More

    ಕಾಡಾನೆ ದಾಳಿಯಿಂದ ಬೆಳೆ ಹಾನಿ, ಪ್ರತಿ ವರ್ಷವೂ ತಪ್ಪದ ಗೋಳು

    ಆನೇಕಲ್: ತಮಿಳುನಾಡು-ರಾಜ್ಯದ ಗಡಿ ಭಾಗದಲ್ಲಿ 5 ಕಾಡಾನೆಗಳ ಹಿಂಡು ಕೃಷಿ ಭೂಮಿಗೆ ಲಗ್ಗೆ ಇಟ್ಟಿದ್ದು, ಅಪಾರ ಪ್ರಮಾಣದ ಬೆಳೆ ನಾಶ ಮಾಡಿದ್ದು, ರೈತರು ಕಂಗಾಲಾಗಿದ್ದಾರೆ.

    ತಾಲೂಕಿನ ಬಿದರಕಾಡಹಳ್ಳಿಯ ರೈತ ಶಿವಶಂಕರ್, ಮಂಜುನಾಥ್, ಹಲವು ರೈತರ ಹೊಲ-ಗದ್ದೆಗಳಲ್ಲಿ ಬೆಳೆದಿದ್ದ ಟೊಮ್ಯಾಟೊ, ಸೌತೆಕಾಯಿ, ಮೂಲಂಗಿ, ಹೀರೇಕಾಯಿ ಬೆಳೆ ಅಪಾರ ಪ್ರಮಾಣದಲ್ಲಿ ಹಾಳಾಗಿದೆ. ಜತೆಗೆ ಹನಿ ನೀರಾವರಿ ಪೈಪ್‌ಲೈನ್‌ಗಳನ್ನು ಜಖಂಗೊಳಿಸಿರುವುದಾಗಿ ರೈತರು ಅಲವತ್ತುಕೊಂಡಿದ್ದಾರೆ.

    ಗಡಿ ಭಾಗದಲ್ಲಿ ತಮಿಳುನಾಡು ಅರಣ್ಯ ಪ್ರದೇಶದಿಂದ ಈ ಭಾಗದ ಕೃಷಿ ಭೂಮಿಗೆ ಲಗ್ಗೆ ಇಡುವ ಕಾಡಾನೆಗಳು ವರ್ಷಪ್ರತಿ ಬೆಳೆ ನಾಶ ಮಾಡುತ್ತಿವೆ. ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರೆ, ಸಿಬ್ಬಂದಿ ಕೊರತೆ ಇರುವುದಾಗಿ ಕುಂಟುನೆಪ ಹೇಳುತ್ತಾರೆ. ನಮ್ಮ ಅಳಲನ್ನು ಕೇಳುವವರೇ ಇಲ್ಲವಾಗಿದ್ದಾರೆ ಎಂದು ರೈತ ಶಿವಶಂಕರ್ ಅಲವತ್ತುಕೊಂಡಿದ್ದಾರೆ.

    ಪ್ರತಿ ವರ್ಷವೂ ತಪ್ಪದ ಗೋಳು: ಕೃಷಿಯನ್ನೇ ನಂಬಿ ಬದುಕುತ್ತಿರುವ ಕುಟುಂಬಗಳಿಗೆ ಪ್ರತಿವರ್ಷವೂ ಆನೆಗಳ ಕಾಟ ತಪ್ಪಿದ್ದಲ್ಲ. ಸಲು ಇನ್ನೇನು ಕೈ ಸೇರಬೇಕು ಎನ್ನುವಷ್ಟರಲ್ಲಿ ಆನೆಗಳ ಹಿಂಡು ಲಗ್ಗೆ ಇಟ್ಟು ಬೆಳೆ ನಾಶ ಮಾಡುತ್ತಿವೆ. ಬುಧವಾರ ರಾತ್ರಿ ಕೂಡ ಇದೇ ಪುನರಾವರ್ತನೆಯಾಗಿದೆ ಎಂದು ರೈತರು ದೂರಿದ್ದಾರೆ.

    ಚಿನ್ನಾಭರಣ ಅಡವಿಟ್ಟು, ಬೆಳೆ ಬೆಳೆದಿದ್ದೆವು. ಉತ್ತಮ ಬೆಲೆ ಸಿಗುವ ನಿರೀಕ್ಷೆಯಿತ್ತು. ಆದರೆ, ಆನೆಗಳ ದಾಂಧಲೆಯಿಂದ ಈಗ ಸಾಲ ಮರುಪಾವತಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಮಹಿಳೆ ಲಕ್ಷ್ಮಮ್ಮ ಕಣ್ಣೀರು ಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts