More

    ಜಾತ್ರೆ ಎಂದರೆ ಬರೀ ಜಾತ್ರೆಯಲ್ಲ ಅದೊಂದು ಭಾವಸಂಭ್ರಮ

    ಜಾತ್ರೆಯಲ್ಲಿ ಜಾತಿ, ವರ್ಗ ಇತ್ಯಾದಿ ಭೇದವಿಲ್ಲದೆ ಜನರು ಒಂದೆಡೆ ಸೇರಿ ಸಂಭ್ರಮಿಸುವ ಪರಿಯೇ ಅನನ್ಯ. ಜಾತ್ರೆಯನ್ನು ಆನಂದಿಸುವುದರಲ್ಲಿ ಬಡವ-ಶ್ರೀಮಂತ ವ್ಯತ್ಯಾಸ ಇಲ್ಲ. ಜಾತ್ರೆ ತೇರನ್ನು ಎಲ್ಲರೂ ಸೇರಿ ಎಳೆಯುತ್ತಾರೆ. ಜಾತ್ರೆ ನಡೆಯುವ ಊರಿನಲ್ಲಿ ನೆಂಟರಿಷ್ಟರ ಸಮಾಗಮವಾಗುತ್ತದೆ. ಆ ಮನೆಯಲ್ಲಿ ಹಬ್ಬದ ಸಂಭ್ರಮ ಮೇಳೈಸುತ್ತದೆ. ಹೀಗೆ ಜಾತ್ರೆ ಎಂಬುದು ವಿಶಿಷ್ಟ ಭಾವಗಳ ಅನಾವರಣ.

    ಜಾತ್ರೆ ಎಂದರೆ ಬರೀ ಜಾತ್ರೆಯಲ್ಲ ಅದೊಂದು ಭಾವಸಂಭ್ರಮಮಗ/ಮಗಳ ಕೈ ಹಿಡಿದುಕೊಂಡ ತಂದೆ ಜಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾನೆ. ಮಗುವಿನ ಮನಸು, ಕಣ್ಣು ಎಲ್ಲ ಸಾಲು ಸಾಲು ಅಂಗಡಿಗಳ ಮೇಲೆ. ಒಂದಾ ಎರಡಾ! ಅದೊಂದು ಅದ್ಭುತ ಲೋಕ. ತರಹೇವಾರಿ ಗೊಂಬೆಗಳು, ಬಗೆ ಬಗೆ ಆಟಿಕೆ ಸಾಮಗ್ರಿಗಳು, ವೈವಿಧ್ಯಮಯ ತಿಂಡಿತಿನಿಸುಗಳು, ಬೆಂಡು ಬತ್ತಾಸು, ಅದೋ ಅಲ್ಲಿ ಆಗಸದೆತ್ತರಕ್ಕೆ ಕರೆದೊಯ್ಯುವ ತೊಟ್ಟಿಲು, ಮತ್ತೊಂದು ಕಡೆ ಜಾದೂಗಾರನ ಕೈಚಳಕ… ಜಾತ್ರೆಯಲ್ಲಿ ಮಗು ಕಳೆದುಹೋಗಲು ಇನ್ನೇನು ಬೇಕು. ತಂದೆಗೋ ಮಗುವನ್ನು ಈ ಜನಜಂಗುಳಿಯಿಂದ ಸುರಕ್ಷಿತವಾಗಿ ಮನೆಗೆ ಕರೆದೊಯ್ದರೆ ಸಾಕು ಎಂಬ ಮನಸ್ಥಿತಿ. ಇದು ಜಾತ್ರೆಯ ಒಂದು ಶಾಶ್ವತ ರೂಪಕ. ಸ್ಥಳ ಮತ್ತು ಜನರು ಬದಲಾಗಬಹುದು ಅಷ್ಟೇ.

    ಜಾತ್ರೆ ಎಂದರೆ ಹಾಗೇ. ಅದು ಕೇವಲ ಜಾತ್ರೆಯಲ್ಲ. ಲೌಕಿಕ-ಅಲೌಕಿಕದ ಸಂಗಮ. ಒಂದೆಡೆ ಜಾತ್ರಾ ಗದ್ದುಗೆಯಲ್ಲಿ ವಿರಾಜಮಾನ ದೇವರು. ಅಲ್ಲಿ ನಡೆಯುವ ವಿವಿಧ ಸೇವೆಗಳು. ಇನ್ನೊಂದೆಡೆ ಮನುಜನ ಮನವನ್ನು ಸೆಳೆಯುವ ಜಾತ್ರಾ ಆಕರ್ಷಣೆಗಳು. ದಕ್ಷಿಣ ಭಾರತದ ದೊಡ್ಡ ಜಾತ್ರೆಗಳಲ್ಲಿ ಒಂದಾದ ಶಿರಸಿ ಮಾರಿಕಾಂಬಾ ಜಾತ್ರೆ ಸಡಗರ ಈಗ ಗರಿಗೆದರಿದೆ. ಮಾರ್ಚ್ 19ರಂದು ಆರಂಭವಾಗಿರುವ ಜಾತ್ರೆ 27ರವರೆಗೆ ನಡೆಯುತ್ತದೆ. ರಾಜ್ಯದ ವಿವಿಧ ಭಾಗಗಳಿಂದ ಜನರು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ. ಹೊರ ರಾಜ್ಯಗಳಲ್ಲೂ ಮಾರಿಕಾಂಬೆ ಭಕ್ತರು ಇದ್ದಾರೆ. ಮೂಲತಃ ಇಲ್ಲಿನವರಾಗಿ, ಉದ್ಯೋಗ ನಿಮಿತ್ತ ಹೊರ ಊರುಗಳಲ್ಲಿ ಇರುವವರಿಗೆ ಎರಡು ವರ್ಷಕ್ಕೆ ಒಮ್ಮೆ ನಡೆಯುವ ಶಿರಸಿ ಜಾತ್ರೆ ಬಂತು ಎಂದರೆ ಏನೋ ಸಡಗರ. ಯಾವಾಗ ಇಲ್ಲಿಗೆ ಬಂದು ಮಾತೆ ಮಾರಿಕಾಂಬೆಯ ದರ್ಶನ ಪಡೆಯುತ್ತೇನೆಯೋ ಎಂಬ ತವಕ. ಜಾತ್ರೆಯಲ್ಲಿ ಸುತ್ತಾಡಿ ಮುದ ಪಡೆಯುವ ಉತ್ಸಾಹ. ಜಾತ್ರಾ ಗದ್ದುಗೆಯಲ್ಲಿ ಪವಡಿಸಿದ ಮಾರಿಕಾಂಬೆಯ ಸೊಬಗನ್ನು ಪದಗಳಲ್ಲಿ ವರ್ಣಿಸಲಾಗದು. ಸರ್ವಾಲಂಕಾರ ಭೂಷಿತೆಯಾದ ದೇವಿ. ಕೆಂಪು ವರ್ಣದ ಮುಖ ಮುದ್ರಿಕೆಯ ಮೂರ್ತಿ ಎದುರು ನಿಂತಾಗ ಸಾಕ್ಷಾತ್ ದೇವಿಯೇ ಧರೆಗಿಳಿದಂತೆ ಅನಿಸುತ್ತದೆ. ದೇವಸ್ಥಾನದಲ್ಲಿ ಇರುವಾಗಲೂ ಅಷ್ಟೇ. ದೇವಿಯನ್ನು ನೋಡಿದಷ್ಟು ಮತ್ತೂ ನೋಡಬೇಕು ಎನಿಸುವ ಭಾವ. ಏಳು ಅಡಿಗಳ ಕಾಷ್ಟ ವಿಗ್ರಹ. ಎಂಟು ಕೈಗಳು.

    ಮಾರಿಕಾಂಬೆ ಶಿರಸಿಯಲ್ಲಿ ನೆಲೆಗೊಂಡ ಕುರಿತು ಆಸಕ್ತಿದಾಯಕ ಐತಿಹ್ಯವಿದೆ. ಹಿಂದೆ ಬಸವ ಎಂಬ ಆಸಾದಿ ತನ್ನ ಸಂಗಡಿಗರ ಜೊತೆ ಪ್ರತಿ ವರ್ಷ ಚಂದ್ರಗುತ್ತಿಯ ತೇರಿಗೆ ಹೋಗುತ್ತಿದ್ದ. ಒಮ್ಮೆ ಗುತ್ತಿ ಸೀಮೆಯಲ್ಲಿ ಹೋಗುತ್ತಿದ್ದಾಗ ಅಲ್ಲಿನ ಜನ ಆತನನ್ನು ತಡೆದು ತೊಂದರೆ ಉಂಟು ಮಾಡಿದ್ದರು. ಇದರಿಂದ ಮನನೊಂದ ಆತ ಮಾರನೇ ವರ್ಷ ಚಂದ್ರಗುತ್ತಿ ಜಾತ್ರೆಗೆ ಹೋಗದೆ ಶಿರಸಿಯಲ್ಲಿಯೇ ಉಳಿದುಕೊಂಡಿದ್ದ. ಒಂದು ದಿನ ರಾತ್ರಿ ಕನಸಿನಲ್ಲಿ ದೇವಿ ಬಂದು ‘ನಾನು ದ್ಯಾಮವ್ವ. ನಿಮ್ಮೂರ ಕೆರೆಯಲ್ಲಿ ಇದ್ದೇನೆ. ತೆಗೆಯಿರಿ’ ಎಂದು ಹೇಳಿದ ಹಾಗಾಯಿತು. ಆತ ಊರ ಗೌಡರಿಗೆ ವಿಷಯ ತಿಳಿಸಿದ. ಮಾರನೇ ದಿನ ಕೆರೆಯಲ್ಲಿ ಹುಡುಕಿದಾಗ ಪೆಟ್ಟಿಗೆಯೊಂದು ತೇಲುತ್ತಿರುವುದು ಗೋಚರಿಸಿತು. ಅ ಪೆಟ್ಟಿಗೆಯನ್ನು ತೆರೆದರೆ ಏನಾಶ್ಚರ್ಯ! ದೇವಿಯ ವಿಗ್ರಹ ಇತ್ತು. ಇದನ್ನು ಕಂಡ ಜನರು ಸಂತೋಷಗೊಂಡರು. ಹೀಗೆ ಮಾರಿಕಾಂಬೆ ಇಲ್ಲಿ ನೆಲೆ ನಿಂತಳು.

    ದೇವಿ ವಿಗ್ರಹ ಇರುವ ಪೆಟ್ಟಿಗೆ ಇಲ್ಲಿಗೆ ಹೇಗೆ ಬಂತು ಎಂಬುದಕ್ಕೂ ಐತಿಹ್ಯ ಇದೆ. ಹಾನಗಲ್​ನಲ್ಲಿ ಶಕ್ತಿಪೀಠಗಳಿದ್ದ ಬಗ್ಗೆ ಮಹಾಭಾರತದಲ್ಲಿ ಉಲ್ಲೇಖವಿದೆ. ಇದು ಅಂದಿನ ವಿರಾಟ ನಗರವಾಗಿದ್ದು, ಅಜ್ಞಾತವಾಸದಲ್ಲಿದ್ದಾಗ ಧರ್ಮರಾಯನು ವಿರಾಟ ನಗರದ ದ್ವಾರದಲ್ಲಿ ದುರ್ಗೆಯನ್ನು ನೋಡಿ ರಕ್ಷಣೆಗಾಗಿ ಮತ್ತು ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿದ ಎನ್ನಲಾಗುತ್ತದೆ. ಹಾನಗಲ್​ನಲ್ಲಿ ಜಾತ್ರಾ ಮಹೋತ್ಸವ ಬಹು ಸಂಭ್ರಮದಿಂದ ನಡೆಯುತ್ತಿತ್ತು. ಒಂದು ಸಲ ಕಳ್ಳರು ಜಾತ್ರೆ ಮುಗಿದ ನಂತರ ದೇವಿಯ ವಿಗ್ರಹ ಇರಿಸಿದ ಪೆಟ್ಟಿಗೆಯನ್ನು ಕದ್ದು ಶಿರಸಿಗೆ ತಂದು ಅದರಲ್ಲಿದ್ದ ಆಭರಣಗಳನ್ನು ತೆಗೆದುಕೊಂಡು ಪೆಟ್ಟಿಗೆಯನ್ನು ಕೆರೆಯಲ್ಲಿ ಹಾಕಿ ಹೋದರು. ಆ ವಿಗ್ರಹವನ್ನು ನಂತರ ಇಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂಬ ಐತಿಹ್ಯವಿದೆ. ಗುತ್ತಿ ಸೀಮೆಯವರ ಜೊತೆಗಿನ ವೈಮನಸ್ಯದ ಕಾರಣ ಶಿರಸಿಯ ಜನರು ಚಂದ್ರಗುತ್ತಿಗೆ ಹೋಗದೆ ಮಾರಮ್ಮನಿಗೆ ನಡೆದುಕೊಳ್ಳಲು ಶುರುಮಾಡಿದರು. ಕ್ರಮೇಣ ದೇವಿಯ ಖ್ಯಾತಿ ಹೆಚ್ಚತೊಡಗಿತು. ಶ್ರೀ ಶಾಲಿವಾಹನ ಶಕೆ 1611 ಶುಕ್ಲ ಪಕ್ಷದ ಅಷ್ಟಮಿ ಮಂಗಳವಾರದಂದು (ಕ್ರಿ.ಶ. 1689) ದೇವಿಯನ್ನು ಈಗಿರುವ ದೇಗುಲದ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತು. ಇಪ್ಪತ್ತನೇ ಶತಮಾನದ ಮೊದಲ ದಶಕದಲ್ಲಿ ಶಿರಸಿಯಲ್ಲಿ ಪ್ಲೇಗ್ ರೋಗ ವಿಪರೀತವಾಗಿತ್ತು. ಜನರು ಊರ ಹೊರಗೆ ಉಳಿಯಬೇಕಾದ ಪರಿಸ್ಥಿತಿ ಬಂದೊದಗಿತ್ತು. ದೇವಿಯ ಕರುಣೆಯಿಂದ ರೋಗ ನಿಯಂತ್ರಣಕ್ಕೆ ಬಂದಿತು. ಕಾಲರಾ, ಮೈಲಿಬೇನೆಯಂತಹ ಸಾಂಕ್ರಾಮಿಕ ರೋಗಗಳು ಬಂದಾಗ ಸಹ ಜನ ಮೊರೆ ಹೊಕ್ಕಿದ್ದು ದೇವಿಯನ್ನೇ. ಹೀಗೆ ಜನರ ಕಷ್ಟ ಕಾರ್ಪಣ್ಯಗಳನ್ನು ದೂರಮಾಡುವ ಮಾರಿಕಾಂಬೆ ಭಕ್ತರ ಮನದಲ್ಲಿ ಮತ್ತಷ್ಟು ಗಟ್ಟಿಯಾಗಿ ನೆಲೆಯೂರಿದಳು. ಇದೊಂದು ಶಕ್ತಿಪೀಠವಾಗಿ ಮೆರುಗು ಪಡೆಯಿತು.

    ಮಾರಿಕಾಂಬಾ ದೇವಸ್ಥಾನದ ಮಾಜಿ ಅಧ್ಯಕ್ಷ ಡಾ. ವೆಂಕಟೇಶ ನಾಯ್ಕ ಅವರು ಆಸಕ್ತಿದಾಯಕ ಅಂಶವೊಂದನ್ನು ಮುಂದಿಡುತ್ತಾರೆ. ಪುರಿಯ ಜಗನ್ನಾಥ ಅಷ್ಟಕದಲ್ಲಿ ಯಶೋದೆ ಶಿರಸಿ ಎಂಬ ಪ್ರಸ್ತಾಪ ಬರುತ್ತದೆ. ಅಲ್ಲದೆ, ಬನವಾಸಿಯ ಮಧುಕೇಶ್ವರ ದೇವಾಲಯದ ಮೇಲೆ ಇರುವ ನಾಗಮಂಡಲ ಕಲೆ ಮಾರಿಗುಡಿಯ ಮೇಲೆ ಸಹ ಕಂಡುಬರುತ್ತದೆ. ಹೀಗಾಗಿ ದೇವಸ್ಥಾನದ ಇತಿಹಾಸದ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕು ಎಂಬುದು ಅವರ ಅಭಿಪ್ರಾಯ. ಈ ದೇಗುಲದ ಎದುರು ಆಂಜನೇಯ ದೇವಸ್ಥಾನ ಇರುವುದು ಅಪರೂಪದ ಸಂಗತಿ. ಶಿರಸಿಯ ಸುತ್ತ 50ಕ್ಕೂ ಅಧಿಕ ಮಾರಿಕಾಂಬಾ ದೇಗುಲಗಳಿವೆ ಎಂಬ ಅಂಶವನ್ನು ಕೂಡ ಅವರು ತೆರೆದಿಡುತ್ತಾರೆ.

    ಜಾತ್ರೆ ಸಂದರ್ಭದಲ್ಲಿ ನಡೆಯುವ ವಿಧಿವಿಧಾನಗಳು ವಿಶಿಷ್ಟ. ಈ ಕಾರ್ಯಕ್ರಮಗಳನ್ನು ನೆರವೇರಿಸಲು ಕೆಲವು ಕುಟುಂಬಗಳಿಗೆ ಜವಾಬ್ದಾರಿ ಇರುತ್ತದೆ. ಇವರನ್ನು ‘ಬಾಬುದಾರರು’ ಎಂದು ಕರೆಯಲಾಗುತ್ತದೆ. ಜಾತ್ರೆ ದಿನಾಂಕ ನಿಗದಿಯಾದ ಮೇಲೆ ಇವರು ತಂತಮ್ಮ ಹೊಣೆಗಾರಿಕೆಗಳನ್ನು ಸೇವಾಭಾವದಿಂದ ಮಾಡುತ್ತಾರೆ. ಹಿಂದೆ ಇಲ್ಲಿದ್ದ ಪ್ರಾಣಿಬಲಿ ಸಂಪ್ರದಾಯ ನಿಲ್ಲಬೇಕು ಎಂಬ ಬಯಕೆ ಕೆಲವರಿಗಿತ್ತು. ಆಗ ದೇಗುಲದ ಮುಖ್ಯ ಟ್ರಸ್ಟಿ ಆಗಿದ್ದ ಎಸ್.ಎನ್. ಕೇಶವೈನ ಅವರು ಒಮ್ಮೆ ಬಲಿಕೋಣವನ್ನು ಬಲಿ ಕೊಡುವ ಹಿಂದಿನ ದಿನ ಅಪಹರಿಸುತ್ತಾರೆ. ಇದರಿಂದ ಅನೇಕರು ಕೋಪಗೊಂಡು ಗಲಾಟೆ ಆಗುವ ಸಾಧ್ಯತೆ ಇತ್ತು. ಆಗ ಕೇಶವೈನ್ ಅವರು ಜಾಣ್ಮೆಯಿಂದ ಸನ್ನಿವೇಶವನ್ನು ನಿಭಾಯಿಸುತ್ತಾರೆ. ಗಾಂಧಿಯವರು 1930ರ ವೇಳೆಗೆ ಶಿರಸಿಗೆ ಆಗಮಿಸಿದ್ದರು. ಅವರನ್ನು ದೇಗುಲಕ್ಕೆ ಆಹ್ವಾನಿಸಿದಾಗ ಅಲ್ಲಿ ಪ್ರಾಣಿಬಲಿ ಪದ್ಧತಿ ಬಗ್ಗೆ ತಿಳಿದು ತಾನು ಬರುವುದಿಲ್ಲ ಎಂದು ಹೇಳುತ್ತಾರೆ. ಪ್ರಾಣಿಬಲಿ ಪದ್ಧತಿಗೆ ತಿಲಾಂಜಲಿ ಇಡಲು ಇದು ಕಾರಣವಾಯಿತು. ನಂತರ ಕೋಣದ ಬದಲು ಕರಿಕುಂಬಳಕಾಯಿ ಬಲಿ ಕೊಡುವ ಪದ್ಧತಿ ಬಂತು.

    ಶಿರಸಿ ಜಾತ್ರೆ ಆರ್ಥಿಕ ಆಯಾಮವನ್ನು ಸಹ ಹೊಂದಿದೆ. ವಿವಿಧ ಬಗೆಯ ಅಂಗಡಿಗಳು ಒಂದು ಕಡೆಯಾದರೆ, ನಾಟಕ, ಯಕ್ಷಗಾನ ಇತ್ಯಾದಿ ಸಾಂಸ್ಕೃತಿಕ ಚಟುವಟಿಕೆಗಳು ಮತ್ತೊಂದು ಕಡೆ. ಬಗೆ ಬಗೆ ವಸ್ತು ಮಾರಾಟ ಮಾಡುವವರು ಸ್ಥಳೀಯರೇ ಆಗಿರುತ್ತಾರೆ ಎಂದಿಲ್ಲ. ಉತ್ತರದ ಕಡೆಯಿಂದ ಸಹ ಬರುತ್ತಾರೆ. ಹಿಂದಿ ಬಿಟ್ಟು ಬೇರೆ ಭಾಷೆ ಬರದವನ ಜೊತೆಗೆ ಕನ್ನಡ ಹೊರತುಪಡಿಸಿ ಬೇರೆ ಭಾಷೆ ಬರದ ಹಳ್ಳಿ ಜನರು ಸಹ ಚೌಕಾಶಿ ಮಾಡುತ್ತ ಖರೀದಿ ಮಾಡುವ ಬಗೆಯನ್ನು ನೋಡಿಯೇ ಅರಿಯಬೇಕು. ಈ ನಿಟ್ಟಿನಲ್ಲಿ ನೋಡಿದಾಗ ಜಾತ್ರೆ ಸಹಕಾರ ತತ್ವದ ವೇದಿಕೆ ಕೂಡ ಹೌದು. ಹಾಗೇ ಸಾಂಸ್ಕೃತಿಕ ರಾಯಭಾರಿ ಸಹ. ತಿಂಗಳುಗಟ್ಟಲೆ ಕಾಲ ಜಾತ್ರೆಯು ಬಹು ಸಂಸ್ಕೃತಿಯ ತಾಣವಾಗಿ ಮಾರ್ಪಡುತ್ತದೆ. ಹಳ್ಳಿ-ಪೇಟೆಯ ಜನರು ಒಂದೆಡೆ ಸೇರಿ ಸಂಭ್ರಮಿಸುವ ಸ್ಥಳವಾಗುತ್ತದೆ. ಜಾತ್ರೆಗೆ ಬರುವ ನಾಟಕ ಕಂಪನಿಗಳು ಸರಿಸುಮಾರು ಮಳೆಗಾಲದವರೆಗೂ ಇಲ್ಲಿ ಪ್ರದರ್ಶನ ನೀಡುತ್ತವೆ.

    ಜಾತ್ರೆ ಮನುಜನ ಬದುಕಿನ ರೂಪಕ ಸಹ ಹೌದು ಎನಿಸುತ್ತದೆ. ಮಗುವಾಗಿದ್ದಾಗ ಜಾತ್ರೆಗೆ ಬರುವ ಸಂಭ್ರಮವೇ ಬೇರೆ. ಆಗ ಆಟಿಕೆ, ಗೊಂಬೆ, ವಿನೋದಾವಳಿಗಳತ್ತ ಗಮನ. ನಂತರ ಯುವ ವಯಸ್ಸಿನಲ್ಲಿ ಜಾತ್ರೆಯನ್ನು ಪರಿಭಾವಿಸುವ ಪರಿ ಬೇರೆ. ಅಲ್ಲಿ ಹುಡುಗಾಟದ ತಿರುಗಾಟ. ಗುಂಪು ಕಟ್ಟಿಕೊಂಡು ಅಕಾರಣವಾಗಿ ಜಾತ್ರೆ ಸುತ್ತುವ ಉಮೇದು. ನವ ವಿವಾಹಿತರಿಗೆ ಜಾತ್ರೆ ತೆರೆದುಕೊಳ್ಳುವ ಬಗೆ ಭಿನ್ನ. ಸಂಗಾತಿಯ ಕೈಹಿಡಿದುಕೊಂಡು ಜಾತ್ರೆ ಪೇಟೆ ಸುತ್ತುವ ರೋಮಾಂಚನ ಮರೆಯದ ಅನುಭವ. ಜೀವನಪೂರ್ತಿ ಕೈಹಿಡಿದು ಸಾಗುವ ವಾಗ್ದಾನಕ್ಕೆ ದೇವಿ ಸಾಕ್ಷಿಯಾಗುತ್ತಾಳೆ. ಬಳಿಕ ಪಾಲಕರಾಗಿ ಜಾತ್ರೆಗೆ ಬರುವಾಗಿನ ಕಾಳಜಿಯೇ ಬೇರೆ. ಅಲ್ಲಿ ಪಡೆಯುವುದಕ್ಕಿಂತ ಕೊಡಿಸುವತ್ತ, ಕುಟುಂಬ ಸದಸ್ಯರ ಸುರಕ್ಷತೆಯತ್ತ ಹೆಚ್ಚು ಗಮನ. ವಯಸ್ಸಾದಾಗ ಜಾತ್ರೆಯ ಸ್ವರೂಪ ಗ್ರಹಿಸುವ ಬಗೆ ಭಿನ್ನ. ದೇವಿಯ ದರ್ಶನ ಮಾಡಿಕೊಂಡು ವಾಪಸು ಮನೆಗೆ ಹೋದರೆ ಸಾಕೆಂಬ ಭಾವ. ಜಾತ್ರೆಯ ಗದ್ದಲ ಗೌಜಿ ಮನಸನ್ನು ತಟ್ಟುವುದಿಲ್ಲ. ಕೊನೆಗೊಂದು ದಿನ ಅವನು ಜಾತ್ರೆಯಲ್ಲಿ ಕಾಣುವುದಿಲ್ಲ. ಬದಲಿಗೆ ತಂದೆಯ ಕೈ ಹಿಡಿದುಕೊಂಡು ಬೆರಗುಗಣ್ಣು ಬಿಡುತ್ತ ಬರುವ ಮಗು ಅಲ್ಲಿ ಹಾಜರಿ ಹಾಕುತ್ತದೆ. ಇದೇ ಕಾಲಚಕ್ರ, ಜೀವನಚಕ್ರ. ಜಾತ್ರೆಯ ತೊಟ್ಟಿಲು ಒಂದು ಸುತ್ತು ತಿರುಗಿ ಮತ್ತೊಂದು ಸುತ್ತಿಗೆ ಅಣಿಯಾಗುವ ಹಾಗೆ. ತೊಟ್ಟಿಲಿನಲ್ಲಿ ಕೂಡ್ರುವ ಪಾತ್ರಗಳು ಬದಲಾಗುತ್ತವೆ. ಆದರೆ ತೊಟ್ಟಿಲು ತಿರುಗುತ್ತ ಇರುತ್ತದೆ. ಜಾತ್ರೆಗೆ ಬರುವ ಮನುಷ್ಯರು ಬದಲಾಗುತ್ತ ಇರಬಹುದು. ಆದರೆ ಜಾತ್ರಾ ಗದ್ದುಗೆಯಲ್ಲಿ ಪವಡಿಸುವ ದೇವಿ ಶಾಶ್ವತ. ಇದೇ ನಿಸರ್ಗ ನಿಯಮ.

    ಶಿರಸಿ ಮಾತ್ರವಲ್ಲ ಭಾರತದಾದ್ಯಂತ ಜಾತ್ರೋತ್ಸವದ ಕಂಪು ಹರಡಿದೆ. ಹಾಗೆ ನೋಡಿದರೆ ನಮ್ಮ ಅಸ್ಮಿತೆಯನ್ನು ಉಳಿಸಿಕೊಂಡು ಬರುವಲ್ಲಿ ಇಂಥ ಆಚರಣೆಗಳ ಕೊಡುಗೆ ದೊಡ್ಡದು. ಜಾತ್ರೆಯಲ್ಲಿ ಜಾತಿ, ವರ್ಗ ಇತ್ಯಾದಿ ಭೇದವಿಲ್ಲದೆ ಜನರು ಒಂದೆಡೆ ಸೇರಿ ಸಂಭ್ರಮಿಸುವ ಪರಿಯೇ ಅನನ್ಯ. ಜಾತ್ರೆಯನ್ನು ಆನಂದಿಸುವುದರಲ್ಲಿ ಬಡವ-ಶ್ರೀಮಂತ ವ್ಯತ್ಯಾಸ ಇಲ್ಲ. ಜಾತ್ರೆ ತೇರನ್ನು ಎಲ್ಲರೂ ಸೇರಿ ಎಳೆಯುತ್ತಾರೆ. ಜಾತ್ರೆ ನಡೆಯುವ ಊರಿನಲ್ಲಿ ನೆಂಟರಿಷ್ಟರ ಸಮಾಗಮವಾಗುತ್ತದೆ. ಆ ಮನೆಯಲ್ಲಿ ಹಬ್ಬದ ಸಂಭ್ರಮ ಮೇಳೈಸುತ್ತದೆ. ವಿಭಕ್ತ ಕುಟುಂಬಗಳು ಜಾಸ್ತಿ ಆಗುತ್ತಿವೆ ಎಂಬ ಈ ಕಾಲಘಟ್ಟದಲ್ಲಿ ಜಾತ್ರೆ ಒಂದು ದೊಡ್ಡ ಕೂಡು ಕುಟುಂಬದ ಸಂಕೇತದಂತೆ ಭಾಸವಾಗುತ್ತದೆ.

    ಬನಶಂಕರಿ ಜಾತ್ರೆ, ಸವದತ್ತಿ ಯಲ್ಲಮ್ಮನ ಜಾತ್ರೆ, ನಂಜನಗೂಡು ಜಾತ್ರೆ, ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ, ಯಡಿಯೂರು ಜಾತ್ರೆ… ಪಟ್ಟಿ ಮಾಡುತ್ತ ಹೋದರೆ ಮುಗಿಯದು. ಅಲ್ಲಲ್ಲಿನ ದೇವರು ಹಾಗೂ ಸಂಪ್ರದಾಯಕ್ಕೆ ಅನುಗುಣವಾಗಿ ಜಾತ್ರೆಯ ಸ್ವರೂಪದಲ್ಲಿ ಬದಲಾವಣೆ ಇರಬಹುದು. ಆದರೆ ಇದರ ಆಳದಲ್ಲಿ ಇರುವ ಮೂಲಸ್ರೋತ ಒಂದೇ. ರಾಮಾಯಣ, ಮಹಾಭಾರತಗಳು ಭಾರತದ ಏಕಸೂತ್ರವನ್ನು ಕಾಪಾಡಿಕೊಂಡು ಬಂದಿರುವ ರೀತಿಯಲ್ಲಿ ಜಾತ್ರೆಗಳು ಸಹ ನಮ್ಮ ಸಾಮೂಹಿಕ ಬದುಕಿಗೆ ತಮ್ಮದೇ ಆದ ಕೊಡುಗೆ ನೀಡುತ್ತ ಬಂದಿವೆ.

    ಕೊನೇ ಮಾತು: ಶಿರಸಿ ಜಾತ್ರೆಯಲ್ಲಿ ಹೀಗೆ ಓಡಾಡುತ್ತಿದ್ದಾಗ ಐದು ರಸ್ತೆ ವೃತ್ತದಲ್ಲಿ ‘ಹೊಸಬೆಳಕು ಮೂಡುತಿದೆ… ಬಂಗಾರದ ರಥವೇರುತ… ಆಕಾಶದಿ ಓಡಾಡುತ… ಅತ್ತ ಇತ್ತ ಸುತ್ತ ಮುತ್ತ ಚೆಲ್ಲಿದಾ… ಕಾಂತಿಯಾ ರವಿ ಕಾಂತಿಯಾ…’ ಎಂಬ ಹಾಡು ಕಿವಿಗೆ ಬಿತ್ತು. ಯಾರಪ್ಪ ಇಲ್ಲಿ ಆರ್ಕೆಸ್ಟ್ರಾ ಹಾಕಿದವರು ಎಂದು ನೋಡಿದರೆ, ಮೂರ್ನಾಲ್ಕು ಮಂದಿ ಅಂಧರು ಅಲ್ಲಿ ಕೂತು ಹಾಡುತ್ತಿದ್ದರು. ಜನರು ಅಲ್ಲಿರುವ ಪೆಟ್ಟಿಗೆಯಲ್ಲಿ ಹಣ ಹಾಕಿ ಮುಂದೆ ಸಾಗುತ್ತಿದ್ದರು. ಯಾರು ಹಾಡು ಆಲಿಸಿದರು, ಹಣ ನೀಡಿದರು ಎಂಬುದು ಅವರಿಗೆ ಕಾಣುವುದಿಲ್ಲ. ಆದರೆ ಅಂತಃಕರಣವನ್ನು ತಟ್ಟುತ್ತಿತ್ತು. ಹೌದಲ್ಲ, ಈ ಜಾತ್ರೆ ಎಂಬುದು ಎಷ್ಟೆಲ್ಲ ಜನರಿಗೆ ಹೊಸ ಬೆಳಕನ್ನು ತರುತ್ತದೆಯಲ್ಲ ಎನಿಸಿತು. ಭಕ್ತರಿಗೆ ಇಲ್ಲಿ ಬದುಕಿನ ಬೆಳಕು ಗೋಚರಿಸಿದರೆ, ಕೊಳ್ಳುಗರಿಗೆ ಬಯಕೆ ಈಡೇರಿಕೆಯ ತೃಪ್ತಿ. ವ್ಯಾಪಾರಿಗಳಿಗೆ ವ್ಯಾಪಾರದ ವೇದಿಕೆ. ಜಾತ್ರೆ ಎಂದರೆ ಕೇವಲ ಜಾತ್ರೆಯಲ್ಲ. ಅದು ಭಕ್ತಿಯ ಶಕ್ತಿಯ ಅನಾವರಣ. ಮಾರಿಕಾಂಬೆಗೆ ಮತ್ತೆ ಮನ ಮಣಿಯಿತು.

    ಕೂದಲು ಸೊಂಪಾಗಿ, ದಟ್ಟವಾಗಿ ಬೆಳೆಯಬೇಕಾ? ಹಾಗಾದ್ರೆ ಇದನ್ನು ಟ್ರೈ ಮಾಡುವುದೇ ಬೆಸ್ಟ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts