ಅಮ್ಚಿನಡ್ಕ ಪರಿಸರದಲ್ಲಿ ಕಾಡಾನೆ ಉಪಟಳ

elephant attack
Published on

ಪುತ್ತೂರು ಗ್ರಾಮಾಂತರ: ಕೆಲದಿನಗಳ ಹಿಂದೆ ಮೂರು ಬಾರಿ ಪೆರ್ನಾಜೆ, ನೂಜಿಬೈಲು ಪರಿಸರದ ಕೃಷಿತೋಟಗಳಿಗೆ ಲಗ್ಗೆ ಇಟ್ಟು ಕೃಷಿ ಹಾನಿ ಮಾಡಿದ್ದ ಕಾಡಾನೆ ಇದೀಗ ಮತ್ತೆ ಪೆರ್ನಾಜೆ ಸಮೀಪದ ಉಬರಾಜೆ ಎಂಬಲ್ಲಿಗೆ ದಾಳಿ ನಡೆಸಿದೆ.

ಮಾಡ್ನೂರು ಗ್ರಾಮದ ಅಮ್ಮಿನಡ್ಕ ಸಮೀಪದ ಉಬರಾಜೆ ನಿವಾಸಿ ಗಣೇಶ್ ಭಂಡಾರಿ ಎಂಬುವರ ತೋಟಕ್ಕೆ ಗುರುವಾರ ರಾತ್ರಿ ನುಗ್ಗಿದ ಕಾಡಾನೆ ತೆಂಗಿನಗಿಡಗಳನ್ನು ಹಾನಿಗೊಳಿಸಿದೆ. ಶುಕ್ರವಾರ ರಾತ್ರಿ ಮತ್ತೆ ಇದೇ ಪರಿಸರದ ಜಗನ್ನಾಥ ರೈ, ಹೊನ್ನಪ್ಪ ನಾಯ್ಕ ಮತ್ತು ಅವಿನಾಶ್ ನಾಯ್ಕ ಎಂಬುವರ ತೋಟಗಳಿಗೆ ದಾಳಿ ಮಾಡಿ ತೆಂಗಿನಗಿಡ, ಬಾಳೆಗಿಡಗಳನ್ನು ನಾಶ ಮಾಡಿದೆ. ಈ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪೆರ್ನಾಜೆ ವ್ಯಾಪ್ತಿಗೆ ಮೂರು ಬಾರಿ ಬಂದು ಕೃಷಿ ಹಾನಿ ಮಾಡಿರುವ ಕಾಡಾನೆ ಮತ್ತೆ ಇಲ್ಲಿಗೆ ಸಮೀಪದ ಉಬರಾಜೆ ವ್ಯಾಪ್ತಿಗೆ ನಿರಂತರವಾಗಿ ಎರಡು ದಿನ ರಾತ್ರಿ ವೇಳೆ ಬಂದು ಕೃಷಿ ಹಾನಿ ಮಾಡಿರುವುದರಿಂದ ಜನತೆಯಲ್ಲಿ ಆತಂಕ ಆವರಿಸಿದೆ. ಈ ಒಂಟಿ ಕಾಡಾನೆ ಆನೆಗುಂಡಿ ವ್ಯಾಪ್ತಿಯ ರಕ್ಷಿತಾರಣ್ಯ ಪ್ರದೇಶದಲ್ಲೇ ಉಳಿದುಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಅದರ ಉಪಟಳದಿಂದ ಕೃಷಿಕರು ಕಂಗಾಲಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net