More

    ಲೋಕಸಭೆಯಲ್ಲಿ ಐವರು ಕಾಂಗ್ರೆಸ್​ ಸಂಸದರು; ರಾಜ್ಯಸಭೆಯಲ್ಲಿ ಟಿಎಂಸಿಯ ಡೆರೆಕ್​ ಅಮಾನತು

    ನವದೆಹಲಿ: ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಐವರು ಕಾಂಗ್ರೆಸ್ ಸಂಸದರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸುವ ನಿರ್ಣಯವನ್ನು ಲೋಕಸಭೆಯು ಗುರುವಾರ ಅಂಗೀಕರಿಸಿದೆ. ಇದೇ ವೇಳೆ ರಾಜ್ಯಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರೇನ್ ಅವರನ್ನು ಸಸ್ಪೆಂಡ್​ ಮಾಡಲಾಗಿದೆ.

    ಸ್ಪೀಕರ್ ಸೂಚನೆಯ ಹಿನ್ನೆಲೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಐವರನ್ನು ಅಮಾನತುಗೊಳಿಸುವ ನಿರ್ಣಯವನ್ನು ಗದ್ದಲದ ನಡುವೆಯೇ ಲೋಕಸಭೆಯಲ್ಲಿ ಮಂಡಿಸಿದರು.

    ಈ ಸದನ ಮತ್ತು ಈ ಪೀಠದ ಅಧಿಕಾರವನ್ನು ಸಂಪೂರ್ಣವಾಗಿ ಕಡೆಗಣಿಸಿ ದುರ್ವರ್ತನೆ ತೋರಿದ್ದಕ್ಕಾಗಿ ಹಾಗೂ ಸ್ಪೀಕರ್ ಸೂಚಿಸಿದ ಹಿನ್ನೆಲೆಯಲ್ಲಿ ಟಿ.ಎನ್.ಪ್ರತಾಪನ್, ಹೈಬಿ ಈಡನ್, ಜ್ಯೋತಿಮಣಿ, ರಮ್ಯಾ ಹರಿದಾಸ್ ಮತ್ತು ಡೀನ್ ಕುರಿಯಾಕೋಸ್ ಕುರ್ಯಕಸ್ ಅವರನ್ನು ಅಧಿವೇಶನದ ಉಳಿದ ಅವಧಿಗೆ ಲೋಕಸಭೆಯಿಂದ ಅಮಾನತುಗೊಳಿಸುವ ನಿರ್ಣಯ ಮಂಡಿಸಲಾಗಿದೆ ಎಂದು ಜೋಶಿ ಹೇಳಿದರು.

    ರಾಜ್ಯಸಭೆಯಲ್ಲಿ:

    ಲೋಕಸಭೆಯ ಭದ್ರತಾ ಲೋಪ ಘಟನೆಯ ಕುರಿತು ಕೋಲಾಹಲದ ನಡುವೆ ಸದನದ ಅಧ್ಯಕ್ಷರೊಂದಿಗೆ ಮುಖಾಮುಖಿಯಾದ ನಂತರ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರಿಯಾನ್ ಅವರನ್ನು ಕೂಡ ದುರ್ವರ್ತನೆಗಾಗಿ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.

    ಗುರುವಾರ ರಾಜ್ಯಸಭೆ ಕಲಾಪ ಆರಂಭವಾದ ಒಂದು ಗಂಟೆಯ ವೇಳೆ ವಿರೋಧ ಪಕ್ಷದ ಸಂಸದರು ಸದನದ ಬಾವಿಗೆ ನುಗ್ಗಿ, ಸಂಸತ್ತಿನ ಭದ್ರತಾ ಲೋಪದ ಕುರಿತು ಚರ್ಚೆ ನಡೆಸುವಂತೆ ಒತ್ತಾಯಿಸಿದರು. ಪ್ರತಿಪಕ್ಷದ ಸಂಸದರು ಭದ್ರತಾ ಉಲ್ಲಂಘನೆಯ ಕುರಿತು ಚರ್ಚಿಸಲು ದಿನದ ಇತರ ಕಲಾಪ ಸ್ಥಗಿತಗೊಳಿಸುವಂತೆ ಕೋರಿ 28 ನೋಟಿಸ್‌ಗಳನ್ನು ಸಲ್ಲಿಸಿದರು.

    ಸಭಾಪತಿ ಜಗದೀಪ್ ಧನಖರ್ ಅವರು ನೋಟಿಸ್‌ಗೆ ಅನುಮತಿ ನೀಡದಿದ್ದಾಗ, ವಿರೋಧ ಪಕ್ಷದ ಸಂಸದರು ಸದನದ ಬಾವಿಗೆ ತೆರಳಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉತ್ತರಕ್ಕೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಸಂಸದರ ಅಶಿಸ್ತಿನ ವರ್ತನೆಯನ್ನು ಖಂಡಿಸಿದ ಧನಖರ್ ಅವರು, ಇದು ನಿಯಮಗಳ ಉಲ್ಲಂಘನೆಯಾಗಿದೆ ಎಂದರು.

    ಈ ಹಂತದಲ್ಲಿ, ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರೇನ್ ಅವರು ಸಭಾಪತಿಗಳ ಕುರ್ಚಿಯ ಮುಂಭಾಗದ ಪ್ರದೇಶಕ್ಕೆ ತೆರಳಿ ತಮ್ಮ ತೋಳುಗಳನ್ನು ಮೇಲೆತ್ತಿದರು.

    ಇದರಿಂದ ಕೆರಳಿದ ಧನಖರ್​ ಅವರು ಓ’ಬ್ರಿಯಾನ್ ಅವರನ್ನು ಹೆಸರಿಸಿ ಸದನದಿಂದ ಹೊರಹೋಗಬೇಕು ಎಂದು ಹೇಳಿದರು. ಅಧ್ಯಕ್ಷರು ಹೆಸರಿಸಿದ ವ್ಯಕ್ತಿಯು ದಿನದ ಕಲಾಪದಿಂದ ಹಿಂದೆ ಸರಿಯಬೇಕಾಗುತ್ತದೆ. ಧನಖರ್ ಅವರು ಡೆರೆಕ್ ಒ’ಬ್ರಿಯಾನ್ ಅವರ ನಡವಳಿಕೆಯನ್ನು ಅಧ್ಯಕ್ಷರ ಧಿಕ್ಕಾರ ಮತ್ತು ಗಂಭೀರ ದುರ್ನಡತೆ ಎಂದೂ ಟೀಕಿಸಿದರು.

    ತರುವಾಯ, ಮೇಲ್ಮನೆಯು ಅಧಿವೇಶನದ ಉಳಿದ ಅವಧಿಗೆ ಓ’ಬ್ರೇನ್ ಅವರನ್ನು ಅಮಾನತುಗೊಳಿಸಲು ಸದನದ ನಾಯಕ ಪಿಯೂಷ್ ಗೋಯಲ್ ಮಂಡಿಸಿದ ನಿರ್ಣಯವನ್ನು ಅಂಗೀಕರಿಸಲಾಯಿತು.

    ‘ಸಿಂಗ್ ಈಸ್ ಕಿಂಗ್’: ಹೀಗೆ ಶಶಿ ತರೂರ್ ಶ್ಲಾಘಿಸಿದ ಸಂಸದ ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts