More

    ಸಂಡೇ ಕರ್ಫ್ಯೂಗೆ ಪೂರ್ತಿ ಸ್ತಬ್ಧ

    ಸಂಡೇ ಕರ್ಫ್ಯೂಗೆ ಪೂರ್ತಿ ಸ್ತಬ್ಧ

    ಚಿಕ್ಕಮಗಳೂರು: ಜಿಟಿಜಿಟಿ ಹನಿಯುತ್ತಿದ್ದ ಮಳೆಯಲ್ಲೇ ದಿನಸಿ, ಹಣ್ಣು, ತರಕಾರಿ ಖರೀದಿಸಿದ ಜನ. ಇಂದಿರಾ ಕ್ಯಾಂಟೀನ್​ನಲ್ಲಿ ಹಸಿವು ನೀಗಿಸಿಕೊಂಡ ನಿರ್ಗತಿಕರು. ಆಟೋ, ಟ್ಯಾಕ್ಸಿ, ಕೆಎಸ್​ಆರ್​ಟಿಸಿ ಸಂಚಾರ ಸಂಪೂರ್ಣ ಬಂದ್. ಬಿಕೋ ಎನ್ನುತ್ತಿದ್ದ ರಸ್ತೆಗಳು. ಬೀದಿಯಲ್ಲೇ ನಿದ್ರೆಗೆ ಜಾರಿದ ಪ್ರಯಾಣಿಕರು, ಗಸ್ತಿನಲ್ಲಿ ಪೊಲೀಸರು.

    ಕರೊನಾ ತಡೆಗೆ ರಾಜ್ಯ ಸರ್ಕಾರ ಕೈಗೊಂಡ ನಿರ್ಧಾರದಂತೆ ಶನಿವಾರ ರಾತ್ರಿ 8 ಗಂಟೆಯಿಂದ ಭಾನುವಾರದ ಕರ್ಫ ಸಂದರ್ಭದಲ್ಲಿ ಕಂಡುಬಂದ ದೃಶ್ಯಗಳಿವು.

    ನಗರದಲ್ಲಿ ಬೆಳಗ್ಗೆಯಿಂದಲೇ ಸುರಿಯುತ್ತಿದ್ದ ಮಳೆಯಲ್ಲಿ ಜನ ಹಾಲು, ಮೊಸರು, ದಿನಸಿ, ಕೆಲವರು ಮಾಂಸ ಖರೀದಿಸಿದರು. ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ಬೆಳಗ್ಗೆ ಮಳೆಯಲ್ಲಿಯೇ ದ್ವಿಚಕ್ರವಾಹನದಲ್ಲಿ ಆಸ್ಪತ್ರೆಗೆ ಕರೆತಂದ ಪಾಲಕರು ಚಿಕಿತ್ಸೆ ಕೊಡಿಸಿ ಹಿಂತಿರುಗಿದರು. ನಗರದ ಹೋಟೆಲ್​ಗಳು ಬಂದ್ ಆಗಿದ್ದರಿಂದ ತೊಗರಿಹಂಕಲ್ ವೃತ್ತದಲ್ಲಿರುವ ಇಂದಿರಾ ಕ್ಯಾಂಟೀನ್​ಗೆ ನಿರ್ಗತಿಕರು, ಅವಿವಾಹಿತರು, ಹೊರ ಜಿಲ್ಲೆಯಿಂದ ಆಗಮಿಸಿದ್ದ ಪ್ರಯಾಣಿಕರು ಮುಗಿಬಿದ್ದು ಹಸಿವು ನೀಗಿಸಿಕೊಂಡರು.

    ರಾತ್ರಿಯಿಂದ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಖಾಲಿಯಾಗಿ ಶ್ವಾನಗಳು ನಿದ್ರಿಸುತ್ತಿದ್ದವು. ಅಜ್ಜಂಪುರ ಸಮೀಪದ ಹೊಸೂರಿನಿಂದ ನಗರಕ್ಕೆ ಆಗಮಿಸಿದ್ದ ಕಾರ್ವಿುಕ ಮಹಿಳೆ ಮಹದೇವಮ್ಮ ಶನಿವಾರ ಹಿಂತಿರುಗಲು ವಾಹನ ಸಿಗದೆ ರಾತ್ರಿ ನಿಲ್ದಾಣದಲ್ಲೇ ತಂಗಿ ಭಾನುವಾರ ಮಧ್ಯಾಹ್ನವಾದರೂ ನಿಲ್ದಾಣದಲ್ಲಿ ಒಂಟಿಯಾಗಿ ಕುಳಿತಿದ್ದರು. ನೇತ್ರ ಚಿಕಿತ್ಸೆಗಾಗಿ ಮಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳಿದ್ದ ವೃದ್ಧ ರಾಮ ಶೆಟ್ಟಿ ಅವರಿಗೆ ಚಿಕಿತ್ಸೆ ದೊರೆಯದೆ ಶನಿವಾರ ಚಿಕ್ಕಮಗಳೂರಿಗೆ ಬಂದಿಳಿದಿದ್ದಾರೆ. ಕರ್ಫ್ಯೂ ಅರಿಯದ ವೃದ್ಧ ರಾತ್ರಿಯೆಲ್ಲ ನಿದ್ರೆಗೆಟ್ಟು ಕಾಲಕಳೆದು ಬೆಳಗ್ಗೆ ಇಂದಿರಾ ಕ್ಯಾಟೀನ್​ನಲ್ಲಿ ತಿಂಡಿ, ಊಟ ಮಾಡಿ ಊರಿಗೆ ಹಿಂತಿರುಗಲು ಲಗೇಜ್​ನೊಂದಿಗೆ ವಾಹನಕ್ಕಾಗಿ ಕಾದುಕುಳಿತಿದ್ದ ಮನಕಲಕುವ ದೃಶ್ಯ ಕಂಡು ಬಂತು. ಆಟೋ ಮತ್ತು ಟ್ಯಾಕ್ಸಿ ಸಂಚಾರವೂ ಇಲ್ಲದ ಕಾರಣ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು.

    ಭಾನುವಾರ ಮಳೆಯಲ್ಲೇ ಗಸ್ತಿನಲ್ಲಿದ್ದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕಂಡು ಜನ ಮನೆಗೆ ಹಿಂತಿರುಗಿದ್ದರಿಂದ ಬಹುತೇಕ ರಸ್ತೆಗಳು ಸ್ತಬ್ಧವಾಗಿದ್ದವು. ಗ್ರಾಮಾಂತರ ಪ್ರದೇಶದಲ್ಲಿ ಗಸ್ತು ಇದ್ದ ಕಾರಣ ಹಳ್ಳಿಗಳಲ್ಲೂ ಕರ್ಫ್ಯೂಗೆ ಗ್ರಾಮಸ್ಥರು ಸ್ಪಂದಿಸಿದರು. ಎಸ್ಪಿ ಅಕ್ಷಯ್ ಮಚ್ಚಿಂದ್ರ, ಎಎಸ್ಪಿ ಶ್ರುತಿ, ಡಿವೈಎಸ್ಪಿ ಬಸಪ್ಪ ಅಂಗಡಿ, ವೃತ್ತ ನಿರೀಕ್ಷಕರಾದ ಸಲೀಂ ಅಬ್ಬಾಸ್, ಸುರೇಶ್, ಎಸ್​ಐ ತೇಜಸ್ವಿ, ಸುತೇಶ್, ಗವಿರಾಜ್ ನಂದಿನಿ, ರುಬಿನಾ, ಸಂಚಾರಿ ಠಾಣಾಧಿಕಾರಿ ಚಂದ್ರಶೇಖರ್, ಉಷಾರಾಣಿ ಕರ್ತವ್ಯದಲ್ಲಿದ್ದರು.

    ರಹಸ್ಯ ಹಾದಿಯಲ್ಲಿ ಹೊರಗಿನವರು: ಹೊರ ಜಿಲ್ಲೆಯವರು ಒಳಪ್ರವೇಶಿಸದಂತೆ ಜಿಲ್ಲೆಯ ಎಲ್ಲ ಚೆಕ್​ಪೋಸ್ಟ್​ಗಳಲ್ಲಿ ಪೊಲೀಸರು ಕಾಯುತ್ತಿದ್ದರು. ಆದ್ದರಿಂದ ಹೊರ ಜಿಲ್ಲೆಗಳಿಂದ ಬರುವ ಪ್ರಯಾಣಿಕರು ಸಿಕ್ಕಿಬಿದ್ದರೆ ಕ್ವಾರಂಟೈನ್​ಗೆ ಒಳಪಡಬೇಕಾಗುತ್ತದೆ ಎಂಬ ಭೀತಿಯಲ್ಲಿ ಪೊಲೀಸರ ಕಣ್ತಪ್ಪಿಸಿ ಜಿಲ್ಲೆಯ ಗಡಿ ಚೆಕ್​ಪೋಸ್ಟ್​ಗಿಂತ ಹಿಂದೆ ಇರುವ ಒಳದಾರಿಗಳಲ್ಲಿ ನುಸುಳಿ ಗ್ರಾಮಗಳ ಮೂಲಕ ನಗರ ಪ್ರವೇಶಿಸುತ್ತಿದ್ದರು. ಕೆಲವು ಯುವಕರು ಗ್ರಾಮಗಳ ಹೊರವಲಯದಲ್ಲಿ ವಾಹನ ನಿಲ್ಲಿಸಿ ಅದರಲ್ಲೇ ರಾತ್ರಿ ಕಳೆದು ಕರ್ಫ್ಯೂ ಮುಗಿದ ನಂತರ ಊರಿಗೆ ತೆರಳಲು ಸಿದ್ಧರಾಗಿದ್ದರು.

    ತೋರಿಸಿದ್ದು ಆಸ್ಪತ್ರೆ ಚೀಟಿ, ದಿನಸಿ ಪಟ್ಟಿ: ಅಗತ್ಯ ಸೇವೆಗೆ ಸರ್ಕಾರ ಅವಕಾಶ ನೀಡಿರುವುದನ್ನೇ ದುರ್ಬಳಕೆ ಮಾಡಿಕೊಂಡ ಕೆಲವರು, ಪೊಲೀಸರು ವಾಹನ ಅಡ್ಡಗಟ್ಟಿದಾಗ ಹೇಳಿದ್ದು ಹಣ್ಣು, ತರಕಾರಿ, ಮೀನು, ಮಾಂಸ ಇತ್ಯಾದಿ ವಸ್ತುಗಳನ್ನು ತರಲು ಹೊರಟಿದ್ದೇವೆಂಬುದು. ತೋರಿಸಿದ್ದೆಲ್ಲ ಆಸ್ಪತ್ರೆ ಚೀಟಿ, ದಿನಸಿ ಪದಾರ್ಥಗಳ ಪಟ್ಟಿ. ಹೀಗಾಗಿ ಪೊಲೀಸರು ಸುಮ್ಮನಿರಬೇಕಾಯಿತು.

    ಗಿರಿಶ್ರೇಣಿಗಳು ಪ್ರಶಾಂತ: ಶನಿವಾರವೇ ಕರ್ಫ್ಯೂ ಜಾರಿಯಾಗಿದ್ದರಿಂದ ಗಿರಿಶ್ರೇಣಿಗಳಿಗೆ ಪ್ರವಾಸಿಗರು ಬಾರದಿದ್ದರಿಂದ ನಿಸರ್ಗ ತಾಣಗಳಲ್ಲಿ ಪ್ರಶಾಂತ ವಾತಾವರಣ ಇತ್ತು. ಕೆಲವು ಹೋಮ್ ಸ್ಟೇ, ರೆಸಾರ್ಟ್​ಗಳಲ್ಲಿ ಪ್ರವಾಸಿಗರು ಸಂಡೇ ಕರ್ಫ್ಯೂಗೂ ಮುನ್ನವೇ ಬಂದು ತಂಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ ಕುಮಾರಸ್ವಾಮಿ ಗಿರಿಶ್ರೇಣಿಯ ರೆಸಾರ್ಟ್​ವೊಂದರಲ್ಲಿ ವಾಸ್ತವ್ಯ ಹೂಡಿದ್ದಾರೆ.

    ಎಪಿಎಂಸಿಯಲ್ಲಿ ವಹಿವಾಟು: ನಗರದ ಎಂ.ಜಿ.ರಸ್ತೆ, ಐಜಿ ರಸ್ತೆ, ಹನುಮಂತಪ್ಪ ವೃತ್ತ, ಕೋಟೆ, ಹಿರೇಮಗಳೂರು, ಗವನಹಳ್ಳಿ, ಗೃಹಮಂಡಳಿ, ಉಪ್ಪಳ್ಳಿ ಬಡಾವಣೆ ಸೇರಿದಂತೆ ಎಲ್ಲೆಡೆ ಔಷಧ, ದಿನಸಿ ಹಣ್ಣಿನ ಅಂಗಡಿ ತೆರೆದಿದ್ದವು. ಮಾರ್ಕೆಟ್ ರಸ್ತೆಯಲ್ಲಿ ಮಾತ್ರ ತರಕಾರಿ, ದಿನಸಿ, ಮಾಂಸದಂಗಡಿಗಳು ಹೆಚ್ಚಿರುವುದರಿಂದ ಜನಜಂಗುಳಿಯಿಂದ ಕೂಡಿತ್ತು. ಸಂತೆ ಮೈದಾನದಲ್ಲಿ ಯುವಕರ ತಂಡ ಕ್ರಿಕೆಟ್ ಆಡುತ್ತಿತ್ತು. ಎಪಿಎಂಸಿಯಲ್ಲಿ ಬೆಳಗಿನಿಂದಲೇ ತರಕಾರಿ ವಹಿವಾಟು ನಡೆದು ಕೇರಳ, ತಮಿಳುನಾಡು, ಮಹಾರಾಷ್ಟ್ರ, ದಕ್ಷಿಣ ಕನ್ನಡ ಜಿಲ್ಲೆ ಕಡೆ ತರಕಾರಿ ವಾಹನಗಳು ಸಾಗಿದವು.

    ಚಾಲಕನಿಗೆ ಏಟು: ಶನಿವಾರ ರಾತ್ರಿ ಕರ್ಫ್ಯೂಗೂ ಮುನ್ನ ಪ್ರಯಾಣಿಕರು ಆಹಾರ ಪದಾರ್ಥ ಕೊಳ್ಳಲು ಬಂದಾಗ ಸಖರಾಯಪಟ್ಟಣದಲ್ಲಿ ವಾಹನ ನಿಲ್ಲಿಸಿಕೊಂಡು ಚಾಲಕನ ಸೀಟ್​ನಲ್ಲಿ ಕುಳಿತಿದ್ದ ಚಾಲಕನಿಗೆ ಪೊಲೀಸ್ ಸಿಬ್ಬಂದಿ ಏಕಾಏಕಿ ಲಾಠಿ ಬೀಸಿ ಕಣ್ಣಿಗೆ ಗಾಯವಾಗಿದೆ. 8 ಗಂಟೆ ನಂತರ ಪೊಲೀಸರು ಕೇಳಿದರೆ ಸರಿ, ಅದಕ್ಕೂ ಮುನ್ನವೇ ಊರಿಗೆ ತಲುಪುತ್ತಿದ್ದ ನನಗೆ ಯಾವುದೆ ತಪ್ಪಿಲ್ಲದಿದ್ದರೂ ಪೊಲೀಸ್ ಪೇದೆ ಥಳಿಸಿದ್ದು ಸರಿಯಲ್ಲ ಎಂದು ಚಾಲಕ ದಿನೇಶ್ ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts