More

    ನೇತ್ರಾವತಿ ತಡೆಬೇಲಿಗೆ ತುಕ್ಕು: ವರ್ಷವಾಗುವ ಮೊದಲೇ ಹಾಳಾಗುವ ಭೀತಿ

    ಮಂಗಳೂರು: ನಗರದ ಹೊರವಲಯದ ಜಪ್ಪಿನಮೊಗರು ನೇತ್ರಾವತಿ ಸೇತುವೆಗೆ ಆತ್ಮಹತ್ಯೆ ತಡೆಯಲು ನಿರ್ಮಾಣ ಮಾಡಿದ ತಡೆ ಬೇಲಿ ಉದ್ಘಾಟನೆಗೊಂಡು ಎಂಟು ತಿಂಗಳು ಪೂರ್ಣಗೊಳ್ಳುವ ಮೊದಲೇ ತುಕ್ಕು ಹಿಡಿಯಲಾರಂಭಿಸಿದೆ. ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳದಿದ್ದರೆ ಖರ್ಚು ಮಾಡಿದ ಹಣ ಪೋಲಾಗಿ ಹೋಗುವ ಸಾಧ್ಯತೆ ಇದೆ.

    ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಕಾಫಿ ಡೇ ಮಾಲೀಕ ಸಿದ್ದಾರ್ಥ ಹೆಗ್ಡೆ ಸಹಿತ 15ಕ್ಕೂ ಅಧಿಕ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ 55 ಲಕ್ಷ ರೂ. ವೆಚ್ಚದಲ್ಲಿ 800 ಮೀ. ಉದ್ದಕ್ಕೆ ತಡೆ ಬೇಲಿ ನಿರ್ಮಾಣ ಮಾಡಿದೆ.

    ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಹೋಗುವ ಹಾಗೂ ತೊಕ್ಕೊಟ್ಟಿನಿಂದ ಮಂಗಳೂರು ಕಡೆಗೆ ಬರುವ ಎರಡು ಸೇತುವೆಗಳಿದ್ದು, ಈ ಎರಡೂ ಸೇತುವೆಗಳಿಗೆ ಎರಡೂ ಬದಿ ರಕ್ಷಣಾ ಬೇಲಿ ಅಳವಡಿಸಲಾಗಿದೆ. ತಡೆಗೋಡೆ ಮೇಲೆ ಬೇಲಿಯು 5 ಅಡಿ ಎತ್ತರವಿದ್ದು, ಅದರ ಮೇಲೆ 1 ಅಡಿಯಷ್ಟು ಮುಳ್ಳು ತಂತಿ ಇದೆ. ಬೇಲಿಯನ್ನು ಕಬ್ಬಿಣದ ಸರಳುಗಳನ್ನು ಉಪಯೋಗಿಸಿ ಸೇತುವೆಗೆ ವೆಲ್ಡಿಂಗ್ ಮಾಡಿ ಜೋಡಿಸಲಾಗಿತ್ತು. ಬೇಲಿಯ ಮೇಲೂ ಹತ್ತಲು ಸಾಧ್ಯವಾಗದಂತೆ ಮೇಲ್ಭಾಗಕ್ಕೂ ನಾಲ್ಕು ಸಾಲು ಮುಳ್ಳುತಂತಿಯನ್ನು ರಸ್ತೆಯ ಭಾಗಕ್ಕೆ ಬಗ್ಗಿಸಿ ಜೋಡಣೆ ಮಾಡಲಾಗಿದೆ. ಉದ್ಘಾಟನೆಗೊಂಡು ವರ್ಷವಾಗುವುದರೊಳಗೆ ಇದಕ್ಕೆ ತುಕ್ಕು ಹಿಡಿಯಲಾರಂಭಿಸಿದ್ದು, ಹೆಚ್ಚು ಕಾಲ ಬಾಳ್ವಿಕೆ ಬರುವುದು ಅನುಮಾನ ಉಂಟು ಮಾಡಿದೆ.

    ಉಪ್ಪಿನ ಅಂಶ ಕಾರಣ: ಮಂಗಳೂರಿನಲ್ಲಿ ಸಮುದ್ರದಿಂದ ಉಪ್ಪಿನ ಅಂಶ ಇರುವ ಗಾಳಿ ಬೀಸುವುದರಿಂದ ಕಬ್ಬಿಣದ ವಸ್ತುಗಳಿಗೆ ಬಹು ಬೇಗನೆ ತುಕ್ಕು ಹಿಡಿಯುತ್ತದೆ. ನೇತ್ರಾವತಿ ಸೇತುವೆ ಬಳಿಯಲ್ಲೇ ಸಮುದ್ರ ಇರುವುದರಿಂದ ಗಾಳಿ ನೇರವಾಗಿ ಸೇತುವೆ ಕಡೆಗೆ ಬೀಸುತ್ತದೆ. ಇದರ ಮೂಲಕ ಬರುವ ಉಪ್ಪಿನ ಅಂಶಗಳು ತಡೆಬೇಲಿ ತುಕ್ಕು ಹಿಡಿಯುವಂತೆ ಮಾಡಿದೆ. ದಪ್ಪವಾಗಿ ಪೈಂಟ್ ಬಳಿದು ಆಗಾಗ ಇದರ ನಿರ್ವಹಣೆ ಮಾಡಿದರೆ ಒಂದಷ್ಟು ಸಮಯ ಗಟ್ಟಿಯಾಗಿ ಉಳಿಸಿಕೊಳ್ಳಬಹುದು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
    ಕಾಮಗಾರಿ ಯೋಜನೆ ಮಾಡುವಾಗಲೇ ಗುಣಮಟ್ಟದ ತುಕ್ಕು ಹಿಡಿಯದ ಸಾಮಗ್ರಿಗಳನ್ನು ಅಳವಡಿಸಲು ಗುತ್ತಿಗೆ ಸಂಸ್ಥೆಗೆ ಸೂಚನೆ ನೀಡಬೇಕಿತ್ತು. ಸ್ಟೀಲ್ ಅಥವಾ ಅಲ್ಯೂಮಿನಿಯಂನ ತುಕ್ಕು ಹಿಡಿಯದ ಸಾಮಗ್ರಿಗಳು ಲಭ್ಯವಿದೆ. ಕಡಿಮೆ ವೆಚ್ಚದ ಗುಣಮಟ್ಟವಿಲ್ಲದ ಕಬ್ಬಿಣದ ಸಾಮಗ್ರಿ ಅಳವಡಿಸಿರುವುದರಿಂದ ತುಕ್ಕು ಹಿಡಿಯುವಂತಾಗಿದೆ. ನಿರ್ಮಾಣ ಮಾಡುವ ಇಂಜಿನಿಯರ್‌ಗಳಿಗೆ ಈ ಬಗ್ಗೆ ಜ್ಞಾನ ಇರಲಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

    ಆತ್ಮಹತ್ಯೆ ಪ್ರಕರಣ ಇಳಿಕೆ: ನೇತ್ರಾವತಿ ಸೇತುವೆಗೆ ತಡೆ ಬೇಲಿ ಹಾಕಿದ ಬಳಿಕ ಇಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ. ಜತೆಗೆ ಗುಣಮಟ್ಟದ ಸಿಸಿ ಕ್ಯಾಮರಾ ಕೂಡ ಅಳವಡಿಸಿ ಮಂಗಳೂರು ನಗರ ಪೊಲೀಸ್ ಠಾಣೆಗೆ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಸೇತುವೆ ಮೇಲೆ ನಡೆಯುವ ಚಟುವಟಿಕೆಗಳ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ. ವಾಹನಗಳಲ್ಲಿ ಬಂದು ಸೇತುವೆ ಮೇಲಿನಿಂದ ನದಿಗೆ ಕಸ ಬಿಸಾಡುವವರ ಸಂಖ್ಯೆಯೂ ಕಡಿಮೆಯಾಗಿದೆ. ತಡೆ ಬೇಲಿ ಎತ್ತರ ಇರುವ ಕಾರಣ ಕಸ ಬೇಲಿಯಲ್ಲೇ ಸಿಕ್ಕಿ ಹಾಕಿಕೊಳ್ಳುತ್ತದೆ. ಕೆಲವು ಸಮಯದ ಹಿಂದೆ ಮಹಿಳೆಯರು ಕಾರೊಂದರಲ್ಲಿ ಬಂದು ನದಿಗೆ ಕಸ ಬಿಸಾಡುವಾಗ ರೆಡ್‌ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದರು. ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

    ನೇತ್ರಾವತಿ ಸೇತುವೆ ತಡೆಬೇಲಿ ನಿರ್ಮಾಣ ಮಾಡಿ 8 ತಿಂಗಳಲ್ಲಿ ತುಕ್ಕು ಹಿಡಿಯಲಾರಂಭಿಸಿದೆ. ಕಡಿಮೆ ಗುಣಮಟ್ಟದ ಕಬ್ಬಿಣ ಬಳಸಿರುವುದರಿಂದ ಬಹು ಬೇಗನೆ ಹಾಳಾಗುತ್ತಿದೆ. ಸ್ಟೀಲ್ ಅಥವಾ ಅಲ್ಯೂಮಿನಿಯಂ ಬಳಕೆ ಮಾಡುತ್ತಿದ್ದರೆ ತುಕ್ಕು ಹಿಡಿಯುತ್ತಿರಲಿಲ್ಲ. 55 ಲಕ್ಷ ರೂ. ವೆಚ್ಚ ಮಾಡಿದ ಯೋಜನೆ ಇಷ್ಟು ಬೇಗ ಹಾಳಾಗುವುದರಲ್ಲಿ ಅರ್ಥ ಇಲ್ಲ.
    ಜಿ.ಕೆ.ಭಟ್, ಸಾಮಾಜಿಕ ಕಾರ್ಯಕರ್ತ

    ಜಪ್ಪಿನಮೊಗರು ನೇತ್ರಾವತಿ ಸೇತುವೆ ತಡೆಬೇಲಿಗೆ ತುಕ್ಕು ಹಿಡಿಯದಂತೆ ಅಂಡರ್ ಕೋಟಿಂಗ್ ಮಾಡಿ ಪೈಂಟ್ ಮಾಡಲಾಗಿದೆ. ಉಪ್ಪಿನ ಅಂಶ ಇರುವ ಸಮುದ್ರದಿಂದ ಗಾಳಿ ನೇರವಾಗಿ ಬೀಸುವುದರಿಂದ ತುಕ್ಕು ಹಿಡಿಯಲಾರಂಭಿಸಿದೆ. ಶೀಘ್ರದಲ್ಲಿ ಅದಕ್ಕೆ ಮತ್ತೆ ಪೈಂಟಿಂಗ್ ಮಾಡುವ ಮೂಲಕ ತುಕ್ಕು ಹಿಡಿದು ಹಾಳಾಗದಂತೆ ನಿರ್ವಹಣೆ ಮಾಡಲಾಗುವುದು.
    ರವಿಶಂಕರ ಮಿಜಾರ್, ಅಧ್ಯಕ್ಷ ಮುಡಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts