹಾಕಿದ್ದರೆ, ಮತ್ತೊಬ್ಬ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಕೂಡ ಟಿಕೆಟ್​ಗಾಗಿ ತೆರೆಮರೆ ಪ್ರಯತ್ನ ಮುಂದುವರಿಸಿದ್ದಾರೆ. ಮತ್ತೊಂದೆಡೆ ಬಿ.ವಿ.ನಾಯಕ ಪರ ಬೀಗರಾದ ರಮೇಶ್ ಜಾರಕಿಹೊಳಿ ಒತ್ತಡ ಹೇರಿದ್ದಾರೆ. ಬಳ್ಳಾರಿಯಲ್ಲಿ ನಮ್ಮ ಒಬ್ಬ ಬೀಗ (ದೇವೇಂದ್ರಪ್ಪ)ರನ್ನು ಕೈಬಿಟ್ಟಿರಿ, ಇನ್ನೊಬ್ಬರನ್ನು ಕೈಬಿಡುವುದಿದ್ದರೆ ಬಿಡಿ, ನಿಮ್ಮಿಷ್ಟ ಎಂಬ ಸೂಚ್ಯ ಅಸಹನೆ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಚಿತ್ರದುರ್ಗ ಕ್ಷೇತ್ರದಲ್ಲಿ ಕೇಂದ್ರ ಸಚಿವ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನೀಡುವ ಬಗ್ಗೆ ಗೊಂದಲಗಳಿದ್ದರೂ, ಬೇರೆ ಸಮರ್ಥ ಅಭ್ಯರ್ಥಿಗಳಿಲ್ಲದಿರುವುದು ತಲೆನೋವಾಗಿ ಕಾಡಿದೆ. ಹೀಗಾಗಿ, ಈ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ ಎನ್ನಲಾಗಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಮಾಜಿ ಸಚಿವ ಡಾ. ಸುಧಾಕರ್ ಮತ್ತು ಬಿಜೆಪಿ ಮುಖಂಡ ಎಸ್​ಆರ್ ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ ಮಧ್ಯೆ ಪೈಪೋಟಿ ಮುಂದುವರಿದಿದೆ. ಅಲೋಕ್​ಗೆ ಟಿಕೆಟ್ ಕೊಡಿಸಬೇಕೆಂದು ವಿಶ್ವನಾಥ್ ದೆಹಲಿಗೆ ಬಂದು ಯಡಿಯೂರಪ್ಪನವರ ಮೇಲೆ ಒತ್ತಡ ಹೇರಿದ್ದಾರೆ. ಬೆಳಗಾವಿ ಕ್ಷೇತ್ರದ ಟಿಕೆಟ್​ನ್ನು ಮಾಜಿ ಸಿಎಂ ಜಗದೀಶ ಶೆಟ್ಟರ್​ಗೆ ನೀಡುವ ಬಗ್ಗೆ ವರಿಷ್ಠರೂ ಸಮ್ಮತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚಿತ್ರದುರ್ಗ ಕ್ಷೇತ್ರಕ್ಕೆ ಮಾಜಿ ಸಚಿವ ಗೋವಿಂದ ಕಾರಜೋಳ ಹೆಸರು ಕೂಡ ಚರ್ಚೆಯಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts