More

    ಮಾಜಿ ಸೈನಿಕನ ಮಾದರಿ ಕೃಷಿ

    ಎಂ.ಪಿ.ವೆಂಕಟೇಶ್ ಮದ್ದೂರು
    ಸತತ 17 ವರ್ಷ ದೇಶ ಸೇವೆ ಮಾಡಿದ ಮಾಜಿ ಸೈನಿಕರೊಬ್ಬರು ಇದೀಗ ಭೂತಾಯಿಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಸಾವಯವ ಕೃಷಿ ಅವರ ಕೈಹಿಡಿದಿದೆ.

    ಹೌದು… ತಾಲೂಕಿನ ಚಿನ್ನನದೊಡ್ಡಿ ಗ್ರಾಮದ ತಿಮ್ಮದಾಸೇಗೌಡರ ಪುತ್ರ ಮಾಜಿ ಸೈನಿಕ ಶ್ರೀನಿವಾಸ್ ಅವರು ಇದೀಗ ಯಶಸ್ವಿ ಕೃಷಿಕರಾಗಿದ್ದಾರೆ. ಸಾವಯವ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ವರ್ಷಕ್ಕೆ ಲಕ್ಷಾಂತರ ರೂ. ಸಂಪಾದಿಸುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ.
    ಸಿಪಾಯಿ ಶ್ರೀನಿವಾಸ್ ಅವರು 1996ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದರು. ಜಮ್ಮು-ಕಾಶ್ಮೀರ, ಅಸ್ಸಾಂ ಸೇರಿದಂತೆ ಹಲವಾರು ರಾಜ್ಯಗಳಲ್ಲಿ 17 ವರ್ಷ ಸುದೀರ್ಘ ಸೇವೆ ಸಲ್ಲಿಸಿ 2014ರಲ್ಲಿ ನಿವೃತ್ತರಾದರು. ಬಳಿಕ ಕೃಷಿ ಮೇಲಿನ ಪ್ರೀತಿಯಿಂದ ಭೂತಾಯಿಯ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಇದೀಗ ‘ಮಾದರಿ ಕೃಷಿಕ’ರಾಗಿದ್ದಾರೆ. ಅವರಿಗೆ ಸಹೋದರ ಸಿ.ಟಿ.ಸಹೋದರ ಸಹ ಉತ್ತಮ ಸಾಥ್ ನೀಡುತ್ತಿದ್ದಾರೆ.

    ಶ್ರೀನಿವಾಸ್ ಅವರು ತಮಗಿರುವ ನಾಲ್ಕು ಎಕರೆ ಜಮೀನಿನಲ್ಲಿ ನಾಟಿ ಮೆಣಸಿನಕಾಯಿ, ನಾಟಿ ಟೊಮ್ಯಾಟೊ, ಬದನೆಕಾಯಿ, ಕೊತ್ತಂಬರಿಸೊಪ್ಪು, ಪಾಲಾಕ್ ಸೊಪ್ಪು, ಶುಂಠಿ, ಕರಿಬೇವು, ಪುದೀನ, ಈರುಳ್ಳಿ ಸೇರಿದಂತೆ ಇನ್ನಿತರ ತರಕಾರಿ ಬೆಳೆಗಳನ್ನು ನೈಸರ್ಗಿಕವಾಗಿ ಬೆಳೆಯುತ್ತಿದ್ದಾರೆ.
    ಜತೆಗೆ ತೆಂಗು, ಸೀಬೆ, ಮಾವು, ಸಪೋಟ ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳನ್ನು ಹಾಕಿದ್ದು, ಲಕ್ಷಾಂತರ ರೂ. ಲಾಭ ಗಳಿಸುತ್ತಿದ್ದಾರೆ. ಅವರ ಹೊಲದಲ್ಲಿ ಸುಮಾರು 60 ಸಿಒಡಿ ಆರೆಂಜ್ ತೆಂಗು ಹಾಗೂ 130 ನಾಟಿ ತೆಂಗಿನ ಮರಗಳನ್ನು ಬೆಳೆದಿದ್ದಾರೆ. 50 ಮಾವು, 65 ಸೀಬೆ, 40 ನಿಂಬೆಗಿಡ, 30 ಪ್ಯಾಸನ್ ಫ್ರೂಟ್(ಜ್ಯೂಸ್ ಹಣ್ಣು) ಗಿಡಗಳನ್ನು ಬೆಳೆದಿದ್ದಾರೆ. ಜೇನು ಸಾಕಣೆ ಸಹ ಮಾಡಿದ್ದಾರೆ.

    ಮಳೆ ನೀರು ಸಂಗ್ರಹ ತೊಟ್ಟಿ
    ಮಳೆ ನೀರು ಸಂಗ್ರಹಿಸಲು 2 ಗುಂಟೆ ಜಮೀನಿನಲ್ಲಿ ತೊಟ್ಟಿ ನಿರ್ಮಿಸಿದ್ದು, ಬೇಸಿಗೆ ಕಾಲದಲ್ಲಿ ನೀರಿಲ್ಲದ ಸಂದರ್ಭದಲ್ಲಿ ಡ್ರಿಪ್ ಮುಖಾಂತರ ಬೆಳೆಗಳಿಗೆ ನೀರು ಹರಿಯುವ ವ್ಯವಸ್ಥೆ ಮಾಡಿದ್ದಾರೆ. ಬೆಳೆಗಳಿಗೆ ಯಾವುದೇ ರಾಸಾಯನಿಕ ಗೊಬ್ಬರ ಬಳಕೆ ಮಾಡದೆ ಮರದಿಂದ ಉದುರುವ ಎಲೆ, ತೆಂಗಿನ ಗರಿ, ಕಾಯಿ ಸಿಪ್ಪೆಗಳನ್ನು ಗೊಬ್ಬರವಾಗಿ ಮಾರ್ಪಡಿಸಿ ವ್ಯವಸಾಯ ಮಾಡುವ ಮೂಲಕ ಉತ್ತಮ ಇಳುವರಿ ತೆಗೆಯುತ್ತ ಬಂದಿದ್ದಾರೆ. ಜಮೀನಿನ ಸುತ್ತ ಬೇಲಿ ನಿರ್ಮಿಸಿ ಭದ್ರತೆ ಮಾಡಿಕೊಂಡಿದ್ದಾರೆ.

    ಜೀವಾಮೃತ ತಯಾರಿ
    ವಿಶೇಷವೆಂದರೆ ಶ್ರೀನಿವಾಸ್ ಅವರು ತಮ್ಮ ಜಮೀನಿನಲ್ಲಿ ಯಾವುದೇ ರಾಸಾಯನಿಕ ಸಿಂಪಡಿಸದೆ ತರಕಾರಿ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಅವರು, ಜೀವಾಮೃತ ತಯಾರಿಸಿ ಅದನ್ನು ಬೆಳೆಗಳಿಗೆ ಬಳಸುತ್ತಿದ್ದಾರೆ. ‘10 ಕೆ.ಜಿ.ಸಗಣಿ, 10 ಲೀ.ಗೋಮೂತ್ರ, 2 ಕೆ.ಜಿ.ಸಾವಯವ ಬೆಲ್ಲ, 2 ಕೆ.ಜಿ. ದ್ವಿದಳ ಧಾನ್ಯ, ಒಂದು ಹಿಡಿ ಮಣ್ಣು, 10 ಲೀ. ನೀರು ಹಾಕಿ ಮೂರು ದಿನ ಹುದುಗಲು ಬಿಡಬೇಕು. ಈ ದ್ರಾವಣವೇ ಜೀವಾಮೃತ. ಒಂದು ಎಕರೆ ಕೃಷಿ ಭೂಮಿಗೆ 200 ಲೀಟರ್ ಜೀವಾಮೃತ ಸಾಕಾಗುತ್ತದೆ. ರಾಸಾಯನಿಕ ಔಷಧಗಳ ಬದಲಿಗೆ ನೈಸರ್ಗಿಕವಾಗಿ ತಯಾರಿಸಲಾದ ಈ ದ್ರಾವಣವನ್ನು ಬೆಳೆಗೆ ಸಿಂಪಡಿಸುವುದರಿಂದ ಸಸ್ಯಗಳಿಗೆ ಪೋಷಕಾಂಶ ಸಿಗುವ ಜತೆಗೆ ಬ್ಯಾಕ್ಟೀರೀಯ. ಶಿಲೀಂಧ್ರಗಳಿಗೆ ಬರುವ ರೋಗವನ್ನು ನಿಯಂತ್ರಿಸಬಹುದು ಎನ್ನುತ್ತಾರೆ ಸಿಪಾಯಿ ಶ್ರೀನಿವಾಸ್.

    ಭೂತಾಯಿ ನಂಬಿದರೆ ಕೈಬಿಡಲ್ಲ
    ಸಿಪಾಯಿ ಶ್ರೀನಿವಾಸ್ ಅವರ ಕೃಷಿ ಸಾಧನೆಯನ್ನು ನೋಡಲು ಮತ್ತು ಅನುಸರಿಸಲು ಅಕ್ಕಪಕ್ಕದ ಹಳ್ಳಿಗಳ ರೈತರು ಆಗಮಿಸಿ ಅವರಿಂದ ಮಾಹಿತಿ ಪಡೆದುಕೊಂಡು ಹೋಗಿ ಕೃಷಿ ಮಾಡಿ ಯಶಸ್ಸು ಗಳಿಸಿರುವ ಸಾಕಷ್ಟು ಉದಾಹರಣೆಗಳಿವೆ. ಕೆಲಸ ಅರಸಿಕೊಂಡು ಅಲ್ಪ ಸಂಬಳಕ್ಕಾಗಿ ತಂದೆ-ತಾಯಿ ಬಿಟ್ಟು ಬೆಂಗಳೂರಿನಂತಹ ನಗರ ಪ್ರದೇಶಗಳಿಗೆ ತೆರಳುವ ಯುವಕರು, ತಮ್ಮ ಜಮೀನಿನಲ್ಲೇ ದುಡಿದು ಹಣ ಸಂಪಾದನೆ ಮಾಡಬಹುದು. 20 ಗುಂಟೆ ಜಮೀನಿರುವವರು ಸಹ ಶೂನ್ಯ ಬಂಡವಾಳದಲ್ಲಿ ಆದಾಯ ಪಡೆಯಬಹುದು ಎನ್ನುವ ಶ್ರೀನಿವಾಸ್ ಅವರು, ಭೂಮಿ ತಾಯಿ ನಂಬಿದರೆ ಎಂದಿಗೂ ಕೈ ಬಿಡುವುದಿಲ್ಲ ಎಂಬ ಧ್ಯೇಯವಾಕ್ಯ ಅಳವಡಿಸಿಕೊಳ್ಳಬೇಕೆಂದು ಯುವಕರಿಗೆ ಕಿವಿಮಾತು ಹೇಳುತ್ತಾರೆ.

    ಹೋಟೆಲ್ ಉದ್ಯಮದಲ್ಲೂ ಯಶಸ್ಸು
    ಮಾಜಿ ಸೈನಿಕ ಶ್ರೀನಿವಾಸ್ ಅವರು ಕೃಷಿ ಜತೆಗೆ ಹೋಟೆಲ್ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದು, ಅಲ್ಲಿಯೂ ಯಶಸ್ಸು ಕಂಡಿದ್ದಾರೆ. ತಮಗಿರುವ 4 ಹೋಟೆಲ್‌ಗಳಿಗೆ ತಮ್ಮ ಜಮೀನಿನಲ್ಲಿ ಬೆಳೆದ ವಿವಿಧ ತರಕಾರಿಗಳನ್ನು ಅಡುಗೆಗೆ ಬಳಸಿಕೊಳ್ಳುವ ಮೂಲಕ ಗ್ರಾಹಕರಿಗೆ ಗುಣಮಟ್ಟದ ಆಹಾರ ನೀಡಿ ಮೆಚ್ಚುಗೆ ಗಳಿಸಿದ್ದಾರೆ. ಹೋಟೆಲ್‌ನಲ್ಲಿ ಜ್ಯೂಸ್ ಸೆಂಟರ್ ಸಹ ಇದ್ದು, ತೋಟದ ಹಣ್ಣುಗಳನ್ನು ಬಳಸಿಕೊಳ್ಳುತ್ತಿದ್ದಾರೆ.

    ನಾನು ಮೊದಲಿನಿಂದಲೂ ಸಾವಯವ ಕೃಷಿ ಪಿತಾಮಹ ಸುಭಾಶ್ ಪಾಳೇಕರ್ ಪುಸ್ತಕಗಳನ್ನು ಓದಿಕೊಂಡು ಬರುತ್ತಿದ್ದು, ಶೂನ್ಯ ಬಂಡವಾಳದಿಂದ ಆದಾಯ ತೆಗೆಯುವುದು ಹೇಗೆ ಎಂದು ತಿಳಿದು ಕೃಷಿ ಕೈಗೊಂಡಿದ್ದರಿಂದ ಯಶಸ್ಸು ಸಾಧಿಸಿದ್ದೇನೆ. ನಾನು ಬೆಳೆದ ತರಕಾರಿ-ಹಣ್ಣುಗಳನ್ನು ನಮ್ಮ ಹೋಟೆಲ್‌ಗಳಿಗೆ ಸರಬರಾಜು ಮಾಡಿಕೊಂಡು ವಾರ್ಷಿಕ ಲಕ್ಷ ರೂ.ಗಳಿಗೂ ಅಧಿಕ ಹಣವನ್ನು ಉಳಿಸುತ್ತಿದ್ದೇನೆ.
    ಶ್ರೀನಿವಾಸ್, ಮಾಜಿ ಸೈನಿಕ, ಪ್ರಗತಿ ಪರ ರೈತ

    ನನ್ನ ಸಹೋದರ ಕಳೆದ 5 ವರ್ಷಗಳಿಂದ ನೈಸರ್ಗಿಕ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ವಾರ್ಷಿಕವಾಗಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ನಾವು ಬೆಳೆಗಳಿಗೆ ಯಾವುದೇ ರಾಸಾಯನಿಕ ಗೊಬ್ಬರ ಸಿಂಪಡಿಸುವುದಿಲ್ಲ. ಸಾವಯವ ಗೊಬ್ಬರ ಬಳಸುವ ಮೂಲಕ ರಾಸಾಯನಿಕ ಮುಕ್ತ ಬೆಳೆ ಬೆಳೆಯುತ್ತಿದ್ದೇವೆ.
    ಸಿ.ಟಿ.ಶಂಕರ್, ಶ್ರೀನಿವಾಸ್ ಅವರ ಸಹೋದರ

    ಮಾಜಿ ಸೈನಿಕ ಶ್ರೀನಿವಾಸ್ ಅವರು ವೈಜ್ಞಾನಿಕವಾಗಿ ತೋಟಗಾರಿಕೆ ಬೆಳೆಗಳು ಹಾಗೂ ಮಿಶ್ರ ಬೆಳೆಗಳನ್ನು ಬೆಳೆದು ಯಶಸ್ಸು ಕಂಡಿದ್ದಾರೆ. ಅವರಿಗೆ ತೋಟಗಾರಿಕೆ ಇಲಾಖೆಯಿಂದ ಅಗತ್ಯ ಮಾಹಿತಿ ಮತ್ತು ಸಹಕಾರ ನೀಡಲಾಗುತ್ತಿದೆ.
    ಕೆ.ಎಂ.ರೇಖಾ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮದ್ದೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts