More

    ವಿರಾಜಪೇಟೆ-ಗೋಣಿಕೊಪ್ಪ ರಾಜ್ಯ ಹೆದ್ದಾರಿಯಲ್ಲಿ ಮಿತಿಮೀರಿದ ಅವಘಡ

    ವಿರಾಜಪೇಟೆ: ಸಾರಿಗೆ ವ್ಯವಸ್ಥೆ ಹಾಗೂ ರಸ್ತೆಗಳು ಉತ್ತಮ ಸ್ಥಿತಿಯಲ್ಲಿದ್ದರೆ ಅಭಿವೃದ್ಧಿ ಎನ್ನುವುದು ತನ್ನಿಂದ ತಾನೇ ಆಗುವುದು ಎಂಬ ಮಾತಿದೆ. ಆದರೆ ಉತ್ತಮ ರಸ್ತೆಯಿದ್ದರೂ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಮಾತ್ರ ಇಲ್ಲಿ ಶೋಚನೀಯ.

    ಜಿಲ್ಲೆಯ ಪ್ರಮುಖ ಪಟ್ಟಣಗಳಾದ ವಿರಾಜಪೇಟೆ ಹಾಗೂ ಗೋಣಿಕೊಪ್ಪದ ನಡುವೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 90 ರಲ್ಲಿ ರಸ್ತೆ ಅಭಿವೃದ್ಧಿಯೊಂದಿಗೆ ಅಪಘಾತಗಳೂ ಹೆಚ್ಚಾಗುತ್ತಿವೆ.

    ವಿರಾಜಪೇಟೆಯಿಂದ ಮುಂದಿರುವ ಅಂಬಟ್ಟಿ ಬಿಟ್ಟಂಗಾಲ ಕಾವೇರಿ ಕಾಲೇಜು ಸಮೀಪ ದಿನದಿಂದ ದಿನಕ್ಕೆ ಅಪಘಾತದ ಸಂಖ್ಯೆ ಹೆಚ್ಚಾಗುಗುತ್ತಿದೆ. ಇದಕ್ಕೆ ಕಾರಣ ವೇಗದ ಚಾಲನೆ. ಅತಿ ವೇಗದಿಂದ ಹೋಗುವ ವಾಹನಗಳು ಚಾಲಕರ ನಿಯಂತ್ರಣ ತಪ್ಪಿ ಅಪಘಾತಕ್ಕೆ ಒಳಗಾಗುತ್ತಿರುವುದು ಸಾಮಾನ್ಯವಾಗಿದೆ. ಮೈಸೂರು ಹಾಗೂ ಕೇರಳದಿಂದ ಬರುವ ವಾಹನ ಸವಾರರಿಗೆ ಈ ಮಾರ್ಗದ ಅರಿವಿಲ್ಲದ ಹಾಗೂ ರಸ್ತೆ ಉತ್ತಮವಾಗಿರುವುದರಿಂದ ವೇಗವಾಗಿ ಬರುತ್ತಾರೆ. ರಸ್ತೆಯಲ್ಲಿನ ತೀವ್ರ ಗತಿಯ ತಿರುಗುಗಳಲ್ಲಿ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗದೆ ಮುಂದಿರುವ ವಾಹನಕ್ಕೆ ಡಿಕ್ಕಿ ಹೊಡೆಯುತ್ತಿದ್ದಾರೆ. ಇಲ್ಲವಾದರೆ ವಾಹನಗಳು ನಿಯಂತ್ರಣ ಕಳೆದುಕೊಂಡು ಅಕ್ಕ ಪಕ್ಕದಲ್ಲಿರುವ ಕಾಫಿ ತೋಟ ಅಥವಾ ಗದ್ದೆಗಳಿಗೆ ಉರುಳಿ ಬೀಳುತ್ತಿವೆ.

    ಅತಿವೇಗದ ಚಾಲನೆ ಅಪಘಾತಕ್ಕೆ ಒಂದೆಡೆ ಕಾರಣವಾದರೆ, ಇನ್ನೊಂದು ಕಡೆ ರಸ್ತೆ ಮಧ್ಯದಲ್ಲಿ ಬೀಡು ಬಿಟ್ಟಿರುವ ದನಗಳ ಸಮೂಹ. ರಾತ್ರಿ ವೇಳೆ ಸಂಚರಿಸುವ ಸಂದರ್ಭದಲ್ಲಿ ದನಗಳು ವಾಹನಗಳಿಗೆ ದಿಢೀರ್ ಅಡ್ಡ ಬರುತ್ತವೆ. ಇಂತಹ ಸಂದರ್ಭದಲ್ಲಿ ಪ್ರಾಣಿಗಳ ಪ್ರಾಣ ಉಳಿಸಲು ಹೋಗಿ ಅಥವಾ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಅಪಘಾತಗಳಾಗುತ್ತಿವೆ ಎಂಬುದು ಸ್ಥಳೀಯರ ಮಾತು.

    ಸ್ಪೀಡ್ ಬ್ರೇಕರ್, ಹುಬ್ಬುಗಳ ಕೊರತೆ: ಈ ಮಾರ್ಗ ಹೆಚ್ಚಾಗಿ ತಿರುವು ಹಾಗೂ ತಗ್ಗುಗಳಿಂದ ಕೂಡಿರುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ರಸ್ತೆಯ ಉಬ್ಬುಗಳನ್ನು ನಿರ್ಮಿಸಿಲ್ಲ. ಈ ಕಾರಣದಿಂದಾಗಿ ವಾಹನಗಳು ಶರವೇಗದಲ್ಲಿ ಸಂಚರಿಸುತ್ತವೆ. ಇನ್ನು ರಾತ್ರಿ ವೇಳೆ ಹೆಡ್‌ಲೈಟ್‌ಗಳು ನೇರವಾಗಿ ವಾಹನ ಸವಾರರ ಕಣ್ಣಿಗೆ ಬಡಿಯುತ್ತದೆ. ಪರಿಣಾಮ ಎದುರು ಬರುವ ವಾಹನಗಳ ಸವಾರರಿಗೆ ರಸ್ತೆ ಸ್ಪಷ್ಟವಾಗಿ ಕಾಣದ ಕಾರಣ ರಸ್ತೆ ಬದಿಯ ಮರಗಳಿಗೆ, ಮೈಲಿಗಲ್ಲುಗಳಿಗೆ ಡಿಕ್ಕಿ ಹೊಡೆಯುವುದು ಸಾಮಾನ್ಯವಾಗಿದೆ.

    ಈ ರಸ್ತೆಯ ಎರಡೂ ಬದಿಗಳಲ್ಲಿ ಗದ್ದೆಗಳೇ ಇರುವುದರಿಂದ ಹಗಲಿನಲ್ಲಿ ಮೇವಿಗಾಗಿ ಬರುವ ಜಾನುವಾರುಗಳು ರಾತ್ರಿ ವೇಳೆ ರಸ್ತೆಯಲ್ಲಿ ಬೀಡು ಬಿಡುತ್ತಿವೆ. ಅಲ್ಲದೆ ಹೆದ್ದಾರಿಯಲ್ಲಿ ಓಡಾಡುತ್ತ ಸಂಚಾರಕ್ಕೆ ತೊಡಕುಂಟು ಮಾಡುತ್ತಿವೆ. ಗುಂಪು ಗುಂಪಾಗಿ ಮೇಯಲು ಆಗಮಿಸುವ ಜಾನುವಾರುಗಳು ಕೆಲವೊಮ್ಮೆ ರಸ್ತೆ ಮಧ್ಯದಲ್ಲಿ ಮಲಗಿ ವಿಶ್ರಮಿಸುತ್ತಿರುವುದು ಸಾಮಾನ್ಯ. ಸಂಜೆಯಾದರೂ ಸ್ವಸ್ಥಾನಕ್ಕೆ ಮರಳುವುದಿಲ್ಲ. ಈ ರೀತಿಯಾಗಿ ಬಿಟ್ಟಂಗಾಲ ಹಾಗೂ ಅಂಬಟ್ಟಿ ಗ್ರಾಮದಲ್ಲಿ ಜಾನುವಾರುಗಳಿಂದ ಹೆಚ್ಚಿನ ಅಪಘಾತಗಳು ಉಂಟಾಗುತ್ತಿದೆ.

    ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಆಗಮಿಸುವ ಪ್ರವಾಸಿಗರಿಗೆ ಈ ರಸ್ತೆಯ ಬಗ್ಗೆ ಮಾಹಿತಿ ಸಿಗುವ ಕೆಲವು ಕ್ರಮಗಳನ್ನು ಪೊಲೀಸ್ ಇಲಾಖೆ ಮಾಡಬೇಕಿದೆ. ರಸ್ತೆಯಲ್ಲಿ ಹುಬ್ಬುಗಳು ಇಲ್ಲದ ಕಾರಣ ಬ್ಯಾರಿಕೇಡ್ ಅಳವಡಿಸುವ ಮೂಲಕ ವಾಹನಗಳ ವೇಗಕ್ಕೆ ನಿಯಂತ್ರಣ ಹಾಕಬೇಕಿದೆ. ಕೊಡಗು ಜಿಲ್ಲೆಗೆ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಜಾ ದಿನಗಳಲ್ಲಿ ವಾಹನದಟ್ಟಣೆ ಕಾರಣಕ್ಕಾಗಿ ಸಂಚಾರ ಅಸ್ತವ್ಯಸ್ತವಾಗುತ್ತದೆ. ಆದ್ದರಿಂದ ಅಪಘಾತ ವಲಯಗಳಲ್ಲಿ ಹೆಚ್ಚಿನ ಸುರಕ್ಷತೆ ಕೈಗೊಳ್ಳುವುದು ಅನಿವಾರ್ಯವಾಗಿದೆ.

    ಸುಮಾರು 16.2 ಕಿಲೋಮೀಟರ್ ಉದ್ದದ ರಾಜ್ಯ ಹೆದ್ದಾರಿ ಇದಾಗಿದ್ದು, ವಿರಾಜಪೇಟೆ, ಅಂಬಟ್ಟಿ, ಬಿಟ್ಟಂಗಾಲ, ಕೊಳತೋಡು, ಬೈಗೂಡು, ಕೈಕೇರಿ ಮೂಲಕ ಗೋಣಿಕೊಪ್ಪ ನಗರ ತಲುಪುತ್ತದೆ. ಅಂಬಟ್ಟಿಯಿಂದ ಬೈಗೂಡುವರೆಗೆ ಸಂಪೂರ್ಣ ತಿರುವು ಇರುವುದರಿಂದ ಇಲ್ಲಿ ವೇಗ ನಿಯಂತ್ರಕ ಹಾಗೂ ಕೆಲವು ಕಡೆಗಳಲ್ಲಿ ಸರಿಯಾದ ಸೂಚನಾ ಫಲಕಗಳು ಇಲ್ಲ. ಹೀಗಾಗಿ ಹೆಚ್ಚಿನ ಅಪಘಾತಗಳು ಈ ಎರಡೂ ಗ್ರಾಮಗಳ ನಡುವೆ ನಿರಂತರವಾಗಿ ನಡೆಯುತ್ತಿದೆ.
    16.2 ಕಿಲೋಮೀಟರ್ ಉದ್ದದ ಈ ರಸ್ತೆಗಳಲ್ಲಿ 2017 ರಿಂದ 2024 ಏಪ್ರಿಲ್ ಅವರಿಗೆ ಒಟ್ಟು 323 ಅಪಘಾತ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 32 ಜನ ಪ್ರಾಣ ಕಳೆದುಕೊಂಡಿದ್ದಾರೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಒಂದಷ್ಟು ಸುರಕ್ಷತಾ ಕ್ರಮ ಅನುಸರಿಸಬೇಕು ಎಂಬುದು ನಾಗರಿಕರ ಒತ್ತಾಯ.

    ಮೈಸೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಇದಾಗಿದ್ದು, ವಿರಾಜಪೇಟೆಯಿಂದ ಗೋಣಿಕೊಪ್ಪದವರೆಗೆ ರಸ್ತೆ ಉತ್ತಮವಾಗಿದೆ. ಹೀಗಾಗಿ ವಾಹನ ಚಾಲಕರು, ಸವಾರರು ವೇಗದಿಂದ ಚಾಲನೆ ಮಾಡುತ್ತಾರೆ. ಸಂಚಾರ ನಿಯಮವನ್ನು ಪಾಲಿಸದ ಕಾರಣ ಹೆಚ್ಚಿನ ಅಪಘಾತಗಳು ಹಾಗೂ ಸಾವು ಸಂಭವಿಸುತ್ತಿದೆ. ರಸ್ತೆ ಮಧ್ಯದಲ್ಲಿ ಬೀಡು ಬಿಡುವ ಜಾನುವಾರುಗಳ ಮಾಲೀಕರು ಇದರ ಬಗ್ಗೆ ಗಮನ ಹರಿಸಬೇಕು. ಸಂಜೆ ಸಮಯದಲ್ಲಿ ಜಾನುವಾರುಗಳನ್ನು ಮನೆಗಳಿಗೆ ಕರೆದುಕೊಂಡು ಹೋಗುದು ಸೂಕ್ತ.
    ಎಚ್.ವಿ.ನಾಗರಾಜು ಸ್ಥಳೀಯರು , ಬಿಟ್ಟಂಗಾಲ ಗ್ರಾಮ

    ರಸ್ತೆ ಸುವ್ಯವಸ್ಥೆಯಿಂದ ಇದ್ದರೂ ಒಂದು ರೀತಿರಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣವಾಗಿದೆ. ಈ ಮಾರ್ಗದಲ್ಲಿ ಹೆಚ್ಚಿನ ತಿರುವುಗಳಿದ್ದು, ಮಂಜು ಕವಿದ ವಾತಾವರಣ, ಸಂಚಾರ ನಿಯಮವನ್ನು ಪಾಲಿಸದೆ ಚಾಲಕರು ವಾಹನವನ್ನು ವೇಗದಿಂದ ಚಾಲನೆ ಮಾಡುತ್ತಾರೆ. ಇದಲ್ಲದೆ ಮದ್ಯ ಸೇವಿಸಿ ವಾಹನ ಚಲಾಯಿತ್ತಿರುವುದೂ ಅಪಘಾತಕ್ಕೆ ಮುಖ್ಯ ಕಾರಣ. ಹೆಲ್ಮೆಟ್ ಧರಿಸದಿರುವುದು ಹಾಗೂ ಸೀಟ್ ಬೆಲ್ಟ್ ಧರಿಸದ ಕಾರಣ ಹೆಚ್ಚಿನ ಪ್ರಾಣ ಹಾನಿ ಸಂಭವಿಸುತ್ತಿದೆ.
    ರವೀಂದ್ರ ಸಬ್ ಇನ್‌ಸ್ಪೆಕ್ಟರ್ ವಿರಾಜಪೇಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts