More

    Lakhimpur Kheri Case: ಜನತೆಗೆ ನೀವು ಕಳುಹಿಸುತ್ತಿರುವ ಸಂದೇಶವೇನು? ಯುಪಿ ಸರ್ಕಾರದ ಕ್ರಮಕ್ಕೆ ಸುಪ್ರೀಂಕೋರ್ಟ್​ ಕಿಡಿ

    ನವದೆಹಲಿ: ಲಖಿಂಪುರ್​ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್​, ಪ್ರಕರಣ ಸಂಬಂಧ ನೀವು ತೆಗೆದುಕೊಂಡಿರುವ ಕ್ರಮದಿಂದ ನಾವು ತೃಪ್ತರಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ.

    ಲಖಿಂಪುರ್​ ಖೇರಿ ಘಟನೆ ಸಂಬಂಧ ಕ್ರಮ ತೆಗೆದುಕೊಳ್ಳಲು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ ನೀಡುವಂತೆ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ನಿನ್ನೆ (ಅ.7) ನಡೆದ ವಿಚಾರಣೆಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ನಡೆದ ದೌರ್ಜನ್ಯದಲ್ಲಿ ರೈತರು ಸೇರಿದಂತೆ 8 ಮಂದಿಯ ಪ್ರಾಣ ಹೋಗಿದೆ. ಈ ಪ್ರಕರಣದಲ್ಲಿ ಇದುವರೆಗೂ ಎಷ್ಟು ಮಂದಿಯನ್ನು ಬಂಧಿಸಿದ್ದೀರಿ? ನೀವು ಯಾರ ವಿರುದ್ಧ ಎಫ್ಐಆರ್ ದಾಖಲಿಸಿದ್ದೀರಿ? ನಾಳೆ ವರದಿ ಸಲ್ಲಿಸುವಂತೆ ನ್ಯಾಯಾಲಯ ಕೇಳಿತ್ತು.

    ಇಂದು ವರದಿ ಸಲ್ಲಿಸಿರುವ ಉತ್ತರ ಪ್ರದೇಶ ಸರ್ಕಾರ, ಪ್ರಕರಣ ಸಂಬಂಧ ಇಲ್ಲಿಯವರೆಗೆ ಸಾಕಷ್ಟು ಕ್ರಮ ವಹಿಸಿಲ್ಲ ಎಂದು ಒಪ್ಪಿಕೊಂಡಿದೆ. ಇದರಿಂದ ಅಸಮಾಧಾನಗೊಂಡ ಸುಪ್ರೀಂಕೋರ್ಟ್​, ಇದುವರೆಗೆ ಯುಪಿ ಸರ್ಕಾರ ತೆಗೆದುಕೊಂಡ ಕ್ರಮದಿಂದ ನಮಗೆ ತೃಪ್ತಿಯಿಲ್ಲ. ನಾವು ಜವಾಬ್ದಾರಿಯುತ ಸರ್ಕಾರ ಮತ್ತು ಪೋಲಿಸರನ್ನು ನಿರೀಕ್ಷಿಸುತ್ತೇವೆ. ಗುಂಡಿನ ಗಾಯಗಳು ಸೇರಿದಂತೆ ಆರೋಪಗಳು ತುಂಬಾ ಗಂಭೀರವಾಗಿದೆ. ಈ ಪ್ರಕರಣದಲ್ಲಿ ಜನತೆಗೆ ನೀವು ಕಳುಹಿಸುತ್ತಿರುವ ಸಂದೇಶವೇನು? ಎಂದು ವಿಚಾರಣೆಯ ಸಮಯದಲ್ಲಿ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

    ಇತರ ಪ್ರಕರಣಗಳಲ್ಲಿ ಇತರ ವ್ಯಕ್ತಿಗಳನ್ನು ನಾವು ಹೇಗೆ ಪರಿಗಣಿಸುತ್ತೇವೆಯೋ ಅದೇ ರೀತಿ ಈ ಪ್ರಕರಣದಲ್ಲೂ ಆರೋಪಿಗಳನ್ನು ಪರಿಗಣಿಸಿ ಎಂದು ಮುಖ್ಯ ನ್ಯಾಯಾಮೂರ್ತಿಗಳು ಸೂಚನೆ ನೀಡಿದ್ದಾರೆ. ಅಲ್ಲದೆ, ಈ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರವು ಸಿಬಿಐಗೆ ವರ್ಗಾಯಿಸುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಆರೋಪಿ ಕೇಂದ್ರ ಸಚಿವರ ಮಗನಾಗಿರುವುದರಿಂದ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದಿರುವ ನ್ಯಾಯಾಲಯ ಪ್ರಕರಣವನ್ನು ಯಾವ ತನಿಖಾ ಸಂಸ್ಥೆ ವಹಿಸುವಿರಿ ತಿಳಿಸಿ ಎಂದು ಯುಪಿ ಸರ್ಕಾರಕ್ಕೆ ಸೂಚನೆ ನೀಡಿದೆ.

    ಆಗಿದ್ದೇನು? ಇತ್ತೀಚೆಗೆ ಭಾಷಣವೊಂದರಲ್ಲಿ ಕೇಂದ್ರ ಸಚಿವ ಮಿಶ್ರಾ ಅವರು, ಕೇಂದ್ರ ಸರ್ಕಾರದ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಕುರಿತು ಪ್ರಸ್ತಾಪಿಸಿ, ‘ಇದು 10-15 ಜನರು ನಡೆಸುತ್ತಿರುವ ಪ್ರತಿಭಟನೆಯಾಗಿದ್ದು, ಅವರನ್ನು ಸರಿದಾರಿಗೆ ತರಲು ನಮಗೆ ಕೇವಲ 2 ನಿಮಿಷ ಸಾಕು’ ಎಂದು ಹೇಳಿದ್ದರು. ಇದರಿಂದ ರೊಚ್ಚಿಗೆದ್ದ ರೈತರು ಪ್ರತಿಭಟನೆ ನಡೆಸಲು ಸಜ್ಜಾಗಿದ್ದರು. ಇದೇ ವೇಳೆ ಈ ಘರ್ಷಣೆ ನಡೆದಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ. ರೈತರ ಮೇಲೆ ಕಾರನ್ನು ಚಲಾಯಿಸಿರುವ ಆರೋಪವಿದ್ದು, ಕೇಂದ್ರ ಸಚಿವ ಅಜಯ್​ ಮಿಶ್ರ ಅವರ ಮಗ ಆಶಿಶ್​ ಮಿಶ್ರ, ತಾವು ಘಟನಾ ಸ್ಥಳದಲ್ಲಿ ಇರಲೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ತಾವು ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೆ ಬನ್​ಬೀರ್​ಪುರ ಗ್ರಾಮದಲ್ಲಿ ನಡೆಯುತ್ತಿದ್ದ ಸಮಾರಂಭದಲ್ಲಿದ್ದುದಾಗಿ ಹೇಳಿದ್ದಾರೆ. ಆದಾಗ್ಯೂ ಸಚಿವ ಅಜಯ್​ ಕುಮಾರ್​ ಮಿಶ್ರಾ ಅವರ ಪುತ್ರ ಆಶೀಶ್​ ಮಿಶ್ರಾ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

    VIDEO| ಉತ್ತರ ಪ್ರದೇಶದ ಲಾಖಿಂಪುರ್ ಖೇರಿ ಘರ್ಷಣೆ ಪ್ರಕರಣ: ವಿಡಿಯೋ ಶೇರ್​ ಮಾಡಿದ ಕಾಂಗ್ರೆಸ್​

    ಲಖೀಂಪುರ್​ ಖೇರಿ ಘಟನೆ: ನಿವೃತ್ತ ನ್ಯಾಯಮೂರ್ತಿಗಳ ತನಿಖಾ ಆಯೋಗ ನೇಮಕ

    ಸತತ 8ನೇ ಬಾರಿ ರೆಪೋ ದರದಲ್ಲಿ ಯಥಾಸ್ಥಿತಿ: IMPS ವಹಿವಾಟಿನ ಮಿತಿ 2 ರಿಂದ 5 ಲಕ್ಷಕ್ಕೆ ಹೆಚ್ಚಿಸಿದ RBI

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts