More

    ಶೈಕ್ಷಣಿಕ ವರದಿಗೆ 14 ದಿನ ಗಡುವು

    ಬೆಳಗಾವಿ: ಪ್ರತಿಯೊಂದು ಶಾಲೆಯಲ್ಲಿ ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ ಹಾಗೂ ಮಕ್ಕಳ ಸಹಾಯವಾಣಿ ಫಲಕಗಳನ್ನು 14 ದಿನಗಳ ಒಳಗಾಗಿ ಅಳವಡಿಸಬೇಕು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ. ಅಂಥೋನಿ ಸೆಬಾಸ್ಟಿಯನ್ ಸೂಚನೆ ನೀಡಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಅಯೋಗ, ಸಾರ್ವಜನಿಕ ಶಿಕ್ಷಣ ಇಲಾಖೆ ಶುಕ್ರವಾರ ಆಯೋಜಿಸಿದ್ದ ಶಾಲೆ ಬಿಟ್ಟ ಮಕ್ಕಳು ಹಾಗೂ ಆರ್‌ಟಿಇ ಕುರಿತ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಶಿಕ್ಷಣ ಇಲಾಖೆ ಅಧಿಕಾರಿಗಳು ಸಮರ್ಪಕವಾದ ಮಾಹಿತಿಯನ್ನು ಆಯೋಗಕ್ಕೆ ನೀಡಲು ವಿಫಲವಾದ ಕಾರಣ 14 ದಿನಗಳೊಳಗೆ ವರದಿ ಸಲ್ಲಿಸುವಂತೆ ತಾಕೀತು ಮಾಡಿದರು.

    ಶಾಲೆಗಳಲ್ಲಿ ಉಚಿತವಾಗಿ ವಿತರಿಸುವ ಶೂ, ಸಮವಸ್ತ್ರಗಳ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ವರದಿ ಸಲ್ಲಿಸಬೇಕು. ಯಾವುದೇ ಒಂದು ಮಗು ಶಿಕ್ಷಣದಿಂದ ವಂಚಿತವಾದರೆ ಆಯೋಗ ಸಹಿಸಲ್ಲ. ಶಿಕ್ಷಣವು ಮಕ್ಕಳ ಮೂಲಭೂತ ಹಕ್ಕು. ಒಂದು ಮಗು ಶಿಕ್ಷಣದಿಂದ ವಂಚನೆಗೊಳಗಾಗಿ ಶೋಷಣೆಗೀಡಾದರೆ ಸಂಬಂಧಿಸಿದ ಎಲ್ಲ ಅಧಿಕಾರಗಳ ವಿರುದ್ಧವೂ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಅವಕಾಶಗಳಿವೆ ಎಂದು ಎಚ್ಚರಿಸಿದರು.

    ಹಣ ವಸೂಲಿ ಆರೋಪ: ಈಗಾಗಲೇ ಇರುವ ಆರ್‌ಟಿಇ ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ದಾಖಲಾಗಿರುವ ಮಕ್ಕಳ ಪೋಷಕರಿಂದ ಶಾಲೆಯವರು ಹಣ ವಸೂಲಿ ಮಾಡುತ್ತಿರುವ ಕುರಿತು ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ದೂರುಗಳು ಬಂದಿರುವ ಶಾಲೆಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಶೀಲನೆ ನಡೆಸಬೇಕು. ಈ ವಿಷಯದಲ್ಲಿ ನಿರ್ಲಕ್ಷೃ ಮಾಡಿದರೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
    45 ಮಕ್ಕಳು ಶಾಲೆಯಿಂದ ದೂರ : ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ಮಾತನಾಡಿ, ಜಿಲ್ಲೆಯ 7 ವಲಯಗಳಲ್ಲಿ 45 ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಾರೆ. ಆ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಶಾಲೆ ಬಿಟ್ಟ ಮಕ್ಕಳ ಬಗ್ಗೆ ಪರಿಶೀಲನೆ ನಡೆಸಿದಾಗ ಆರ್ಥಿಕ ಸಮಸ್ಯೆ, ವಲಸೆ ಸೇರಿ ವಿವಿಧ ಬಗೆಯ ಸಮಸ್ಯೆಗಳು ಕಂಡು ಬರುತ್ತಿವೆ ಎಂದರು.
    ಮಕ್ಕಳ ಹಕ್ಕುಗಳ ಆಯೋಗ ಸದಸ್ಯ ಡಿ.ಶಂಕ್ರಪ್ಪ, ಎಚ್.ಸಿ. ರಾಘವೇಂದ್ರ, ಡಿಡಿಪಿಐ, ತಹಸೀಲ್ದಾರ್‌ಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಇದ್ದರು.

    ಆಯೋಗ ರಚನೆಗೆ ಸೂಚನೆ

    ಜಿಲ್ಲೆಯಲ್ಲಿರುವ ಎಲ್ಲ ವಸತಿ ಶಾಲೆಗಳಲ್ಲಿ ನೀಡಲಾಗುತ್ತಿರುವ ಸೌಲಭ್ಯ ಕುರಿತು ಸತ್ಯಶೋಧನೆ ಕೈಗೊಂಡು ಆಯೋಗಕ್ಕೆ ವರದಿ ಸಲ್ಲಿಸಬೇಕು. ವಸತಿ ಶಾಲೆಗಳಿಗೆ ಅನಿರೀಕ್ಷಿತ ಭೇಟಿ ಪರಿಶೀಲಿಸಲು ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿ ವಿವಿಧ ಸಂಸ್ಥೆಗಳ ಸದಸ್ಯರನ್ನೊಳಗೊಂಡ ಮೂರು ಪ್ರತ್ಯೇಕ ತಂಡ ರಚಿಸಲಾಗಿದೆ. ಸದರಿ ತಂಡಗಳು ಕಾಲಕಾಲಕ್ಕೆ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಆಯೋಗ ಅಧ್ಯಕ್ಷ ಡಾ.ಅಂಥೋನಿ ಸೆಬಾಸ್ಟಿಯನ್ ಸೂಚನೆ ನೀಡಿದರು.


    ಈಗಾಗಲೇ ಮಕ್ಕಳನ್ನು ಮುಖ್ಯವಾಹಿನಿಗೆ ಕರೆ ತರಲು ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೆಳಗಾವಿ ಗಡಿ ಜಿಲ್ಲೆ ಆಗಿರುವುದರಿಂದ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಪ್ರತಿ ಶನಿವಾರ ಮಕ್ಕಳ ಹಾಜರಾತಿ ಬಗ್ಗೆ ದೃಢೀಕೃತ ಮಾಹಿತಿ ಸಂಗ್ರಹಿಸಲಾಗುತ್ತಿದೆ.
    | ಗಜಾನನ ಮನ್ನಿಕೇರಿ ಡಿಡಿಪಿಐ, ಚಿಕ್ಕೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts