More

    ವಾಹನ ಸರ್ಕಾರದ್ದೇ, ಅಸಲಿ; ಅಧಿಕಾರಿ ಮಾತ್ರ ನಕಲಿ!; ನಿಮ್ಮಲ್ಲಿಗೂ ಬರಬಹುದು ಇಂಥದ್ದೇ ವಸೂಲಿಗಾರರು!

    ಶಿವಮೊಗ್ಗ: ಆಹಾರ ಸುರಕ್ಷತಾ ವಿಭಾಗದ ಆಹಾರ ಅಂಕಿತ ಅಧಿಕಾರಿಯ ವಾಹನದಲ್ಲಿ ಬಂದ ನಕಲಿ ಅಧಿಕಾರಿಯೊಬ್ಬ ನಗರದ ಹೋಟೆಲ್-ಬೇಕರಿಗಳ ಮಾಲೀಕರಿಂದ ಹಣ ಸುಲಿಗೆ ಮಾಡಿರುವುದು ಬೆಳಕಿಗೆ ಬಂದಿದೆ. ಇಲಾಖೆ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದು ಆರೋಪಿ ಪರಾರಿಯಾಗಿದ್ದಾನೆ.

    ವಿನೋಬನಗರದಲ್ಲಿ ನೂತನವಾಗಿ ಆರಂಭಗೊಂಡ ಬೆಣ್ಣೆದೋಸೆ ಹೋಟೆಲ್, ಗೊರೂರು ಮಾರ್ಟ್‌ಗೆ ಭೇಟಿ ಕೊಟ್ಟಿದ್ದ ನಕಲಿ ಅಧಿಕಾರಿ ಹೆಸರು ಗಂಗಾಧರ್. ಆತನದ್ದು ಆಹಾರ ಅಂಕಿತ ಅಧಿಕಾರಿ ಕಚೇರಿಯಲ್ಲಿ ಡೇಟಾ ಆಪರೇಟರ್ ಕೆಲಸ. ಆದರೆ ಇಲಾಖೆ ವಾಹನದಲ್ಲಿ ಸುತ್ತಾಡಿ ಅಂಗಡಿ, ಹೋಟೆಲ್, ಬೇಕರಿಗಳ ಮಾಲೀಕರಿಂದ ಹಣ ಸುಲಿಗೆ ಮಾಡುವುದು ಆತನ ಕೆಲಸವಾಗಿದೆ.

    ಭಾನುವಾರ ವಿನೋಬನಗರ ಭಾಗದ ಗೊರೂರು ಮಾರ್ಟ್‌ಗೆ ಇಲಾಖೆ ವಾಹನದಲ್ಲಿ ಭೇಟಿ ಕೊಟ್ಟಿದ್ದ ಆತ ತಾನು ಆಹಾರ ಅಂಕಿತ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಪರಿಶೀಲನೆ ನೆಪದಲ್ಲಿ ಒಳ ಪ್ರವೇಶಿಸಿ ಕೆಲ ಲೋಪಗಳನ್ನು ತೋರಿಸಿ ದಂಡದ ರೂಪದಲ್ಲಿ 12 ಸಾವಿರ ರೂ. ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದ. ಅಂಗಡಿ ಮಾಲೀಕರು ಸೋಮವಾರ ಕೊಡುವುದಾಗಿ ಹೇಳಿ ಕಳುಹಿಸಿದ್ದರು.

    ಮರುದಿನ ಬೆಳಗ್ಗೆ ಮತ್ತೆ ಅದೇ ವಾಹನದಲ್ಲಿ ಬಂದ ನಕಲಿ ಅಧಿಕಾರಿ ಎರಡು ಸಾವಿರ ರೂ. ಪಡೆದಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಕಲಿ ಅಧಿಕಾರಿ ಸುಳಿವು ಸಿಕ್ಕ ಕೆಲ ಮಾಧ್ಯಮದವರು ಸ್ಥಳಕ್ಕೆ ತೆರಳಿ ಆತನ ಪದನಾಮ ಮತ್ತು ಗುರುತಿನ ಚೀಟಿ ಕೇಳಿದಾಗ ಗಲಿಬಿಲಿಗೊಂಡ ಆತ ತಾನು ಆಹಾರ ವಿಭಾಗದಲ್ಲಿ ಡೇಟಾ ಎಂಟ್ರಿ ಆಪರೇಟರ್ ಎಂದಿದ್ದಾನೆ. ಸಾಹೇಬರು ನನಗೆ ಪರಿಶೀಲನೆಗೆ ಕಳುಹಿಸಿದ್ದಾರೆಂದು ಹೇಳಿದ್ದಾನೆ. ಆಹಾರ ಅಂಕಿತ ಅಧಿಕಾರಿಗೆ ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದಾಗ ಇಲಾಖೆ ವಾಹನದ ಚಾಲಕನ ಕೈಗೆ ಮೊಬೈಲ್​ಫೋನ್​ ನೀಡಿದ ನಕಲಿ ಅಧಿಕಾರಿ ಸ್ಥಳದಿಂದ ಓಡಿ ಹೋಗಿದ್ದಾನೆ. ವಿನೋಬನಗರ ಠಾಣೆ ಪೊಲೀಸರು ಇಲಾಖೆ ವಾಹನವನ್ನು ಜಪ್ತಿ ಮಾಡಿ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಾರಿಯಾದ ನಕಲಿ ಅಧಿಕಾರಿಯ ಬಂಧನಕ್ಕೆ ಜಾಲ ಬೀಸಿದ್ದಾರೆ.

    ಇಲಾಖೆ ವಾಹನ ಕೊಟ್ಟಿದ್ಯಾರು?: ಡಾ. ಮಧು ಅವರು ಆಹಾರ ಸುರಕ್ಷತಾ ವಿಭಾಗದ ಅಂಕಿತ ಅಧಿಕಾರಿ. ಪ್ಯಾಕ್ ಆದ ಆಹಾರ ಪರಿಶೀಲನೆ ಸೇರಿದಂತೆ ಹಲವೆಡೆ ದಾಳಿ ನಡೆಸಿ ನ್ಯೂನತೆಗಳಿದ್ದರೆ ಸ್ಥಳದಲ್ಲೇ ದಂಡ ವಿಧಿಸುವ ಅಧಿಕಾರವೂ ಅವರಿಗೆ ಇದೆ. ಆದರೆ ಇಲಾಖೆ ವಾಹನದಲ್ಲಿ ಡಾ. ಮಧು ಬಂದಿರಲಿಲ್ಲ. ಬದಲಿಗೆ ಗಂಗಾಧರ್ ಬಂದಿದ್ದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಆತನಿಗೆ ಇಲಾಖೆ ವಾಹನ ಕೊಟ್ಟಿದ್ಯಾರು ಎಂಬುದು ಪ್ರಶ್ನೆಯಾಗಿದೆ.

    ಕಚೇರಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿದ್ದ ಗಂಗಾಧರ್‌ನೇ ಮೇಲಧಿಕಾರಿಗಳ ಗಮನಕ್ಕೆ ತರದೇ ಚಾಲಕನ ಜತೆಗೂಡಿ ಹಣ ಸುಲಿಗೆಗೆ ಮುಂದಾಗಿದ್ದನೇ ಅಥವಾ ಮೇಲಧಿಕಾರಿಗಳ ಸೂಚನೆಯಂತೆ ಹೋಟೆಲ್, ಅಂಗಡಿಗಳಿಗೆ ಭೇಟಿ ನೀಡಿ ಹಣ ಪಡೆದಿದ್ದನೆ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗಗೊಳ್ಳಬೇಕಿದೆ.

    ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಮುಂದಿನ ವರ್ಷ ಮಹತ್ವದ ಬದಲಾವಣೆ; ಸಿಎಂ ಘೋಷಣೆ…

    ಅಂದು ಅಪ್ಪಾಜಿಗೆ, ಇಂದು ‘ಅಪ್ಪು’ಗೆ; ರಾಜ್​ ಕುಟುಂಬಕ್ಕೆ 3 ದಶಕಗಳಲ್ಲಿ 2 ಕರ್ನಾಟಕ ರತ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts