More

    ಹೂವಿನಹಡಗಲಿ ತಾಲೂಕಿನಲ್ಲಿ ಮೇವಿಗೆ ಬರವಿಲ್ಲ

    ಮಧುಸೂದನ ಕೆ. ಹೂವಿನಡಹಗಲಿ: . ತುಂಗಭದ್ರಾ ನದಿಯ ಆಸರೆಯಿಂದ ತಾಲೂಕಿನಲ್ಲಿ ಭತ್ತ ಜತೆಗೆ ಜೋಳ, ಬೆಳೆಯಲಾಗುತ್ತಿದ್ದು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಕಂಡುಬರುತ್ತಿಲ್ಲ. ಹೀಗಾಗಿ ಮೇವಿಗೆ ಬರವಿಲ್ಲ

    ಈ ಬಾರಿ ವರುಣನ ಕೃಪೆ ಹೆಚ್ಚಾಗಿದ್ದರಿಂದ ನೀರಿನ ಸಮಸ್ಯೆ ಎಲ್ಲೂ ಕಂಡು ಬಂದಿಲ್ಲ. ಅಲ್ಲದೆ ವರ್ಷ ಪೂರ್ತಿ ಹರಿಯುವ ತುಂಗಭದ್ರೆ ಮೇವಿನ ಸಮಸ್ಯೆಯನ್ನು ನೀಗಿಸಿದೆ. ಮಳೆ ಆಶ್ರಿತ ಪ್ರದೇಶದ ತಾಲೂಕಿನ ಗ್ರಾಮಗಳಿಗೆ ನೀರಾವರಿ ಪ್ರದೇಶದ ಭತ್ತದ ಮೇವು ಆಸರೆಯಾಗಿದೆ.

    ಪಶುಸಂಗೋಪನಾ ಇಲಾಖೆಯಿಂದ ಉಚಿತವಾಗಿ ನೀಡುವ ಬೀಜಗಳನ್ನು ನೀರಾವರಿ ಕೃಷಿಭೂಮಿಯಲ್ಲಿ ಬಿತ್ತಲಾಗುತ್ತಿದೆ. ಇನ್ನು ಕೆಲ ರೈತರು ಬಹುವಾರ್ಷಿಕ ಮೇವಿನ ಬೆಳೆಯನ್ನು ಅಳವಡಿಸಿಕೊಂಡಿದ್ದರಿಂದ ಹೈನುಗಾರಿಕೆಗೆ ಉತ್ತೇಜನ ದೊರೆತಿದೆ.

    ಹೊರ ಜಿಲ್ಲೆಯಲ್ಲಿ ಡಿಮಾಂಡ್

    ಹೂವಿನಹಡಗಲಿ ತಾಲೂಕಿನಲ್ಲಿ ಭತ್ತ, ಜೋಳ, ಕಡಲೆ ಹಾಗೂ ಮೆಕ್ಕೆಜೋಳ ಬೆಳೆಯಲಾಗುತ್ತಿದೆ. ರೈತರು ತಮಗೆ ಬೇಕಾದಷ್ಟನ್ನು ಶೇಖರಿಸಿಟ್ಟುಕೊಂಡು ಉಳಿದ ಹುಲ್ಲನ್ನು ಮಾರಾಟ ಮಾಡುವ ಮೂಲಕ ಆದಾಯವನ್ನು ಕಂಡುಕೊಂಡಿದ್ದಾರೆ. ನೀರಾವರಿ ಅಲ್ಲದ ಗ್ರಾಮಗಳ ರೈತರು ಹೆಚ್ಚಿನ ಹಣ ನೀಡಿ ಮೇವನ್ನು ಖರೀದಿಸುತ್ತಿದ್ದಾರೆ. ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹಾವೇರಿ, ಗದಗ ಸೇರಿ ಇತರೆ ಭಾಗಗಳಿಗೂ ಹುಲ್ಲು ಮಾರಾಟವಾಗುತ್ತದೆ.

    ಹೂವಿನಹಡಗಲಿ ತಾಲೂಕಿನಲ್ಲಿ ವಿನೂತನ ಯೋಜನೆ

    ಮೇವಿನ ಸಮಸ್ಯೆಯನ್ನು ನೀಗಿಸಲು 2016 ಮತ್ತು 2018 ರಲ್ಲಿ ಮೇವಿನ ಬ್ಯಾಂಕ್ ಸ್ಥಾಪನೆ ಮಾಡಲಾಗಿತ್ತು. 7 ವರ್ಷಗಳ ಹಿಂದೆ ತಾಲೂಕಿನ ಮಳೆ ಆಶ್ರಿತ ಪ್ರದೇಶದ ಗ್ರಾಮಗಳಲ್ಲಿ ಮೇವಿನ ಸಮಸ್ಯೆ ಉಲ್ಬಣಗೊಂಡಿತ್ತು. ಆಗ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಜಂಟಿಯಾಗಿ ಪಶುಸಂಗೋಪನಾ ಇಲಾಖೆಯ ಮಾಹಿತಿಯನ್ನು ಆಧರಿಸಿ ತಾಲೂಕಿನ ಇಟ್ಟಿಗಿ ಗ್ರಾಮದ ಬಳಿ ಮೇವಿನ ಬ್ಯಾಂಕ್‌ನ್ನು ಸ್ಥಾಪನೆ ಮಾಡುವ ಮೂಲಕ ರೈತರಿಗೆ ಉಚಿತವಾಗಿ ಮೇವಿನ ಸೌಲಭ್ಯವನ್ನು ಒದಗಿಸಿತ್ತು.

    ಟ್ರಾೃಕ್ಟರ್ ಬಾಡಿಗೆ, ಕೂಲಿ ದುಬಾರಿ

    ಟ್ರಾೃಕ್ಟರ್ ಮೇವಿಗೆ ವಾಹನದ ಬಾಡಿಗೆ ಮತ್ತು ತುಂಬುವ ಕೂಲಿ ಸೇರಿ ಕನಿಷ್ಠ 12 ಸಾವಿರ ರೂ ತಗಲುತ್ತದೆ. ರೈತರಿಂದ ಮೇವನ್ನು ಖರೀದಿ ಮಾಡುವ ಮಧ್ಯವರ್ತಿಗಳು ಹೆಚ್ಚು ಲಾಭಕ್ಕೆ ಹುಲ್ಲನ್ನು ಮಾರಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ. ಇಲ್ಲಿ ಹಲ್ಲು ಉದ್ಯಮವಾಗಿ ಬೆಳೆದು ನಿಂತಿದೆ. ಹೀಗಾಗಿ ಹೈನುಗಾರಿಕೆಯನ್ನೇ ಆಧಾರಿಸಿರುವ ಬಡ ರೈತರ ಕುಟುಂಬಗಳು ಸಂಕಷ್ಟ ಪಡುವಂತಾಗಿದೆ.

    ಮೇವಿನ ಕೊರತೆ ಇಲ್ಲ

    ಹೂವಿನಹಡಗಲಿ ತಾಲೂಕಿನಲ್ಲಿ ಹಸು, ಎಮ್ಮೆ ಸೇರಿ 53,855 ಜಾನುವಾರುಗಳಿವೆ. 1,49,467 ಕುರಿ, ಮೇಕೆಗಳು ಇವೆ. ಜಾನುವಾರುಗಳನ್ನು ರೈತರು ಹೊಲ ಮತ್ತು ಮನೆಯ ದನದ ಶೆಡ್ ನಿರ್ಮಿಸಿಕೊಂಡು ಸಾಕಾಣಿಕೆ ಮಾಡುತ್ತಿದ್ದಾರೆ. ಇನ್ನು ಕುರಿ ಮತ್ತು ಮೇಕೆಗಳನ್ನು ಸಾಕುವ ಮೂಲಕ ಸಮಗ್ರ ಕೃಷಿಯನ್ನು ಅನುಸರಿಸಿ ಜೀವನವನ್ನು ಕಟ್ಟಿಕೊಂಡಿದ್ದಾರೆ.

    ಹೂವಿನಹಡಗಲಿ ಸಮೀಪದ ಹೊಳಲಿನಲ್ಲಿ ದಿನಕ್ಕೆ 4000 ಲೀಟರ್ ಹಾಲು ಉತ್ಪಾದನೆ

    ತಾಲೂಕಿನಲ್ಲಿ ಒಟ್ಟು 70 ಹಾಲು ಉತ್ಪಾದಕರ ಸಂಘಗಳಿವೆ. 4,243 ಹಾಲು ಉತ್ಪಾದಕರಿದ್ದಾರೆ. ತಾಲೂಕಿನ ಇಟ್ಟಿಗಿ, ಉತ್ತಂಗಿ, ಸೋಗಿ, ತಳಕಲ್ಲು, ನಂದಿಹಳ್ಳಿ, ಮುದೇನೂರು, ಎಂ.ಪಿ.ಪಿ.ನಗರ, ಹಿರೇಹಡಗಲಿ, ಹೊಳಲುಗಳಲ್ಲಿ ಹೆಚ್ಚಿನ ಹಾಲು ಉತ್ಪಾದನೆಯಾಗುತ್ತದೆ. ಹೊಳಲು ಗ್ರಾಮದವೊಂದರಲ್ಲಿ ವ್ಯಾಪ್ತಿಯಲ್ಲಿ ದಿನಕ್ಕೆ 4 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುವುದು ಗಮನಾರ್ಹ.


    ಹೂವಿನಹಡಗಲಿ ತಾಲೂಕು ನೀರಾವರಿ ಪ್ರದೇಶವಾಗಿದ್ದರಿಂದ ಮೇವಿನ ಕೊರತೆಯಾಗಿಲ್ಲ. ಏಳು ವರ್ಷಗಳ ಹಿಂದೆ ಮೇವಿನ ಕೊರತೆಯಾಗಿತ್ತು. ಆಗ ಮೇವಿನ ಬ್ಯಾಂಕ್ ಸ್ಥಾಪಿಸಿ ರೈತರಿಗೆ ಉಚಿತವಾಗಿ ಮೇವನ್ನು ವಿತರಿಸಲಾಗಿತ್ತು.ಈಗ ಮೇವಿನ ಸಮಸ್ಯೆಯಾಗದಂತೆ ಮುಂಜಾಗೃತಾ ಕ್ರಮಗೊಳ್ಳಲಾಗಿದೆ.
    ನಾರಾಯಣ ಬಣಕಾರ್, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಹೂವಿನಹಡಗಲಿ

    ಹೂವಿನಹಡಗಲಿ ತಾಲೂಕಿಗೆ ಹೊಂದಿಕೊಂಡು ತುಂಗಭದ್ರಾ ನದಿ ಹರಿಯುವುದರಿಂದ ಮೇವಿನ ಸಮಸ್ಯೆ ಇಲ್ಲ. ಹುಲ್ಲಿನ ಬರ ಇಲ್ಲ ಎಂದು ಪಶುಸಂಗೋಪನಾ ಇಲಾಖೆ ವರದಿ ಸಲ್ಲಿಸಿದೆ. ಈ ಭಾಗದಲ್ಲಿ ಮೇವಿನ ಕೊರತೆಯಾಗುವ ಸಾಧ್ಯತೆ ಕಡಿಮೆ.
    ಕೆ.ಶರಣಮ್ಮ, ತಹಸೀಲ್ದಾರ್ ಹೂವಿನಹಡಗಲಿ

    ತಾಲೂಕಿನಲ್ಲಿ ಬೇಸಿಗೆ ಸಂದರ್ಭದಲ್ಲಿ ಹಸಿ ಮೇವಿನ ಸಮಸ್ಯೆ ಎದುರಾಗುತ್ತದೆ. ಉಳಿದಂತೆ ತಾಲೂಕಿನಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮೇವು ಉತ್ಪಾದನೆಯಾಗುವುದರಿಂದ ಒಣಮೇವಿಗೆ ಸಮಸ್ಯೆ ಇಲ್ಲ. ಆದರೆ ಮೇವಿನ ಸಾಗಣೆ ವೆಚ್ಚ ಹೆಚ್ಚಾಗಿದ್ದರಿಂದ ರೈತರಿಗೆ ಹೊರೆಯಾಗುತ್ತಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕಡಿವಾಣ ಹಾಕಬೇಕಾಗಿದೆ.
    ಡಿ.ಎಂ.ವೀರೇಶ, ಅಧ್ಯಕ್ಷ ಹಾಲುಉತ್ಪಾದಕರ ಸಂಘ ದೇವಗೊಂಡನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts