

ಲಖನೌ: ಉತ್ತರ ಪ್ರದೇಶದ ಲಾಖಿಂಪುರ್ ಖೇರಿಯಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋವೊಂದನ್ನು ಕಾಂಗ್ರೆಸ್ ಪಕ್ಷ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ಮೋದಿ ಸರ್ಕಾರದ ಮೌನವು ಅವರನ್ನು ಪಾಲುದಾರರನ್ನಾಗಿ ಮಾಡುತ್ತದೆ? ಎಂದು ವಿಡಿಯೋ ಕುರಿತು ಬರೆಯಲಾಗಿದೆ.
ವಿಡಿಯೋದಲ್ಲಿ ಏನಿದೆ? ರೈತರ ಗುಂಪೊಂದು ಪ್ರತಿಭಟನೆ ಮಾಡುತ್ತಾ ರಸ್ತೆ ಮೇಲೆ ಹೋಗುತ್ತಿರುವುದನ್ನು ನೀವು ಕಾಣಬಹುದು. ಈ ಸಂದರ್ಭದಲ್ಲಿ ಜೀಪ್ ಒಂದು ಅವರ ಮೇಲೆ ಹಾದು ಹೋಗುತ್ತದೆ. ಬಿಳಿ ಅಂಗಿ, ಹಸಿರು ತುರ್ಬನ್ ಧರಿಸಿರುವ ರೈತನೊಬ್ಬ ಕಾರಿನ ಬಾನೆಟ್ ಮೇಲೆ ಬಿದ್ದಿರುವುದು ಮತ್ತು ಇತರರು ತಮ್ಮ ಪ್ರಾಣ ಉಳಿಸಲು ರಸ್ತೆಯ ಬದಿಗೆ ಜಿಗಿದಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಯಾರಾದರೂ ಗಾಯಗೊಂಡಿದ್ದಾರಾ ಎಂಬುದನ್ನು ಪರಿಶೀಲಿಸದೇ ತಮ್ಮ ಪಾಡಿಗೆ ಜೀಪ್ ಚಲಾಯಿಸಿಕೊಂಡು ಹೋಗುವುದು ಕೂಡ ವಿಡಿಯೋದಲ್ಲಿ. ಜೀಪ್ ಹಿಂದೆಯೇ ಕಪ್ಪು ಬಣ್ಣದ ಎಸ್ಯುವಿ ಕಾರು ಹಾದು ಹೋಗುತ್ತದೆ. ಎರಡು ವಾಹನಗಳು ಹಾದು ಹೋಗುವ ಸಮಯದಲ್ಲಿ ಸುಮಾರು ಅರ್ಧ ಡಜನ್ಗೂ ಹೆಚ್ಚು ಮಂದಿ ರಸ್ತೆ ಬದಿಗಳಲ್ಲಿ ಬಿದ್ದಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಕಾಂಗ್ರೆಸ್ ಪಕ್ಷವು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಈ ವೀಡಿಯೊದ ಸತ್ಯಾಸತ್ಯತೆ ಇನ್ನು ದೃಢವಾಗಿಲ್ಲ. ಆದರೆ, ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಘಟನೆ ಹಿನ್ನೆಲೆ ಏನು?
ಉತ್ತರಪ್ರದೇಶದ ಲಾಖಿಂಪುರ್ ಖೇಲಿಯಲ್ಲಿ ನಡೆದ ಪ್ರತಿಭಟನಾನಿರತ ರೈತರು ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಎಂಟು ಜನರು ಸಾವಪ್ಪಿದ್ದಾರೆ. ಈ ಘಟನೆಗೆ ಎರಡೂ ಕಡೆಗಳಿಂದ ಬೇರೆ ಬೇರೆ ಚಿತ್ರಣಗಳನ್ನು ನೀಡಲಾಗುತ್ತಿದ್ದು, ವಾಸ್ತವಿಕವಾಗಿ ಅಲ್ಲಿ ನಡೆದದ್ದೇನು ಎಂಬ ಸತ್ಯಾಂಶ ಇನ್ನೂ ಹೊರಬೀಳಬೇಕಿದೆ. ಹೀಗಿರುವಾಗ, ರೈತರ ಮೇಲೆ ಕಾರನ್ನು ಚಲಾಯಿಸಿದರೆಂದು ಆರೋಪಿಸಲಾಗುತ್ತಿರುವ ಕೇಂದ್ರ ಸಚಿವ ಅಜಯ್ ಮಿಶ್ರ ಅವರ ಮಗ ಆಶಿಶ್ ಮಿಶ್ರ, ತಾವು ಘಟನಾ ಸ್ಥಳದಲ್ಲಿ ಇರಲೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇಂಡಿಯ ಟುಡೇಗೆ ನೀಡಿರುವ ಸಂದರ್ಶನದಲ್ಲಿ, ತಾವು ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೆ ಬನ್ಬೀರ್ಪುರ ಗ್ರಾಮದಲ್ಲಿ ನಡೆಯುತ್ತಿದ್ದ ಸಮಾರಂಭದಲ್ಲಿದ್ದುದಾಗಿ ಹೇಳಿದ್ದಾರೆ. ಆದಾಗ್ಯೂ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶೀಶ್ ಮಿಶ್ರಾ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)