More

    ನಿರ್ಜೀವ ಕಲ್ಲಿಗೆ ಜೀವ ಕಲೆ, ದೇವರಗುಂಡಿಯಲ್ಲಿ ಚಿತ್ರ ಮೂಲಕ ಪರಿಸರ ಜಾಗೃತಿ, ಅರಣ್ಯ ಇಲಾಖೆ ವಿನೂತನ ಅಭಿಯಾನ

    ಹರಿಪ್ರಸಾದ್ ನಂದಳಿಕೆ ಕಾರ್ಕಳ

    ಪಶ್ಚಿಮಘಟ್ಟಗಳ ಸಾಲಿನಲ್ಲಿರುವ ಜಲಪಾತ, ನದಿಗಳಿಗೆ ವಿಹಾರಕ್ಕೆ ತೆರಳುವ ಮಂದಿ, ಗುಡ್ಡಗಾಡು ಪ್ರದೇಶಕ್ಕೆ ಚಾರಣಕ್ಕೆ ಆಗಮಿಸುವ ಪ್ರವಾಸಿಗರು ಅಲ್ಲಲ್ಲಿ ಪ್ಲಾಸ್ಟಿಕ್ ಹಾಗೂ ಮದ್ಯದ ಬಾಟಲಿ ಎಸೆದು ಪರಿಸರ ಹಾಳುಗೆಡವುತಿದ್ದು, ಇದನ್ನರಿತ ಅರಣ್ಯ ಇಲಾಖೆ ಪರಿಸರ ಉಳಿಸಲು ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿ ಮೂಡಿಸುತ್ತಿದೆ.

    ಪಶ್ಚಿಮಘಟ್ಟಗಳ ಸುಂದರ ಹಸಿರಿನ ಮಡಿಲಲ್ಲಿ ಹತ್ತಾರು ಪ್ರಾಕೃತಿಕ ಸೌಂದರ್ಯ ತಾಣಗಳಿವೆ. ಅದರಲ್ಲೂ ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ ಇಂತಹ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಮಾಳ ಭಾಗದಲ್ಲಿರುವ ಹತ್ತಾರು ಜಲಪಾತ, ಚಾರಣ ಸ್ಥಳಗಳು, ಪ್ರಕೃತಿ ಪ್ರಿಯರನ್ನು ಸೆಳೆಯುತ್ತವೆ. ಇಲ್ಲಿಗೆ ಪ್ರಕೃತಿ ವೀಕ್ಷಣೆಗೆ ಬರುವ ಚಾರಣಿಗರು, ಪ್ರವಾಸಿಗರು ದೊಡ್ಡ ಪ್ರಮಾಣದಲ್ಲಿದ್ದಾರೆ. ಇಂತಹ ತಾಣಗಳ ಪೈಕಿ ಇಲ್ಲಿನ ದೇವರಗುಂಡಿ ಜಲಪಾತವೂ ಒಂದು. ಸುಂದರ ತಾಣಕ್ಕೆ ಭೇಟಿ ನೀಡುವ ಪ್ರವಾಸಿಗರು ಮೋಜು ಮಸ್ತಿ ಮಾಡಿ ಪ್ರಕೃತಿಯ ಸೌಂದರ್ಯ ಸವಿದು ಬಳಿಕ ನದಿ, ಜಲಪಾತಗಳ ಬಳಿಯಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಬಾಟಲಿ ಎಸೆಯುತ್ತಿದ್ದು ಪರಿಸರಕ್ಕೆ ತೊಂದರೆಗಳಾಗುತ್ತಿತ್ತು. ಜತೆಗೆ ಜಲಚರಗಳಿಗೂ ಸಮಸ್ಯೆಗಳಾಗುವುದನ್ನು ಅರಿತ ಅರಣ್ಯ ಇಲಾಖೆ ಪರಿಸರ ಜಾಗೃತಿಗಾಗಿ ವಿನೂತನ ಪ್ರಯೋಗ ಮಾಡಿದೆ.

    ನದಿಗಳ ಸ್ವಚ್ಛತಾ ಆಂದೋಲನ

    ಪಶ್ಚಿಮಘಟ್ಟಗಳ ಸಾಲಿನಲ್ಲಿ ಹರಿಯುವ ನದಿಗಳ ಬದಿಗಳಲ್ಲಿ ಪ್ಲಾಸ್ಟಿಕ್ ಮದ್ಯದ ಬಾಟಲಿಗಳು ಹೆಚ್ಚುತಿದ್ದು ಇದನ್ನರಿತ ಮೂಡುಬಿದಿರೆ ವಲಯ ಅರಣ್ಯಾಧಿಕಾರಿಗಳ ತಂಡ, ಹಾಗೂ ಮಾಳದ ಚಿತ್ರಕಲಾವಿದ ಸಂತೋಷ ಮಾಳ ಹಾಗೂ ವಿಷ್ಣುಮೂರ್ತಿ ಕ್ರಿಕೆಟರ್ಸ್ ತಂಡ, ಮೂಳ್ಳೂರಿನ ಭಾಗದಲ್ಲಿರುವ ದೇವರಗುಂಡಿ ಜಲಪಾತದ ಪರಿಸರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಗಾಜಿನ ಬಾಟಲಿಗಳು ಇತ್ಯಾದಿ ಪ್ರತ್ಯೇಕಿಸಿ ಇತ್ತೀಚೆಗೆ ಸ್ವಚ್ಛಗೊಳಿಸಿದ್ದಾರೆ. ಅದರೊಂದಿಗೆ ಜಲಚರಗಳ ಉಳಿವಿನ ಕುರಿತು ಅರಿವಿಗೋಸ್ಕರ ಭಿತ್ತಿ ಚಿತ್ರ ರಚನೆ ಮಾಡುವ ಮೂಲಕ ಜಲಚರಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ.

    ಬಂಡೆಗಳ ಮೇಲೆ ಸುಂದರ ಚಿತ್ರ

    ಅರಣ್ಯ ಇಲಾಖೆ ನೇತೃತ್ವದಲ್ಲಿ ಚಿತ್ರ ಕಲಾವಿದ ಮಾಳದ ಸಂತೋಷ್ ಹಾಗೂ ಅವರ ತಂಡ ನದಿಯ ತಟ ಸ್ವಚ್ಛಗೊಳಿಸಿದ ಬಳಿಕ ಬಂಡೆಕಲ್ಲುಗಳ ಮೇಲೆ ಸುಂದರ ಚಿತ್ರ ರಚಿಸಿದ್ದಾರೆ. ಸುಮಾರು 15 ಅಡಿ ಉದ್ದದ ಬಂಡೆಗಲ್ಲಿನ ಮೇಲೆ ಚಿತ್ರ ಬಿಡಿಸಿ ಅದಕ್ಕೆ ನೈಸರ್ಗಿಕ ಬಣ್ಣ ಹಚ್ಚಲಾಗಿದೆ. ಹೀಗಾಗಿ ನದಿ ಬಂಡೆಕಲ್ಲುಗಳಲ್ಲಿ ಕಲಾವಿದನ ಕುಂಚದಿಂದ ಮೀನು, ಆಮೆ, ಏಡಿ, ಕಪ್ಪೆ, ಮೊಸಳೆ ಸಹಿತ ಇತರ ಜಲಚರಗಳ ಚಿತ್ರ ಬಿಡಿಸುವ ಮೂಲಕ ನಿರ್ಜೀವ ಕಲ್ಲಿಗೆ ಜೀವ ತುಂಬಿದ್ದಾರೆ. ಜತೆಗೆ ಪರಿಸರವನ್ನು ಸಂರಕ್ಷಣೆ ಮಾಹಿತಿಯುಳ್ಳ ಬಿತ್ತಿ ಚಿತ್ರ ಅಂಟಿಸಿ ಅರಿವು ಮೂಡಿಸುವ ವಿನೂತನ ಪ್ರಯತ್ನ ಮಾಡಿದ್ದಾರೆ. ಕಲಾವಿದ ಸಂತೋಷ್ ಜತೆ ಸಂಜೀವ, ಭೋಜ, ಮನೋಜ್, ಶ್ರೀಧರ್, ಸುಧೀರ್, ಮನ್ಮಥ, ಗಣೇಶ್, ಪ್ರದೀಪ್, ಭವಿಷ್ ಹಾಗೂ ಮೂಡುಬಿದಿರೆ ವಲಯ ಅರಣ್ಯಾಧಿಕಾರಿಗಳು ಸಾಥ್ ನೀಡಿದ್ದಾರೆ.

    ನದಿ ಸಮೀಪದಲ್ಲಿ ಬಂಡೆಗಳ ಮೇಲೆ ಬಣ್ಣ ಬಣ್ಣದ ಚಿತ್ತಾರ ಮೂಡಿದ್ದು, ಇಡೀ ಪರಿಸರ ಸ್ವಚ್ಛಗೊಂಡಿದೆ. ಮುಂದೆ ಈ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರು ಹಾಗೂ ಸ್ಥಳೀಯರು ನದಿ ತಟವನ್ನು ಜತೆಗೆ ನೀರನ್ನು ಕಲುಷಿತಗೊಳಿಸದೆ ಜಲಚರಗಳನ್ನು ಉಳಿಸುವಲ್ಲಿ ಸಾಥ್ ನೀಡಬೇಕಾಗಿದೆ. ದೇವರಗುಂಡಿ ಜಲಪಾತದ ಪರಿಸರ ಸುಂದರವಾಗಿ ಕಂಗೊಳಿಸುತ್ತಿದ್ದು, ಮುಂದೆಯೂ ಸುಂದರ ಸ್ವಚ್ಛತೆಯಿಂದ ಕೂಡಿರಲು ಅರಣ್ಯ ಇಲಾಖೆ ಜತೆಯಲ್ಲಿ ಸಾರ್ವಜನಿಕರು ಕೈ ಜೋಡಿಸುವ ಅಗತ್ಯವಿದೆ.


    ಅರಣ್ಯ ಇಲಾಖೆ ಸಾಥ್ ನೀಡಿದ ಪರಿಣಾಮ ಬಂಡೆಕಲ್ಲಿನ ಮೇಲೆ ನೈಸರ್ಗಿಕ ಬಣ್ಣಗಳಿಂದ ಜಲಚರಗಳ ಚಿತ್ರ ರಚಿಸಲಾಗಿದೆ. ಜಲಪಾತದ ನೀರು ಕಲುಷಿತಗೊಳಿಸುವ ಘಟನೆ ಇಲ್ಲಿ ಮರುಕಳಿಸುತ್ತಿರುತ್ತವೆ. ಇಂತಹ ವಾತಾವರಣ ಬದಲಾಗಬೇಕು. ಅದಕ್ಕಾಗಿ ಚಿತ್ರದ ಮೂಲಕ ಪರಿಸರ, ಜಲಸಂರಕ್ಷಣೆ ಸಂದೇಶವನ್ನು ಯುವಕರು ಸೇರಿ ಚಿತ್ರಕಲೆ ಮೂಲಕ ಸಾರಿದ್ದೇವೆ. ಇದರಿಂದ ಸ್ವಯಂ ಜಾಗೃತಿ ಮೂಡಿ, ಪರಿಸರ ಸ್ವಚ್ಛವಾಗಿರಿಸಿಕೊಂಡರೆ ನಮ್ಮ ಶ್ರಮ ಸಾರ್ಥಕ.
    -ಸಂತೋಷ್ ಮಾಳ, ಚಿತ್ರ ಕಲಾವಿದ

    ಇಲಾಖೆ ವತಿಯಿಂದ ಪರಿಸರ ಉಳಿವಿಗಾಗಿ ಬಂಡೆಗಲ್ಲಿನ ಮೇಲೆ ಚಿತ್ರ ರಚಿಸಲು ವಿನೂತನ ಪ್ರಯತ್ನ ಮಾಡಲಾಗಿದೆ. ನಮ್ಮ ಪರಿಸರ ಉಳಿಸಬೇಕು. ಪರಿಸರವನ್ನು ಪ್ರೀತಿಸಿ, ನಾಳೆಗಾಗಿ ಪರಿಸರ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ವಿಲಾಸಿ ಜೀವನಕ್ಕಾಗಿ ಪರಿಸರ ಹಾಳುಗೆಡವುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.
    ಜಿ.ಡಿ ದಿನೇಶ್, ವಲಯ ಅರಣ್ಯಾಧಿಕಾರಿ, ಮೂಡುಬಿದಿರೆ ವಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts