More

    ಮುಂದುವರಿದ ಕಾಡಾನೆ ಉಪಟಳ

    ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ

    ಕೆಲ ದಿನಗಳ ಹಿಂದೆ ಮೂರು ಬಾರಿ ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ಪರಿಸರದ ಕೃಷಿ ತೋಟಗಳಿಗೆ ಲಗ್ಗೆಯಿಟ್ಟು ಕೃಷಿ ಹಾನಿ ಮಾಡುವ ಮೂಲಕ ಕೃಷಿಕರಲ್ಲಿ ಆತಂಕ ಸೃಷ್ಟಿಸಿದ್ದ ಒಂಟಿ ಕಾಡಾನೆ ತಿಂಗಳ ಬಳಿಕ ಇದೀಗ ಮತ್ತೆ ಕೊಳ್ತಿಗೆ ಗ್ರಾಮದ ಕೃಷಿಕರ ತೋಟಗಳಿಗೆ ನಿರಂತರವಾಗಿ ನುಗ್ಗಿ ಕೃಷಿ ಹಾನಿಗೊಳಿಸುವ ಮೂಲಕ ಕೊಳ್ತಿಗೆ ಗ್ರಾಮದ ಕೃಷಿಕರ ನಿದ್ದೆಗೆಡಿಸಿದೆ.

    ಗ್ರಾಮದ ಕೋರಿಕ್ಕಾರ್, ಕೊಂರ್ಬಡ್ಕ, ಪೆರ್ಲಂಪಾಡಿ ಮೊದಲಾದ ಕಡೆಗಳಿಗೆ ಕಾಡಾನೆ ಲಗ್ಗೆ ಇಟ್ಟು ಕೃಷಿ ನಾಶ ಮಾಡಿರುವ ಹಿನ್ನೆಲೆಯಲ್ಲಿ ಈ ಪರಿಸರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯ ಕಾರ್ಮಿಕರು ಕೃಷಿ ತೋಟದ ಕೆಲಸಗಳಿಗೆ ಹಾಗೂ ರಬ್ಬರ್ ತೋಟದ ಕೆಲಸಕ್ಕೆ ಹೋಗಲು ಹಿಂಜರಿಯುತ್ತಿದ್ದಾರೆ.

    ತೆಂಗು, ಬಾಳೆಗಿಡ ನಾಶ

    ಕಳೆದ ಗುರುವಾರ ರಾತ್ರಿ ಕೊಳ್ತಿಗೆ ಗ್ರಾಮದ ಕೋರಿಕ್ಕಾರ್ ಎಂಬಲ್ಲಿನ ಕೃಷಿಕ ಗಣೇಶ್ ಭಂಡಾರಿ ಅವರ ತೋಟಕ್ಕೆ ನುಗ್ಗಿ ತೆಂಗಿನ ಗಿಡಗಳನ್ನು ಮತ್ತು ಬಾಳೆಗಿಡಗಳನ್ನು ನಾಶಪಡಿಸಿದ್ದ ಕಾಡಾನೆ ಶುಕ್ರವಾರ ರಾತ್ರಿ ಕೋರಿಕ್ಕಾರ್‌ನಿಂದ ದೊಡ್ಡಡ್ಕ ತನಕ ರಸ್ತೆಯಲ್ಲಿ ತೆರಳಿರುವ ಕುರುಹು ಕಂಡು ಬಂದಿದೆ.

    ಕೃಷಿಗೆ ಹಾನಿ

    ವರ್ಕೊಂಬು ಎಂಬಲ್ಲಿನ ಕೃಷಿಕ ರಾಘವ ಗೌಡ ತೋಟಕ್ಕೆ ಕಾಡಾನೆ ಲಗ್ಗೆಯಿಟ್ಟು ಕೃಷಿ ಹಾನಿಗೊಳಿಸಿದೆ. ಕುದ್ಕುಳಿ ಎಂಬಲ್ಲಿನ ಮಂಜುನಾಥ್ ಹಾಗೂ ರಮೇಶ್ ಎಂಬುವರ ತೋಟಗಳಿಗೆ ನುಗ್ಗಿ ಕೃಷಿ ಹಾನಿಗೊಳಿಸಿದೆ. ಶನಿವಾರ ನಸುಕಿನ ವೇಳೆ ದಡೆಗುಂಡಿ ಎಂಬಲ್ಲಿನ ಯಶೋದಾ ಎಂಬುವರ ಕೃಷಿ ತೋಟಕ್ಕೆ ನುಗ್ಗಿ ಬಾಳೆಗಿಡ ನಾಶಗೊಳಿಸಿರುವುದಾಗಿ ತಿಳಿದು ಬಂದಿದೆ.

    ಕಾಡಾನೆ ಹೆಜ್ಜೆಗುರುತು ಪತ್ತೆ

    ಪೆರ್ಲಂಪಾಡಿಯಲ್ಲಿರುವ ರಬ್ಬರ್ ನಿಗಮಕ್ಕೆ ಸೇರಿದ ರಬ್ಬರ್ ಪ್ಲಾಂಟೇಶನ್‌ನಲ್ಲಿ ಕಾಡಾನೆ ಘೀಳಿಡುವ ಶಬ್ಧ ಕೇಳಿಬಂದಿದೆ. ರಬ್ಬರ್ ಪ್ಲಾಂಟೇಶನ್‌ನ ಹಲವು ಕಡೆಗಳಲ್ಲಿ ಕಾಡಾನೆಯ ಲದ್ದಿ ಕಂಡು ಬಂದಿದ್ದು, ಕಾಡಾನೆ ನಡೆದಾಡಿದ ಹೆಜ್ಜೆಗುರುತುಗಳು ಪತ್ತೆಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕೊಳ್ತಿಗೆ ಗ್ರಾಮಕ್ಕೆ ಬಂದಿರುವ ಒಂಟಿ ಕಾಡಾನೆ ಪತ್ತೆ ಕಾರ್ಯಾಚರಣೆ ನಡೆಸಲಾಗಿದೆ. ಆದರೆ ಹಗಲು ವೇಳೆ ಕಾಡಾನೆ ಅರಣ್ಯ ಪ್ರದೇಶವನ್ನು ಸೇರಿಕೊಳ್ಳುತ್ತಿರುವುದರಿಂದ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇದೀಗ ಕಾಡಾನೆ ಕೊಳ್ತಿಗೆ ಭಾಗದಿಂದ ಕನಕಮಜಲು ಮೂಲಕವಾಗಿ ಪಂಜಿಕಲ್ಲು ಅರಣ್ಯ ಪ್ರದೇಶವನ್ನು ಸೇರಿಕೊಂಡಿರುವ ಮಾಹಿತಿ ಇದೆ ಎಂದು ಪುತ್ತೂರು ವಲಯಾರಣ್ಯಾಧಿಕಾರಿ ಕಿರಣ್ ಬಿ.ಎಂ.ತಿಳಿಸಿದ್ದಾರೆ.

    ತಡರಾತ್ರಿ ತನಕವೂ ಕಾರ್ಯಾಚರಣೆ

    ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್., ಸದಸ್ಯ ಪವನ್ ಡಿ.ಜಿ., ಮಾಜಿ ಸದಸ್ಯ ತೀರ್ಥಾನಂದ ದುಗ್ಗಳ, ಬೆಳ್ಳಾರೆ ಉಪವಲಯ ಅರಣ್ಯಾಧಿಕಾರಿ ಪ್ರಸಾದ್ ಕೆ.ಜೆ., ಆನೆಗುಂಡಿ ಉಪವಲಯ ಅರಣ್ಯಾಧಿಕಾರಿ ಲೋಕೇಶ್, ಅರಣ್ಯ ರಕ್ಷಕ ದೀಪಕ್ ಹಾಗೂ ಸ್ಥಳೀಯರು ಸೇರಿಕೊಂಡು ಶನಿವಾರ ತಡರಾತ್ರಿ ತನಕವೂ ಕಾರ್ಯಾಚರಣ ನಡೆಸಿದ್ದರು. ಆದರೆ ಆನೆ ಪತ್ತೆಯಾಗಿಲ್ಲ. ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ಮತ್ತು ನೂಜಿಬೈಲು ಪರಿಸರಕ್ಕೆ ಮೂರು ಬಾರಿ ಬಂದು ಕೃಷಿ ನಾಶ ಮಾಡಿರುವ ಕಾಡಾನೆಯೇ ಇದೀಗ ಕೊಳ್ತಿಗೆ ಗ್ರಾಮ ವ್ಯಾಪ್ತಿಗೆ ಬಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಕೊಳ್ತಿಗೆ ಭಾಗಕ್ಕೆ ಬಂದ ಕಾಡಾನೆ ಕೊಳ್ತಿಗೆಯ ತೋಡಿನ ಮೂಲಕ ಹಾದು ಹೋಗಿ ರಕ್ಷಿತಾರಣ್ಯ ಸೇರಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts