More

    Web Exclusive | ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಅರಣ್ಯಾಧಿಕಾರಿಗಳ ಎಡವಟ್ಟು; ಪರಿಹಾರವಾಗಿ ಗುತ್ತಿಗೆದಾರನ ಚೆಕ್ ನೀಡಿದ್ದ ಇಲಾಖೆ!

    | ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ

    ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಅರಣ್ಯ ಇಲಾಖೆ ಹೆಸರಿನಲ್ಲಿ ಗುತ್ತಿಗೆದಾರರೊಬ್ಬರ ಚೆಕ್ ನೀಡಿದ್ದು ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ. ಕಾಡಾನೆ ದಾಳಿಯಿಂದ ಮೃತಪಟ್ಟ ಪೇರೂರು ಗ್ರಾಮದ ಮಂಜಾಟ್ ಕಾಲನಿ ನಿವಾಸಿ ಪಾಲೆ ಎಂ. ಅಪ್ಪಣ್ಣ ಅವರ ಅಂಂತ್ಯಸಂಸ್ಕಾರ ಮಾಡಲು ತಕ್ಷಣ ಪರಿಹಾರ ಹಣ ಒದಗಿಸದಿದ್ದಲ್ಲಿ ಅಂತ್ಯಕ್ರಿಯೆ ಮಾಡುವುದಿಲ್ಲ ಎಂದು ಗ್ರಾಮಸ್ಥರು, ಕುಟುಂಬಸ್ಥರು ಪಟ್ಟುಹಿಡಿದಿದ್ದರು. ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಗುತ್ತಿಗೆದಾರನೊಬರ ಚೆಕ್ ನೀಡುವುದರ ಮೂಲಕ ಅರಣ್ಯಾಧಿಕಾರಿಗಳು ಯಡವಟ್ಟು ಮಾಡಿದ್ದಾರೆ.

    ಡಿಸೆಂಬರ್ 28 ರಂದು ರಾತ್ರಿ ಪಕ್ಕದ ಮನೆಯಲ್ಲಿನ ವಿವಾಹದಲ್ಲಿ ಪಾಲ್ಗೊಂಡು, ಮನೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿತ್ತು. ರಾತ್ರಿ 11 ಗಂಟೆಗೆ ನಡೆದ ಈ ದಾಳಿಯಲ್ಲಿ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮದ ಮಂಜಾಟ್ ಕಾಲನಿ ನಿವಾಸಿ ಪಾಲೆ ಎಂ. ಅಪ್ಪಣ್ಣ (48) ಮೃತಪಟ್ಟಿದ್ದರು.

    ಡಿ.29 ರಂದು ಮಡಿಕೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಸಂದರ್ಭ ಸ್ಥಳದಲ್ಲಿದ್ದ ಮುಖಂಡರಾದ ನೆರವಂಡ ಉಮೇಶ್, ಮಚ್ಚೂರ ರವಿ, ಮೃತ ಅಪ್ಪಣ್ಣ ಅವರ ಸಂಬಂಧಿಕರು ಅರಣ್ಯ ಇಲಾಖೆ ತಕ್ಷಣ ಪರಿಹಾರ ನೀಡಬೇಕೆಂದು ಪಟ್ಟುಹಿಡಿದರು. ಸಂಜೆ ಒಳಗೆ 1 ಲಕ್ಷ ರೂ. ಪರಿಹಾರ ನೀಡಲಾಗುವುದೆಂದು ಅರಣ್ಯಾಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಲು ಸಫಲರಾದರು. ಸಂಜೆ ಮಂಜಾಟ್ ಕಾಲನಿಗೆ ಭಾಗಮಂಡಲ ವಿಭಾಗದ ಡಿಆರ್​ಎಫ್​ಒ ಸುರೇಶ್ ತೆರಳಿ, ಮೃತರ ಪತ್ನಿ ಪಿ.ಎ. ಸರೋಜಾ ಅವರ ಹೆಸರಿಗೆ 1 ಲಕ್ಷ ರೂ. ಮೊತ್ತದ ಪರಿಹಾರ ಚೆಕ್ ನೀಡಿದ್ದರು.

    Web Exclusive | ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಅರಣ್ಯಾಧಿಕಾರಿಗಳ ಎಡವಟ್ಟು; ಪರಿಹಾರವಾಗಿ ಗುತ್ತಿಗೆದಾರನ ಚೆಕ್ ನೀಡಿದ್ದ ಇಲಾಖೆ!
    ಕಾಡಾನೆ ದಾಳಿಯಿಂದ ಮೃತಪಟ್ಟ ಮಂಜಾಟ್ ಕಾಲನಿ ನಿವಾಸಿ ಪಾಲೆ ಎಂ. ಅಪ್ಪಣ್ಣ ಅವರ ಪತ್ನಿ ಪಿ.ಎ. ಸರೋಜ ಅವರಿಗೆ ಡಿ.29 ರಂದು ಭಾಗಮಂಡಲ ವಲಯ ಡಿಆರ್​ಎಫ್​ಒ ಸಂತೋಷ್ ಸಮ್ಮುಖದಲ್ಲಿ ಗುತ್ತಿಗೆದಾರ ಎನ್.ಎ. ದೇವಾನಂದ ಅವರ ಚೆಕ್ ಹಸ್ತಾಂತರಿಸಲಾಯಿತು.

    ಅಂತ್ಯ ಸಂಸ್ಕಾರ ನೆರವೇರಿದ ಬಳಿಕ ಪರಿಹಾರ ಚೆಕ್ ಪರಿಶೀಲಿಸಿದಾಗ, ಗುತ್ತಿಗೆದಾರ ಎನ್.ಎ. ದೇವಾನಂದ್ ಅವರಿಗೆ ಸೇರಿದ ಚೆಕ್ ನೀಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ನಾಪೋಕ್ಲು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಮುರುಳಿ ಕರುಂಬಯ್ಯ, ಮಡಿಕೇರಿ ವನ್ಯಜೀವಿ ವಿಭಾಗ ಉಪಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರನ್ನು ದೂರವಾಣಿಯಲ್ಲಿ ಸಂರ್ಪಸಿ ಆಕ್ಷೇಪ ವ್ಯಕ್ತಪಡಿಸಿದ್ದರು.

    ಖಾಸಗಿ ವ್ಯಕ್ತಿಗೆ ಸೇರಿದ ಚೆಕ್ ಅನ್ನು ಅರಣ್ಯ ಇಲಾಖೆ ನೀಡಿರುವುದು ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಡಿ.30 ರಂದು ಡಿಸಿಎಫ್ ಪ್ರಭಾಕರನ್ ಸಹಿ ಮಾಡಿರುವ ಕೂರ್ಗ್ ಫೌಂಡೇಷನ್ ಚೆಕ್ ನೀಡಲಾಯಿತು. ಹಿಂದೆ ನೀಡಿದ್ದ ಚೆಕ್ ಅನ್ನು ಹಿಂಪಡೆಯಲಾಗಿದೆ. ಪ್ರತಿಭಟನಾಕಾರರ ಕಣ್ಣೊರೆಸಲು ಗುತ್ತಿಗೆದಾರನೊಬ್ಬನಿಂದ ಪಡೆದ ಚೆಕ್ ನೀಡಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ.

    ಕಾಡಾನೆ ದಾಳಿಗೆ ಸಿಲುಕಿದವರ ವೈದ್ಯಕೀಯ ವೆಚ್ಚ ಭರಿಸಲು, ತಕ್ಷಣದ ಪರಿಹಾರ ನೀಡುವ ಉದ್ದೇಶದಿಂದ ಅರಣ್ಯಾಧಿಕಾರಿಗಳು, ಜನಪ್ರತಿನಿಧಿಗಳು- ಸಾರ್ವಜನಿಕ ಪ್ರಮುಖರನ್ನೊಳಗೊಂಡಂತೆ ಕೂರ್ಗ್ ಫೌಂಡೇಷನ್ ಅಸ್ತಿತ್ವಕ್ಕೆ ತರಲಾಗಿದೆ. ಮಡಿಕೇರಿ ವನ್ಯಜೀವಿ ವಿಭಾಗದ ಡಿಸಿಎಫ್​ಗೆ ಚೆಕ್ ಸಹಿ ಮಾಡಲು ಅಧಿಕಾರ ನೀಡಲಾಗಿದೆ. ಮಂಜಾಟ್ ನಿವಾಸಿ ಪಾಲೆ ಎಂ.ಅಪ್ಪಣ್ಣ ಅವರ ಪತ್ನಿಗೆ ತಕ್ಷಣ ಪರಿಹಾರ ನೀಡಲು, ಕೂರ್ಗ್ ಫೌಂಡೇಷನ್ ಚೆಕ್​ಗೆ ಸಹಿ ಮಾಡಲು ಡಿಸಿಎಫ್ ಲಭ್ಯ ಇಲ್ಲದಿರುವುದು ಯಡವಟ್ಟಿಗೆ ಕಾರಣವಾಯಿತು.

    Web Exclusive | ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಅರಣ್ಯಾಧಿಕಾರಿಗಳ ಎಡವಟ್ಟು; ಪರಿಹಾರವಾಗಿ ಗುತ್ತಿಗೆದಾರನ ಚೆಕ್ ನೀಡಿದ್ದ ಇಲಾಖೆ!
    ಕಾಡಾನೆ ದಾಳಿಯಿಂದ ಮೃತಪಟ್ಟ ಪಾಲೆ ಎಂ. ಅಪ್ಪಣ್ಣ ಅವರ ಪತ್ನಿಗೆ ಗುತ್ತಿಗೆದಾರ ಎನ್.ಎ. ದೇವಾನಂದ ಅವರ ಚೆಕ್ ನೀಡಿರುವುದು.

    ಅರಣ್ಯ ಇಲಾಖೆ ಹೆಸರಿನಲ್ಲಿ ಅನ್ಯ ವ್ಯಕ್ತಿಯ ಚೆಕ್ ನೀಡಿರುವುದಕ್ಕೆ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರವನ್ನು ಅರಣ್ಯ ಇಲಾಖೆ ಉನ್ನತಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಬೆಂಗಳೂರಿನಲ್ಲಿ ಜ.6 ರಂದು ಕೂರ್ಗ್ ಫೌಂಡೇಷನ್ ಸಭೆ ನಡೆಯಲಿದ್ದು, ಪರಿಹಾರ ನೀಡುವಲ್ಲಿ ಆದ ಯಡವಟ್ಟಿನ ಬಗ್ಗೆ ಶಾಸಕರು ವಿಷಯ ಪ್ರಸ್ತಾಪಿಸಲಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

    ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರಿಗೆ ಸರ್ಕಾರದಿಂದ ನೀಡುವ 7.50 ಲಕ್ಷ ರೂ. ಪರಿಹಾರ, ವೈದ್ಯಕೀಯ ವೆಚ್ಚವನ್ನು ತಕ್ಷಣ ಕೂರ್ಗ್ ಫೌಂಡೇಷನ್​ನಿಂದ ನೀಡಲಾಗುತ್ತದೆ. ಸರ್ಕಾರದಿಂದ ಬಿಡುಗಡೆಯಾಗುವ ಹಣವನ್ನು ಕೂರ್ಗ್ ಫೌಂಡೇಷನ್ ಖಾತೆಗೆ ಜಮಾ ಮಾಡಲಾಗುತ್ತದೆ. ಫೌಂಡೇಷನ್ ಮಾಡಿದ ಖರ್ಚು-ವೆಚ್ಚವನ್ನು ಬೆಂಗಳೂರಿನಲ್ಲಿ ನಡೆಯುವ ಉನ್ನತ ಅರಣ್ಯಾಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕ ಪ್ರಮುಖರೊಳನ್ನೊಳಗೊಂಡ ಸಭೆಯಲ್ಲಿ ಪರಿಶೀಲಿಸಿ ಒಪ್ಪಿಗೆ ನೀಡಿದ ಬಳಿಕ ಖಾತೆಗೆ ಜಮಾ ಮಾಡಲಾಗುತ್ತದೆ.

    ತಕ್ಷಣ ಪರಿಹಾರ ನೀಡಬೇಕಾಗಿತ್ತು. ಕೂರ್ಗ್ ಫೌಂಡೇಷನ್ ಚೆಕ್​ಗೆ ಡಿಸಿಎಫ್ ಸಹಿ ಮಾಡಬೇಕಾಗಿತ್ತು. ಚೆಕ್​ಗೆ ಸಹಿ ಮಾಡಲು ಡಿಸಿಎಫ್​ಗೆ ಸಾಧ್ಯವಾಗಲಿಲ್ಲ. ಇದರಿಂದ ಪರ್ಯಾಯ ಚೆಕ್ ನೀಡಲಾಗಿತ್ತು. ತದನಂತರ ಕೂರ್ಗ್ ಫೌಂಡೇಷನ್ ಚೆಕ್ ಹಸ್ತಾಂತರಿಸಲಾಗಿದೆ.

    | ಹೀರಲಾಲ್ ಪ್ರಭಾರ ಸಿಸಿಎಫ್, ಕೊಡಗು.

    ಎನ್.ಎ.ದೇವಾನಂದ್ ಅವರ ಚೆಕ್ ಅನ್ನು (1 ಲಕ್ಷ ರೂ.) ಡಿ.29 ರಂದು ನೀಡಲಾಯಿತು. ಡಿ.30 ರಂದು ಅರಣ್ಯ ಇಲಾಖೆ ಚೆಕ್ ನೀಡಿ ಮೊದಲು ನೀಡಿದ್ದನ್ನು ಹಿಂಪಡೆದಿದ್ದಾರೆ. ಕಾಪೋರೇಷನ್ ಬ್ಯಾಂಕ್ ಚೆಕ್ ಅನ್ನು ನಗದೀಕರಣಕ್ಕೆ ಹಾಕಲಾಗಿದ್ದು, ಇನ್ನೆರಡು ದಿನದಲ್ಲಿ ಹಣ ಜಮಾ ಆಗಲಿದೆ. ಅಲ್ಲದೆ 1 ಲಕ್ಷ ರೂ. ಅಪ್ಪಣ್ಣ ಅವರ ಪತ್ನಿ ಖಾತೆಗೆ ಬಂದಿದೆ.

    | ಪಾಲೆ ಹರೀಶ್ ಪೂವಯ್ಯ ಮೃತ ಅಪ್ಪಣ್ಣ ಸಂಬಂಧಿ

    ತಂದೆಯ ಆಸ್ತಿಯಲ್ಲಿ ಮಗ ಮನೆ ಕಟ್ಟಿಸಿದರೆ ಮನೆಯ ಪಾಲು ಎಲ್ಲಾ ಮಕ್ಕಳಿಗೂ ಕೊಡಬೇಕಾಗತ್ತಾ?

    ನೆನಪಿರಲಿ, ಹುಡುಗರೂ ಸೇಫ್​ ಅಲ್ಲ… ಕೆಲಸದ ಆಮಿಷ ಒಡ್ಡಿ ಯುವಕನ ಮೇಲೆ ಗ್ಯಾಂಗ್​ರೇಪ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts