More

    ಸಂಪಾದಕೀಯ | ಶಾಶ್ವತ ಪರಿಹಾರ ಒದಗಿಸಿ: ರಾಜಕಾಲುವೆ ಒತ್ತುವರಿ ತೆರವಾಗಬೇಕು

    ಶುಕ್ರವಾರ ಸುರಿದ ಭಾರಿ ಮಳೆಗೆ ಬೆಂಗಳೂರಿನ 15ಕ್ಕೂ ಹೆಚ್ಚು ಪ್ರದೇಶಗಳ 300ಕ್ಕೂ ಅಧಿಕ ಕಟ್ಟಡಗಳು ಹಾನಿಗೊಂಡಿದ್ದಲ್ಲದೆ, ಹಲವು ಬಡಾವಣೆಗಳು ಕೆಸರುಗದ್ದೆಯಂತಾದ ಪರಿಣಾಮ ಜನರು ಪರದಾಡುವಂತಾಯಿತು. ವಿಜಯದಶಮಿ ಹಬ್ಬದ ತಯಾರಿಯಲ್ಲಿದ್ದ ಜನರಿಗೆ ಏಕಾಏಕಿ ಬಂದೇರಗಿದ ಈ ಸಮಸ್ಯೆ ತೀವ್ರ ಸಂಕಷ್ಟವನ್ನು ತಂದೊಡ್ಡಿತು. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ನೆರೆಯಿಂದ ತತ್ತರಿಸುತ್ತಿರುವ ಬೆನ್ನಲ್ಲೇ, ರಾಜಧಾನಿ ಬೆಂಗಳೂರಿನ ಜನಜೀವನವನ್ನೂ ಮಳೆ ಅಸ್ತವ್ಯಸ್ತಗೊಳಿಸಿತು. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ ವಾಡಿಕೆಯಂತೆ ವಾರದಲ್ಲಿ 32 ಮೀ.ಮೀ. ಮಳೆ ಸುರಿಯಬೇಕಿತ್ತು. ಆದರೆ, ಕಳೆದೊಂದು ವಾರದಲ್ಲಿ 102 ಮೀ.ಮೀ (ಶೇಕಡ 223 ಹೆಚ್ಚು) ಮಳೆ ಸುರಿದಿದೆ. ಹೊಸಕೆರೆಹಳ್ಳಿ ಬಡಾವಣೆಯ ಮನೆ, ಮಠ, ಬೀದಿಗಳು ಕೊಚ್ಚೆಯಂತಾಗಿದ್ದರಿಂದ, ಪರಿಹಾರ ಕಾರ್ಯಾಚರಣೆಗೂ ಪರದಾಡುವಂತಾಯಿತು. ರಾಜ್ಯ ವಿಪತ್ತು ಸ್ಪಂದನಾ ಪಡೆ 120 ಜನರನ್ನು ಬೋಟ್ ಮೂಲಕ ರಕ್ಷಿಸಿ, ಸಾರ್ಥಕ ಕಾರ್ಯಗೈದಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊಸಕೆರೆಹಳ್ಳಿ ಬಡಾವಣೆಗೆ ಭೇಟಿ ನೀಡಿ, ಹಾನಿ ಪ್ರಮಾಣವನ್ನು ಖುದ್ದು ಪರಿಶೀಲಿಸಿದ ಬಳಿಕ -ಠಿ; 25 ಸಾವಿರ ಪರಿಹಾರ ಘೋಷಿಸಿದರು.

    ಬೆಂಗಳೂರಿನಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆ ಸುರಿದಿರುವುದು ವಾಸ್ತವ. ಆದರೆ, ಸಾಧಾರಣ ಮಳೆಗೂ ಇಲ್ಲಿನ ರಸ್ತೆಗಳು ಕೆರೆಯಂತಾಗಿ, ಅದೆಷ್ಟೋ ಬಡಾವಣೆಗಳು ಕೆಸರುಮಯವಾಗುವುದು ಹೊಸದೇನಲ್ಲ. ಈ ಹಿಂದಿನ ಮಳೆಗಾಲಗಳಲ್ಲೂ ಇಂಥ ಅನುಭವಗಳಾಗಿವೆ. ಈ ರೀತಿ ‘ದಿಢೀರ ನೆರೆ’ ಸೃಷ್ಟಿಯಾಗುವುದೇಕೆ ಎಂಬ ಪ್ರಶ್ನೆಗೆ ಉತ್ತರ ಗೊತ್ತಿದ್ದರೂ, ಆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗದಿರುವುದು ಈ ಸ್ಥಿತಿಗೆ ಕಾರಣ. ಮಳೆನೀರಿನ ಸಹಜ ಹರಿವಿಗೆ ತಡೆವೊಡ್ಡಿರುವುದು, ಅಕ್ರಮ ನಿರ್ಮಾಣ ಕಾಮಗಾರಿಗಳು, ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವುದು, ಅನಧಿಕೃತ ಬಡಾವಣೆಗಳ ನಿರ್ವಣ, ಕೆರೆ ನೀರಿನ ಹರಿವಿಗೂ ಅಡ್ಡಿ, ಸುರಕ್ಷತೆಯನ್ನು ಕಡೆಗಣಿಸಿ ತಗ್ಗುಪ್ರದೇಶದಲ್ಲಿ ನಿರ್ವಣವಾದ ಬಡಾವಣೆಗಳು… ಹೀಗೆ ಹತ್ತುಹಲವು ಕಾರಣಗಳ ಪರಿಣಾಮ ಮಳೆಯಿಂದ ಬೆಂಗಳೂರು ಅಧ್ವಾನಗಳನ್ನು ಅನುಭವಿಸುತ್ತಿದೆ ಎಂಬುದು ಬಹಿರಂಗ ರಹಸ್ಯ.

    2016ರ ಆಗಸ್ಟ್​ನಲ್ಲಿ ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿತ್ತು. 1,800 ಪ್ರದೇಶಗಳಲ್ಲಿ ಗುರುತಿಸಲಾಗಿದ್ದ 1,100 ಒತ್ತುವರಿ ಸ್ಥಳ ಈಗಾಗಲೇ ತೆರವುಗೊಳಿಸಲಾಗಿದೆ. ಆದರೆ, ಕರೊನಾ ಕಾರಣ ನವೆಂಬರ್ ಅಂತ್ಯದವರೆಗೂ ಒತ್ತುವರಿ ತೆರವು ಮಾಡದಂತೆ ಹೈಕೋರ್ಟ್ ಬಿಬಿಎಂಪಿಗೆ ಸೂಚನೆ ನೀಡಿದೆ. ‘ನವೆಂಬರ್ ನಂತರ ಯಾವುದೇ ಮುಲಾಜಿಲ್ಲದೆ ರಾಜಕಾಲುವೆ ಒತ್ತುವರಿ ತೆರವುಗೊಳಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಶ್ವಾಸನೆ ನೀಡಿದ್ದಾರೆ. ಆದರೆ, ಇದು ಬರೀ ಆಶ್ವಾಸನೆಗೆ ಸೀಮಿತವಾಗಿ ಉಳಿಯದೆ ಕಠಿಣ ಕ್ರಮ ಜಾರಿಗೆ ಬರಬೇಕು. ನಾಗರಿಕರೂ ಕೂಡ ಸರ್ಕಾರದ ಪ್ರಯತ್ನಗಳೊಂದಿಗೆ ಕೈಜೋಡಿಸಬೇಕು ಮತ್ತು ಯಾವುದೇ ಕಾರಣಕ್ಕೂ ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಾಣ ಅಥವಾ ಇತರ ಚಟುವಟಿಕೆಗಳನ್ನು ನಡೆಸಬಾರದು. ಯಾರದೋ ಒಬ್ಬಿಬ್ಬರ ತಪ್ಪಿನಿಂದ, ಸ್ವಾರ್ಥದಿಂದ ಹಲವು ಬಡಾವಣೆ ಅಥವಾ ಇಡೀ ನಗರ ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂಬುದನ್ನು ಮರೆಯಬಾರದು.

    ಬಾಡಿಗೆ ಪಾವತಿ ವಿಚಾರ: ಕೇಂದ್ರ ಸಚಿವ ಪೋಖ್ರಿಯಾಲ್​ ವಿರುದ್ಧದ ನ್ಯಾಯಾಂಗ ನಿಂದನೆಗೆ ಸುಪ್ರೀಂ ತಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts