More

    ವರ್ಷದಲ್ಲಿ ಐದು ಚಂಡಮಾರುತ, ‘ತೌಕ್ತೆ’ಯಿಂದ ಆರಂಭ ‘ಜವಾದ್’ನಲ್ಲಿ ಅಂತ್ಯ

    ಭರತ್ ಶೆಟ್ಟಿಗಾರ್ ಮಂಗಳೂರು

    ಪ್ರಸಕ್ತ ಸಾಲಿನ ಮಳೆ ಕ್ಯಾಲೆಂಡರ್ ಮುಕ್ತಾಯದ ಹಂತಕ್ಕೆ ತಲುಪಿದ್ದು, ಈ ಬಾರಿ ಭಾರತದಲ್ಲಿ ಒಟ್ಟು ಐದು ಚಂಡಮಾರುತಗಳು ಕಾಣಿಸಿಕೊಂಡಿವೆ. ಈ ಪೈಕಿ ಎರಡು ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದರೆ, ಮೂರು ಬಂಗಾಳ ಕೊಲ್ಲಿಯಲ್ಲಿ. ಆ ಮೂಲಕ ಸತತ ಎರಡನೇ ವರ್ಷ ಭಾರತದಲ್ಲಿ ಐದು ಚಂಡಮಾರುತಗಳು ಎದ್ದಂತಾಗಿವೆ.

    ಮಳೆಗಾಲಕ್ಕೆ ಮುನ್ನ ಅಂದರೆ ಮೇಯಲ್ಲಿ ಅರಬ್ಬಿ ಸಮುದ್ರದಲ್ಲಿ ಮೊದಲ ಚಂಡಮಾರುತ ‘ತೌಕ್ತೆ’ ಕಾಣಿಸಿಕೊಂಡಿತ್ತು. ಪರಿಣಾಮ ಸುರಿದ ಭಾರಿ ಗಾಳಿ ಮಳೆಗೆ ದ.ಕ, ಉಡುಪಿ, ಉತ್ತರ ಕನ್ನಡ ಜಿಲ್ಲಾದ್ಯಂತ ಸಾಕಷ್ಟು ಕೃಷಿ, ಸೊತ್ತು ಸಹಿತ ಪ್ರಾಣ ಹಾನಿಯೂ ಸಂಭವಿಸಿತ್ತು. 1998ರ ಗುಜರಾತ್ ಚಂಡಮಾರುತದ ಬಳಿಕ ಪಶ್ಚಿಮ ಕರಾವಳಿಯಲ್ಲಿ ಕಾಣಿಸಿಕೊಂಡ ಅತ್ಯಂತ ಭೀಕರ ಚಂಡಮಾರುತ. ಮೇ 14ರಂದು ವಾಯುಭಾರದ ಕುಸಿತದಿಂದ ಚಂಡಮಾರುತವಾಗಿ ಬದಲಾಗಿ ಮೇ 19ರಂದು ಗುಜರಾತ್ ಮೂಲಕ ಭೂ ಭಾಗವನ್ನು ಪ್ರವೇಶಿಸಿದೆ. ಗಾಳಿಯ ವೇಗ ಗರಿಷ್ಠ 185 ಕಿ.ಮೀ.ವರೆಗೆ ಇತ್ತು.

    ಅಚ್ಚರಿಯ ಬೆಳವಣಿಗೆ: ಬಳಿಕ ನವೆಂಬರ್‌ನಲ್ಲಿ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವೊಂದು ಉಂಟಾದರೂ, ಅದು ಚಂಡಮಾರುತವಾಗಿ ಬದಲಾಗಿಲ್ಲ. ಈ ನಡುವೆ ಸೆಪ್ಟೆಂಬರ್ ಅಂತ್ಯ ಅಕ್ಟೋಬರ್ ಆದಿಯಲ್ಲಿ ಅರಬ್ಬಿ ಸಮುದ್ರದಲ್ಲಿ ‘ಶಾಹೀನ್’ ಚಂಡಮಾರುತ ಉಂಟಾಗಿತ್ತು. ಇದರ ಮೂಲ ಬಂಗಾಳ ಕೊಲ್ಲಿ ಎಂಬುದು ವಿಶೇಷತೆ. ವ್ಯಾಪಕ ಹಾನಿಗೆ ಕಾರಣವಾಗಿದ್ದ ‘ಗುಲಾಬ್’ ಚಂಡಮಾರುತ ಸೆ.26ರಂದು ಆಂಧ್ರಪ್ರದೇಶದಲ್ಲಿ ಭೂ ಸ್ಪರ್ಶ ಮಾಡಿತ್ತು. ಬಳಿಕ ಮಾರುತ ಪಶ್ಚಿಮದತ್ತ ಮುಂದುವರಿದು, ಅರಬ್ಬಿ ಸಮುದ್ರ ಪ್ರವೇಶಿಸಿ ಮತ್ತೆ ವಾಯುಭಾರ ಕುಸಿತವಾಗಿ ಬದಲಾಗಿದೆ. ಮುಂದಕ್ಕೆ ಬಲ ಪಡೆಯುತ್ತ ಒಮಾನ್, ಯೆಮನ್, ಸೌದಿ ತೀರದತ್ತ ಸಾಗಿದೆ. ಈ ರೀತಿಯಾಗಿ ಒಂದೇ ಚಂಡಮಾರುತ ಎರಡಾಗಿ ಬದಲಾಗುವುದು ಅಚ್ಚರಿಯ ಬೆಳವಣಿಗೆ ಎಂದು ಹವಾಮಾನ ತಜ್ಞರು ಹೇಳುತ್ತಾರೆ.

    ಎರಡೇ ಚಂಡಮಾರುತಗಳಾದರೂ ಅರಬ್ಬಿ ಸಮುದ್ರದ ಕರಾವಳಿ ಭಾಗದಲ್ಲಿ ಮಳೆ ಮತ್ತು ಆತಂಕಕ್ಕೆ ಕಾರಣವಾಗಿತ್ತು. 2020ರಲ್ಲಿಯೂ ಪಶ್ಚಿಮ ಕರಾವಳಿಯಲ್ಲಿ ‘ನಿಸರ್ಗ’ ಮತ್ತು ‘ಗಟಿ’ ಹೆಸರಿನ ಎರಡು ಚಂಡಮಾರುತಗಳು ಕಾಣಿಸಿಕೊಂಡಿದ್ದವು. 2019ರಲ್ಲಿ ಮುಂಗಾರು ಅವಧಿಯಲ್ಲಿ ‘ವಾಯು’ ಮತ್ತು ‘ಹಿಕಾ’ ಹಾಗೂ ಮುಂಗಾರಿನ ಬಳಿಕ ‘ಕ್ಯಾರ್’ ಮತ್ತು ‘ಮಹಾ’, ‘ಪವನ್’ ಹೀಗೆ ಒಂದರ ಹಿಂದೆ ಒಂದರಂತೆ ಒಟ್ಟು 5 ಚಂಡಮಾರುತಗಳು ಎದ್ದು ದಾಖಲೆ ನಿರ್ಮಿಸಿದ್ದವು.

    ಬಂಗಾಳ ಕೊಲ್ಲಿಯಲ್ಲಿ: ಬಂಗಾಳ ಕೊಲ್ಲಿಯಲ್ಲಿ ಮೇಯಲ್ಲಿ ‘ಯಾಸ್’ ಚಂಡಮಾರುತ ಕಾಣಿಸಿಕೊಂಡಿತ್ತು. ಗಂಟೆಗೆ 140 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದ್ದು, ಇದು ವರ್ಷದ ಎರಡನೇ ಭೀಕರ ಚಂಡಮಾರುತ. ಉತ್ತರ ಒಡಿಶಾ ಕರಾವಳಿಯ ಮೂಲಕ ಇದು ಭೂ ಸ್ಪರ್ಶ ಮಾಡಿದೆ. ನಂತರ ಸೆಪ್ಟೆಂಬರ್‌ನಲ್ಲಿ ‘ಗುಲಾಬ್’ ಚಂಡಮಾರುತ ಆಂಧ್ರ ಪ್ರದೇಶದ ಮೂಲಕ ಕರಾವಳಿಗೆ ಅಪ್ಪಳಿಸಿದೆ. ಕೊನೆಯದಾಗಿ ಡಿಸೆಂಬರ್‌ನಲ್ಲಿ ‘ಜವಾದ್’ ಚಂಡಮಾರುತವೂ ಆಂಧ್ರ, ಒಡಿಶಾ ಮತ್ತು ಪಶ್ಚಿಮ ಬಂಗಾಳ ಭಾಗದಲ್ಲಿ ಹಾನಿ ಮಾಡಿದೆ. ಈ ನಡುವೆ ಮೂರು ಬಾರಿ ವಾಯುಭಾರ ಕುಸಿತವೂ ಉಂಟಾಗಿತ್ತು. ಕಳೆದ ವರ್ಷ ‘ಅಂಫಾನ್’, ‘ನಿವಾರ್’ ಮತ್ತು ‘ಬುರೇವಿ’ ಚಂಡಮಾರುತಗಳು ಭೀತಿ ಸೃಷ್ಟಿಸಿದ್ದವು. 2019ರ ಆರಂಭದಲ್ಲಿ ‘ಪಾಬುಕ್’, ಮುಂಗಾರು ಪೂರ್ವದಲ್ಲಿ ‘ಫನಿ’ ಹಾಗೂ ಹಿಂಗಾರಿನಲ್ಲಿ ‘ಬುಲ್‌ಬುಲ್’ ಚಂಡಮಾರುತ ಉಂಟಾಗಿತ್ತು.

    ಈ ಬಾರಿ ಚಂಡಮಾರುತ ಪರಿಣಾಮ ಹಿಂಗಾರು ಅವಧಿಯಲ್ಲಿ ಉತ್ತಮ ಮಳೆ ಸುರಿದಿದೆ. ಪೂರ್ವ ಮುಂಗಾರು ಅವಧಿಯಲ್ಲೂ ಚಂಡಮಾರುತ ಪರಿಣಾಮ ಮಳೆಯಾಗಿದೆ. ಕಳೆದ ವರ್ಷ ಮತ್ತು ಈ ವರ್ಷ ಸಮಾನ ಚಂಡಮಾರುತಗಳು ಕಾಣಿಸಿಕೊಂಡಿವೆ.

    ಸುನೀಲ್ ಗಾವಸ್ಕರ್, ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts