More

    ಅಪಘಾತ ವೇಳೆ ಪ್ರಥಮ ಚಿಕಿತ್ಸೆ ಬಹುಮುಖ್ಯ

    ಚಿಕ್ಕಮಗಳೂರು: ಅಪಘಾತ ಅಥವಾ ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಪ್ರಾಣಾಪಾಯದಿಂದ ಕಾಪಾಡಬೇಕು ಎಂದು ರೆಡ್‌ಕ್ರಾಸ್ ಸಂಸ್ಥೆ ಆರೋಗ್ಯ ಸಮಿತಿ ಅಧ್ಯಕ್ಷ ಡಾ.ಕೆ.ಸುಂದರ ಗೌಡ ತಿಳಿಸಿದರು.
    ನಗರ ಹೊರವಲಯದ ಜಿಲ್ಲಾ ಕಾರಾಗೃಹದಲ್ಲಿ ರೆಡ್‌ಕ್ರಾಸ್ ಸಂಸ್ಥೆ, ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮವನ್ನು ಪ್ರತ್ಯಕ್ಷಿಕೆ ಮೂಲಕ ಪ್ರದರ್ಶಿಸಿ ಮಾಹಿತಿ ನೀಡಿದರು.
    ಆಕಸ್ಮಿಕವಾಗಿ ಸಂಭವಿಸುವ ಅಪಘಾತದಲ್ಲಿ ವ್ಯಕ್ತಿಗಳು ಗಾಯಗೊಂಡರೆ ಪ್ರಥಮವಾಗಿ ರಕ್ತ ಹೆಚ್ಚು ಸೋರಿಕೆ ಜಾಗದಲ್ಲಿ ಬಟ್ಟೆ ಅಥವಾ ಇನ್ನಿತರ ವಸ್ತ್ರಗಳಿಂದ ಬಿಗಿಯಾಗಿ ಕಟ್ಟುವ ಮೂಲಕ ಸೋರಿಕೆ ಕಡಿಮೆಗೊಳಿಸಬೇಕು. ನಂತರ ಆಸ್ಪತ್ರೆಗೆ ಕರೆದೊಯ್ದುರೆ ವ್ಯಕ್ತಿಯ ಪ್ರಾಣ ಕಾಪಾಡಲು ಸಾಧ್ಯ ಎಂದು ತಿಳಿಸಿದರು.
    ಅಪಘಾತ ವೇಳೆ ಹೆಚ್ಚು ರಕ್ತ ಸೋರಿದರೆ ಪ್ರಾಣ ಉಳಿಸುವುದು ಅಸಾಧ್ಯ. ಮಾನವ ಶರೀರ ಕೇವಲ 5 ಲೀಟರ್ ರಕ್ತ ಹೊಂದಿದ್ದು, ಅಪಘಾತದ ವೇಳೆ ರಕ್ತದ ಮಹತ್ವವನ್ನು ತಿಳಿದುಕೊಳ್ಳುವುದು ಬಹುಮುಖ್ಯ. ಪ್ರಪಂಚದಲ್ಲಿ ಪ್ರತಿದಿನ ಸರಿ ಸುಮಾರು 16 ಸಾವಿರಕ್ಕೂ ಹೆಚ್ಚು ಮಂದಿ ಅಪಘಾತದಲ್ಲಿ ಮೃತಪಡುವ ವರದಿಗಳಿವೆ. ಈ ಪೈಕಿ ಶೇ.30 ಮಂದಿ ಪ್ರಥಮ ಚಿಕಿತ್ಸೆ ಸಿಗದೆ ಮೃತಪಡುತ್ತಿರುವುದು ದುರ್ದೈವ. ಹೀಗಾಗಿ ಜನತೆಗೆ ಪ್ರಥಮ ಚಿಕಿತ್ಸೆ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು ಎಂದು ಹೇಳಿದರು.
    ರೆಡ್‌ಕ್ರಾಸ್ ಅಧ್ಯಕ್ಷ ಪ್ರದೀಪ್ ಗೌಡ ಮಾತನಾಡಿ, ಯುದ್ಧ ಭೂಮಿಯಲ್ಲಿ ನಡೆದ ಸಾವಿರಾರು ಸೈನಿಕರ ಸಾವು-ನೋವುಗಳನ್ನು ಮನಗಂಡು ಹೆನ್ಸಿ ಡೋನೋಟ್ ಎಂಬುವವರು ಪ್ರಥಮ ಚಿಕಿತ್ಸೆ ಮೂಲಕ ಪ್ರಾಣ ರಕ್ಷಣೆಗೆ ಮುಂದಾಗಿದ್ದರು. ಅಂದಿನಿಂದ ವಿಶ್ವಾದ್ಯಂತ ಪ್ರಥಮ ಚಿಕಿತ್ಸೆ ಎಂಬುದು ಪ್ರಚಲಿತಕ್ಕೆ ಬಂದಿದೆ ಎಂದು ತಿಳಿಸಿದರು.
    ರೆಡ್‌ಕ್ರಾಸ್ ಸಂಸ್ಥೆ ಕಾರ್ಯದರ್ಶಿ ರಸೂಲ್‌ಖಾನ್, ನಿರ್ದೇಶಕರಾದ ವಿಲಿಯಂ ಪೆರೇರಾ, ವಿನಾಯಕ, ಕಾರಾಗೃಹ ಅಧೀಕ್ಷಕ ಐ.ಜಿ.ಕುಕನೂರು, ಸಹಾಯಕ ಜೈಲರ್‌ಗಳಾದ ದಯಾನಂದ್ ಬೊಂಗಾಳೆ, ಲಕ್ಕೇಗೌಡ, ಶಿಕ್ಷಕ ರಾಜಕುಮಾರ್, ಆಶಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts