More

    100ನೇ ಜನ್ಮದಿನ ಆಚರಿಸಿಕೊಳ್ತಿರೋ ಮೊದಲ ಪೈಲಟ್‌ ಅನುಭವ ಕೇಳಿ…

    ನವದೆಹಲಿ: ಇವರು ದೇಶದ ಅತ್ಯಂತ ಹಿರಿಯ ಫೈಟರ್‌ ಪೈಲಟ್‌, ಹೆಸರು ಸ್ಕ್ವಾಡ್ರನ್‌ ಲೀಡರ್‌ ದಲಿಪ್‌ ಸಿಂಗ್‌ ಮಜಿತಿಯಾ. ಇವರಿಗೆ ಇಂದು 100ನೇ ವರ್ಷದ ಸಂಭ್ರಮ. ಇವರ ಬ್ಯಾಚ್‌ನಲ್ಲಿ ಬದುಕುಳಿದಿರುವ ಏಕೈಕ ಪೈಲಟ್‌.

    ಜನುಮದಿನದ ಅಂಗವಾಗಿ ತಮ್ಮ ಕೆಲವು ರೋಚಕ ಅನುಭವಗಳನ್ನು ಅವರು ಹಂಚಿಕೊಂಡಿದ್ದಾರೆ. ‘ಅದು 1940ರ ಇಸವಿ. ನನಗಾಗ ಕೇವಲ 20 ವರ್ಷ. ಆಗಸ್ಟ್‌ 5ನೇ ತಾರೀಖು ಅಂದು. ಇಬ್ಬರು ಬ್ರಿಟಿಷ್‌ ಟ್ರೇನರ್‌ಗಳ ಜತೆ ಲಾಹೋರ್‌ನ ವಾಲ್ಟನ್‌ ವಾಯುನೆಲೆಯಿಂದ ಟೈಗರ್‌ ಮಾತ್‌ ತರಬೇತಿ ವಿಮಾನದಲ್ಲಿ ತರಬೇತಿ ಹಾರಾಟ ಆರಂಭಿಸಿದ್ದೆ. ಅದನ್ನು ನೆನೆಸಿಕೊಂಡರೆ ಇಂದಿಗೂ ರೋಮಾಂಚನವಾಗುತ್ತದೆ.

    ಅದೇನೋ ಗೊತ್ತಿಲ್ಲ, ಮೊದಲ ವಿಮಾನ ಹಾರಿಸಿದಾಗಲೇ ನಾನೊಬ್ಬನೇ ಆರಾಮಾಗಿ ವಿಮಾನ ಹಾರಿಸಬಲ್ಲೆ ಎಂಬ ವಿಶ್ವಾಸ ಮೂಡಿಬಿಟ್ಟಿತ್ತು. ನನ್ನ ಸಹಪಾಠಿಗಳು ಅಷ್ಟು ಚಿಕ್ಕ ವಯಸ್ಸಿನ ನನ್ನ ಉತ್ಸಾಹ ಕಂಡು ಅಚ್ಚರಿಗೊಂಡಿದ್ದರು ಹಾಗೆಯೇ ಆತಂಕಗೊಂಡಿದ್ದರು ಕೂಡ. ಆದರೆ ನನಗೆ ಮಾತ್ರ ನನ್ನ ಮೇಲೆ ಅತೀವ ಭರವಸೆ ಇತ್ತು. ಆದ್ದರಿಂದಲೇ ಅದಾದ 17 ದಿನಕ್ಕೇನೇ ಒಬ್ಬನೇ ವಿಮಾನ ಹಾರಾಟ ನಡೆಸಿದೆ, ಸಕ್ಸಸ್‌ ಕೂಡ ಆದೆ.

    ಇದನ್ನೂ ಓದಿ: ಕಾಂಗ್ರೆಸ್‌ಗೆ ಬಿಕ್‌ ಶಾಕ್! ಭ್ರಷ್ಟಾಚಾರದ ತನಿಖೆಗೆ ಗ್ರೀನ್‌ ಸಿಗ್ನಲ್ ಕೊಟ್ಟ ಹರಿಯಾಣ

    ಅಲ್ಲಿಂದ ನಿವೃತ್ತರಾಗುವವರೆಗೂ ಪೈಲಟ್‌ ಆಗಿಯೇ ಉಳಿದೆ. ಮೊದಲು ವಾಯುಪಡೆಯಲ್ಲಿ ನಂತರ ಖಾಸಗಿ ವಿಮಾನದಲ್ಲಿ ಪೈಲಟ್‌ ಆಗಿ ಜೀವನ ಮುಂದುವರಿಸಿದೆ. ಇದೀಗ ನನಗೆ ಬರೋಬ್ಬರಿ 100 ವರ್ಷ. ನನ್ನ ಬ್ಯಾಚ್‌ನ ಯಾರೂ ಈಗ ಬದುಕಿ ಉಳಿದಿಲ್ಲ. ಭಾರತೀಯ ವಾಯುಪಡೆಯ ಅಧಿಕಾರಿಗಳನ್ನು ಭೇಟಿಯಾ ದಾಗಲೆಲ್ಲಾ ನಾನಿನ್ನೂ ಸೇವೆಯಲ್ಲಿದ್ದೇನೆ ಎಂಬ ಭಾವನೆ ನನ್ನಲ್ಲಿ ಮೂಡುತ್ತದೆ.

    ಸ್ವಾತಂತ್ರ್ಯಪೂರ್ವದ ಅವಧಿಯಲ್ಲಿ ಭಾರತೀಯ ವಾಯುಪಡೆಯಲ್ಲಿ ಹಲವು ವಿಮಾನಗಳ ಪೈಲಟ್‌ ಆಗಿ ಸೇವೆ ಸಲ್ಲಿಸಿದೆ. 1947ರಲ್ಲಿ ಸ್ಕ್ವಾಡ್ರನ್‌ ಲೀಡರ್‌ ಆಗಿ ನಿವೃತ್ತನಾದೆ. 1979ರ ಜನವರಿ 16ರಂದು ಕೊನೆಯ ಬಾರಿಗೆ ಖಾಸಗಿ ವಿಮಾನದಲ್ಲಿ ಪೈಲಟ್‌ ಆಗಿ ಹಾರಾಟ ನಡೆಸಿ ನನ್ನ ವೃತ್ತಿಜೀವನವನ್ನು ಮುಗಿಸಿದೆ. ಅದೊಂದು ನೋವಿನ ದಿನವೆಂದೇ ಹೇಳಬೇಕು.

    2ನೇ ವಿಶ್ವ ಮಹಾಯುದ್ಧದ ಸಮಯದಲ್ಲಿ ಬರ್ಮಾ ಹಾಗೂ ಕಠ್ಮಂಡು ಕಣಿವೆಗಳಲ್ಲಿ ಬ್ರಿಟಿಷ್‌ ಏಕ ಆಸನ ಯುದ್ಧ ವಿಮಾನ, ಹಾಕರ್‌ ಹರಿಕೇನ್‌ನಲ್ಲಿ ಹಾರಾಟ ನಡೆಸುವ ಅವಕಾಶ ನನಗೆ ಸಿಕ್ಕಿತ್ತು. ಅದಂತೂ ಶಬ್ದಗಳಲ್ಲಿ ವರ್ಣಿಸಲು ಅಸಾಧ್ಯವಾದ ಅನುಭವ. ಕಠ್ಮಂಡು ಕಣಿವೆಯಲ್ಲಿ ವಿಮಾನ ಇಳಿಸಿದ ಮೊದಲ ಪೈಲಟ್‌ ಎಂಬ ಹೆಗ್ಗಳಿಕೆಗೆ ಕೂಡ ನಾನು ಪಾತ್ರನಾದೆ ಎಂದಿದ್ದಾರೆ. ಇದು ನಡೆದದ್ದು 1949ರ ಏಪ್ರಿಲ್‌ 23ರಂದು. ನೇಪಾಳದ ಪ್ರಧಾನಿ ಮೋಹನ್ ಶುಮ್ಶರ್ ಜಂಗ್ ಬಹದ್ದೂರ್ ರಾಣಾ ಅವರು ನನ್ನ ಶೌರ್ಯವನ್ನು ಕಂಡು ಬೆರಗಾಗಿ ಹೋಗಿದ್ದರು. ಭಾರತೀಯ ರಾಯಭಾರಿಗೆ ಬರೆದ ಪತ್ರದಲ್ಲಿ ನೇಪಾಳದ ಪ್ರಧಾನ ಮಂತ್ರಿ ಕೂಡ ಇಂಥ ಕಣಿವೆಯಲ್ಲಿ ವಿಮಾನ ಇಳಿಸುವ ಸಾಹಸ ಮಾಡಿದವರು ಯಾರು ಎಂದು ಅಚ್ಚರಿ ವ್ಯಕ್ತಪಡಿಸಿದ್ದರು. ಇಂದಿಗೂ ಆ ಜಾಗದಲ್ಲಿ ನನ್ನದೇ ಹೆಸರು ಇರುವುದು ತುಂಬಾ ರೋಮಾಂಚನವಾಗುತ್ತದೆ ಎಂದಿದ್ದಾರೆ.

    100ನೇ ವಯಸ್ಸಿನಲ್ಲಿ ಏನು ಹೇಳುವುದಕ್ಕೆ ಇಷ್ಟಪಡುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಇವರು, ನಾನು ಈಗಲೂ ಫಿಟ್‌ ಆಗಿದ್ದೇನೆ. ಗಾಲ್ಫ್‌ ಆಟ ತುಂಬಾ ಇಷ್ಟ. ಈಗಲೂ ಆಡುತ್ತೇನೆ. ಹಾಗೆಯೇ ನನ್ನ ಶತಮಾನಗಳಷ್ಟು ಹಳೆಯದಾಗಿರುವ ವಿಮಾನಯಾನದ ಬಗ್ಗೆ ಯೋಚಿಸುತ್ತಿರುತ್ತೇನೆ ಎಂದಿದ್ದಾರೆ.

    ರೌಡಿ ದುಬೆ- ಬಿಜೆಪಿ ಮುಖಂಡನ ವಾಟ್ಸ್‌ಆ್ಯಪ್‌ ಚಾಟ್‌ ವೈರಲ್: ಇದರಲ್ಲೇನಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts