More

    ದಮನಿತರ ಏಳಿಗೆಗೆ ಬಾಬೂಜಿ ಕೊಡುಗೆ ಅಪಾರ    ಮಲ್ಲಿಕಾರ್ಜುನ ಆರ್. ಹಲಸಂಗಿ ಅಭಿಪ್ರಾಯ ದಾವಿವಿಯಲ್ಲಿ ಸಮತಾ ದಿನಾಚರಣೆ

    ದಾವಣಗೆರೆ: ಜಾತಿ-ಧರ್ಮಗಳ ಭೇದ ವಿರೋಧಿಸುತ್ತಲೇ ರಾಜಕೀಯ ಶಕ್ತಿ ಬಳಸಿಕೊಂಡು ದಮನಿತ ಸಮುದಾಯದ ಏಳಿಗೆಗೆ ಶ್ರಮಿಸಿದ ಬಾಬು ಜಗಜೀವನರಾಮ್ ಅವರ ಕೊಡುಗೆ ಸದಾ ಸ್ಮರಣೀಯ ಎಂದು ನಿವೃತ್ತ ಪ್ರಾಧ್ಯಾಪಕ, ರಾಜಕೀಯ ತಜ್ಞ  ಪ್ರೊ.ಮಲ್ಲಿಕಾರ್ಜುನ ಆರ್.ಹಲಸಂಗಿ ಹೇಳಿದರು.
    ದಾವಣಗೆರೆ ವಿಶ್ವವಿದ್ಯಾನಿಲಯದ ಬಾಬು ಜಗಜೀವನರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಬಾಬು ಜಗಜೀವನರಾಮ್ ಅವರ ಜನ್ಮದಿನದ ಪ್ರಯುಕ್ತ ಶುಕ್ರವಾರ ಏರ್ಪಡಿಸಿದ್ದ ಸಮತಾ ದಿನ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
    ದೇಶದಲ್ಲಿ ಜಾತಿ, ಸಾಮಾಜಿಕ- ಆರ್ಥಿಕ ತಾರತಮ್ಯ ನಿವಾರಣೆ ಸಾಧ್ಯವಿಲ್ಲ. ಆದ್ದರಿಂದ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂಬ ತತ್ವವನ್ನು ಬಾಬೂಜಿ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಸೌಮ್ಯವಾದಿ ತತ್ವ, ಹೋರಾಟ ಮನೋಭಾವ, ಸಹನೆ, ಆಧ್ಯಾತ್ಮಿಕ ಚಿಂತನೆಗಳ ಮೂಲಕ ಸಾಮಾಜಿಕ ಪರಿವರ್ತನೆ ಯಶಸ್ಸಿನ ಕನಸನ್ನು ಸಾಕಾರಗೊಳಿಸಲು ಯತ್ನಿಸಿದರು ಎಂದು ತಿಳಿಸಿದರು.
    ಬಾಬೂಜಿ ಅವರು ಸ್ವಾತಂತ್ರ್ಯಾ ನಂತರದಲ್ಲಿ ದೇಶವನ್ನು ರಾಜಕೀಯವೂ ಸೇರಿ ಕೃಷಿ, ಕೈಗಾರಿಕೆ ಆರ್ಥಿಕ ಅಭಿವೃದ್ಧಿಯನ್ನು ಸಾಂಸ್ಕೃತಿಕವಾಗಿ, ಕಟ್ಟುವ ಕೆಲಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.
    ಐದು ದಶಕಗಳ ಕಾಲ ಕೇಂದ್ರ ಸಚಿವರಾಗಿದ್ದ ಬಾಬೂಜಿ ದೇಶದಲ್ಲಿ ಹಸಿರು ಕ್ರಾಂತಿಯ ಸಾಕಾರ ಮೂರ್ತಿಯಾಗಿ ಆಹಾರದ ಸಂಕಷ್ಟ್ಟವನ್ನು ನಿವಾರಿಸಿದರು. ಅಪ್ಪಟ ಪ್ರಜಾಸತ್ತಾತ್ಮಕವಾದಿ ಸಂಸದೀಯ ಪಟುವಾಗಿದ್ದರು. ರಾಜಕೀಯ ಪಕ್ಷದ ನಿರ್ಧಾರಗಳನ್ನು ಖಂಡಿಸಿ ಸ್ವಂತ ರಾಜಕೀಯ ಪಕ್ಷವನ್ನು ಸ್ಥಾಪಿಸಿದ ಛಲವಾದಿ. ಕೃಷಿ, ಕೈಗಾರಿಕೆ, ರೈಲ್ವೆ, ರಕ್ಷಣಾ ಸಚಿವರಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಿದ ತಳಸಮುದಾಯದ ಪ್ರಮುಖ ನಾಯಕ ಎಂದು ನುಡಿದರು.
    ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ಆಧ್ಯಾತ್ಮಿಕ ತತ್ವ, ಚಿಂತನೆಗಳ ಮೂಲಕ ರಾಜಕೀಯ ಆರ್ಥಿಕವಾಗಿ,  ದೇಶದಲ್ಲಿ ಪರಿರ್ತನೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ ಪ್ರಾಮಾಣಿಕ ರಾಜಕಾರಣಿ ಮುತ್ಸದ್ಧಿ ನಾಯಕರಾಗಿದ್ದವರೇ ಬಾಬೂಜಿ ಎಂದರು.
    ಸರ್ಕಾರಿ ಶಾಲೆಯಲ್ಲಿ ಮಕ್ಕಳನ್ನು ಓದಿಸುವ ಮೂಲಕ  ದೇಶದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಚಾಲನೆ ನೀಡಿದರು. ಈಗ ವಿದೇಶಿ ವಿಶ್ವವಿದ್ಯಾಲಯಗಳು ಮನ್ನಣೆ ಪಡೆಯುತ್ತಿವೆ. ವಿದೇಶಿ ಸಂಸ್ಥೆಗಳು ದೇಶದಲ್ಲಿ  ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸಿದರೆ ತಾರತಮ್ಯದ ಅಪಾಯ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
    ಕುಲಸಚಿವ ಪ್ರೊ.ಯು.ಎಸ್.ಮಹಾಬಲೇಶ್ವರ, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ್ ಉಪಸ್ಥಿತರಿದ್ದರು. ಅಧ್ಯಯನ ಪೀಠದ ನಿರ್ದೇಶಕ ಪ್ರೊ.ರಾಮಲಿಂಗಪ್ಪ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts