More

    ಧ್ಯಾನ್‌ಚಂದ್‌ಗೆ ಭಾರತರತ್ನ ನೀಡಿ, ಹಾಕಿ ವಲಯ ಮತ್ತೊಮ್ಮೆ ಆಗ್ರಹ

    ನವದೆಹಲಿ: ಮೇಜರ್ ಧ್ಯಾನ್‌ಚಂದ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತರತ್ನ ಪ್ರಶಸ್ತಿ ನೀಡಬೇಕೆಂದು ಮಾಜಿ ಮತ್ತು ಹಾಲಿ ಹಾಕಿ ಆಟಗಾರರು ಆಗ್ರಹಿಸಿದ್ದಾರೆ. ಹಾಕಿ ದಿಗ್ಗಜನ 115ನೇ ಜನ್ಮದಿನಾಚರಣೆಗೆ ಕೇವಲ 1 ವಾರ ಬಾಕಿ ಉಳಿದಿರುವ ವೇಳೆ ಈ ಬೇಡಿಕೆ ಮತ್ತೊಮ್ಮೆ ಕೇಳಿಬಂದಿದೆ.

    ಮಾಜಿ ಹಾಕಿ ತಾರೆಯರಾದ ಗುರುಭಕ್ಷ್ ಸಿಂಗ್, ಹರ್ಬಿಂದರ್ ಸಿಂಗ್, ಅಶೋಕ್ ಕುಮಾರ್ ಮತ್ತು ಹಾಲಿ ಆಟಗಾರ ಯುವರಾಜ್ ವಾಲ್ಮಿಕಿ ಅವರು ಶನಿವಾರ ವರ್ಚುವಲ್ ಚರ್ಚೆಯಲ್ಲಿ ಧ್ಯಾನ್‌ಚಂದ್ ಅವರ ವೃತ್ತಿಜೀವನ ಮತ್ತು ಜೀವನದ ಸಾಧನೆಗಳ ಬಗ್ಗೆ ಮಾತನಾಡಿದರು. ಆಗಸ್ಟ್ 29ರಂದು ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನೂ ಆಚರಿಸಲಾಗುತ್ತದೆ.

    ಧ್ಯಾನ್‌ಚಂದ್ ಅವರಿಗೆ ಭಾರತರತ್ನ ನೀಡಬೇಕೆಂದು ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ನಟರಾದ ಬಬುಷಣ್ ಮೊಹಾಂತಿ ಮತ್ತು ರಾಚೆಲ್ ವೈಟ್ ಕಳೆದ ವರ್ಷ ಆರಂಭಿಸಿದ್ದ ಡಿಜಿಟಲ್ ಅಭಿಯಾನದ ಅಂಗವಾಗಿ ಈ ಚರ್ಚೆ ಏರ್ಪಡಿಸಲಾಗಿತ್ತು.

    ಇದನ್ನೂ ಓದಿ: ಅರ್ಜುನ ಪ್ರಶಸ್ತಿ ಪಡೆಯಲು ಯಾವ ಪದಕ ಗೆಲ್ಲಬೇಕು, ಪ್ರಧಾನಿಗೆ ಸಾಕ್ಷಿ ಮಲಿಕ್ ಪ್ರಶ್ನೆ

    ‘ನಮ್ಮ ಪಾಲಿಗೆ ಧ್ಯಾನ್‌ಚಂದ್ ಅವರೇ ದೇವರು. ಅವರೊಂದಿಗೆ ಪೂರ್ವ ಆಫ್ರಿಕಾ ಮತ್ತು ಯುರೋಪ್‌ಗೆ ಒಂದು ತಿಂಗಳ ಪ್ರವಾಸಕ್ಕೆ ತೆರಳಿದ ಅದೃಷ್ಟವಂತರು ನಾವು. ಅವರಂಥ ಉತ್ತಮವಾದ ವ್ಯಕ್ತಿ ಮತ್ತು ದಿಗ್ಗಜ ಆಟಗಾರರನ್ನು ಕಂಡುಕೊಳ್ಳುವುದು ಕಷ್ಟಕರ. ಅವರು ಹುಟ್ಟಿನಿಂದಲೇ ಪರಿಪೂರ್ಣ ಆಟಗಾರರೆನಿಸಿದ್ದರು’ ಎಂದು 85 ವರ್ಷದ ಗುರುಭಕ್ಷ್ ಸಿಂಗ್ ಹೇಳಿದ್ದಾರೆ.

    ಧ್ಯಾನ್‌ಚಂದ್ ಅವರ ಪುತ್ರ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತ ಮಾಜಿ ಹಾಕಿ ಆಟಗಾರ ಅಶೋಕ್ ಕುಮಾರು ಅವರು ತಮ್ಮ ತಂದೆಯ ಬಗ್ಗೆ ಗೊತ್ತಿರದ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ತಂದೆಯವರು ನನ್ನನ್ನು ಮತ್ತು ನನ್ನ ಅಣ್ಣನನ್ನು ಹಾಕಿ ಆಟದಂತೆ ತಡೆಯುತ್ತಿದ್ದರು. ಕ್ರೀಡೆಗೆ ಆರ್ಥಿಕ ನೆರವಿನ ಕೊರತೆಯಿಂದಾಗಿ ಅವರು ಆ ರೀತಿ ಮಾಡಿದ್ದರು ಎಂಬುದು ನಮಗೆ ಬಳಿಕ ತಿಳಿಯಿತು’ ಎಂದು ಅಶೋಕ್ ತಿಳಿಸಿದ್ದಾರೆ.

    1936ರ ಬರ್ಲಿನ್ ಒಲಿಂಪಿಕ್ಸ್ ಫೈನಲ್ ಪಂದ್ಯದ ಬಗ್ಗೆ ವಿವರಿಸಿರುವ ಅಶೋಕ್, ‘ಭಾರಿ ಮಳೆಯಿಂದಾಗಿ 1936ರ ಆಗಸ್ಟ್ 15ಕ್ಕೆ ಫೈನಲ್ ಪಂದ್ಯ ಮುಂದೂಡಲ್ಪಟ್ಟಿತ್ತು. ಭಾರತ ತಂಡ ಮೊದಲಾರ್ಧದಲ್ಲಿ ಕೇವಲ 1 ಗೋಲು ಬಾರಿಸಿತ್ತು. ದ್ವಿತೀಯಾರ್ಧ ಆರಂಭಕ್ಕೆ ಸ್ವಲ್ಪ ಮುನ್ನ ಧ್ಯಾನ್‌ಚಂದ್ ಮತ್ತು ಮತ್ತೋರ್ವ ದಿಗ್ಗಜ ರೂಪ್ ಸಿಂಗ್ ಶೂ ತೆಗೆದಿಟ್ಟು ಬರಿಗಾಲಿನಲ್ಲಿ ಆಡಿದ್ದರು. ಬಳಿಕ ದ್ವಿತೀಯಾರ್ಧದಲ್ಲಿ ಅವರಿಬ್ಬರು 7 ಗೋಲು ದಾಖಲಿಸಿದರು. ಅಂತಿಮವಾಗಿ ಭಾರತ ತಂಡ ಆತಿಥೇಯ ಜರ್ಮನಿ ತಂಡವನ್ನು ಹಿಟ್ಲರ್ ಅವರ ಸಮ್ಮುಖದಲ್ಲಿ 8-1ರಿಂದ ಸೋಲಿಸಿತು’ ಎಂದಿದ್ದಾರೆ.

    ಜರ್ಮನ್ ಲೀಗ್‌ನಲ್ಲಿ 8 ವರ್ಷಗಳ ಕಾಲ ಆಡಿರುವ ಯುವರಾಜ್ ವಾಲ್ಮಿಕಿ, ಧ್ಯಾನ್‌ಚಂದ್ ಅವರ ಪ್ರಭಾವದ ಬಗ್ಗೆ ವಿವರಿಸುತ್ತಾ, ‘ಭಾರತದಲ್ಲಿ ಹಾಕಿ, ಧ್ಯಾನ್‌ಚಂದ್ ಅವರಿಗೆ ಸರಿಸಮಾನ. 100 ವರ್ಷಗಳು ಕಳೆದರೂ ಇದು ಬದಲಾಗದು. ನನಗೆ ಇದುವೇ ದೊಡ್ಡ ಹೆಮ್ಮೆ. ನಾನು ಜರ್ಮನಿಯಲ್ಲಿ ಆಡುತ್ತಿದ್ದಾಗ ಎಲ್ಲರೂ, ಧ್ಯಾನ್‌ಚಂದ್ ಅವರ ದೇಶದಿಂದ ಬಂದಿದ್ದೇನೆ ಎನ್ನುತ್ತಿದ್ದರು’ ಎಂದು ಹೇಳಿದ್ದಾರೆ.

    ಫುಟ್‌ಬಾಲ್ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ ನಿಶ್ಚಿತಾರ್ಥ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts