More

    ಲಾಕ್​ಡೌನ್ ಸಂಕಷ್ಟ ಮೆಟ್ಟಿನಿಂತ ರೈತ

    ವಿಜಯ ಸೊರಟೂರ ಡಂಬಳ

    ಲಾಕ್​ಡೌನ್ ಕಾರಣದಿಂದಾಗಿ ಬಾಳೆ ಇಂದು ಬೆಲೆ ಕಳೆದುಕೊಂಡಿದೆ. ಖರೀದಿದಾರರು ಬಾಳೆ ಖರೀದಿಗೆ ಮನಸ್ಸು ಮಾಡುತ್ತಿಲ್ಲ. ಆದರೂ ಇದರಿಂದ ಧೃತಿಗೆಡದ ರೈತನೊಬ್ಬ ತಾನು ಬೆಳೆದ ಬಾಳೆಯನ್ನು ತಾನೇ ಮನೆ ಮನೆಗೆ ಮಾರಾಟ ಮಾಡಿ ಉತ್ತಮ ಆದಾಯ ಗಳಿಸಿ ಇತರರಿಗೆ ಮಾದರಿಯಾಗಿದ್ದಾನೆ.

    ಡಂಬಳ ವ್ಯಾಪ್ತಿಯ ಡೋಣಿ ಗ್ರಾಮದ ಶಂಕರಗೌಡ ಪಾಟೀಲ ಅವರು ಎರಡೂವರೆ ಎಕರೆಯಲ್ಲಿ ಬಾಳೆ ಬೆಳೆದರು. ಕಟಾವು ಕೂಡ ಮಾಡಿದರು. ಆದರೆ, ಲಾಕ್​ಡೌನ್ ಪರಿಣಾಮ ಜಮೀನಿಗೆ ಖರೀದಿದಾರರು ಬಾರದಿರುವುದರಿಂದ ಸ್ವಂತ ಟ್ರ್ಯಾಕ್ಟರ್​ನಲ್ಲಿ ಹಾಕಿಕೊಂಡು ಮಾರಾಟಕ್ಕೆ ಮುಂದಾಗಿದ್ದಾರೆ.

    ಸದ್ಯ ಮಾರುಕಟ್ಟೆಯಲ್ಲಿ 1 ಕೆ.ಜಿ. ಬಾಳೆಗೆ 6-10 ರೂ. ಬೆಲೆ ಇದೆ. ಇದರಿಂದ ಮಾಡಿದ ಖರ್ಚು ಕೂಡ ಬರುವುದಿಲ್ಲ. ಆದ್ದರಿಂದ ಶಂಕರಗೌಡ ಅವರು ಟ್ರ್ಯಾಕ್ಟರ್​ನಲ್ಲಿ ಹಳ್ಳಿಗಳಿಗೆ ತೆರಳಿ, ಡಜನ್ ಬಾಳೆ ಹಣ್ಣಿಗೆ 20- 25 ರೂ.ನಂತೆ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಕ್ವಿಂಟಾಲ್​ಗೆ 2,500 ರೂ.ನಂತೆ 16 ಕ್ವಿಂಟಾಲ್​ಗೆ 40,000 ರೂ. ಸಂಪಾದಿಸಿದ್ದಾರೆ. ಮೂರ್ನಾಲ್ಕು ದಿನಗಳ ಹಿಂದೆ 16 ಕ್ವಿಂಟಾಲ್ ಬಾಳೆಹಣ್ಣು ತಗೆದುಕೊಂಡು ಕದಡಿ, ಬಳಗಾನೂರು, ಹೊಂಬಳ, ಲಿಂಗದಾಳ ಮತ್ತಿತರ ಗ್ರಾಮೀಣ ಪ್ರದೇಶಕ್ಕೆ ಹೋಗಿ ಮಾರಾಟ ಮಾಡಿದ್ದಾರೆ.

    ಮಂಗಳವಾರ 15 ಕ್ವಿಂಟಲ್ ಬಾಳೆ ಹಣ್ಣನ್ನು ಟ್ರ್ಯಾಕ್ಟರ್​ನಲ್ಲಿ ಹಾಕಿಕೊಂಡು ಗ್ರಾಮದ ಸುತ್ತಲಿನ ಡಂಬಳ, ಮೇವುಂಡಿ, ಹಿರೇವಡ್ಡಟ್ಟಿ, ಕದಾಂಪುರ, ಜಂತ್ಲಿ ಶಿರೂರು ಮತ್ತಿತರ ಗ್ರಾಮೀಣ ಪ್ರದೇಶಕ್ಕೆ ತೆರಳಿ ಮಾರಾಟ ಮಾಡಿದ್ದೇವೆ. ಬುಧವಾರವೂ ಉತ್ತಮ ಆದಾಯ ಬಂದಿದೆ ಎನ್ನುತ್ತಾರೆ ರೈತ ಶಂಕರಗೌಡ ಪಾಟೀಲ.

    ನಗರ ಪ್ರದೇಶದಿಂದ ವ್ಯಾಪಾರಸ್ಥರು ಜಮೀನಿಗೆ ಬಂದು ಬಾಳೆ ಖರೀದಿಸಿಕೊಂಡು ಹೋಗುತ್ತಿದ್ದರು. ಲಾಕ್​ಡೌನ್ ಪರಿಣಾಮ ಖರೀದಾರರು ಮುಂದೆ ಬರುತ್ತಿಲ್ಲ. ಹೀಗಾಗಿ ನಾವೇ ಟ್ರ್ಯಾಕ್ಟರ್ ಮೂಲಕ ಮಾರಾಟಕ್ಕೆ ಮುಂದಾಗಿದ್ದೇವೆ. ಇದರಿಂದ ಉತ್ತಮ ಆದಾಯ ಗಳಿಸಬಹುದು.

    | ಶಂಕರಗೌಡ ಪಾಟೀಲ, ರೈತ

    ಡಂಬಳ ವ್ಯಾಪ್ತಿಯ ಕೆಲವು ತೋಟಗಾರಿಕೆ ಬೆಳೆಗಾರರು ಉಳ್ಳಾಗಡ್ಡಿ, ಪೇರಲ, ಬಾಳೆ ಹಣ್ಣು, ತರಕಾರಿಯನ್ನು ಆಟೋ, ಟ್ಯಾಕ್ಸಿ, ಟ್ರ್ಯಾಕ್ಟರ್ ವಾಹನಗಳ ಮೂಲಕ ಮಾರಾಟ ಮಾಡಲು ಮುಂದಾಗಿರುವುದು ಶ್ಲಾಘನೀಯ ಕಾರ್ಯ. ಇದರಿಂದ ಬೆಳೆ ನಷ್ಟ ತಪ್ಪುತ್ತದೆ. ಅಗತ್ಯಬಿದ್ದರೆ ಇಲಾಖೆ ಸಲಹೆ ಪಡೆದುಕೊಳ್ಳಬೇಕು.

    | ವೈ.ಎಚ್. ಜಾಲವಾಡಗಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts